ಮಾರ್ಕೊ ರುಬಿಯೋ ಜೊತೆ ಜೈಶಂಕರ್
– ಪಿಟಿಐ
ಒಟ್ಟಾವ: ಕೆನಡಾದ ನಯಾಗರದಲ್ಲಿ ನಡೆಯುತ್ತಿರುವ ಜಿ–7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ, ಅಮೆರಿಕ, ಉಕ್ರೇನ್ ಹಾಗೂ ಸೌದಿ ಅರೇಬಿಯಾದ ಸಚಿವರನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇತ್ತೀಚಿನ ಬೆಳವಣಿಗೆಗಳು ಹಾಗೂ ಪರಸ್ಪರ ಆಸಕ್ತಿಯ ಪ್ರಾದೇಶಿಕ ವಿಷಯಗಳು ಬಗ್ಗೆ ಚರ್ಚಿಸಲು ಈ ಸಭೆ ನಡೆಯುತ್ತಿದೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರೊಂದಿಗೆ ಮಾತುಕತೆ ನಡೆಸಿದ ಜೈಶಂಕರ್ ವ್ಯಾಪಾರ ಹಾಗೂ ಪೂರೈಕೆ ಸರಪಳಿ ಬಗ್ಗೆ ಚರ್ಚಿಸಿದ್ದಾರೆ.
ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ‘ವಿಶೇಷ ಸೇನಾ ಕಾರ್ಯಾಚರಣೆ’ ಬಗ್ಗೆಯೂ ಮಾತುಕತೆ ನಡೆದಿದೆ.
‘ಉಕ್ರೇನ್ ಸಂಘರ್ಷ, ಮಧ್ಯಪ್ರಾಚ್ಯದ ಬಿಕ್ಕಟ್ಟು ಹಾಗೂ ಇಂಡೋ–ಪೆಸಿಫಿಕ್ ವಲಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದೆವು’ ಎಂದು ಜೈಶಂಕರ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾರು ಸ್ಫೋಟದ ಬಗ್ಗೆ ಇದೇ ವೇಳೆ ರುಬಿಯೋ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಂದಿನ ತಿಂಗಳು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭಾರತ ಭೇಟಿ ನಿಗದಿಯಾಗಿದ್ದು, ಅದಕ್ಕೂ ಮುನ್ನ ಈ ಮಾತುಕತೆ ನಡೆದಿದೆ.
ಉಕ್ರೇನ್ ವಿದೇಶಾಂಗ ಸಚಿವ ಅಂದ್ರಿಲ್ ಸಿಭಿಯಾ ಜೊತೆ ಉಪಯುಕ್ತ ಮಾತುಕತೆ ನಡೆಯಿತು ಎಂದು ಜೈ ಶಂಕರ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ.
‘ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉಕ್ರೇನಿನ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು’ ಎಂದು ಅವರು ಹೇಳಿದ್ದಾರೆ.
ಸೌದಿ ಅರೇಬಿಯಾದ ವಿದೇಶಾಂಗ ಸಚಿವ ರಾಜಕುಮಾರ ಫೈಸಲ್ ಬಿನ್ ಫರ್ಹಾನ್ ಅವರನ್ನೂ ಭೇಟಿಯಾದ ಜೈಶಂಕರ್, ದ್ವಿಪಕ್ಷೀಯ ಸಂಬಂಧ, ಪ್ರಾದೇಶಿಕ ಸಹಕಾರ, ಸಂಪರ್ಕ ಹಾಗೂ ಇಂಧನ ಸೇರಿ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರ ಜೊತೆ, ವ್ಯಾಪಾರ, ಇಂಧನ, ಭದ್ರತೆ ವಲಯದಲ್ಲಿ ಭಾರತ–ಕೆನಡಾ ಸಹಕಾರದ ಬಗ್ಗೆ ಚರ್ಚೆ ನಡೆಸಿದ್ದಾರೆ.
ಜರ್ಮನಿ, ಫ್ರಾನ್ಸ್, ಬ್ರೆಜಿಲ್ ಹಾಗೂ ಯು.ಕೆ ವಿದೇಶಾಂಗ ಸಚಿವರೊಂದಿಗೂ ಜೈಶಂಕರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.