ADVERTISEMENT

ಕಾಶ್ಮೀರ ಸಮಸ್ಯೆ ಬಗೆಹರಿಸಲು ಯುದ್ಧ ಎಂದಿಗೂ ಆಯ್ಕೆಯಲ್ಲ: ಪಾಕಿಸ್ತಾನ ಪ್ರಧಾನಿ

ಪಿಟಿಐ
Published 20 ಆಗಸ್ಟ್ 2022, 9:46 IST
Last Updated 20 ಆಗಸ್ಟ್ 2022, 9:46 IST
ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌
ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌   

ಇಸ್ಲಾಮಾಬಾದ್‌: ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಯುದ್ಧ ಎಂದಿಗೂ ಪರಿಹಾರವಲ್ಲ. ಮಾತುಕತೆ ಮೂಲಕ ಭಾರತದೊಂದಿಗೆ ಶಾಶ್ವತವಾಗಿ ಶಾಂತಿಯುತ ಸಂಬಂಧವನ್ನು ಹೊಂದಲು ಬಯಸುತ್ತೇವೆ ಎಂದು ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್‌ ಹೇಳಿದ್ದಾರೆ.

ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ನಿಯೋಗದ ಜೊತೆ ಮಾತನಾಡಿದ ಪ್ರಧಾನಿ ಷರೀಫ್‌, ಕಾಶ್ಮೀರ ವಿಷಯದಲ್ಲಿ ಶಾಂತಿಯುತ ಸಂಬಂಧವನ್ನು ಹೊಂದಲು ಬಯಸುವುದಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಮಾಡಿರುವ ಮನವಿಯಲ್ಲಿ ತಿಳಿಸಲಾಗಿದೆ ಎಂದಿದ್ದಾರೆ. ಷರೀಫ್‌ ಅವರ ಈ ಹೇಳಿಕೆಯನ್ನು ನ್ಯೂಸ್‌ ಇಂಟರ್‌ನ್ಯಾಷನಲ್‌ ಪತ್ರಿಕೆ ವರದಿ ಮಾಡಿದೆ.

ಕಾಶ್ಮೀರದ ಸಮಸ್ಯೆಯನ್ನು ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಭಾರತದ ಜತೆ ಸಮಾನತೆ, ನ್ಯಾಯ ಮತ್ತು ಪರಸ್ಪರ ಗೌರವದ ತತ್ವಗಳ ಆಧಾರದ ಮೇಲೆ ಶಾಂತಿಯುತ ಸಂಬಂಧ ಹೊಂದಲು ಪಾಕಿಸ್ತಾನ ಬಯಸುತ್ತದೆ.

ADVERTISEMENT

ಪಾಕಿಸ್ತಾನಕ್ಕೆ ಹೊಸದಾಗಿ ನೇಮಕಗೊಂಡ ಆಸ್ಟ್ರೇಲಿಯಾದ ಹೈಕಮಿಷನರ್‌ ನೀಲ್ ಹಾಕಿನ್ಸ್ ಅವರ ಜತೆ ಗುರುವಾರ ನಡೆಸಿದ ಸಭೆಯಲ್ಲಿ ಷರೀಫ್ ಅವರು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ಮತ್ತು ಕಾಶ್ಮೀರಿ ಜನರ ಆಶಯಗಳಿಗೆ ಅನುಗುಣವಾಗಿ ಜಮ್ಮು ಮತ್ತು ಕಾಶ್ಮೀರ ವಿವಾದ ಶಾಂತಿಯುತವಾಗಿ ಪರಿಹರಿಸುವುದು ಅಗತ್ಯ ಎಂದು ಹೇಳಿರುವುದಾಗಿ ಪ್ರಧಾನಿ ಕಚೇರಿಯ ಹೇಳಿಕೆ ಉಲ್ಲೇಖಿಸಿ ‘ಡಾನ್‌’ ಪತ್ರಿಕೆ ವರದಿ ಮಾಡಿತ್ತು.

‘ಭಯೋತ್ಪಾದನೆ, ಹಗೆತನ ಮತ್ತು ಹಿಂಸಾಚಾರ ಮುಕ್ತ ವಾತಾವರಣದಲ್ಲಿ ನೆರೆಯ ದೇಶಗಳೊಂದಿಗೆ ಸಹಜ ಸಂಬಂಧವನ್ನು ಭಾರತ ಬಯಸುತ್ತದೆ. ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣ ಸೃಷ್ಟಿ ಪಾಕಿಸ್ತಾನದ ಜವಾಬ್ದಾರಿ’ ಎಂದು ಭಾರತ ಪುನರುಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.