ವೊಲೊಡಿಮಿರ್ ಝೆಲೆನ್‌ಸ್ಕಿ
ಕೀವ್ (ಉಕ್ರೇನ್): ನಾವು ಯುದ್ಧವನ್ನು ಅಂತ್ಯಗೊಳಿಸಲು ಸಿದ್ಧರಿದ್ದೇವೆ. ಆದರೆ, ರಷ್ಯಾ ಯುದ್ಧ ಅಂತ್ಯಗೊಳಿಸಲು ಸಿದ್ಧವಿದೆಯಾ? ಎಂಬ ಬಗ್ಗೆ ನನಗೆ ಅನುಮಾನವಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ರಷ್ಯಾದೊಂದಿಗಿನ ಸಂಭಾವ್ಯ ಕದನ ವಿರಾಮ ಮಾತುಕತೆಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇತರ ಯುರೋಪಿಯನ್ ನಾಯಕರ ಜೊತೆಗಿನ ಮಾತುಕತೆಯ ನಂತರ ಉಕ್ರೇನ್ ಅಧ್ಯಕ್ಷರು ಈ ಹೇಳಿಕೆ ನೀಡಿದ್ದಾರೆ.
ಪೂರ್ವಭಾವಿ ಷರತ್ತುಗಳಿಲ್ಲದೆ ಪೂರ್ಣ ಕದನ ವಿರಾಮವನ್ನು ಅನುಸರಿಸಲು ಉಕ್ರೇನ್‌ನ ಇಚ್ಛೆಯನ್ನು ಝೆಲೆನ್‌ಸ್ಕಿ ಒತ್ತಿ ಹೇಳಿದ್ದಾರೆ. ಇದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಡಿಸಿದ ಪ್ರಸ್ತಾವನೆಯಾಗಿದ್ದು, ರಷ್ಯಾ ಈ ಬಗ್ಗೆ ನಿಜವಾದ ಬದ್ಧತೆಯನ್ನು ಪ್ರದರ್ಶಿಸುವ ಅಗತ್ಯವಿದೆ ಎಂದಿದ್ದಾರೆ.
ರಷ್ಯಾದ ತತ್ವವೇನೆಂಬುದು ನನಗೆ ತಿಳಿದಿಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ನಮ್ಮ ಸಂವಾದದಿಂದ ನಾನು ಅರ್ಥಮಾಡಿಕೊಂಡಂತೆ, ರಷ್ಯಾ ಯುದ್ಧ ವಿರಾಮದ ಜೊತೆ ಮತ್ತೇನನ್ನೋ ಬಯಸುತ್ತಿದೆ ಎಂದಿದ್ದಾರೆ.
ಎಲ್ಲ ಪಾಲುದಾರ ದೇಶಗಳು ಕದನ ವಿರಾಮದಲ್ಲಿ ಆಸಕ್ತಿ ಹೊಂದಿವೆ ಎಂದು ನಾನು ನಂಬುತ್ತೇನೆ. ಯುದ್ಧದಿಂದ ಬಹಳ ನಷ್ಟಗಳಾಗಿದ್ದು; ನಾವು ನಿಜವಾಗಿಯೂ ಈ ಯುದ್ಧವನ್ನು ಕೊನೆಗೊಳಿಸಲು ಬಯಸುತ್ತೇವೆ. ಆದರೆ, ರಷ್ಯಾ ಇದಕ್ಕೆ ಸಿದ್ಧವಾಗಿದೆಯೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ. ನಾವು ಅವರನ್ನು ನಂಬುವುದಿಲ್ಲ. ಕದನ ವಿರಾಮ ಆಗಬೇಕೆಂದಿದ್ದರೆ, ಮೊದಲ ಹೆಜ್ಜೆಯಾಗಿ ಅವರು ಯುದ್ಧ ನಿಲ್ಲಿಸಬೇಕು ಎಂದಿದ್ದಾರೆ.
ಇದಕ್ಕಾಗಿ, ಅಂತರರಾಷ್ಟ್ರೀಯ ಪಾಲುದಾರ ದೇಶಗಳೊಂದಿಗೆ ತಮ್ಮ ಸ್ಥಿರ ಸಂವಹನವನ್ನು ಒತ್ತಿ ಹೇಳಿದ ಅವರು, ಅಮೆರಿಕ, ಬ್ರಿಟನ್ ಸೇರಿದಂತೆ ಯೂರೋಪಿಯನ್ ದೇಶಗಳ ಜೊತೆ ನಾನು ಈ ಕುರಿತಂತೆ ಮಾತುಕತೆ ಮುಂದುವರಿಸುತ್ತಿದ್ದೇನೆ. ಯಾವುದೇ ಷರತ್ತುಗಳು ಅಥವಾ ಪೂರ್ವಭಾವಿ ಷರತ್ತುಗಳಿಲ್ಲದೆ ಪೂರ್ಣ ಕದನ ವಿರಾಮವನ್ನು ಟ್ರಂಪ್ ಪ್ರಸ್ತಾಪಿಸಿದಾಗ ನನಗೆ ತುಂಬಾ ಸಂತೋಷವಾಯಿತು. ನಾವು ಇದಕ್ಕೆ ಸಿದ್ಧರಾಗಿದ್ದೇವೆ. ನಂತರ, ಕೈದಿಗಳ ವಿನಿಮಯ ಸೇರಿ ಇತರೆ ಪ್ರಕ್ರಿಯೆಗಳು ನಡೆಯಲಿವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.