ADVERTISEMENT

ಟ್ರಂಪ್ ವಿದಾಯ ಸಂದೇಶ: ಹಗೆತನ ಮರೆತು ಸಮಾನ ಗುರಿಯೊಂದಿಗೆ ಮುನ್ನಡೆಯಲು ಕರೆ

ಪಿಟಿಐ
Published 20 ಜನವರಿ 2021, 1:47 IST
Last Updated 20 ಜನವರಿ 2021, 1:47 IST
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್   

ವಾಷಿಂಗ್ಟನ್:ಹಿಂದೆಂದಿಗಿಂತಲೂ ಹೆಚ್ಚಾಗಿ ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಲು, ಪಕ್ಷಪಾತದ ಹಗೆತನವನ್ನು ಮೀರಿ ಬರಲು ಮತ್ತು ಸಮಾನ ಗುರಿಯತ್ತ ಮುನ್ನಡೆಯಲು ಡೊನಾಲ್ಡ್ ಟ್ರಂಪ್‌ ಕರೆ ನೀಡಿದ್ದಾರೆ.

ಅಮೆರಿಕವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿರಿಸುವಲ್ಲಿ ನೂತನ ಅಧ್ಯಕ್ಷ ಜೋ ಬೈಡನ್‌ಗೆ ಶುಭಾಶಯ ಕೋರುತ್ತಾ ಅವರ ಯಶಸ್ಸಿಗಾಗಿ ಪ್ರಾರ್ಥಿಸಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿದಾಯದ ವಿಡಿಯೊ ಸಂದೇಶ ನೀಡಿದ್ದಾರೆ.

ಮೊದಲೇ ಚಿತ್ರೀಕರಿಸಿದ ಡೊನಾಲ್ಡ್ ಟ್ರಂಪ್ ಅವರ ವಿಡಿಯೊ ಸಂದೇಶವನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಪದವಿ ವಹಿಸಿರುವುದು ವಿವರಣೆಗೂ ಮೀರಿದ ಗೌರವ ಎಂದವರು ಉಲ್ಲೇಖಿಸಿದ್ದಾರೆ. ಈ ವಿಶೇಷ ಸೌಲಭ್ಯಕ್ಕಾಗಿ ಧನ್ಯವಾದಗಳು.

ADVERTISEMENT

ಈ ವಾರ ನಾವು ಹೊಸ ಆಡಳಿತವನ್ನು ಉದ್ಘಾಟಿಸುತ್ತಿದ್ದು, ಅಮೆರಿಕವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿಸುವಲ್ಲಿ ಅದರ ಯಶಸ್ಸಿಗಾಗಿ ಪ್ರಾರ್ಥಿಸುತ್ತೇವೆ. ಹೊಸ ಅಧ್ಯಕ್ಷರಿಗೆ ನಮ್ಮ ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ ಮತ್ತು ಅದೃಷ್ಟ ಅವರ ಪಾಲಿಗಿರಲೆಂದು ಬಯಸುತ್ತೇವೆ ಎಂದು ಶ್ವೇತಭವನದಿಂದ ನಿರ್ಗಮಿಸುತ್ತಿರುವ ಟ್ರಂಪ್ ತಿಳಿಸಿದ್ದಾರೆ.

ಜೋ ಬೈಡನ್ ಅಮೆರಿಕದ46ನೇ ಅಧ್ಯಕ್ಷರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ತಾವು ಹಾಜರಾಗುವುದಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ್ದರು. ಭಾರತೀಯ ಮೂಲದ ಕಮಲ ಹ್ಯಾರಿಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಅಮೆರಿಕ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿ ಪರಿಗಣಿಸಲ್ಪಟ್ಟಿರುವ ಜನವರಿ 6ರಂದು ಕ್ಯಾಪಿಟಲ್ ಹಿಲ್ ಕಟ್ಟಡಕ್ಕೆ ತಮ್ಮ ಬೆಂಬಲಿಗರ ದಾಳಿಯನ್ನು ಡೊನಾಲ್ಡ್ ಟ್ರಂಪ್ ಮಗದೊಮ್ಮೆ ಖಂಡಿಸಿದರು. ಈಗ ಹಿಂದೆಂದಿಗಿಂತಲೂ ಹೆಚ್ಚಾಗಿ ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಬೇಕು, ಪಕ್ಷಪಾತದ ಹಗೆತನವನ್ನು ಮೀರಿ ಬರಬೇಕು ಮತ್ತು ಸಮಾನ ಗುರಿಯತ್ತ ಮುನ್ನಡೆಯಬೇಕು ಎಂದು ತಿಳಿಸಿದರು.

ಕ್ಯಾಪಿಟಲ್ ಮೇಲಿನ ದಾಳಿಯಿಂದ ಅಮೆರಿಕರನ್ನು ದಿಗ್ಭ್ರಮೆಗೊಂಡಿದ್ದಾರೆ. ರಾಜಕೀಯ ಹಿಂಸಾಚಾರವು ನಾವು ಪ್ರೀತಿಸುವ ಎಲ್ಲದರ ಮೇಲಿನ ದಾಳಿಯಾಗಿದೆ. ಇದನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಜಗತ್ತಿನಲ್ಲಿ ಅಮೆರಿಕ ಶಕ್ತಿಯನ್ನು ಪುನಃಸ್ಥಾಪಿಸಿದ್ದೇವೆ. ಜಗತ್ತು ಮತ್ತೆ ನಮ್ಮನ್ನು ಗೌರವಿಸುತ್ತಿದೆ. ಆ ಗೌರವಗಳನ್ನು ಕಳೆದುಕೊಳ್ಳಬೇಡಿ ಎಂದು ತಮ್ಮ ಸರ್ಕಾರದ ಸಾಧನೆಗಳ ಪಟ್ಟಿಯನ್ನು ಬಿಚ್ಚಿಟ್ಟರು. ಹೊಸ ಯುದ್ಧಗಳನ್ನು ಪ್ರಾರಂಭಿಸದ ಮೊದಲ ಅಧ್ಯಕ್ಷ ಎಂದೆನಿಸಿಕೊಳ್ಳಲು ಹೆಮ್ಮೆಯಿದೆ ಎಂದು 74ರ ಹರೆಯದ ಟ್ರಂಪ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.