ADVERTISEMENT

ನನ್ನ ಮಧ್ಯಸ್ಥಿಕೆಯಲ್ಲೇ ಭಾರತ– ಪಾಕ್‌ ಸಂಘರ್ಷ ಶಮನ: ಟ್ರಂಪ್‌ ಪುನರುಚ್ಚಾರ

ಪಿಟಿಐ
Published 31 ಮೇ 2025, 16:18 IST
Last Updated 31 ಮೇ 2025, 16:18 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ನ್ಯೂಯಾರ್ಕ್‌/ ವಾಷಿಂಗ್ಟನ್‌: ‘ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಸಂಘರ್ಷವನ್ನು ನಾನು ಮಧ್ಯಸ್ಥಿಕೆ ವಹಿಸಿ ತಡೆದಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುನರುಚ್ಚರಿಸಿದ್ದಾರೆ.

‘ಪರಸ್ಪರರ ವಿರುದ್ಧ ಗುಂಡು ಹಾರಿಸುತ್ತಿರುವ ದೇಶಗಳ ಜತೆಗೆ ಮತ್ತು ಸಂಭಾವ್ಯ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವವರ ಜತೆಗೆ ನಮ್ಮ ಆಡಳಿತವು ಯಾವುದೇ ವ್ಯಾಪಾರ ನಡೆಸುವುದಿಲ್ಲ’ ಎಂಬುದನ್ನು ಉಭಯ ದೇಶಗಳಿಗೆ ಮನದಟ್ಟು ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ತಮ್ಮ ಆಡಳಿತ ತೊರೆದಿರುವ ಟೆಸ್ಲಾ ಸಿಇಒ ಇಲಾನ್‌ ಮಸ್ಕ್‌ ಅವರೊಂದಿಗೆ ಓವಲ್‌ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್‌, ‘ಭಾರತ ಮತ್ತು ಪಾಕ್‌ ನಡುವಿನ ಹೋರಾಟವನ್ನು ನಾವು ನಿಲ್ಲಿಸಿದ್ದೇವೆ. ಇಲ್ಲದಿದ್ದರೆ ಇದು ಪರಮಾಣು ವಿಪತ್ತಾಗಿ ಬದಲಾಗುವ ಸಂಭವ ಇತ್ತು’ ಎಂದಿದ್ದಾರೆ.

ADVERTISEMENT

‘ಭಾರತ ಮತ್ತು ಪಾಕಿಸ್ತಾನ ಮಹಾನ್‌ ನಾಯಕರನ್ನು ಹೊಂದಿವೆ. ಅವರು ಎಲ್ಲವನ್ನು ಅರ್ಥ ಮಾಡಿಕೊಂಡು, ಸೇನಾ ಸಂಘರ್ಷವನ್ನು ನಿಲ್ಲಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ. 

‘ಅಮೆರಿಕ ಶಕ್ತಿಶಾಲಿ ದೇಶವಾಗಿದ್ದು, ವಿಶ್ವದ ಶ್ರೇಷ್ಠ ಸೈನ್ಯವನ್ನು ಹೊಂದಿದೆ. ಅಲ್ಲದೆ ಶ್ರೇಷ್ಠ ನಾಯಕರಿದ್ದಾರೆ. ಹೀಗಾಗಿ ಇತರರ ಸಂಘರ್ಷಗಳನ್ನು ತಪ್ಪಿಸಲು ನಮ್ಮಿಂದ ಸಾಧ್ಯವಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.