ADVERTISEMENT

ಪೋಲಿಯೊ ನಿರ್ಮೂಲನೆ ಅಭಿಯಾನಕ್ಕೆ ಚಾಲನೆ: ಪಾಕ್‌ನಲ್ಲಿ ಗುಂಡಿಕ್ಕಿ ಇಬ್ಬರ ಹತ್ಯೆ

ಪಿಟಿಐ
Published 16 ಡಿಸೆಂಬರ್ 2024, 13:57 IST
Last Updated 16 ಡಿಸೆಂಬರ್ 2024, 13:57 IST
.
.   

ಪೆಶಾವರ: ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದಲ್ಲಿ ಪೋಲಿಯೊ ನಿರ್ಮೂಲನೆ ಅಭಿಯಾನದಲ್ಲಿ ಭಾಗಿಯಾಗಿದ್ದ ಆರೋಗ್ಯ ಕಾರ್ಯಕರ್ತ ಮತ್ತು ಕಾನ್‌ಸ್ಟೆಬಲ್‌ ಅವರನ್ನು ಸೋಮವಾರ ಪ್ರತ್ಯೇಕ ಘಟನೆಗಳಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪಾಕಿಸ್ತಾನದಾದ್ಯಂತ ಪೋಲಿಯೊ ನಿರ್ಮೂಲನೆ ಅಭಿಯಾನಕ್ಕೆ ಬಿಗಿಭದ್ರತೆಯೊಂದಿಗೆ ಚಾಲನೆ ನೀಡಿದ ದಿನವೇ ಈ ದುರ್ಘಟನೆ ನಡೆದಿದೆ.

ಪೋಲಿಯೊ ಹನಿ ಹಾಕಲು ತೆರಳುತ್ತಿದ್ದ ಕಾರ್ಯಕರ್ತನ ಮೇಲೆ ಬನ್ನು ಜಿಲ್ಲೆಯ ಕಲಾ ಖೇಲ್‌ ಮಸ್ತಿಖಾನ್‌ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ADVERTISEMENT

ಕರಕ್‌ ಜಿಲ್ಲೆಯಲ್ಲಿ ಪೋಲಿಯೊ ಹಾಕಲು ಕಾರ್ಯಕರ್ತರನ್ನು ಕರೆದೊಯ್ಯುತ್ತಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಈ ಎರಡೂ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದ ಪ್ರಕ್ಷುಬ್ಧ ಪ್ರದೇಶಗಳಲ್ಲಿ ಪೋಲಿಯೊ ಲಸಿಕೆ ಹಾಕುವವರಿಗೆ ರಕ್ಷಣೆ ನೀಡಲು 54 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಭದ್ರತಾ ಕಾರಣಗಳಿಂದಾಗಿ ಅಫ್ಗಾನಿಸ್ತಾನದ ಗಡಿಯಲ್ಲಿರುವ ಕುರ್ರಮ್‌ ಜಿಲ್ಲೆಯನ್ನು ಅಭಿಯಾನದಿಂದ ಹೊರಗಿಡಲಾಗಿದೆ.

ಆರೋಗ್ಯ ಕಾರ್ಯಕರ್ತರ ಮೇಲೆ ಬಂಡುಕೋರರು ದಾಳಿ ನಡೆಸಬಹುದು ಎಂದು ಗುಪ್ತಚರ ಸಂಸ್ಥೆ ವರದಿ ನೀಡಿರುವುದರಿಂದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

63 ಪ್ರಕರಣ: ಪಾಕಿಸ್ತಾನದಲ್ಲಿ 63 ಪೋಲಿಯೊ ಪ್ರಕರಣಗಳು ದಾಖಲಾಗಿದ್ದು, ಇದರ ನಿರ್ಮೂಲನೆಗಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಪೋಲಿಯೊ ವೈರಸ್‌ ತಡೆಗಟ್ಟಲು ದೇಶದ 143 ಜಿಲ್ಲೆಗಳಲ್ಲಿ ಅಭಿಯಾನ ಆರಂಭಿಸಲಾಗಿದೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 4.47 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.

ಅಫ್ಗಾನಿಸ್ತಾನದಲ್ಲಿ ಪ್ರಸಕ್ತ ವರ್ಷ 23 ಪೋಲಿಯೊ ಪ್ರಕರಣಗಳು ದೃಢಪಟ್ಟಿವೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.