ADVERTISEMENT

ಇರಾನ್‌ನ ಯಾವ ನಗರಗಳ ಮೇಲೆ ಇಸ್ರೇಲ್, ಅಮೆರಿಕದಿಂದ ದಾಳಿ?

ಏಜೆನ್ಸೀಸ್
Published 28 ಫೆಬ್ರುವರಿ 2026, 11:44 IST
Last Updated 28 ಫೆಬ್ರುವರಿ 2026, 11:44 IST
   

ಟೆಹರಾನ್‌: ರಾಜಧಾನಿ ಟೆಹರಾನ್‌ ಸೇರಿದಂತೆ ಇರಾನ್‌ನ 30ಕ್ಕೂ ಹೆಚ್ಚು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿವೆ ಎಂದು ವರದಿಯಾಗಿದೆ. ದಾಳಿಗೊಳಗಾದ ಪ್ರಮುಖ ನಗರಗಳ ವಿವರ ಇಲ್ಲಿದೆ...

ಟೆಹರಾನ್‌:

ರಾಜಧಾನಿ ಟೆಹರಾನ್‌ನ ಜಮ್ಹೂರಿ, ಯೂನಿವರ್ಸಿಟಿ ಸ್ಟ್ರೀಟ್ ಮತ್ತು ಉತ್ತರ ಭಾಗದ ಸೈಯದ್ ಖಂದಾನ್ ಪ್ರದೇಶಗಳ ಮೇಲೆ ಇಸ್ರೇಲ್‌ ಕ್ಷಿಪಣಿಗಳು ಅಪ್ಪಳಿಸಿವೆ. ಈ ಪ್ರದೇಶದಲ್ಲಿರುವ ಪರಮೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಮತ್ತು ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ಕಚೇರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ.

ADVERTISEMENT

ಇಸ್ಫಹಾನ್ ಮತ್ತು ನಟಾಂಜ್:

ಇರಾನ್‌ನ ಪ್ರಮುಖ ಅಣುಶಕ್ತಿ ಸಂಶೋಧನಾ ಕೇಂದ್ರಗಳು ಮತ್ತು ಮಿಲಿಟರಿ ಸಂಶೋಧನಾ ಸೌಲಭ್ಯಗಳಿರುವ ಈ ಪ್ರಾಂತ್ಯಗಳ ಮೇಲೆ ತೀವ್ರ ದಾಳಿ ನಡೆದಿದೆ. ಇವು ಇರಾನ್‌ನ ಅಣು ಯೋಜನೆಯ ಕೇಂದ್ರಬಿಂದುಗಳೆಂದು ಪರಿಗಣಿಸಲ್ಪಟ್ಟಿವೆ.

ಕರಜ್ ಮತ್ತು ಕಾಮ್:

ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ (ಐಆರ್‌ಜಿಸಿ) ಪ್ರಮುಖ ನೆಲೆಗಳು ಮತ್ತು ಅತ್ಯಂತ ಸೂಕ್ಷ್ಮ ಮಿಲಿಟರಿ ಕೈಗಾರಿಕೆಗಳನ್ನು ಹೊಂದಿರುವ ಈ ನಗರಗಳ ಮೇಲೆಯೂ ದಾಳಿ ಮಾಡಲಾಗಿದೆ.

ಬುಶೆಹರ್:

ಬಂದರು ನಗರಿಯಾದ ಬುಶೆಹರ್ ಮೇಲೆ ನಡೆದ ದಾಳಿಯಲ್ಲಿ ಅಲ್ಲಿನ ಕೈಗಾರಿಕಾ ವಲಯಗಳಿಗೆ ಭಾರಿ ಹಾನಿಯಾಗಿದೆ ಎಂದು ವರದಿಯಾಗಿದೆ. ಆದರೆ, ಅಲ್ಲಿನ ಪರಮಾಣು ರಿಯಾಕ್ಟರ್‌ ಮೇಲೆ ಹಾನಿಯಾಗಿದೆಯೇ? ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

(ವಿವಿಧ ಸುದ್ದಿ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.