ಪ್ರಧಾನಿ ನರೇಂದ್ರ ಮೋದಿ
ವಾಷಿಂಗ್ಟನ್: ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷವನ್ನು 'ಮೋದಿ ಯುದ್ಧ' ಎಂದು ಬಿಂಬಿಸಿರುವ ಶ್ವೇತಭವನದ ವಾಣಿಜ್ಯ ಸಲಹೆಗಾರ ಪೀಟರ್ ನವಾರೊ, ಭಾರತವು ರಷ್ಯಾಗೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಆರೋಪಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದಿಂದ ಆಮದಾಗುವ ಸರಕುಗಳ ಮೇಲೆ ಹೆಚ್ಚುವರಿ ಶೇ 25 ರಷ್ಟು ಸುಂಕ ವಿಧಿಸಿದ ಬೆನ್ನಲ್ಲೇ, ನವಾರೊ ಈ ಹೇಳಿಕೆ ನೀಡಿದ್ದಾರೆ. ಪ್ರತಿ ಸುಂಕ ಪ್ರಮಾಣದ ಏರಿಕೆಯು ವ್ಯಾಪಾರವನ್ನು ಸುಗಮಗೊಳಿಸಲು ಕೈಗೊಂಡ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ.
ಶಾಂತಿ ಮಾರ್ಗವು ಭಾಗಶಃ ಭಾರತದ ಮೂಲಕವೇ ಸಾಗುತ್ತದೆ. ಹಾಗಾಗಿ, ಉಕ್ರೇನ್‌ನಲ್ಲಿ ನಡೆಯುತ್ತಿರುವುದು ಮೋದಿ ಯುದ್ಧವೆಂದು ಹೇಳುತ್ತೇನೆ. ಭಾರತವು ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ರಷ್ಯಾಗೆ ಹಣಕಾಸಿನ ನೆರವು ನೀಡುತ್ತಿದೆ. ಇದರಿಂದ, ಅಮೆರಿಕಕ್ಕೆ ಹಾನಿಯಾಗುತ್ತಿದೆ. ಅಮೆರಿಕವು ಉಕ್ರೇನ್‌ಗೆ ಆರ್ಥಿಕ ನೆರವು ನೀಡಬೇಕಿದೆ ಎಂದು ಪ್ರತಿಪಾದಿಸಿದ್ದಾರೆ.
'ಭಾರತದ ಕೆಲಸದಿಂದಾಗಿ ಅಮೆರಿಕದಲ್ಲಿರುವ ಎಲ್ಲರಿಗೂ ನಷ್ಟವಾಗುತ್ತಿದೆ. ಭಾರತ ನಮ್ಮ ಮೇಲೆ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ಹೆಚ್ಚಿನ ಪ್ರಮಾಣದ ಸುಂಕದಿಂದಾಗಿ ಉದ್ಯೋಗ ಕಡಿತ ಎದುರಿಸಬೇಕಾಗಿದೆ. ಗ್ರಾಹಕರು, ಉದ್ಯಮಿಗಳು, ಕೆಲಸಗಾರರು ಅದರ ಪರಿಣಾಮ ಅನುಭವಿಸುತ್ತಿದ್ದಾರೆ. ನಾವು ಮೋದಿ ಯುದ್ಧಕ್ಕೆ ಹಣಕಾಸು ಒದಗಿಸಬೇಕಿರುವುದರಿಂದ ತೆರಿಗೆ ಪಾವತಿದಾರರಿಗೂ ನಷ್ಟವಾಗುತ್ತಿದೆ' ಎಂದು ದೂರಿದ್ದಾರೆ.
ಟ್ರಂಪ್ ಆಡಳಿತವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಇಂದಿನಿಂದ ಜಾರಿಗೆ ಬರುವಂತೆ ಶೇ 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದೆ. ಇದರೊಂದಿಗೆ, ಅಮೆರಿಕದ ಮಾರುಕಟ್ಟೆ ಪ್ರವೇಶಿಸುವ ಭಾರತದ ಸರಕುಗಳ ಮೇಲಿನ ಒಟ್ಟು ಸುಂಕ ಈಗ ಶೇ 50ಕ್ಕೆ ಏರಿದೆ. ಇದಕ್ಕೂ ಮೊದಲು ಆಗಸ್ಟ್ 7ರಂದು, ಶೇ 25ರಷ್ಟು ಸುಂಕ ವಿಧಿಸಿತ್ತು.
ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಒಟ್ಟು ಸರಕಿನಲ್ಲಿ ಶೇ 55ರಷ್ಟರ ಮೇಲೆ ಹೆಚ್ಚುವರಿ ಸುಂಕದ ಪರಿಣಾಮ ಉಂಟಾಗಲಿದೆ. ಇದರಿಂದ, ಜವಳಿ, ಚರ್ಮ, ಆಭರಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು ಎನ್ನಲಾಗಿದೆ.
'ನಾವೇನು ಹೆಚ್ಚಿನ ಸುಂಕ ವಿಧಿಸುತ್ತಿಲ್ಲ. ಇದು ನಮ್ಮ ಸಾರ್ವಭೌಮತ್ವ. ನಾವು ಯಾರಿಂದ ಬೇಕಾದರೂ ತೈಲ ಖರೀದಿಸಬಹುದು ಎಂದು ಹೇಳುವ ಭಾರತೀಯರು ದುರಹಂಕಾರಿಗಳು. ಇದು ನಿಜಕ್ಕೂ ನನ್ನನ್ನು ಬಾಧಿಸುತ್ತಿದೆ' ಎಂದಿರುವ ನವಾರೊ, 'ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಹೌದಲ್ಲವೇ? ಅದಕ್ಕೆ ತಕ್ಕಂತೆ ನಡೆದುಕೊಳ್ಳಲಿ' ಎಂದು ಗುಡುಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.