ADVERTISEMENT

ಕೋವಿಡ್‌: ಯುರೋಪ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ

ಕೋವಿಡ್‌: ವಿಶ್ವ ಅರೋಗ್ಯ ಸಂಸ್ಥೆ ಎಚ್ಚರಿಕೆ

ಏಜೆನ್ಸೀಸ್
Published 30 ಆಗಸ್ಟ್ 2021, 14:12 IST
Last Updated 30 ಆಗಸ್ಟ್ 2021, 14:12 IST
ವಿಶ್ವಸಂಸ್ಥೆಯ ಲಾಂಛನ
ವಿಶ್ವಸಂಸ್ಥೆಯ ಲಾಂಛನ   

ಕೂಪನ್‌ಹೇಗ್: ‘ಕೋವಿಡ್ ಸೋಂಕಿನ ಪ್ರಕರಣಗಳ ಹೆಚ್ಚಳ ಹಾಗೂ ಲಸಿಕೆ ಅಭಿಯಾನದ ನಿಧಾನಗತಿಯಿಂದಾಗಿ ಯೂರೋಪ್‌ನಲ್ಲಿ ಡಿ. 1ರ ವೇಳೆಗೆ ಸುಮಾರು 2.36 ಲಕ್ಷ ಮಂದಿ ಸಾವಿಗೀಡಾಗುವ ಸಾಧ್ಯತೆ ಇದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಸೋಮವಾರ ಎಚ್ಚರಿಕೆ ನೀಡಿದೆ.

‘ಡೆಲ್ಟಾ ರೂಪಾಂತರಿ ವೈರಾಣುಗಳ ಪ್ರಕರಣಗಳು ಹೆಚ್ಚಾಗಿದ್ದು, ಯುರೋಪಿನ ಅನೇಕ ಪ್ರದೇಶಗಳಲ್ಲಿ ಲಸಿಕೆ ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿದೆ. ಕಳೆದ ವಾರವೊಂದರಲ್ಲೇ ಯುರೋಪಿನಲ್ಲಿ ಕೋವಿಡ್ ಸಾವಿನ ಸಂಖ್ಯೆಯಲ್ಲಿ ಶೇ 11ರಷ್ಟು ಏರಿಕೆಯಾಗಿದೆ’ ಎಂದು ಡಬ್ಲ್ಯುಎಚ್‌ಒ ನಿರ್ದೇಶಕ (ಯುರೋಪ್‌) ಹ್ಯಾನ್ಸ್ ಕ್ಲುಗೆ ಅಭಿಪ್ರಾಯಪಟ್ಟಿದ್ದಾರೆ.

‘ಬಡರಾಷ್ಟ್ರಗಳು ವಿಶೇಷವಾಗಿ ಬಲ್ಕನ್ಸ್, ಕಾಕಸಸ್ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳಲ್ಲಿ ಸೋಂಕಿನ ಪ್ರಮಾಣದ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಿದೆ. ಯುರೋಪಿನಾದ್ಯಂತ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದಾರೆ. ಯುರೋಪ್‌ನ 53 ಸದಸ್ಯ ರಾಷ್ಟ್ರಗಳ ಪೈಕಿ 33 ರಾಷ್ಟ್ರಗಳಲ್ಲಿ ಎರಡು ವಾರದ ಅವಧಿಯಲ್ಲಿ ಕೋವಿಡ್ ಪ್ರಕರಣಗಳು ಶೇ 10ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ’ ಎಂದೂ ಅವರು ಮಾಹಿತಿ ನೀಡಿದರು.

ADVERTISEMENT

‘ಯುರೋಪಿನ ಅರ್ಧದಷ್ಟು ಭಾಗದ ಜನರಿಗೆ ಸಂಪೂರ್ಣ ಲಸಿಕೆ ಹಾಕಲಾಗಿದೆ. ಆದರೂ ಈ ಪ್ರದೇಶಗಳಲ್ಲಿ ಲಸಿಕಾ ಕಾರ್ಯ ನಿಧಾನವಾಗಿದೆ. ಕಳೆದ 6 ವಾರಗಳಲ್ಲಿ ಕೆಲ ದೇಶಗಳಲ್ಲಿ ಲಸಿಕೆಯ ಕೊರತೆಯೂ ಎದುರಾಗಿದೆ. ಹಾಗಾಗಿ, ಲಸಿಕೆಯ ಉತ್ಪಾದನೆ ಪ್ರಮಾಣ ಹೆಚ್ಚಿಸಬೇಕು’ ಎಂದು ಕ್ಲುಗೆ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.