ADVERTISEMENT

ಸಾಂಕ್ರಾಮಿಕ ಬಿಕ್ಕಟ್ಟು ನಿರ್ವಹಣೆ: ಡಬ್ಲ್ಯೂಎಚ್‌ಒ ರಾಷ್ಟ್ರಗಳ ಒಪ್ಪಂದ 

ಏಜೆನ್ಸೀಸ್
Published 20 ಮೇ 2025, 13:43 IST
Last Updated 20 ಮೇ 2025, 13:43 IST
   

ಜಿನೆವಾ: ಕೊರೊನಾ ಬಿಕ್ಕಟ್ಟಿನಂತೆ ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ಒಗ್ಗಟ್ಟಾಗಿ ಬಿಕ್ಕಟ್ಟು ನಿಭಾಯಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಸದಸ್ಯ ರಾಷ್ಟ್ರಗಳು ಮಂಗಳವಾರ ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಜಿನೆವಾ ಸಭಾಂಗಣದಲ್ಲಿ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ದೊರೆತಿದೆ.

ಯಾವ ರಾಷ್ಟ್ರವು ತನ್ನ ದೇಶದಲ್ಲಿ ಸಾಂಕ್ರಾಮಿಕ ರೋಗ ಹರಡಿರುವುದನ್ನು ದೃಢಪಡಿಸಿ, ವೈರಸ್‌ನ ಮಾದರಿಯನ್ನು ಸಲ್ಲಿಸುತ್ತದೆಯೋ ಆ ರಾಷ್ಟ್ರಕ್ಕೆ ರೋಗ ಪತ್ತೆ ಪರೀಕ್ಷೆ, ಔಷಧ ಹಾಗೂ ಲಸಿಕೆಗಳನ್ನು ಒದಗಿಸಿಕೊಡುವ ಖಾತರಿಯನ್ನು ಈ ಒಪ್ಪಂದವು ನೀಡುತ್ತದೆ. ಅಲ್ಲದೇ, ಸಾಂಕ್ರಾಮಿಕ ಬಿಕ್ಕಟ್ಟಿಗೆ ಸಿಲುಕಿದ ಬಡರಾಷ್ಟ್ರಗಳಿಗೂ ನೆರವು ನೀಡಲು ಶೇ 20ರಷ್ಟು ಉತ್ಪನ್ನಗಳನ್ನು ಡಬ್ಲ್ಯೂಎಚ್ಒಗೆ ನೀಡಲಾಗುತ್ತದೆ ಎಂದೂ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ.

ಒಪ್ಪಂದಕ್ಕೆ ಸಂಬಂಧಿಸಿದಂತೆ ಡಬ್ಲ್ಯುಎಚ್‌ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧನೊಮ್ ಘೆಬ್ರೆಯೆಸಸ್ ಮಾತನಾಡಿದ್ದಾರೆ. ಸಾಮಾಜಿಕ ಮೌಲ್ಯ, ಸಹಕಾರಕ್ಕಿಂತ ರಾಷ್ಟ್ರೀಯ ಹಿತಾಸಕ್ತಿಗೆ ಹಲವು ದೇಶಗಳು ಆದ್ಯತೆ ನೀಡುತ್ತಿರುವಾಗ, ಪರಸ್ಪರ ಸಹಕಾರಕ್ಕೆ ಒತ್ತು ನೀಡಿರುವ ಈ ಒಪ್ಪಂದವು ಐತಿಹಾಸಿಕವಾದುದು ಎಂದಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.