ADVERTISEMENT

ಉಸಿರಾಟ ಸಮಸ್ಯೆ, ಕೊರೊನಾ ಉಪತಳಿ ಜೆಎನ್‌.1 ಉಲ್ಬಣ: ಡಬ್ಲ್ಯುಎಚ್‌ಒ ಎಚ್ಚರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2023, 2:45 IST
Last Updated 18 ಡಿಸೆಂಬರ್ 2023, 2:45 IST
Venugopala K.
   Venugopala K.

ಜಿನಿವಾ: ಉಸಿರಾಟ ಸಂಬಂಧಿ ಕಾಯಿಲೆಗಳ ಉಲ್ಬಣ ಮತ್ತು ಕೊರೊನಾ ವೈರಸ್‌ನ ಉಪತಳಿ ಜೆಎನ್‌.1 ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಚ್ಚರ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ತಾಕೀತು ಮಾಡಿದೆ.

ಕೊರೊನಾ ವೈರಸ್ ವಿಕಸನಗೊಳ್ಳುತ್ತಿದೆ ಮತ್ತು ಅದರ ಪ್ರಭಾವ ಬದಲಾಗುತ್ತಿದೆ. ಹಾಗಾಗಿ, ಬಲವಾದ ಕಣ್ಗಾವಲು ಮತ್ತು ಸೀಕ್ವೆನ್ಸಿಂಗ್ ಕುರಿತ ಮಾಹಿತಿ ಹಂಚಿಕೆಯನ್ನು ಮುಂದುವರಿಸುವಂತೆ ಸದಸ್ಯ ರಾಷ್ಟ್ರಗಳನ್ನು ಡಬ್ಲ್ಯುಎಚ್‌ಒ ಒತ್ತಾಯಿಸಿದೆ.

ಇತ್ತೀಚಿನ ದಿನಗಳಲ್ಲಿ ರೋಗ ಉಲ್ಬಣಗಳಿಗೆ ಕಾರಣ ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ನಿರ್ವಹಣಾ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ ಅವರು ವಿವರಣೆ ನೀಡಿರುವ ವಿಡಿಯೊವನ್ನು ಅದು ಹಂಚಿಕೊಂಡಿದೆ.

ADVERTISEMENT

ಉಸಿರಾಟದ ಸಂಬಂಧಿ ಕಾಯಿಲೆಗಳ ಉಲ್ಬಣ ಮತ್ತು ಕೊರೊನಾದ ಉಪತಳಿ ಜೆಎನ್‌.1 ಬಗ್ಗೆ ಅವರು ಮಾತನಾಡಿದ್ದಾರೆ. ಪರಿಸ್ಥಿತಿಯ ಅವಲೋಕನವನ್ನು ಸಂಸ್ಥೆ ಮುಂದುವರಿಸಲಿದೆ ಎಂದೂ ಹೇಳಿದ್ದಾರೆ. ಈ ರಜಾದಿನಗಳಲ್ಲಿ ನಿಮ್ಮ ಕುಟುಂಬಗಳು ಮತ್ತು ಸ್ನೇಹಿತರನ್ನು ಸುರಕ್ಷಿತವಾಗಿರಿಸಲು ಡಬ್ಲ್ಯುಎಚ್‌ಒನ ಸಾರ್ವಜನಿಕ ಆರೋಗ್ಯ ಸಲಹೆಗಳನ್ನು ಅನುಸರಿಸಿ ಎಂದು ತಿಳಿಸಿದ್ದಾರೆ.

‘ಕೋವಿಡ್–19, ಫ್ಲೂ, ರೈನೋವೈರಸ್, ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೇರಿದಂತೆ ಹಲವಾರು ರೋಗಗಳಿಂದಾಗಿ ಪ್ರಪಂಚದಾದ್ಯಂತ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ. ಜೆಎನ್‌.1 (BA.2.86 ರ ಉಪತಳಿ) ಕಳವಳಕಾರಿಯಾಗಿದ್ದು, ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಉಸಿರಾಟದ ಸಮಸ್ಯೆಗಳು ಹೆಚ್ಚಲು ಕೇವಲ ಕೊರೊನಾ ವೈರಸ್ ಕಾರಣವಲ್ಲ. ಇತರ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳಿವೆ. ಜಗತ್ತಿನ ಹಲವೆಡೆ ಚಳಿಗಾಲವಿರುವುದು ಮತ್ತು ಜನರು ರಜಾದಿನಗಳಲ್ಲಿ ಗುಂಪುಗೂಡುತ್ತಿರುವುದು ವೈರಸ್ ಹರಡಲು ಕಾರಣವಾಗಿದೆ. ಗುಂಪುಗೂಡುವಿಕೆಯ ಸಂದರ್ಭ ಸರಾಗವಾಗಿ ಗಾಳಿಯಾಡುವಂತೆ ನೋಡಿಕೊಳ್ಳಬೇಕು’ಎಂದೂ ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.