
ಷರೀಷ್ ಒಸ್ಮಾನ್ ಹಾದಿ
ಕೃಪೆ: ಫೇಸ್‌ಬುಕ್ / @Osman Hadi - ওসমান হাদি
ಬಾಂಗ್ಲಾದೇಶದಾದ್ಯಂತ 2024ರ ಜುಲೈನಲ್ಲಿ ನಡೆದಿದ್ದ ದಂಗೆಯ ನೇತೃತ್ವ ವಹಿಸಿದ್ದವರಲ್ಲಿ ಪ್ರಮುಖರಾದ ಷರೀಷ್ ಒಸ್ಮಾನ್ ಹಾದಿ ಗುರುವಾರ ನಿಧನರಾಗಿದ್ದಾರೆ.
ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಒಸ್ಮಾನ್ ಅವರ ತಲೆಗೆ ಮುಸುಕುಧಾರಿಯೊಬ್ಬ ಕಳೆದವಾರ ಗುಂಡು ಹಾರಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು, ಉನ್ನತ ಚಿಕಿತ್ಸೆ ಸಲುವಾಗಿ ಏರ್ ಆ್ಯಂಬುಲೆನ್ಸ್ ಮೂಲಕ ಸಿಂಗಾಪುರಕ್ಕೆ ಕಳುಹಿಸಲಾಗಿತ್ತು.
ಅವರ ನಿಧನದ ಬೆನ್ನಲ್ಲೇ, ದೇಶದಲ್ಲಿ ಮತ್ತೊಮ್ಮೆ ಅತಂತ್ರ ಸ್ಥಿತಿ ತಲೆದೋರುವ ಸಾಧ್ಯತೆ ದಟ್ಟವಾಗಿದೆ.
ದೇಶವನ್ನುದ್ದೇಶಿಸಿ ಮಾತನಾಡಿರುವ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್, 'ಷರೀಷ್ ಮೃತಪಟ್ಟಿದ್ದಾರೆ' ಎಂದು ಘೋಷಿಸಿದ್ದಾರೆ. ಹಾಗೆಯೇ, ಹಂತಕರನ್ನು ಸೆರೆ ಹಿಡಿಯಲು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
'ಹೃದಯವಿದ್ರಾವಕ ಸುದ್ದಿಯೊಂದಿಗೆ ಇಂದು ನಿಮ್ಮ ಮುಂದೆ ಬಂದಿದ್ದೇನೆ. ಜುಲೈ ದಂಗೆಯ ಮುಂಚೂಣಿ ಹೋರಾಟಗಾರ ಮತ್ತು ಇಂಕ್ವಿಲಾಬ್ ಮಂಚ್ ವಕ್ತಾರ ಷರೀಷ್ ಒಸ್ಮಾನ್ ಹಾದಿ ಅವರು ನಮ್ಮೊಂದಿಗೆ ಇಲ್ಲ' ಎಂದು ತಿಳಿಸಿದ್ದಾರೆ.
ಷರೀಷ್ ಅವರನ್ನು ಸೋಮವಾರ ಸಿಂಗಾಪುರಕ್ಕೆ ಕಳುಹಿಸುವಾಗಲೇ ಅವರ ಪರಿಸ್ಥಿತಿ 'ಅತ್ಯಂತ ಗಂಭೀರ'ವಾಗಿದೆ ಎಂದು ಢಾಕಾದ ವೈದ್ಯರು ಹೇಳಿದ್ದರು.
ಷರೀಫ್ ನಿಧನದ ಬೆನ್ನಲ್ಲೇ, ದೇಶದ ಪ್ರಮುಖ ದಿನಪತ್ರಿಕೆಗಳಾದ 'ಪ್ರೋಥೋಮ್ ಅಲೋ' ಹಾಗೂ 'ಡೈಲಿ ಸ್ಟಾರ್' ಕಚೇರಿಗಳ ಮೇಲೆ ದಾಳಿ ನಡೆದಿದೆ. ಪ್ರತಿಭಟನಾಕಾರರ ಗುಂಪು ದಾಳಿ ನಡೆಸುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
'ಹಾದಿ, ಹಾದಿ' ಎಂಬ ಭಾವನಾತ್ಮಕ ಘೋಷಣೆಗಳು ಮೊಳಗಲಾರಂಭಿಸಿವೆ. ಷರೀಷ್ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಶಪಥ ಮಾಡಿದ್ದಾರೆ.
ಯಾರು ಈ ಷರೀಫ್ ಒಸ್ಮಾನ್ ಹಾದಿ?
ಒಸ್ಮಾನ್, ಬಾಂಗ್ಲಾದೇಶದ ದಕ್ಷಿಣ ಜಿಲ್ಲೆ ಜಕಲಕಥಿಯವರು. ಅವರ ತಂದೆ ಮದರಸಾದಲ್ಲಿ ಶಿಕ್ಷಕರಾಗಿದ್ದರು.
ನೆಸರಬಾದ್ ಕಾಮಿಲ್ ಮದರಸಾದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಒಸ್ಮಾನ್, ನಂತರ ಢಾಕಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವ್ಯಾಸಂಗ ಮಾಡಿದ್ದರು. ಇತ್ತೀಚೆಗೆ ಸ್ಕಾಲರ್ಸ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷ ಬಾಂಗ್ಲಾದೇಶದಾದ್ಯಂತ ನಡೆದ ಕ್ರಾಂತಿಯ ಸಂದರ್ಭದಲ್ಲಿ (2024ರ ಆಗಸ್ಟ್ 13ರಂದು) 'ಇಂಕ್ವಿಲಾಬ್ ಮಂಚ್' ಹೆಸರಿನ ಸಾಮಾಜಿಕ–ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪಿಸಿದ್ದರು.
ಬಾಂಗ್ಲಾದಲ್ಲಿ ಅಸ್ತಿತ್ವದಲ್ಲಿದ್ದ ಶೇಖ್ ಹಸೀನಾ ಸರ್ಕಾರ ಮತ್ತು ಭಾರತವನ್ನು ತೀವ್ರವಾಗಿ ಟೀಕಿಸುತ್ತಿದ್ದ ಒಸ್ಮಾನ್, ಪದಚ್ಯುತ ಪ್ರಧಾನಿ ಹಸೀನಾ ಅವರ ಅವಾಮಿ ಲೀಗ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿದ್ದರು. ಅವರ ಹೋರಾಟದ ಫಲವಾಗಿ, 'ಇಂಕ್ವಿಲಾಬ್ ಮಂಚ್' ಪ್ರಬಲ ರಾಜಕೀಯ ಗುಂಪಾಗಿ ಗುರುತಿಸಿಕೊಂಡಿತ್ತು.
ಮಾನವತೆ ವಿರುದ್ಧ ನಡೆದ ಅಪರಾಧಗಳ ಕಾರಣಕ್ಕಾಗಿ ಹಸೀನಾ ಅವರಿಗೆ ಮರಣದಂಡನೆ ಘೋಷಿಸಿದ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ಮಂಡಳಿಯ (ಐಸಿಟಿ) ತೀರ್ಪನ್ನು ಶ್ಲಾಘಿಸಿದ್ದ ಒಸ್ಮಾನ್, 'ಈ ತೀರ್ಪು ಇಡೀ ಜಗತ್ತಿಗೆ ಮಾದರಿಯಾಗಲಿದೆ' ಎಂದು ಬಣ್ಣಿಸಿದ್ದರು.
ಒಸ್ಮಾನ್ ಅವರು, ಹಸೀನಾ ಸರ್ಕಾರವನ್ನಷ್ಟೇ ಅಲ್ಲ. ಬಾಂಗ್ಲಾದೇಶ ಸೇನೆ ಮತ್ತು ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನೂ ಟೀಕಿಸಲು ಹಿಂಜರಿದವರಲ್ಲ. ಹೊಸ ಸರ್ಕಾರವು, ದೇಶದಲ್ಲಿ ಯಾವುದೇ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿಲ್ಲ ಎಂದು ಕಿಡಿಕಾರಿದ್ದರು.
ಭಾರತ ವಿರೋಧಿ ಧೋರಣೆ!
ಒಸ್ಮಾನ್ ಹತ್ಯೆಯು ಬಾಂಗ್ಲಾದೇಶದಾದ್ಯಂತ ಭಾರತ ವಿರೋಧಿ ಧೋರಣೆಗಳನ್ನು ಹೆಚ್ಚಿಸುವ ಸಾಧ್ಯತೆ ದಟ್ಟವಾಗಿದೆ. ಹಂತಕರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಹಂತಕರನ್ನು ವಶಕ್ಕೆ ಪಡೆಯುವವರೆಗೆ ಭಾರತದ ರಾಯಭಾರ ಕಚೇರಿಯನ್ನು ಬಂದ್ ಮಾಡಬೇಕು ಎಂದು ಮಧ್ಯಂತರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕಳೆದ ವರ್ಷ ನಡೆದ ದಂಗೆಯ ನೇತೃತ್ವ ವಹಿಸಿದ್ದ ತಾರತಮ್ಯ ವಿರೋಧಿ ವಿದ್ಯಾರ್ಥಿ ಸಂಘಟನೆಯ (ಎಸ್‌ಎಡಿ) ಅಂಗವಾದ ನ್ಯಾಷನಲ್ ಸಿಟಿಜನ್ ಪಾರ್ಟಿ (ಎನ್‌ಸಿಪಿ), ಜತಿಯಾ ಛತ್ರ ಶಕ್ತಿ ವಿದ್ಯಾರ್ಥಿ ಸಂಘಟನೆಯೊಂದಿಗೆ ಕೈಜೋಡಿಸಿದ್ದು, ಢಾಕಾ ವಿಶ್ವವಿದ್ಯಾಲಯದ ಆವರಣದಲ್ಲಿ ಶೋಕಾಚರಣೆ ನಡೆಸಿದೆ. ಅಲ್ಲಿಂದ ಶಹಬಾಗ್‌ವರೆಗೆ ಮೆರವಣಿಗೆ ನಡೆಸಿವೆ.
'ಒಸ್ಮಾನ್ ಅವರನ್ನು ಹತ್ಯೆ ಮಾಡಿದವರು ಭಾರತದಿಂದ ವಾಪಸ್ ಆಗುವವರೆಗೆ, ಮಧ್ಯಂತರ ಸರ್ಕಾರವು ಬಾಂಗ್ಲಾದೇಶದಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಮುಚ್ಚಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ' ಎಂದು ಎನ್‌ಸಿಪಿ ನಾಯಕ ಸರ್ಜಿಸ್ ಅಲ್ಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.