ADVERTISEMENT

6 ತಿಂಗಳಷ್ಟೇ ಅಧಿಕಾರ: ಭ್ರಷ್ಟಾಚಾರ ನಿರ್ಮೂಲನೆ ಮಾಡೇ ಮಾಡ್ತೀವಿ; ನೇಪಾಳ ಪ್ರಧಾನಿ

ಪಿಟಿಐ
Published 14 ಸೆಪ್ಟೆಂಬರ್ 2025, 10:47 IST
Last Updated 14 ಸೆಪ್ಟೆಂಬರ್ 2025, 10:47 IST
<div class="paragraphs"><p>ಸುಶೀಲಾ ಕಾರ್ಕಿ</p></div>

ಸುಶೀಲಾ ಕಾರ್ಕಿ

   

-ಪಿಟಿಐ ಚಿತ್ರ

ಕಠ್ಮಂಡು: ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಸುಶೀಲಾ ಕಾರ್ಕಿ ಅವರು ಇಂದು (ಭಾನುವಾರ) ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾವು 6 ತಿಂಗಳಷ್ಟೇ ಅಧಿಕಾರದಲ್ಲಿರುತ್ತೇವೆ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡೇ ಮಾಡುತ್ತೇವೆ. ಜತೆಗೆ, ‘ಜೆನ್‌–ಝಿ’ ಗುಂಪಿನ ಪ್ರತಿನಿಧಿಗಳ ಚಿಂತನೆಗಳಿಗೆ ಅನುಗುಣವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ’ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.

‘ದೇಶದಲ್ಲಿ ಭ್ರಷ್ಟಾಚಾರವನ್ನು ಕೊನೆಗಾಣಿಸುವುದು, ಉತ್ತಮ ಆಡಳಿತ ನಡೆಸುವುದು ಮತ್ತು ಆರ್ಥಿಕ ಸಮಾನತೆ ಸಾಧಿಸುವುದು ‘ಜೆನ್‌–ಝಿ’ ಗುಂಪಿನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ದೃಢನಿಶ್ಚಯದೊಂದಿಗೆ ಕೆಲಸ ಮಾಡುತ್ತೇವೆ’ ಎಂದು 73 ವರ್ಷದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಶೀಲಾ ಕಾರ್ಕಿ ಹೇಳಿದ್ದಾರೆ.

‘2026ರ ಮಾರ್ಚ್‌ 5ರಂದು ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾನು ಮತ್ತು ನಮ್ಮ ಮಧ್ಯಂತರ ಸರ್ಕಾರ ಆರು ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿರುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನೇಪಾಳದ ಮಧ್ಯಂತರ ಸರ್ಕಾರದ ನೂತನ ಪ್ರಧಾನಿಯಾಗಿ ಸುಶೀಲಾ ಕಾರ್ಕಿ ಅವರು ಶುಕ್ರವಾರ ರಾತ್ರಿ ಪ್ರಮಾಣವಚನ ಸ್ವೀಕರಿಸಿದ್ದರು.

ನೇಪಾಳದ ಮೊದಲ ಮಹಿಳಾ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕಾರ್ಕಿ ಅವರಿಗೆ ಅಧ್ಯಕ್ಷ ರಾಮಚಂದ್ರ ಪೌದೆಲ್‌, ಉಪಾಧ್ಯಕ್ಷ ರಾಮ ಸಹಾಯ್‌ ಯಾದವ್, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಮಾನ್‌ ಸಿಂಗ್ ರಾವತ್, ಭಾರತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಶುಭ ಹಾರೈಸಿದ್ದಾರೆ.

‘ಜೆನ್‌–ಝಿ’ ಪ್ರತಿಭಟನೆಯಿಂದಾಗಿ ಈ ವಾರದ ಆರಂಭದಲ್ಲಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ದಿಢೀರ್‌ ರಾಜೀನಾಮೆಯ ನಂತರ ನೇಪಾಳದಲ್ಲಿ ತಲೆತೋರಿದ್ದ ರಾಜಕೀಯ ಅನಿಶ್ಚಿತತೆ ಸದ್ಯ ತಣ್ಣಗಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.