ಲಂಡನ್: ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿರುವ ಬ್ರಿಟನ್ ಮಹಿಳೆ ಎಥೆಲ್ ಕ್ಯಾಟೆರ್‌ಹ್ಯಾಮ್ ಅವರು ಗುರುವಾರ ತಮ್ಮ 116ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ.
1909ರ ಆಗಸ್ಟ್ 21ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ್ದ ಕ್ಯಾಟೆರ್‌ಹ್ಯಾಮ್ ಅವರು ಪ್ರಸ್ತುತ ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂದು ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಮತ್ತು ದತ್ತಾಂಶಗಳು ತಿಳಿಸಿದೆ.
ಈ ಮೊದಲು ಜಗತ್ತಿನ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಬ್ರೆಜಿಲ್‌ನ ಕ್ಯಾನ್‌ಬರೋ ಲೂಕಾಸ್ (116 ವರ್ಷ) ಅವರು ಈ ವರ್ಷ ಏಪ್ರಿಲ್‌ನಲ್ಲಿ ನಿಧನರಾಗಿದ್ದಾರೆ.
ಗಿನ್ನೆಸ್ ವಿಶ್ವ ದಾಖಲೆಯ ಪ್ರಕಾರ 1997ರಲ್ಲಿ ನಿಧನ ಹೊಂದಿದ ಫ್ರಾನ್ಸ್ ಮೂಲದ ಜೆನ್ನೆ ಕಾಲ್‌ಮೆಂಟ್ ಜಗತ್ತಿನ ಹಿರಿಯ ವ್ಯಕ್ತಿ. ಅವರು 122 ವರ್ಷ 164 ದಿನ ಬದುಕಿದ್ದರು.
ಕ್ಯಾಟೆರ್‌ಹ್ಯಾಮ್ ಅವರು ಮೂವರ ಮೊಮ್ಮಕ್ಕಳು ಮತ್ತು ಐವರು ಮರಿಮೊಮ್ಮಕ್ಕಳನ್ನು ಹೊಂದಿದ್ದಾರೆ. ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಪತಿ ನಿಧನರಾಗಿದ್ದಾರೆ.
ಕ್ಯಾಟೆರ್‌ಹ್ಯಾಮ್ ಅವರು ತಮ್ಮ 110ನೇ ವಯಸ್ಸಿನಲ್ಲಿ ಕೋವಿಡ್–19 ವಿರುದ್ಧ ಹೋರಾಡಿ ಬದುಕುಳಿದಿದ್ದಾರೆ ಎಂದು ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಸುದೀರ್ಘ ಆಯಸ್ಸಿನ ರಹಸ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಎಥೆಲ್ ಕ್ಯಾಟೆರ್‌ಹ್ಯಾಮ್, ‘ಯಾರ ಜತೆಯೂ ವಾದಿಸುವುದಿಲ್ಲ. ನಾನು ಎಲ್ಲರ ಅಭಿಪ್ರಾಯಗಳನ್ನು ಕೇಳುತ್ತೇನೆ. ಆದರೆ, ನನಗೆ ಇಷ್ಟವಾದ ಕೆಲಸವನ್ನು ಮಾತ್ರ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.