ADVERTISEMENT

ವಿಶ್ವದ ಅತೀ ವೇಗದ ಬುಲೆಟ್‌ ರೈಲಿನ ಪರೀಕ್ಷಾರ್ಥ ಸಂಚಾರ ಆರಂಭಿಸಿದ ಜಪಾನ್‌

ಏಜೆನ್ಸೀಸ್
Published 12 ಮೇ 2019, 13:26 IST
Last Updated 12 ಮೇ 2019, 13:26 IST
   

ಟೋಕಿಯೊ: ಗಂಟೆಗೆ 400 ಕಿ.ಮೀ ವೇಗದಲ್ಲಿ ಕ್ರಮಿಸಬಲ್ಲ, ಹೊಸ ತಲೆಮಾರಿನ ಬುಲೆಟ್‌ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಜಪಾನ್‌ ಶುಕ್ರವಾರದಿಂದ ಆರಂಭಿಸಿದೆ.

ಆಲ್ಫಾ–ಎಕ್ಸ್‌ ಹೆಸರಿನ ಈ ರೈಲು ಜಪಾನ್‌ನ ಹಳಿಗಳ ಮೇಲೆ ಇನ್ನೂ ಮೂರು ವರ್ಷಗಳ ಕಾಲ ಪ್ರಯೋಗಾರ್ಥ ಸಂಚಾರ ನಡೆಸಲಿದೆ. 2030ರ ವೇಳೆಗೆ ಈ ರೈಲು ನಾಗರಿಕರ ಪ್ರಯಾಣಕ್ಕೆ ಲಭ್ಯವಾಗಲಿದೆ. ಈ ರೈಲಿನ ವೇಗ ಮಿತಿಯು ಕ್ರಮೇಣ ಗಂಟೆಗೆ 360 ಕಿ.ಮೀಗೆ ಮಿತಿಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೂ, ಜಗತ್ತಿನ ಅತೀ ವೇಗದ ರೈಲು ಎಂಬ ಹೆಗ್ಗಳಿಕೆಗೆ ಅಲ್ಫಾ–ಎಕ್ಸ್‌ ಪಾತ್ರವಾಗಿದೆ. ಸದ್ಯ ಚೀನಾದಲ್ಲಿರುವ ಫುಕ್ಸಿಂಗ್‌ ಎಂಬ ಬುಲೆಟ್‌ ರೈಲು ಆಲ್ಫಾಗಿಂತಲೂ 10 ಕಿ.ಮೀ ಕಡಿಮೆ ವೇಗವಾಗಿ ಕ್ರಮಿಸುತ್ತದಷ್ಟೆ.

ಈ ರೈಲನನ್ನು ಜಪಾನ್‌ನ ಸೆಂಡೈ ಮತ್ತು ಅಮೋರಿ ನಗರಗಳ ನಡುವೆ ಪರೀಕ್ಷಾರ್ಥವಾಗಿ ಓಡಿಸಲಾಗುತ್ತಿದೆ. ಈ ಎರಡೂ ನಗರಗಳ ನಡುವಿನ ದೂರ ಸುಮಾರು 280 ಕಿ.ಮೀ. ವಾರದಲ್ಲಿ ಎರಡು ದಿನ, ಅದೂ ಮಧ್ಯರಾತ್ರಿಯಲ್ಲಿ ಈ ರೈಲಿನ ಸಂಚಾರ ನಡೆಯಲಿದೆ.

ADVERTISEMENT

ಆಲ್ಫಾ–ಎಕ್ಸ್‌ ಈ ಶತಮಾನದ ತಂತ್ರಜ್ಞಾನದೊಂದಿಗೆ ತಯಾರಾದ ಬುಲೆಟ್‌ ರೈಲು. ಇದರಲ್ಲಿಕಂಪನ ಸಂವೇದಕ(ವೈಬರೇಷನ್‌ ಸೆನ್ಸಾರ್‌), ತಾಪಮಾನ ಸಂವೇದಕ (ಟೆಂಪರೇಚರ್‌ ಸೆನ್ಸಾರ್‌)ಗಳಿವೆ. ಇದರ ಮುಖ ವಿನ್ಯಾಸವು 72 ಅಡಿಗಳಷ್ಟು ಮುಂದಕ್ಕೆ ಚಾಚಿಕೊಂಡಂತಿದ್ದು, ವೇಗವಾಗಿ ಮತ್ತು ಸುರಂಗಗಳಲ್ಲಿ ಚಲಿಸಲು ಯೋಗ್ಯವಾಗಿದೆ. ಭೂಕಂಪನದಿಂದ ಉದ್ಭವಿಸುವ ಕಂಪನಗಳ ಪರಿಣಾಮಗಳನ್ನು ತಾಳಿಕೊಳ್ಳಬಲ್ಲ ವ್ಯವಸ್ಥೆ ಇದರಲ್ಲಿದೆ. ಆಲ್ಫಾದ ಎಲೆಕ್ಟ್ರಿಕ್‌ ಬೋಗಿಗಳನ್ನು ಖ್ಯಾತ ಆಟೋಮೊಬೈಲ್‌ ಸಂಸ್ಥೆ ಕವಾಸಕಿ ತಯಾರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.