ವಾಷಿಂಗ್ಟನ್: ‘ರಷ್ಯಾ ಉಕ್ರೇನ್ ಮೇಲೆ ಮಾಡಿರುವ ದಾಳಿಯು, ಜಪಾನ್ ಪರ್ಲ್ ಹಾರ್ಬರ್ ಮೇಲೆ ಮಾಡಿದ ದಾಳಿಗೆ ಹಾಗೂ ಅಲ್ ಖೈದಾ ಮಾಡಿದ 9/11 ದಾಳಿಗೆ ಸಮವಾಗಿದೆ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ.
ಬುಧವಾರ ಅಮೆರಿಕದ ಯುಎಸ್ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ಡಿಸೆಂಬರ್ 7, 1941 ರಲ್ಲಿ ನಿಮ್ಮ ದೇಶದ (ಅಮೆರಿಕ) ಆಕಾಶದ ಮೇಲೆ ಕಾರ್ಮೋಡಗಳು ಕವಿದು ಪರ್ಲ್ ಹಾರ್ಬರ್ ಎಂಬ ಮಹಾ ದುರಂತ ಸಂಭವಿಸಿತೋ ಅಂತಹ ದಿನಗಳು ನಮಗೆ ಬಂದಿವೆ. ನಿಮ್ಮ ದೇಶದಲ್ಲಿ (ಅಮೆರಿಕ) 2001 ಸೆಪ್ಟೆಂಬರ್ 9 ರಂದು ಅಲ್‌ಖೈದಾ ಉಗ್ರರು ನಡೆಸಿದ ಘೋರ ದುರಂತದ ಹಾಗೇ ಇಂದು ರಷ್ಯಾ ನಮ್ಮ ಮೇಲೆ ದಾಳಿ ನಡೆಸಿದೆ’ ಎಂದಿದ್ದಾರೆ ಝೆಲೆನ್‌ಸ್ಕಿ .
‘ಏನೇ ಆದರೂ ನಾವು ರಷ್ಯಾಕ್ಕೆ ಮಣಿಯುವುದಿಲ್ಲ. ನಮಗೆ ಅಮೆರಿಕದ ಬೆಂಬಲ ಈ ಹೊತ್ತಿನಲ್ಲಿ ಖಂಡಿತವಾಗಿಯೂ ಬೇಕು. ರಷ್ಯಾ ಮೇಲೆ ಇನ್ನಷ್ಟು ಕಠಿಣ ನಿರ್ಬಂಧಗಳನ್ನು ಕೈಗೊಳ್ಳಬೇಕು’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
ಇನ್ನೊಂದೆಡೆ ರಷ್ಯಾ ಉಕ್ರೇನ್‌ನಲ್ಲಿ ಕೈಗೊಂಡಿರುವ ಮಿಲಿಟರಿ ಕಾರ್ಯಾಚರಣೆ ಭಾಗಶಃ ಯಶಸ್ವಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿರುವುದಾಗಿ ಕೆಲ ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.