ತಿರುವನಂತಪುರ: ವೈದ್ಯಕೀಯ ಪ್ರಮಾಣ ಪತ್ರವನ್ನು ಹಾಜರುಪಡಿಸಿಆಂಬುಲೆನ್ಸ್ ಮೂಲಕ ರೋಗಿಗಳನ್ನು ಗಡಿ ಮೂಲಕ ಕೇರಳದಿಂದ ಕರ್ನಾಟಕದ ಆಸ್ಪತ್ರೆಗೆ ದಾಖಲಿಸಲು ಕರ್ನಾಟಕ ಒಪ್ಪಿಗೆ ನೀಡಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
‘ಕೊರೊನಾ ಸೋಂಕು ಇಲ್ಲದೇ ಇರುವ ರೋಗಿಗಳನ್ನಷ್ಟೇ ಕರ್ನಾಟಕದ ಒಳಗೆ ಬಿಡಲಾಗುವುದು. ಕರ್ನಾಟಕದ ವೈದ್ಯರ ತಂಡವು ಗಡಿಯಾದ ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ರೋಗಿಗಳ ತಪಾಸಣೆ ನಡೆಸಲಿದೆ. ಕಾಸರಗೋಡಿನ ತಲಪಾಡಿ ಮೂಲಕ ರೋಗಿಗಳನ್ನು ಮಂಗಳೂರಿಗೆ ಸಾಗಿಸಲು ಆಂಬ್ಯುಲೆನ್ಸ್‌ಗಳಿಗೆ ಅವಕಾಶ ನೀಡಲಾಗಿದೆ’ ಎಂದರು.
ಗಡಿ ತೆರೆಯಬೇಕು ಎಂಬ ವಿಚಾರದಲ್ಲಿ ಕರ್ನಾಟಕ ಮತ್ತು ಕೇರಳದ ನಡುವೆ ಪತ್ರ ವ್ಯವಹಾರಗಳು, ರಾಜೀ ಸಂಧಾನಗಳು, ನ್ಯಾಯಾಂಗ ಹೋರಾಟಗಳೂ ನಡೆದಿದ್ದವು. ಇದ್ಯಾವುದಕ್ಕೂ ಸೊಪ್ಪು ಹಾಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗಡಿ ತೆರೆಯುವ ಪ್ರಶ್ನೆಯೇ ಇಲ್ಲ ಎಂದಿದ್ದರು.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆಪತ್ರ ಬರೆದು ಗಡಿ ತೆರೆಯಲು ಮನವಿ ಮಾಡಿದ್ದರು. ಅಲ್ಲದೆ, ಪ್ರಧಾನಿ ಮಧ್ಯಪ್ರವೇಶ ಬಯಸಿದ್ದರು. ಯಡಿಯೂರಪ್ಪ ಅವರು ಇದಕ್ಕೂ ಬಗ್ಗಿರಲಿಲ್ಲ.
ಸದ್ಯ ಕೋವಿಡ್ 19 ಸೋಂಕಿತರಲ್ಲದ ರೋಗಿಗಳಿಗೆ ಮಾತ್ರ ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಲು ಗಡಿ ತೆರಯಲು ಕರ್ನಾಟಕ ಸರ್ಕಾರ ಒಪ್ಪಿರುವುದಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.