
ಅನ್ಯಜೀವಿಗಳ ಹುಡುಕಾಟ ಇಂದು ನಿನ್ನೆಯದಲ್ಲ; ಅದಕ್ಕಾಗಿ ಎಲ್ಲ ಬಗೆಯ ಮಾಹಿತಿಗಳನ್ನು ಕೂಲಂಕಷವಾಗಿ ವಿಶ್ಲೇಷಿಸಬಲ್ಲ ಪರಿಣತಿ ಈಗ ಲಭ್ಯವಿದೆ. ಆದರೆ, ಸತ್ಯದ ಹುಡುಕಾಟದ ಬದಲು ಕಪೋಲಕಲ್ಪಿತ ಸಿದ್ಧಾಂತಗಳೇ ಹೆಚ್ಚು ಪ್ರಚಾರಕ್ಕೆ ಬರುವುದು ದುರದೃಷ್ಟಕರ. ಅಕ್ಟೋಬರ್ 29ರಂದು ಸೂರ್ಯನನ್ನು ಸಮೀಪಿಸುವ ‘3ಐ ಅಟ್ಲಾಸ್’ ಧೂಮಕೇತುವಿಗೆ ಸಂಬಂಧಿಸಿದಂತೆಯೂ ಗಾಳಿಸುದ್ದಿಗಳೇ ಹೆಚ್ಚಾಗಿವೆ.
ಜುಲೈ ತಿಂಗಳಲ್ಲಿ ಅಟ್ಲಾಸ್ ಎಂಬ ವೀಕ್ಷಣಾಲಯ (ಆಸ್ಟೆರಾಯ್ಡ್ ಟೆರೆಸ್ತ್ರಿಯಲ್ ಇಂಪಾಕ್ಟ್ ಲಾಸ್ಟ್ ಅಲರ್ಟ್ ಸಿಸ್ಟಂ) ಪತ್ತೆ ಮಾಡಿದ ಒಂದು ಧೂಮಕೇತು ಕೆಲವೇ ದಿನಗಳಲ್ಲಿ ತನ್ನ ವೈಶಿಷ್ಟ್ಯಗಳನ್ನು ಪ್ರದರ್ಶಿಸಿತು. ವೇಗದ ಆಧಾರದ ಮೇಲೆ ಇದು ಸೌರಮಂಡಲದ ಆಚೆಯಿಂದ ಬಂದದ್ದು ಎಂಬ ಬಹುಮುಖ್ಯ ಮಾಹಿತಿ ಒದಗಿದ ಕೂಡಲೇ ವಿಜ್ಞಾನಿಗಳ ಚಿಂತನೆಯ ದಿಕ್ಕು ಬದಲಾಯಿತು. ಭೂಮಿಯಿಂದ ಸಾಕಷ್ಟು ದೂರದಲ್ಲಿರುವ ಈ ಧೂಮಕೇತು, ಅನ್ಯಲೋಕದ ಬುದ್ಧಿಜೀವಿಗಳ ಕರಾಮತ್ತು ಎಂಬಲ್ಲಿಗೂ ವಿಸ್ತರಿಸಿ, ಸುದ್ದಿ ಮಾಧ್ಯಮಗಳ ಮುಖಪುಟವನ್ನು ಕಸಿದುಕೊಂಡಿದೆ.
ಯಾವುದೇ ಧೂಮಕೇತು ಪತ್ತೆಯಾಗುವುದು ಒಂದು ಕ್ಷೀಣವಾದ ಚುಕ್ಕೆಯ ಹಾಗೆ. ಅದು ಹೊಸಕಾಯ ಎಂದು ತಿಳಿದುಕೊಳ್ಳಲು ಎಲ್ಲ ಸರ್ವೇಕ್ಷಕ ದೂರದರ್ಶಕಗಳೂ ಅದರತ್ತ ತಿರುಗುತ್ತವೆ. ಅದರ ಪಥವನ್ನು ಲೆಕ್ಕ ಹಾಕಲು ಅವಶ್ಯವಾದ ಮಾಹಿತಿಯನ್ನು ಒದಗಿಸುತ್ತವೆ. ತದನಂತರ ಅದು ಕ್ಷುದ್ರಗ್ರಹವೇ ಅಥವಾ ಧೂಮಕೇತುವೇ ಎಂಬುದು ನಿರ್ಧಾರವಾಗಿ, ಅದಕ್ಕೊಂದು ಅಂಕಿತನಾಮ ಸಿಗುತ್ತದೆ. ಹೀಗೆ ಸಿಕ್ಕ ಸಂಖ್ಯೆ ‘3ಐ’; ಅಂದರೆ ಸೌರಮಂಡಲದ ಹೊರಗಿನಿಂದ ಬಂದಿರುವ ಧೂಮಕೇತುಗಳ ಪಟ್ಟಿಯಲ್ಲಿ ಇದು ಮೂರನೆಯದು (ಒಯುಮಯ, ಬೋರಿಸೋವ್ –ಇವೆರಡು ಈಗಾಗಲೇ ಬಂದುಹೋಗಿರುವಂತಹವು). ‘ಐ’ ಎಂದರೆ ಇಂಟರ್ ಸ್ಟೆಲ್ಲಾರ್– ಈ ಅಕ್ಷರ ಅದು ನಮ್ಮ ಸೌರಮಂಡಲದ್ದಲ್ಲ ಎಂದು ಸೂಚಿಸುತ್ತದೆ. ‘ಅಟ್ಲಾಸ್’ ಎಂಬುದು ಅದನ್ನು ಕಂಡುಹಿಡಿದ ಸಂಸ್ಥೆಯ ಹೆಸರು.
ಹಬಲ್ ದೂರದರ್ಶಕ, ಜೇಮ್ಸ್ ವೆಬ್ ದೂರದರ್ಶಕ, ವೇರಾ ರೂಬೆನ್ ದೂರದರ್ಶಕ ಮುಂತಾಗಿ ಎಲ್ಲ ದೊಡ್ಡ ದೂರದರ್ಶಕಗಳೂ ಈ ಧೂಮಕೇತುವಿನ ಬೆಳವಣಿಗೆಯನ್ನು ವಿವರವಾಗಿ ಪರಿಶೀಲಿಸತೊಡಗಿದವು. ಆರಂಭದಲ್ಲಿ ಇದಕ್ಕೆ ಬಾಲ ಮೂಡುವ ಸೂಚನೆಯೇ ಇರದಿದ್ದ ಕಾರಣ, ಇದು ಧೂಮಕೇತು ಹೌದೋ ಅಲ್ಲವೋ ಎಂಬ ಅನುಮಾನ ಎದ್ದಿತು. ಕ್ರಮೇಣ ತಲೆ (ಕೋಮಾ ಅಂದರೆ ಧೂಮಕೇತುವಿನ ಮೂಲ ಬಂಡೆಯಿಂದ ಆವಿಯಾಗಿ ಅದರ ಸುತ್ತಲೂ ಆವರಿಸಿಕೊಳ್ಳುವ ದೂಳು ಮತ್ತು ಅನಿಲ) ಮತ್ತು ಬಾಲದ ಜೊತೆಗೆ ರೋಹಿತದಲ್ಲಿ ಕಾರ್ಬನ್ ಮಾನಾಕ್ಸೈಡ್, ಸಯನೈಡ್– ಹೀಗೆ ಇತರ ಗುಣವಿಶೇಷಗಳು ಪ್ರಕಟಗೊಂಡವು.
ಸಾಮಾನ್ಯವಾಗಿ ಧೂಮಕೇತುಗಳ ಕಕ್ಷೆ ದೀರ್ಘ ವೃತ್ತಾಕಾರ ಆಗಿರುತ್ತದೆ. ತೀರಾ ಚಪ್ಪಟೆಯಾಗಿರುವ ಕಾರಣ ಅವು ಇತರ ಗ್ರಹಗಳ ಪಥವನ್ನು ಸೂಚಿಸುವ ರಾಶಿಚಕ್ರದ ಉತ್ತರಕ್ಕೋ ದಕ್ಷಿಣಕ್ಕೋ ಹಾದು ಹೋಗುವುದು ಸಾಧ್ಯ. ಕೆಲವು (ಉದಾಹರಣೆಗೆ 1996ರ ಹಯಾಕುಟಾಕೆ) ಧ್ರುವ ನಕ್ಷತ್ರದ ಸಮೀಪವೂ ಕಾಣಬಹುದು. ಈ ಹೊಸ ಕಾಯ ದಕ್ಷಿಣದಿಂದ ಬಂದಿದೆ. ಅದರ ಕಕ್ಷೆ ದೀರ್ಘವೃತ್ತವಲ್ಲ. ಅಪರವಲಯ (ಹೈಪರ್ಬೊಲ) ಅಂದರೆ ಅದು ಪುನಃ ಹಿಂದಿರುಗಿ ಬರುವ ಸಾಧ್ಯತೆಯೇ ಇಲ್ಲ. ಇದು ಭೂಮಿಯನ್ನು ಸಮೀಪಿಸುವುದಿಲ್ಲ. ಅಕ್ಟೋಬರ್ ಮೊದಲ ವಾರದಲ್ಲಿ ಮಂಗಳ ಗ್ರಹವನ್ನು ಸಮೀಪಿಸಿದ ಸಂದರ್ಭವನ್ನು ಬಳಸಿಕೊಂಡು, ಅನೇಕ ಗಗನನೌಕೆಗಳು ಅದರ ವಿವರಗಳನ್ನು ಅಧ್ಯಯನ ಮಾಡಿದವು. ಇದೊಂದು ವಿಶಿಷ್ಟ ಕಾಯ ಎಂಬುದಂತೂ ಮನದಟ್ಟಾಯಿತು.
‘3ಐ ಅಟ್ಲಾಸ್’ನ ‘ಕೋಮಾ’ (ತಲೆ) ಇದೀಗ ವಿಸ್ತಾರವಾಗುತ್ತಾ ಬೆಳೆದಿದೆ. ಸಾಮಾನ್ಯವಾಗಿ ಬಾಲ, ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಒತ್ತರಿಸುವ ದೂಳಿನಿಂದ ಉಂಟಾಗುತ್ತದೆ. ಆದರೆ, ಇಲ್ಲಿ ಸೂರ್ಯನತ್ತಲೇ ಚಾಚಿಕೊಂಡಿರುವುದು ವಿಚಿತ್ರ. ಹಿಂದೆ ಕೊಹೊಟೆಕ್ ಮುಂತಾದ ಧೂಮಕೇತುಗಳಿಗೆ ಹೀಗೆ ವಿಮುಖಬಾಲ (ಆಂಟಿ ಟೇಯ್ಲ್) ಕಂಡಿತ್ತು. ಭೂಮಿ–ಸೂರ್ಯ–ಧೂಮಕೇತುಗಳ ವಿಶಿಷ್ಟ ಸ್ಥಾನಗಳೇ ಇದಕ್ಕೆ ಕಾರಣ ಎಂಬ ವಿವರಣೆ ಸಿಕ್ಕಿತ್ತು. ಇಲ್ಲಿಯೂ ಹಾಗೆಯೇ ಆಗಿರಬಹುದು ಎನ್ನಲು ಒಂದು ಅಡ್ಡಿ ಇದೆ. ಅದೆಂದರೆ, ಸೂರ್ಯನ ವಿರುದ್ಧ ದಿಕ್ಕಿಗಿಂತ ಇದು ದೊಡ್ಡದಾಗಿದ್ದುದು. ಚಿಮ್ಮುತ್ತಿರುವ ದೂಳಿನ ಪ್ರಮಾಣ ಅತಿಹೆಚ್ಚು ಇರಬೇಕು ಎಂಬುದು ಇನ್ನೊಂದು ವಾದ.
ಕಳೆದ ಒಂದು ತಿಂಗಳಲ್ಲಿ ದೊರಕಿದ ಮಾಹಿತಿಗಳಿಂದ ಅದು ಧೂಮಕೇತು ಎಂಬುದು ಖಚಿತವಾಗಿದೆ. ಆದರೂ, ವಿಚಿತ್ರವಾದ ಜಿಜ್ಞಾಸೆಗಳು ತಲೆ ಎತ್ತುತ್ತಿವೆ. ಅಮೆರಿಕದ ‘ಸ್ಪೇಸ್ ಎಕ್ಸ್’ನ ಇಲಾನ್ ಮಸ್ಕ್ ಮುಂತಾದ ಖ್ಯಾತನಾಮರು ಇದು ಯಾವುದೋ ಅನ್ಯಲೋಕದ ಬುದ್ಧಿಜೀವಿಗಳು ಕಳುಹಿಸಿರುವ ನೌಕೆ ಎಂದು ಹೇಳಿಕೆ ಕೊಟ್ಟರು. ಅದು ಭೂಮಿಯನ್ನು ಅಪ್ಪಳಿಸಲು ನಿಯೋಜಿತವಾದದ್ದು ಎಂಬ ವದಂತಿಯೂ ಹರಡಿತು. ಆದರೆ, ಅದು ಭೂಮಿಯನ್ನು ಸಮೀಪಿಸುವುದಿಲ್ಲ ಎಂದು ಖಚಿತವಾದಾಗ, ಅದಕ್ಕೆ ಅನುಗುಣವಾಗಿ ‘ಬರೀ ವೀಕ್ಷಣೆಗಾಗಿ ಬಂದ ನೌಕೆ’ ಎಂಬ ಗಾಳಿಸುದ್ದಿ ಹಬ್ಬಿತು. ಇತ್ತೀಚೆಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಪ್ರಕಟಿಸಿದ ಸಂಶೋಧನಾ ಪ್ರಬಂಧವೂ ಅದನ್ನು ಎತ್ತಿ ಹಿಡಿದು ಟೀಕೆಗೆ ಒಳಗಾಯಿತು. ಅದು ಯಾವುದೇ ವಿದ್ವತ್‌ಪೂರ್ಣ ನಿಯತಕಾಲಿಕೆಯಲ್ಲಿ ಪ್ರಕಟವಾಗದಿದ್ದರೂ ಪ್ರಚಾರ ಗಿಟ್ಟಿಸಿಕೊಂಡಿತು. ಅದರಲ್ಲಿಯ ಅಪಕ್ವ ಪರಿಕಲ್ಪನೆಗಳನ್ನು ಅನೇಕರು ತಿರಸ್ಕರಿಸಿದರಾದರೂ, ನಂಬುವವರ ಸಂಖ್ಯೆಯೂ ಹೆಚ್ಚಿತು. ಅನ್ಯಗ್ರಹ ಜೀವಿಗಳು ಭೂಮಿಯ ಬದಲು ಮಂಗಳ ಗ್ರಹಕ್ಕೆ ದಾಳಿ ಇಡುತ್ತಿದ್ದಾರೆ ಎಂಬಂತಹ ವಿಚಿತ್ರ–ವಿಕೃತ ವಿಶ್ಲೇಷಣೆಗಳು ಜನಸಾಮಾನ್ಯರ ಮನಸ್ಸನ್ನು ತಲ್ಲಣಗೊಳಿಸುತ್ತಿವೆ.
ಭೂಮಿಯ ಮೇಲಿನ ದೊಡ್ಡ ದೊಡ್ಡ ದೂರದರ್ಶಕಗಳಲ್ಲದೆ ಹಲವಾರು ಗಗನ ವೀಕ್ಷಣಾಲಯಗಳು ‘3ಐ’ ಅಟ್ಲಾಸ್ ಅನ್ನು ವಿವರವಾಗಿ ಪರಿಶೀಲಿಸಿವೆ. ಸ್ಫೆರೆಕಸ್, ಸ್ವಿಫ್ಟ್, ಜೇಮ್ಸ್ ವೆಬ್ ಮತ್ತು ಹಬಲ್‌ನಂತಹ ಭೂಕಕ್ಷೆಯ ಗಗನ ವೀಕ್ಷಣಾಲಯಗಳಲ್ಲದೆ, ಮಂಗಳ ಗ್ರಹವನ್ನು ಸುತ್ತುತ್ತಿರುವ ಟ್ರೇಸ್ ಗ್ಯಾಸ್ ಆರ್ಬೈಟರ್, ಮಾರ್ಸ್ ರೆಕೊನೊಸೈನ್ಸ್ ಆರ್ಬೈಟರ್, ಮಾರ್ಸ್ ಎಕ್ಸ್‌ಪ್ರೆಸ್, ಇವೆಲ್ಲವೂ ಈ ಧೂಮಕೇತುವನ್ನು ವೀಕ್ಷಿಸಿವೆ. ಈ ಧೂಮಕೇತು ಅಕ್ಟೋಬರ್ 29ರಂದು ಸೂರ್ಯನನ್ನು ಸಮೀಪಿಸಿ ಹಿಂದಿರುಗುವಾಗ ಗುರುಗ್ರಹದ ಸಮೀಪ ಹಾದುಹೋಗುತ್ತದೆ. ಆಗ ಜೂನೋ, ಅಲ್ಲದೆ ಸೈಕೆ ಎಂಬ ಕ್ಷುದ್ರಗ್ರಹದತ್ತ ಹೊರಟಿರುವ ಗಗನನೌಕೆ ಇದರ ವೀಕ್ಷಣೆ ನಡೆಸಲಿವೆ.
ಇದುವರೆಗೆ ದೊರಕಿರುವ ಮಾಹಿತಿಗಳಿಂದ ಕೆಲವು ವಿಲಕ್ಷಣ ಚಟುವಟಿಕೆಗಳನ್ನು ಗುರುತಿಸುವುದು ಸಾಧ್ಯವಾಗಿದೆ. ಉದಾಹರಣೆಗೆ, ಅದರ ಮೂಲ ಬಂಡೆಯ ವ್ಯಾಸ 5 ಕಿ.ಮೀ ಇರಬಹುದು; 10 ಕಿ.ಮೀ.ಗಿಂತ ಹೆಚ್ಚೂ ಇರಬಹುದು ಎಂದು ಕೆಲವು ಅಳತೆಗಳು ತೋರಿಸಿವೆ. (ಹ್ಯಾಲೀ ಧೂಮಕೇತುವಿನ ಉದ್ದ ಸುಮಾರು 10 ಕಿ.ಮೀ). ಕೋಮಾದ ಗಾತ್ರ 10,000 ಕಿ.ಮೀ. ಅಥವಾ ಇನ್ನೂ ಹೆಚ್ಚು. ಅನಿಲಗಳಿಗಿಂತ ಮೈಕ್ರಾನ್ ಗಾತ್ರದ ಕಣಗಳು ಹೆಚ್ಚಿರುವಂತೆ ತೋರುತ್ತದೆ. ಅದರ ಬಣ್ಣ ನಸುಗೆಂಪು; ಹಾಗಾಗಿ ಕ್ಷುದ್ರಗ್ರಹ ಎಂದು ಭಾವಿಸಲಾಗಿತ್ತು. ಅತಿ ಕೌತುಕಮಯ ವಿಷಯವೆಂದರೆ, ಇದರಲ್ಲಿ ಕಬ್ಬಿಣ ಕಂಡುಬಂದಿಲ್ಲ; ನಿಕ್ಕಲ್ ಧಾರಾಳವಾಗಿಯೇ ಇದೆ. ಸಾಮಾನ್ಯವಾಗಿ ಈ ಎರಡೂ ಧಾತುಗಳು ಸಮ ಪ್ರಮಾಣದಲ್ಲಿ ಕಂಡುಬರುತ್ತವೆ. ಇದು ನೈಸರ್ಗಿಕ ಕಾಯ ಅಲ್ಲ ಎಂದು ವಾದಿಸುವವರು, ಕಬ್ಬಿಣದ ಈ ಕೊರತೆಯನ್ನೇ ಮುಖ್ಯ ಕಾರಣವನ್ನಾಗಿಸಿಕೊಂಡಿದ್ದಾರೆ.
‘3ಐ’ ಅಟ್ಲಾಸ್ ಧೂಮಕೇತುವಿನ ಅತಿವೇಗ ಅದೆಲ್ಲಿಂದಲೋ ಅದು ಧಾವಿಸಿ ಬರುತ್ತಿದೆ ಎಂದು ಹೇಳುತ್ತದೆಯಾದರೂ, ನಿರ್ದಿಷ್ಟವಾಗಿ ಇದೇ ನಕ್ಷತ್ರದಿಂದ ಎಂದು ಖಚಿತಪಡಿಸುವುದು ಸಾಧ್ಯವಿಲ್ಲ. ಆದರೆ, ಇದರ ರಾಸಾಯನಿಕ ಸಂಯೋಜನೆ (ಮುಖ್ಯವಾಗಿ ಕಬ್ಬಿಣದ ಕೊರತೆ) ಮೂಲ ನಕ್ಷತ್ರದ ಕುರಿತು ಸುಳಿವು ನೀಡುತ್ತದೆ. ಹಾಗೆಯೇ ಇದು ಮುಂದೆ ಎಲ್ಲಿಗೆ ಹೋಗುತ್ತದೆ ಎಂಬುದೂ ಯಕ್ಷಪ್ರಶ್ನೆಯೇ ಸರಿ.
ಅಕ್ಟೋಬರ್ 29ರಂದು ಇದು ಸೂರ್ಯನನ್ನು ಸಮೀಪಿಸುತ್ತದೆ; ಗಣಿತದ ಭಾಷೆಯಲ್ಲಿ ಹೇಳುವುದಾದರೆ, ಅದು ಪುರರವಿ (ಪೆರಿಹೀಲಿಯನ್) ಎಂಬ ಬಿಂದುವನ್ನು ದಾಟುತ್ತದೆ. ಆಗ ಅದು ಸೂರ್ಯನಿಂದ (ಸಮೀಪ ಎಂದರೂ) ಸುಮಾರು 2 ದಶಲಕ್ಷ ಕಿ.ಮೀ ದೂರದಲ್ಲಿರುತ್ತದೆ. ಆದ್ದರಿಂದ ಸೂರ್ಯನ ಪ್ರಭಾವ ದೊಡ್ಡ ಬಾಲ ಮೂಡುವಷ್ಟು ಇರಲಾರದು ಎಂಬುದು ಲೆಕ್ಕಾಚಾರ. ಅದೇನೆ ಆದರೂ, ಇದು ಖಗೋಳ ವಿಜ್ಞಾನಿಗಳ ಕೇಂದ್ರಬಿಂದು. ಜನಸಾಮಾನ್ಯರಿಗೆ ನೋಡಲೂ ಸಿಗುವುದಿಲ್ಲ.
ಸದ್ಯದಲ್ಲಿ ನಮ್ಮ ಸೌರ ಮಂಡಲದ ಎರಡು ಧೂಮಕೇತುಗಳು ದೂರದರ್ಶಕ/ ದುರ್ಬೀನುಗಳಿಗೆ ಕಾಣುವಷ್ಟು ಪ್ರಕಾಶ ಪಡೆದಿವೆ. ಸ್ವಾತಿ ನಕ್ಷತ್ರದ ಸಮೀಪ 2025 ಎ 6 ಲೆಮ್ಮಾನ್ ಎಂಬ ಧೂಮಕೇತು (1336 ವರ್ಷಗಳಿಗೊಮ್ಮೆ ಬರುವುದು), ಮಕರ ರಾಶಿಯಲ್ಲಿ 2025 ಆರ್ 2 ಸ್ವಾನ್ ಎಂಬ ಧೂಮಕೇತು (671 ವರ್ಷಗಳಿಗೊಮ್ಮೆ ಬರುವುದು) ಸಂಜೆ ಕಾಣುತ್ತವೆ. ಪ್ರಕಾಶ ಮಾಲಿನ್ಯವಿಲ್ಲದ ಸ್ಥಳಗಳಿಂದ ನೋಡಲು ಪ್ರಯತ್ನಿಸಬಹುದು. ಸುದ್ದಿ ಮಾಡುತ್ತಿರುವ ‘3ಐ’ ಅಟ್ಲಾಸ್ ಮಾತ್ರ ಬರಿಗಣ್ಣಿಗೆ ಇರಲಿ, ಸಣ್ಣ ದೂರದರ್ಶಕಕ್ಕೂ ಕಾಣುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.