ವಾಯುಗುಣ ಏರುಪೇರಿನಿಂದಾಗಿ ಹಿಮನದಿಯೊಂದು ಮರಣಿಸಿದೆ! ನೇಪಾಳ, ಭಾರತ, ಚೀನಾ ಮತ್ತು ಭೂತಾನ್ ದೇಶಗಳ ಬೌದ್ಧ ಸನ್ಯಾಸಿಗಳು ಮತ್ತು ಸ್ಥಳೀಯರು ಸೇರಿ ಪರ್ವತ ಪ್ರದೇಶದಲ್ಲಿ ನದಿಯ ತಿಥಿ ಕಾರ್ಯ ಮಾಡಿ ತರ್ಪಣ ಬಿಟ್ಟಿದ್ದಾರೆ. ಹೌದು! ನೇಪಾಳದ ಲ್ಯಾಂಗ್ ಟಂಗ್ ಕಣಿವೆಯಲ್ಲಿರುವ ‘ಯಾಲ’ ಹಿಮನದಿ (ಗ್ಲೇಸಿಯರ್) ತನ್ನ ಅಂತ್ಯ ಕಂಡಿದೆ ಎಂದು ‘ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೆನ್ ಡೆವಲಪ್‌ಮೆಂಟ್’ ಸಂಸ್ಥೆಯು (ಐಸಿಐಎಂಒಡಿ) ಘೋಷಿಸಿದೆ.
ಹಿಂದೂ ಖುಷ್ ಹಿಮಾಲಯ ಪರ್ವತ ಭಾಗದ ಯಾಲ ಹಿಮನದಿಯು ಶೇ 66ರಷ್ಟು ಸಂಕುಚನಗೊಂಡು ತನ್ನ ಚಲನೆಯನ್ನು ನಿಲ್ಲಿಸಿದ್ದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಐಸಿಐಎಂಒಡಿ ಹೇಳಿದೆ. 1970ರಲ್ಲಿ 1.4 ಕಿ.ಮೀ. ಉದ್ದವಿದ್ದ ಹಿಮನದಿಗೂ ಈಗಿನದಕ್ಕೂ ದೊಡ್ಡ ವ್ಯತ್ಯಾಸವಿದೆ. ಅಂದಿನಿಂದ ಇಲ್ಲಿಯವರೆಗೆ ಸುಮಾರು 800 ಮೀಟರ್‌ಗಳಷ್ಟು ಸಂಕುಚನಗೊಂಡಿದೆ ಎಂದು ಐಸಿಐಎಂಒಡಿ ದಾಖಲೆ ಒದಗಿಸಿದೆ. ವಿಶ್ವಸಂಸ್ಥೆಯು 2025 ಅನ್ನು ‘ಇಂಟರ್‌ನ್ಯಾಷನಲ್ ಇಯರ್ ಆಫ್ ಗ್ಲೇಸಿಯರ್ಸ್’ ಎಂದು ಘೋಷಿಸಿದ ಬೆನ್ನಲ್ಲೇ ಹಿಮನದಿಯ ಸಾವಿನ ಸುದ್ದಿ ಸಿಕ್ಕಿದೆ.
‘ಯಾಲ’ ನದಿಯ ಅಂತ್ಯ ಏಷ್ಯಾ ಭಾಗದ ಹಿಮನದಿಯೊಂದರ ಮೊದಲ ಸಾವು. ಈ ದುರಂತಕ್ಕೆ ತೀವ್ರಗತಿಯ ವಾಯುಗುಣ ಬದಲಾವಣೆಯೇ ಕಾರಣ ಎಂದಿರುವ ಹಿಮನದಿ ತಜ್ಞರು, ‘ಯಾಲ ಕೇವಲ ಹಿಮನದಿ ಆಗಿರದೆ, ಸಾವಿರಾರು ವಿಜ್ಞಾನಿಗಳ ಪ್ರಯೋಗಶಾಲೆಯಾಗಿತ್ತು. ಜಗತ್ತಿನ ಅನೇಕ ಹಿಮವಿಜ್ಞಾನಿಗಳು ಅಲ್ಲಿಗೆ ಬರುತ್ತಿದ್ದರು. ಇನ್ನು ಮುಂದೆ ಅಲ್ಲಿ ಯಾವ ಸಂಶೋಧನೆಗಳೂ ನಡೆಯುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನದಿಯ ಕೆಳಪಾತಳಿಯಲ್ಲಿ ನೇಪಾಳಿ ಲೇಖಕಿ ಮಂಜುಶ್ರೀ ಥಾಪ ಮತ್ತು ಐಸ್ಲೆಂಡಿನ ಕವಿ ಆಂಡ್ರಿ ಸ್ನೇರ್ ಮ್ಯಾಗ್ನಸನ್ ಈ ಇಬ್ಬರೂ ಹಿಮನದಿಯ ಸಾವಿನ ಕುರಿತು ನೀಡಿದ ಹೇಳಿಕೆಗಳನ್ನು ‘ಭವಿಷ್ಯದ ದಿನಗಳಿಗೊಂದು ಸಂದೇಶ’ ಎಂಬ ಶಿರೋನಾಮೆಯೊಂದಿಗೆ, ನೇಪಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಮೃತಶಿಲೆಯ ಫಲಕಗಳ ಮೇಲೆ ಸಂದೇಶಗಳನ್ನು ಕೆತ್ತಿದ್ದಾರೆ.
‘ಹಿಂದೂ ಖುಷ್ ಭಾಗದಲ್ಲಿ 54,000 ಹಿಮನದಿಗಳಿವೆ ಮತ್ತು ಸುತ್ತಲಿನ ವಾತಾವರಣದಲ್ಲಿ 426 ಪಿಪಿಎಂನಷ್ಟು (ಪಾರ್ಟ್ಸ್ ಪರ್ ಮಿಲಿಯನ್– 10 ಲಕ್ಷದಲ್ಲಿ 450 ಭಾಗದಷ್ಟು) ಇಂಗಾಲದ ಡೈಆಕ್ಸೈಡ್ ಶೇಖರಣೆಯಾಗಿದೆ. ಇದರಿಂದ ಭೂಮಿ ಬಿಸಿಯಾಗಿ ವಾಯುಗುಣ ಹದಗೆಟ್ಟಿದೆ. ಈ ಶತಮಾನದ ಅಂತ್ಯಕ್ಕೆ ಬಹಳಷ್ಟು ಹಿಮನದಿಗಳು ಕಣ್ಮರೆಯಾಗಲಿವೆ, ಜಗತ್ತಿನಲ್ಲಿ ಏನು ನಡೆಯುತ್ತಿದೆ ಮತ್ತು ನಾವು ಏನು ಮಾಡಬೇಕು ಎಂಬುದನ್ನು ಈ ಫಲಕವು ತಿಳಿಸುತ್ತದೆ’. ಇದು, ಮ್ಯಾಗ್ನಸನ್ ಅವರ ಹೇಳಿಕೆಯುಳ್ಳ ಫಲಕ.
‘ಎತ್ತರದ ಶೀತಲ ಪ್ರದೇಶವೆಂದರೆ ದೇವತೆಗಳು ನೆಲೆಸುವ ದಿವ್ಯಾನುಭೂತಿಯ ಗಮ್ಯಸ್ಥಳ. ಹಿಮ, ಕಲ್ಲು, ಮಣ್ಣು, ಕೆಸರು, ನೀರು, ಆಕಾಶದ ನೀಲಿ, ಎಲ್ಲ ಕಡೆ ಜೀವದ ಕನಸಿದೆ. ನಮಗೆಲ್ಲ ನಾಗರಿಕತೆ ಕಲಿಸಿದ, ನಾವು ಬಳಸುವ, ಪ್ರೀತಿಸುವ ನಮ್ಮನ್ನು ಪೊರೆಯುವ ಜೀವಿವ್ಯವಸ್ಥೆಯೊಂದು ಬ್ರಹ್ಮಾಂಡದಿಂದ ಕಣ್ಮರೆಯಾಗುತ್ತಿದೆ. ಇದು ನಮ್ಮೆಲ್ಲರ ಸಾಮೂಹಿಕ ವೈಫಲ್ಯ’ ಎನ್ನುವುದು ಲೇಖಕಿ ಥಾಪ ಅವರ ಭಾವನಾತ್ಮಕ ಒಕ್ಕಣೆ.
3,500 ಕಿಲೊಮೀಟರ್ ಉದ್ದದ ಹಿಂದೂ ಖುಷ್ ಪರ್ವತ ಶ್ರೇಣಿಯಲ್ಲಿ ಏಳು ದೊಡ್ಡ ಹಿಮನದಿಗಳಿವೆ. ಎರಡು ದಶಕಗಳಿಂದ ಪ್ರತಿವರ್ಷ ಇವುಗಳ ಉದ್ದವನ್ನು ಅಳೆಯಲಾಗುತ್ತಿತ್ತು. ಹಿಮನದಿಗಳು ಕರಗುತ್ತಿದ್ದ ಗತಿ ಮತ್ತು ಪ್ರಮಾಣದ ಕುರಿತಾದ ಮಾಹಿತಿ ಕರಾರುವಾಕ್ಕಾಗಿ ದೊರಕುತ್ತಿತ್ತು. ಕಳೆದ ಅರ್ಧ ಶತಮಾನದಲ್ಲಿ ಭೂಮಿಯ ಹಿಮನದಿಗಳು 1,542 ಶತಕೋಟಿ ಟನ್‌ಗಳಷ್ಟು ಹಿಮವನ್ನು ಕಳೆದುಕೊಂಡಿವೆ ಎಂಬ ಅಂದಾಜು ಇದೆ.
ಹಿಮಯುಗದ ಕಾಲದಲ್ಲೂ ವಾತಾವರಣದ ಇಂಗಾಲದ ಡೈಆಕ್ಸೈಡ್ (ಇಂಡೈ) ಪ್ರಮಾಣ 300 ಪಿಪಿಎಂ ದಾಟಿರಲಿಲ್ಲ. ಒಂದು ಮೈಲಿ ದಪ್ಪದ ಹಿಮದ ಪದರಗಳಲ್ಲಿ ಸಿಕ್ಕಿಕೊಂಡಿರುವ ಇಂಡೈ ಪ್ರಮಾಣ 250 ಪಿಪಿಎಂ ದಾಟಿದರೆ ಹಿಮನದಿ ಕಾಯಿಲೆ ಬೀಳುತ್ತದೆ. ವಾತಾವರಣದ ಇಂಡೈ ಪ್ರಮಾಣವು 350 ಪಿಪಿಎಂಗಿಂತ ಹೆಚ್ಚಾದರೆ ಭೂಮಿಯ ಬಿಸಿ ಹೆಚ್ಚಾಗುತ್ತದೆ. ಔದ್ಯೋಗೀಕರಣಕ್ಕೂ ಮುನ್ನ 250 ಪಿಪಿಎಂ ಇದ್ದ ಇಂಡೈ ಪ್ರಮಾಣ ಈಗ 412 ತಲುಪಿದೆ. ಇದು ಇನ್ನಷ್ಟು ಮುಂದುವರಿದರೆ, ಭೂಮಿ ಮತ್ತಷ್ಟು ಬಿಸಿಯಾಗಿ, ಈ ಶತಮಾನದ ಮಧ್ಯಂತರದ ನಂತರ ಇನ್ನೂರು ಕೋಟಿ ಜನರಿಗೆ ಕುಡಿಯಲು ಬಳಸಲು ಶುದ್ಧ ನೀರೇ ಇರುವುದಿಲ್ಲ. ಏಷ್ಯಾ ಭಾಗದ ಪ್ರಮುಖ ಆರ್ಥಿಕ ನೆಲೆಗಳಿಗೆ ಮತ್ತು ತೀವ್ರಗತಿಯ ಅಭಿವೃದ್ಧಿ ಬಯಸುತ್ತಿರುವ ದೊಡ್ಡ ನಗರಗಳಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ ಎಂದಿರುವ ತಜ್ಞರು, ಹಿಮನದಿಗಳನ್ನು ಉಳಿಸಿಕೊಳ್ಳಲು ಜಾಗತಿಕ ಪ್ರಯತ್ನಗಳು ತುರ್ತಾಗಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಹಿಮನದಿಯ ಸಾವಿನ ಬಗ್ಗೆ ಈಗ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ‘ಹಿಮನದಿಗಳನ್ನು ಸಂರಕ್ಷಿಸಿ’ ಎಂಬ ಕೂಗು ದೊಡ್ಡದಾಗಿ ಕೇಳಿಸುತ್ತಿದೆ. ಈ ಕೂಗು ಎಷ್ಟು ದಿನ? ಇನ್ನೊಂದು ನೈಸರ್ಗಿಕ ಅವಘಡ ಸಂಭವಿಸುವವರೆಗೆ ಮಾತ್ರ. ಗಂಟೆಗೊಂದು, ದಿನಕ್ಕೊಂದು ನೈಸರ್ಗಿಕ ವಿಕೋಪ ಘಟಿಸುತ್ತಿರುವ ದಿನಗಳಿವು. ಈ ಅವಘಡಗಳಿಗೆ ಪರಸ್ಪರ ಸಂಬಂಧವಿದೆ ಎಂದು ಅರಿತುಕೊಳ್ಳುವ ವ್ಯವಧಾನ ಯಾರಿಗೂ ಇಲ್ಲ. ಅಮೆಜಾನ್ ಕಾಡಿನ ಬೆಂಕಿ, ವಿಲ್ಕಿನ್ಸನ್ ಶೆಲ್ಫ್ ಹಿಮಹಾಸು ವೇಗವಾಗಿ ಕರಗುತ್ತಿರುವುದು, ರಷ್ಯಾ–ಉಕ್ರೇನ್ ಯುದ್ಧ, ಉತ್ತರಾಖಂಡದ ಮೇಘಸ್ಫೋಟ, ಕೊಡಗಿನ ಭೂಕುಸಿತ, ರೈತರು ಭತ್ತದ ಕೂಳೆ ಸುಡುವುದು, ಜನ ಪ್ಲಾಸ್ಟಿಕ್‌ಗೆ ಬೆಂಕಿ ಹಚ್ಚುವುದು, ಕೆರೆಕಟ್ಟೆಗಳಲ್ಲಿ ಮೀನುಗಳ ಅಸಹಜ ಸಾವು, ಬೆಂಗಳೂರಿನ ಕೆರೆಗಳಲ್ಲಿ ಏಳುವ ನೊರೆಬೆಂಕಿ... ಎಲ್ಲವೂ ಒಂದಕ್ಕೊಂದು ಹೆಣೆದುಕೊಂಡಿವೆ.
2022–24ರ ಅವಧಿಯಲ್ಲಿ ಅತಿ ಹೆಚ್ಚು ಹಿಮದ ಕವಚ ಕರಗಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಗಂಗಾ ನದಿಮುಖಜ ಭೂಮಿಯಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಹಿಮ ರಾಶಿಗಿಂತ ಶೇ 24ರಷ್ಟು ಕಡಿಮೆ ಇದೆ ಎಂಬುದು ಈ ವರ್ಷದ ಏಪ್ರಿಲ್ ತಿಂಗಳಿನ ಮಾಹಿತಿ. ಕಳೆದ ಕಾಲು ಶತಮಾನದಲ್ಲೇ ಇದು ಅತ್ಯಂತ ಗಂಭೀರ ವಿದ್ಯಮಾನ ಎಂದಿದ್ದ ಐಸಿಐಎಂಒಡಿ, ಬೇಸಿಗೆಯ ಪ್ರಾರಂಭದಲ್ಲೇ ನದಿಯ ಕೆಳಭಾಗಗಳ ಜನರಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂಬ ಎಚ್ಚರಿಕೆ ನೀಡಿತ್ತು.
ಹಿಮನದಿ ದೊಡ್ಡದಾದಷ್ಟೂ ತನ್ನದೇ ಭಾರಕ್ಕೆ ಸಿಲುಕಿ ನಿಧಾನವಾಗಿ ಚಲಿಸುತ್ತದೆ. ಕೆಲವು ಹಿಮನದಿಗಳು ದಿನಕ್ಕೆ ನೂರು ಅಡಿ ಚಲಿಸಿದರೆ, ಇನ್ನು ಕೆಲವು ವರ್ಷಕ್ಕೆ 20 ಇಂಚು ಜಾರುತ್ತವೆ! ಆಗ ತಮ್ಮ ಸಂಪರ್ಕಕ್ಕೆ ಬರುವ ಕಲ್ಲುಬಂಡೆ ಮತ್ತಿತರ ರಚನೆಗಳನ್ನೂ ತಮ್ಮೊಂದಿಗೆ ಸೆಳೆದುಕೊಂಡು ಸಾಗುತ್ತವೆ. ಹಿಮನದಿಗಳು ರೂಪುಗೊಳ್ಳಲು ಲಕ್ಷಾಂತರ ವರ್ಷಗಳು ಬೇಕು. ಪೂರ್ವ ಅಂಟಾರ್ಕ್ಟಿಕಾದ ಲ್ಯಾಂಬರ್ಟ್ ಹಿಮನದಿಯು 400 ಕಿ.ಮೀ. ಉದ್ದ, 80 ಕಿ.ಮೀ. ಅಗಲ ಮತ್ತು 8200 ಅಡಿ ದಪ್ಪವಿದೆ. ಇಂಥ ಬೃಹತ್ ಹಿಮನದಿಗಳನ್ನು ಸಂರಕ್ಷಿಸಲು ಪ್ರಜ್ಞಾಪೂರ್ವಕ ಪ್ರಯತ್ನಗಳು ನಡೆಯಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.