ADVERTISEMENT

ವಿಶ್ಲೇಷಣೆ | ಕಾಂಗ್ರೆಸ್ ಮತ್ತು ‘ಅಹಿಂದ’

ಡಾ.ನಟರಾಜ್ ಹುಳಿಯಾರ್
Published 15 ಜುಲೈ 2025, 0:30 IST
Last Updated 15 ಜುಲೈ 2025, 0:30 IST
<div class="paragraphs"><p>ಕಾಂಗ್ರೆಸ್</p></div>

ಕಾಂಗ್ರೆಸ್

   
ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿಯ ಸಭೆ ನಡೆಸುತ್ತಿರುವ ಕಾಂಗ್ರೆಸ್‌ಗೆ ಹಿಂದುಳಿದ ಸಮುದಾಯಗಳ ಸಮಸ್ಯೆ– ಸವಾಲುಗಳ ಕುರಿತು ತಾತ್ವಿಕ ಸ್ಪಷ್ಟತೆ ಅಗತ್ಯ. ನಡೆದು ಬಂದ ದಾರಿಯ ಅರಿವಿನೊಂದಿಗೆ, ನಡೆಯಬೇಕಾದ ಮಾರ್ಗದ ಮುನ್ನೋಟ ಪಕ್ಷಕ್ಕೆ ಅಗತ್ಯ. ಈ ಜವಾಬ್ದಾರಿಯನ್ನು ಕಾಂಗ್ರೆಸ್‌ ನಿರ್ವಹಿಸುವುದೆ?

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಂಚಾಲಕತ್ವ ದಲ್ಲಿ ನಡೆಯಲಿರುವ ಈ ಸಭೆಗೆ ಕರ್ನಾಟಕವನ್ನು ಆರಿಸಿಕೊಂಡಿರುವ ಸಂದರ್ಭದಲ್ಲಿ ಹಿತಾಸಕ್ತಿ ರಾಜಕಾರಣಗಳು ಸೃಷ್ಟಿಸಿದ ಗೊಂದಲಗಳೇನೇ ಇದ್ದರೂ, ಇದು ಚಾರಿತ್ರಿಕವಾಗಿ ಸರಿಯಾದ ಆಯ್ಕೆ. ಕಾರಣ, ಭಾರತಕ್ಕೇ ಮಾದರಿಯಾಗಬಹುದಾದ ಹಿಂದುಳಿದ ವರ್ಗಗಳನ್ನು ಕುರಿತ ತಾತ್ವಿಕ ಚಿಂತನೆ ಈಚಿನ ದಶಕಗಳಲ್ಲಿ ಹೆಚ್ಚು ನಡೆದಿರುವುದು ಕರ್ನಾಟಕದಲ್ಲೇ. ಇಡೀ ದೇಶಕ್ಕೇ ಹಿಂದುಳಿದ ವರ್ಗಗಳ ಚಲನೆಗಳ ವೈಜ್ಞಾನಿಕ ಹಾದಿ ತೋರಿದ ಎಲ್‌.ಜಿ. ಹಾವನೂರು ವರದಿ ಜಾರಿಯಾದದ್ದು ಕರ್ನಾಟಕದಲ್ಲಿ. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಮೀಸಲಾತಿ ಮೊದಲು ದೊರೆತಿದ್ದು ಕರ್ನಾಟಕದಲ್ಲಿ.

1993ರಿಂದ ಕರ್ನಾಟಕದಲ್ಲಿ ವಿಕೇಂದ್ರೀಕರಣ ವ್ಯವಸ್ಥೆ ಹಿಂದುಳಿದ ವರ್ಗಗಳಿಗೆ ದೊರಕಿಸಿದ ರಾಜಕೀಯ ಪ್ರಾತಿನಿಧ್ಯ ರಾಜ್ಯ ರಾಜಕಾರಣವನ್ನೇ
ಬದಲಿಸಿತು. ಕಳೆದ ಮೂವತ್ತು ವರ್ಷಗಳಲ್ಲಿ ಪ್ರಾತಿನಿಧಿಕವಾಗಿ ಹಿಂದುಳಿದ ವರ್ಗಗಳ ಸರಾಸರಿ ಶೇ 30ರಷ್ಟು ಮಹಿಳೆಯರು, ಪುರುಷರು ಇದರ ರಾಜಕೀಯ ಫಲಾನುಭವಿಗಳಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಗಳು ಇಂಥದೊಂದು ಮಸೂದೆಯನ್ನು ಎರಡು ಸಲ ಮಂಡಿಸಿದರೂ, ಕೋಮುವಾದಿಗಳು ಇಡೀ ವಿಕೇಂದ್ರೀಕರಣದ ಪ್ರಯತ್ನಕ್ಕೆ ಒಡ್ಡಿದ ಹಿನ್ನಡೆ ನೆನಪಿಸಿಕೊಂಡರೆ, ಕರ್ನಾಟಕದ ಹಿಂದುಳಿದ ವರ್ಗಗಳ ರಾಜಕೀಯದ ಯಶಸ್ಸು ಸ್ಪಷ್ಟವಾಗುತ್ತದೆ.

ADVERTISEMENT

ಕಾಂಗ್ರೆಸ್ ಪಕ್ಷ ಅಖಿಲ ಭಾರತ ಮಟ್ಟದಲ್ಲಿ ಅಧಿಕಾರ ಹಿಡಿದಾಗ ಹಿಂದುಳಿದ ವರ್ಗಗಳ ಸಬಲೀಕರಣದ ಕಾರ್ಯಕ್ರಮಗಳನ್ನು ರೂಪಿಸಿ ಕೊಂಡು ಬಂದಿದ್ದರೂ, ಒಟ್ಟಾರೆಯಾಗಿ ರಾಷ್ಟ್ರಮಟ್ಟ ದಲ್ಲಿ ಹಿಂದುಳಿದ ವರ್ಗಗಳನ್ನು ಕುರಿತ ಸ್ಪಷ್ಟ ತಾತ್ವಿಕ ಚಿಂತನೆಗಳನ್ನು ರೂಪಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿದೆಯೇ ಎಂಬ ಪ್ರಶ್ನೆಯೂ ನಮ್ಮೆದುರಿಗಿದೆ. ‘ಇಂಡಿಯಾ’ ಒಕ್ಕೂಟದ ಭಾಗವಾಗಿರುವ ಸಮಾಜವಾದಿ ಪಕ್ಷದ ‘ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ’ ಸಮೀಕರಣ ಹಾಗೂ ರಾಷ್ಟ್ರೀಯ ಜನತಾದಳದ ಇಂಥದೇ ಸಮೀಕರಣ ಗಳಿಗೆ ಮಂಡಲ್ ವರದಿಯ ನಂತರದ ತಾತ್ವಿಕ ಚಿಂತನೆಗಳು, ಲೋಹಿಯಾ ಚಿಂತನೆಗಳು ನೆರವಾಗಿವೆ. ಈ ತಾತ್ವಿಕ ಚಿಂತನೆಗಳು ಆಯಾ ಪಕ್ಷಗಳ ತಳಮಟ್ಟದ ನಾಯಕರಿಂದ ಮೇಲಿನವರೆಗೂ ಪರಿಚಿತವಾಗಿವೆ.

ಈ ಎರಡೂ ಪಕ್ಷಗಳ ಜೊತೆ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದ್ದರೂ ಅವುಗಳ ಹಿಂದುಳಿದ ವರ್ಗಗಳ ತಾತ್ವಿಕ ನೋಟಗಳು ಕಾಂಗ್ರೆಸ್ಸಿಗೆ ದಕ್ಕಿವೆಯೆ? ಹಿಂದುಳಿದ ವರ್ಗಗಳ ಅಭಿವೃದ್ಧಿ–ರಾಜಕಾರಣದ ‘ಕರ್ನಾಟಕ ಮಾದರಿ’ ಕಾಂಗ್ರೆಸ್ ಪಕ್ಷದ ಎದುರು ಇದ್ದರೂ, ಉತ್ತರಭಾರತದ ಹಿಂದುಳಿದ ವರ್ಗಗಳ ರಾಜಕೀಯ ಸವಾಲುಗಳು ದಕ್ಷಿಣಕ್ಕಿಂತ ಬೇರೆ. ಆದ್ದರಿಂದಲೇ ಹಿಂದುಳಿದ ಜಾತಿಗಳ ವಿಭಿನ್ನ ಸಮೀಕರಣಗಳ ಜೊತೆಗೆ, ಪ್ರತಿ ರಾಜ್ಯಗಳಲ್ಲೂ ಹಿಂದುಳಿದ ವರ್ಗಗಳ ತಳಮಟ್ಟದ ನಾಯಕತ್ವ ಹಾಗೂ ಸೈದ್ಧಾಂತಿಕ ನೆಲೆಗಳನ್ನು ರೂಪಿಸಬೇಕಾದ ಸವಾಲು ಕಾಂಗ್ರೆಸ್ ಪಕ್ಷಕ್ಕಿದೆ. ಭಾರತದ ಹಲವು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳ ನಾಯಕತ್ವದ ಸಣ್ಣಸಣ್ಣ ಪಕ್ಷಗಳನ್ನು ತಾತ್ವಿಕವಾಗಿ ತನ್ನೊಡನೆ ಒಯ್ಯುವ ಸವಾಲೂ ಕಾಂಗ್ರೆಸ್ಸಿಗಿದೆ.

ಕಾಂಗ್ರೆಸ್ ಈ ಥರದ ಸವಾಲುಗಳನ್ನು ನಿರ್ವಹಿಸಬಲ್ಲ ಖಚಿತ ತಾತ್ವಿಕ ನೆಲೆಗಟ್ಟುಗಳಿಗಾಗಿ ಹಿಂದೊಮ್ಮೆ ಕಾಂಗ್ರೆಸ್ಸಿನ ಕಟು ಟೀಕಾಕಾರರಾಗಿದ್ದ ಅಂಬೇಡ್ಕರ್, ಲೋಹಿಯಾ; ಅಥವಾ ಅವರಿಗಿಂತ ಹಿಂದಿನ ಜ್ಯೋತಿಬಾ ಫುಲೆಯವರ ಚಿಂತನೆಗಳಲ್ಲಿ ನಂಬಿಕೆಯಿಟ್ಟು, ಅರಗಿಸಿಕೊಳ್ಳಬೇಕಾಗುತ್ತದೆ. ಅಂಬೇಡ್ಕರ್ ಸೂಚಿಸಿದ ಸಬಲೀಕರಣದ ಕಾರ್ಯಕ್ರಮಗಳನ್ನು ಆಗಾಗ್ಗೆ ಅಳವಡಿಸಿಕೊಂಡಿರುವ ಕಾಂಗ್ರೆಸ್, ಐವತ್ತರ ದಶಕದಲ್ಲಿ ಹಿಂದುಳಿದ ಜಾತಿಗಳನ್ನು ಒಂದು ಗೊಂಚಲಾಗಿಸಿ ‘ಅದರ್ ಬ್ಯಾಕ್ವರ್ಡ್ ಕ್ಲಾಸಸ್’ ಎಂದು ಅಂಬೇಡ್ಕರ್ ಕರೆದದ್ದರ ತಾತ್ವಿಕತೆಯನ್ನೂ ಅರಿಯಬೇಕಾಗುತ್ತದೆ.

ಅನೇಕ ಬಗೆಯ ಸಮಾನ ಕಷ್ಟಗಳುಳ್ಳ ಹಿಂದುಳಿದ ಜಾತಿಗಳು ಕ್ರಮೇಣ ಒಂದು ವರ್ಗವಾಗಿ ಒಗ್ಗೂಡಿ ಯೋಚಿಸಬೇಕಾಗುತ್ತದೆ ಎಂಬ ಚಿಂತನೆ ಅಂಬೇಡ್ಕರ್ ವರ್ಗೀಕರಣದಲ್ಲಿದೆ. 1947ರಲ್ಲಿ ನೆಹರೂ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಅಂಬೇಡ್ಕರ್, ಮರಾಠಿ ಸಂಸ್ಥೆಯೊಂದರ ಸ್ಮರಣ ಸಂಚಿಕೆಗೆ ಕೊಟ್ಟ ಸಂದೇಶದಲ್ಲಿ ಬರೆದ ಮೊದಲ ಮಾತು ಇದು: ‘ನಾನು ಹೇಳುತ್ತಿರುವ ತತ್ವ ಮರಾಠರಿಗೆ ಮಾತ್ರವೇ ಅಲ್ಲ, ಎಲ್ಲ ಹಿಂದುಳಿದ ಜಾತಿಗಳಿಗೂ ಅನ್ವಯವಾಗು ತ್ತದೆ. ಹಿಂದುಳಿದ ಜಾತಿಗಳು ಇತರರ ಹೆಬ್ಬೆಟ್ಟಿನಡಿ ಇರಲು ಬಯಸದಿದ್ದರೆ ಎರಡು ಅಂಶಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು: ಒಂದು, ರಾಜಕಾರಣ. ಮತ್ತೊಂದು, ಶಿಕ್ಷಣ.’

‘ಶಿಕ್ಷಣ ಎಂದರೆ ಉನ್ನತ ಶಿಕ್ಷಣ; ಉನ್ನತ ಶಿಕ್ಷಣದಿಂದ ಮಾತ್ರ ಈ ಸಮುದಾಯಗಳು ಪ್ರಗತಿ ಕಾಣಲು ಸಾಧ್ಯ; ಜಾತಿಪದ್ಧತಿ ಈ ದೇಶದಲ್ಲಿ ಶತಮಾನಗಳಿಂದ ಉಳಿದು ಬಂದಿರುವುದು ವಿವಿಧ ಜಾತಿಗಳಲ್ಲಿನ ಶಿಕ್ಷಣದಲ್ಲಿ ಇರುವ ಈ ಅಗಾಧ ಅಂತರದಿಂದ’ ಎಂಬುದನ್ನು ಅಂಬೇಡ್ಕರ್ ಒತ್ತಿ ಹೇಳಿದ್ದರು. ‘ಯಾವುದೇ ಸಮುದಾಯಕ್ಕೆ ಆಳುವವರ ಮೇಲೆ ನೈತಿಕವಾದ, ಆದರೆ ಪರೋಕ್ಷವಾದ, ಒತ್ತಡ ತರುವ ಶಕ್ತಿಯಿದ್ದರೆ ಮಾತ್ರ ಅದು ನೆಮ್ಮದಿಯಿಂದ ಬದುಕಬಹುದು’ ಎಂಬುದನ್ನೂ ಅಂಬೇಡ್ಕರ್ ಹೇಳಿದ್ದರು. ಆದರೆ ಅಂಬೇಡ್ಕರ್ ಸೂಚಿಸಿದಂತೆ ಹಿಂದುಳಿದವರನ್ನು ವರ್ಗಗಳನ್ನಾಗಿ ರೂಪಿಸುವ ಕೆಲಸ ಸರ್ಕಾರಿ ಯೋಜನೆಗಳು, ಚುನಾವಣೆಗಳ ಮಟ್ಟದಲ್ಲಷ್ಟೇ ಆಗುವುದಿಲ್ಲ. ಅದಕ್ಕಾಗಿ ಕಾಂಗ್ರೆಸ್ ತಳಮಟ್ಟ ದಲ್ಲೇ ತಾತ್ವಿಕ ಚಿಂತನೆ–ಕಾರ್ಯಕ್ರಮಗಳನ್ನು ನಡೆಸುತ್ತಿರಬೇಕಾಗುತ್ತದೆ; ಇದಕ್ಕೆ ಅಗತ್ಯವಾದ ಈ ಕಾಲದ ಪಾಠಗಳನ್ನು ಡಿಎಂಕೆ, ಎಸ್‌ಪಿ, ಆರ್‌ಜೆಡಿ, ಕಮ್ಯುನಿಸ್ಟ್ ಪಕ್ಷಗಳಿಂದಲೂ ಕಲಿಯಬೇಕಾಗುತ್ತದೆ.

ಜಾತಿ ಜನಗಣತಿಗಾಗಿ ಒತ್ತಾಯಿಸುತ್ತಾ ಕಾಂಗ್ರೆಸ್ ಈಗ ಮುಂದಿಡುತ್ತಿರುವ ‘ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಸಮಾನಾವಕಾಶ’ದ ಚಿಂತನೆಯನ್ನು ಲೋಹಿಯಾ ಅವರು ಸಮಾಜವಾದಿ ಪಕ್ಷದೊಳಗೇ ರೂಪಿಸಲೆತ್ನಿಸಿದ್ದರು. ಸಮಾನಾವಕಾಶ ಗಳ ಅನಿವಾರ್ಯತೆ ಕುರಿತ ತಾತ್ವಿಕ ತಿಳಿವಳಿಕೆ ಯನ್ನು ಶಿಬಿರ, ಸಂವಾದ, ಬರಹಗಳ ಮೂಲಕ ಕಾರ್ಯಕರ್ತರಲ್ಲಿ ಮೂಡಿಸುತ್ತಿದ್ದರು. ಪಕ್ಷದ ಕಾರ್ಯಕಾರಿಣಿಯಿಂದ ಹಿಡಿದು ಎಲ್ಲ ಮಟ್ಟಗಳಲ್ಲೂ ಹಿಂದುಳಿದವರು, ದಲಿತರು, ಮಹಿಳೆಯರು ಸಹಜವಾಗಿಯೇ ಆಯ್ಕೆಯಾಗುತ್ತಿದ್ದರು. ಹಿಂದುಳಿದ ಜಾತಿಗಳ ಜನರಲ್ಲಿರುವ ಅಸೂಯೆ, ಪರಸ್ಪರ ನಾಶ ಮಾಡಿಕೊಳ್ಳುವ ಪ್ರವೃತ್ತಿಯನ್ನು ಲೋಹಿಯಾ ತೊಡೆಯಲೆತ್ನಿಸಿದರು. ಮುಂದೊಮ್ಮೆ ಕ್ಷೌರಿಕ ಸಮುದಾಯದಿಂದ ಬಂದ ಕರ್ಪೂರಿ ಠಾಕೂರ್ ಬಿಹಾರದ ಮುಖ್ಯಮಂತ್ರಿಯಾಗಿದ್ದರ ಹಿಂದೆ ಹಿಂದುಳಿದ ವರ್ಗಗಳ ಅಧಿಕಾರದ ಇಂಥ ಚಲನೆಗಳು ಜಾತಿ ನಿರ್ಮೂಲನದ ಭಾಗ ಎಂಬ ಸಮಾಜವಾದಿ ಸಿದ್ಧಾಂತವೂ ಕೆಲಸ ಮಾಡಿತ್ತು.

ಲೋಹಿಯಾ ಚಿಂತನೆಗಳನ್ನು ಉತ್ತರಪ್ರದೇಶ, ಬಿಹಾರಗಳ ರಾಜಕೀಯ ಪಕ್ಷಗಳು ಮರುವಿವರಿಸಿಕೊಂಡಿವೆ; ಇಂಥ ಚಿಂತನೆಗಳು ಕೇಳಿಸದಂತೆ ಹುಸಿ ಚಿಂತನೆಗಳ ನಗಾರಿ ಬಾರಿಸುವ ಮತೀಯವಾದಿ ಪಕ್ಷಗಳು, ಸರ್ಕಾರಗಳು, ಅವುಗಳ ಬಾಲಂಗೋಚಿ ತಂಡಗಳು ಹಿಂದುಳಿದ ವರ್ಗಗಳ ಏಳಿಗೆಗೆ ಅಡ್ಡಿಯಾಗುತ್ತಲೇ ಇವೆ.   ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆ ಕರ್ನಾಟಕದಲ್ಲಿ ನಡೆಯುತ್ತಿರುವು ದರಿಂದ ಅದು ಕರ್ನಾಟಕದ ಸಾಂಸ್ಕೃತಿಕ ಮಾದರಿಯನ್ನೂ ನಿಕಟವಾಗಿ ಅರಿಯಬೇಕು. ಕರ್ನಾಟಕ‌ದಲ್ಲಿ ಹಿಂದುಳಿದ ವರ್ಗಗಳ ಚಿಂತನೆಗಳನ್ನು ರಾಜಕೀಯ ವರ್ಗಗಳ ಜೊತೆಗೇ ಹಲಬಗೆಯ ಸಂಸ್ಕೃತಿ ಚಿಂತಕರ ವರ್ಗವೂ ರೂಪಿಸಿದೆ. ಜಾತ್ಯತೀತ ಚಿಂತನೆ, ಕೋಮುವಾದ ವಿರೋಧಿ ಚಿಂತನೆಗಳನ್ನು ರೂಪಿಸುತ್ತಿರುವವರೂ ಈ ಕೆಲಸ ಮಾಡುತ್ತಿದ್ದಾರೆ. ಐವತ್ತು ವರ್ಷಗಳ ಕೆಳಗೆ ಹಾವನೂರು ವರದಿಗೆ ಪ್ರಬಲ ಜಾತಿಗಳ ವಿರೋಧ ಬಂದಾಗ, ಎಂ.ಡಿ. ನಂಜುಂಡಸ್ವಾಮಿ ಹಿಂದುಳಿದ ವರ್ಗಗಳ ಮೀಸಲಾತಿ ಪರವಾದ ಖಚಿತವಾದ ಸೈದ್ಧಾಂತಿಕ ವಿವರಣೆಗಳನ್ನು ಕೊಟ್ಟು, ಹಾವನೂರು ವರದಿಯನ್ನು ಬೆಂಬಲಿಸಿದರು.

ಕಳೆದ ಎಪ್ಪತ್ತೈದು ವರ್ಷಗಳಲ್ಲಿ ಶಾಂತವೇರಿ ಗೋಪಾಲಗೌಡ, ಪೂರ್ಣಚಂದ್ರ ತೇಜಸ್ವಿ, ಕಲ್ಲೆ ಶಿವೋತ್ತಮರಾವ್, ದೇವನೂರ ಮಹಾದೇವ, ಕೆ.ಬಿ. ಸಿದ್ದಯ್ಯ, ಲಂಕೇಶ್, ಬರಗೂರು ರಾಮಚಂದ್ರಪ್ಪ, ವಡ್ಡರ್ಸೆ ರಘುರಾಮಶೆಟ್ಟಿ, ಮೀನಾಕ್ಷಿ ಬಾಳಿ, ರವಿವರ್ಮ ಕುಮಾರ್, ದಿನೇಶ್ ಅಮಿನ್ ಮಟ್ಟು, ವಸು ಮಳಲಿ, ಬಂಜಗೆರೆ ಜಯಪ್ರಕಾಶ್ ಮುಂತಾದ ಹಲವು ಹಿನ್ನೆಲೆಗಳ ಚಿಂತಕ, ಚಿಂತಕಿಯರು ಹಿಂದುಳಿದ ವರ್ಗಗಳ ತಾತ್ವಿಕ ನೆಲೆಗಟ್ಟುಗಳನ್ನು ರೂಪಿಸುತ್ತಾ ಬಂದಿದ್ದಾರೆ. ಕಳೆದ ಮೂವತ್ತು ವರ್ಷಗಳಲ್ಲಿ ಸಿದ್ದರಾಮಯ್ಯನವರ ರಾಜಕೀಯ ಮಾದರಿಯ ಮೂಲಕ ಹಿಂದುಳಿದ ವರ್ಗಗಳ ಪ್ರಬಲ ರಾಜಕೀಯ ಧ್ರುವೀಕರಣದ ಜೊತೆಗೆ ಸಾಂಸ್ಕೃತಿಕ ಧ್ರುವೀಕರಣವೂ ನಡೆದಿದೆ.

ದಲಿತ ಚಿಂತನೆ, ಹಿಂದುಳಿದ ವರ್ಗಗಳ ಚಿಂತನೆ, ಪ್ರಗತಿಪರ ಚಿಂತನೆಗಳು ತಾತ್ವಿಕವಾಗಿ ಬೆಸೆದುಕೊಂಡಿರುವ ಕರ್ನಾಟಕದಲ್ಲಿ ದಲಿತ ಚಳವಳಿಯ ನಾಯಕರು, ಕಾರ್ಯಕರ್ತರು ದಲಿತ–ಹಿಂದುಳಿದ ವರ್ಗಗಳ ಐಕ್ಯತೆಯ ಚಿಂತನೆಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಕೋಲಾರದಲ್ಲಿ ‘ಅಹಿಂದ’ ಚಿಂತನೆ ಆರಂಭಗೊಂಡಾಗ ದಲಿತ ಚಳವಳಿ ಹಾಗೂ ಹಿಂದುಳಿದ ವರ್ಗಗಳ ಚಿಂತಕರು ಅದರ ಬುನಾದಿ ಹಾಕಿದ್ದರು. ಸಿದ್ದರಾಮಯ್ಯನವರ ಪ್ರವೇಶದಿಂದಾಗಿ ಅದು ವಿಶಾಲ ರಾಜಕೀಯ ವ್ಯಾಪ್ತಿ ಪಡೆಯಿತು; ಅವರು ಮಂಡಿಸಿದ ಬಜೆಟ್ಟುಗಳಲ್ಲಿ ಆರ್ಥಿಕ ವಿಸ್ತಾರವನ್ನೂ ಪಡೆಯಿತು. ಕರ್ನಾಟಕದ ರೈತ, ಶ್ರಮಿಕ, ಜಾತ್ಯತೀತ ಚಳವಳಿಗಳೂ ಹಿಂದುಳಿದ ವರ್ಗಗಳ ತಾತ್ವಿಕತೆಗೆ ದನಿಯಾಗಿವೆ. ಆದರೆ ಈ ದಿಸೆಯಲ್ಲಿ ವಿಸ್ತೃತ ಚರ್ಚೆಗಳನ್ನು ರೂಪಿಸಬಹುದಾಗಿದ್ದ ಹಿಂದುಳಿದ ವರ್ಗಗಳ ಆಯೋಗ ಈಚಿನ ವರ್ಷಗಳಲ್ಲಿ ಜಡವಾಗತೊಡಗಿದೆ. ಹಾವನೂರು ವರದಿಯ ಘಟ್ಟದಲ್ಲಿ ಆದಂತೆ, ಆಯೋಗದ ವರದಿಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯಬಹುದಾದ ಹಿಂದುಳಿದ ವರ್ಗಗಳ ಬೌದ್ಧಿಕ ಸಂವಾದಗಳು ಕಡಿಮೆಯಾಗತೊಡಗಿವೆ. ರಾಷ್ಟ್ರಮಟ್ಟದಲ್ಲಂತೂ ಇಂಥ ಆಯೋಗವಿರುವುದೇ ಮರೆತುಹೋಗಿದೆ!

ಇದೀಗ ಬೆಂಗಳೂರಿನಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ಸಭೆಯಲ್ಲಿ ಇಡೀ ದೇಶದ ಹಿಂದುಳಿದ ವರ್ಗಗಳ ಕಳೆದ 75 ವರ್ಷಗಳ ಚಲನೆಯ ಏಳುಬೀಳು ಅನುಭವಗಳ ಆಳವಾದ ಅಧ್ಯಯನದ ಮೂಲಕ ತಳಮಟ್ಟದಲ್ಲಿ ಹಿಂದುಳಿದ ವರ್ಗಗಳ ನಾಯಕ, ನಾಯಕಿಯರನ್ನು ಸಿದ್ಧಮಾಡುವ ಶಕ್ತಿ ಕಾಂಗ್ರೆಸ್ಸಿಗಿದೆಯೇ? ಹಿಂದುಳಿದ ವರ್ಗಗಳ ಭವಿಷ್ಯ ಕುರಿತ ದೀರ್ಘ ಕಾಲದ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲು ಕಾಂಗ್ರೆಸ್ ಹೊರಟಿದೆಯೇ ಎಂಬ ಬಗೆಗೂ ಸ್ಪಷ್ಟತೆ ಬೇಕಾಗುತ್ತದೆ. ಕಾರಣ, ಅರೆ ಮನಸ್ಸಿನ ಪ್ರಯೋಗಗಳು ಅರೆಹಾದಿಯಲ್ಲೇ ಕೊನೆಗೊಳ್ಳಬಲ್ಲವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.