
ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸುವ ಬಂಡವಾಳವು ತಕ್ಷಣದ ರಾಜಕೀಯ ಲಾಭ ತಂದುಕೊಡುವುದಿಲ್ಲ. ಆದರೆ, ಅದರಿಂದ ಉಂಟಾಗುವ ದೀರ್ಘಕಾಲದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಲಾಭ ಮೌಲ್ಯಕ್ಕೆ ಸಿಗದಂತಹದ್ದು. ಸಮಾನ ಅವಕಾಶಗಳ ಸಮಾಜದ ಬಗ್ಗೆ ನಂಬಿಕೆಯುಳ್ಳ ಸರ್ಕಾರಗಳು ‘ಶಿಕ್ಷಣ ಕೇಂದ್ರಿತ ಬಜೆಟ್’ಗೆ ಆದ್ಯತೆ ನೀಡುವುದು ಅನಿವಾರ್ಯ.
ಬಜೆಟ್ ಎನ್ನುವುದು ಆರ್ಥಿಕ ವರ್ಷದ ಆದಾಯ–ವೆಚ್ಚಗಳ ಲೆಕ್ಕಾಚಾರ ಮಾತ್ರವಲ್ಲ; ಅದು ನಾಡಿನ ಅಭಿವೃದ್ಧಿಗೆ ಈ ಹಿಂದೆ ಕೈಗೊಂಡ ಕಾರ್ಯಕ್ರಮಗಳನ್ನು ಪರಾಮರ್ಶಿಸಿ, ನಿರಂತರತೆ ಮತ್ತು ನಾವೀನ್ಯದ ಮೂಲಕ ಭವಿಷ್ಯದಲ್ಲಿ ಎಲ್ಲರನ್ನೊಳಗೊಳ್ಳುವ ಬಲಿಷ್ಠ ಕರ್ನಾಟಕವನ್ನು ಕಟ್ಟಿಕೊಳ್ಳಲು ಯಾವ ದಿಕ್ಕಿನಲ್ಲಿ ಸಾಗಬೇಕೆಂದು ನಿರ್ಧರಿ ಸುವ ನೀತಿದರ್ಶಕ ದಸ್ತಾವೇಜು. ಮುನ್ನೋಟದ ದಾರಿದೀಪ. ಸಾಮಾನ್ಯವಾಗಿ ಒಂದು ಸರ್ಕಾರ ತನ್ನಮೌಲ್ಯ, ಆದ್ಯತೆ, ಸಾಮಾಜಿಕ ದೃಷ್ಟಿಕೋನ ಮತ್ತು ಅಭಿವೃದ್ಧಿ ಮಾದರಿಯನ್ನು ಬಜೆಟ್ ಮೂಲಕವೇ ವ್ಯಕ್ತಪಡಿಸುತ್ತದೆ. ಬಜೆಟ್ ಜನತೆಯ ಮೂಲಭೂತ ಹಕ್ಕುಗಳಾದ ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ,ಪೌಷ್ಟಿಕ ಆಹಾರ ಇತ್ಯಾದಿ ಕ್ಷೇತ್ರಗಳನ್ನು ಯಾವ ರೀತಿ ಯಲ್ಲಿ ಆದ್ಯತೀಕರಿಸುತ್ತದೆ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಪ್ರತಿಬಿಂಬಿಸುವ ಮೂಲಕಎಷ್ಟರಮಟ್ಟಿಗೆ ಜನಪರವಾಗಿದೆ ಎಂಬುದರ ಪ್ರತೀಕ ವಾಗುತ್ತದೆ. ಈ ಲೇಖನದ ಆಶಯ ಬಜೆಟ್ಟೊಂದನ್ನು ಶಿಕ್ಷಣದ ಕಣ್ಣಿನಿಂದ ನೋಡುವುದಾಗಿದೆ.
ಒಂದು ಹಂತದವರೆಗಿನ ಉಚಿತ ಕಡ್ಡಾಯ ಗುಣಾತ್ಮಕ ಶಿಕ್ಷಣವು ಸಮಾನತೆ, ಸಾಮಾಜಿಕನ್ಯಾಯ, ಸಾಮಾಜಿಕ–ಆರ್ಥಿಕ ಚಲನೆ ಮತ್ತು ಪ್ರಜಾ ಪ್ರಭುತ್ವದ ಬಲವರ್ಧನೆಗೆ ಅಡಿಪಾಯವಾಗುತ್ತದೆ. ಉತ್ತಮ ನಾಗರಿಕ ಸಮಾಜವನ್ನು ಕಟ್ಟಿಕೊಳ್ಳುವ ದಿಸೆಯಲ್ಲಿ, ಶಿಕ್ಷಣಕ್ಕೆ ಹೂಡುವ ಬಜೆಟ್ ಒಂದು ಪರಿವರ್ತನಾ ಸಾಧನವಾಗುತ್ತದೆ. ಲಿಂಗ, ಜಾತಿ, ಧರ್ಮ, ಭೌಗೋಳಿಕ ಮತ್ತು ಸಾಮಾಜಿಕ–ಆರ್ಥಿಕ ನೆಲೆಯಲ್ಲಿನ ಅಂತರವನ್ನು ತೊಡೆದು ಸಮಸಮಾಜದ ನಿರ್ಮಾಣಕ್ಕೆ ಬಜೆಟ್ ಸೇತುವೆಯಾಗುತ್ತದೆ.
ನ್ಯೂಜಿಲೆಂಡ್‌ನ ಶಿಕ್ಷಣ ವ್ಯವಸ್ಥೆ ಗಮನಿಸಿ. ಅದು, ಜಾತಿ ಆಧಾರಿತ ನೆಲೆಯಲ್ಲಿ ‘ಹಿಂದುಳಿದ ವರ್ಗ’ ವ್ಯವಸ್ಥೆಯನ್ನು ಬಳಸುವ ಬದಲು, ಸಾಮಾಜಿಕ–ಆರ್ಥಿಕವಾಗಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದ ಸಮುದಾಯಗಳಲ್ಲಿರುವ ಅಸಮಾನತೆ ಹಾಗೂ ತಾರತಮ್ಯದ ಅಂತರವನ್ನು ಪರಿಹರಿಸುವತ್ತ ಗಮನ ಹರಿಸುತ್ತದೆ. ಆ ಸಮುದಾಯಗಳ ಮಕ್ಕಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸುತ್ತದೆ. ಅದರಿಂದ ಸಾಮಾಜಿಕ ಅಂತರ ಕಡಿಮೆಯಾಗಿ, ಮಾನವ ಅಭಿವೃದ್ಧಿಯ ಕಣದಲ್ಲಿ ಎಲ್ಲರಿಗೂ ಸಮಾನ ಮತ್ತು ನ್ಯಾಯಯುತ ಅವಕಾಶ ಸೃಷ್ಟಿಯಾಗುತ್ತದೆ. ಇದೇ ಮಾದರಿಯಲ್ಲಿ, ಕರ್ನಾಟಕದಲ್ಲಿ ಅಲೆಮಾರಿ ಸಮುದಾಯಗಳಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ, ವಲಸೆ ಸಮುದಾಯಗಳಿಗೆ, ಲೈಂಗಿಕ ಅಲ್ಪಸಂಖ್ಯಾತರಿಗೆ ಮತ್ತು ಸಂಖ್ಯಾಬಲವಿಲ್ಲದ ಸಣ್ಣ ಸಮುದಾಯಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಮಾಡಿದರೆ, ಶಾಲಾ ಶಿಕ್ಷಣದಲ್ಲಿನ ಅಸಮಾನತೆ ಮತ್ತು ತಾರತಮ್ಯವನ್ನು ತೊಡೆದು ಹಾಕಬಹುದಾಗಿದೆ.
ಇಂದು ಸರ್ಕಾರಿ ಶಾಲೆಗಳೆಂದರೆ ಶೋಷಿತ ವರ್ಗಗಳಾದ ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ಸಮುದಾಯ, ಹೆಣ್ಣುಮಕ್ಕಳು ಮತ್ತು ವಿಶೇಷ ಅಗತ್ಯಗಳಿರುವ ಮಕ್ಕಳು ಕಲಿಯುವ ಶಾಲೆ ಗಳೆಂಬಂತಾಗಿದೆ. ಈ ಶಾಲೆಗಳಿಗೆ ಆದ್ಯತೆಯ ಮೇಲೆ ಹಣ ಹೂಡುವುದೆಂದರೆ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಸಾಧನೆಗಾಗಿ ಹಣ ಹೂಡಿದಂತಾಗುತ್ತದೆ. ಇಂಥ ಘನಕಾರ್ಯಕ್ಕೆ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಸಂಪನ್ಮೂಲ ಸಂಘಟಿಸುತ್ತೇವೆಂಬುದು ಸಾಂವಿಧಾನಿಕ ಹೊಣೆಯಿಂದ ನುಣುಚಿಕೊಂಡಂತೆ ಆಗುತ್ತದೆ. ಅದೊಂದು ಪೂರಕ ಸಂಪನ್ಮೂಲವಷ್ಟೆ.
ವಿಶ್ವದ ಹಲವು ರಾಷ್ಟ್ರಗಳು ಶಿಕ್ಷಣ ಕೇಂದ್ರೀಕೃತ ಬಜೆಟ್ ಮಾದರಿಗಳನ್ನು ಅನುಸರಿಸಿ ಗಮನಾರ್ಹ ಫಲಿತಾಂಶಗಳನ್ನು ಕಂಡಿವೆ. ಈ ರಾಷ್ಟ್ರಗಳು ತಮ್ಮ ಬಜೆಟ್ ರೂಪುರೇಷೆಯಲ್ಲಿ ಶಿಕ್ಷಣವನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿವೆ; ದೀರ್ಘಕಾಲಿಕ ಮಾನವ ಸಂಪನ್ಮೂಲ ಅಭಿವೃದ್ಧಿಯ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡಿವೆ. ಎಸ್ಟೋನಿಯಾ, ಫ್ರಾನ್ಸ್, ಭೂತಾನ್, ಫಿನ್ಲೆಂಡ್ ಮುಂತಾದ ದೇಶಗಳು ಮೂಲ ಸೌಕರ್ಯಕ್ಕಿಂತ ಹೆಚ್ಚಿನ ಆದ್ಯತೆಯನ್ನು ಶಿಕ್ಷಕರ ನೇಮಕಾತಿ, ಶಿಕ್ಷಕರ ವೇತನ, ನಿರಂತರ ವೃತ್ತಿಪರ ಅಭಿವೃದ್ಧಿ ಮತ್ತು ಸಮಾನತೆಗೆ ನೀಡುತ್ತವೆ.
ಫಿನ್ಲೆಂಡ್‌ನ ಬಜೆಟ್ ಯೋಜನೆಗಳು ಕಟ್ಟಡ ಅಥವಾ ತಂತ್ರಜ್ಞಾನಕ್ಕಿಂತ ಹೆಚ್ಚಾಗಿ ಶಿಕ್ಷಕರ ಗುಣಮಟ್ಟ ಮತ್ತು ಕಲಿಕಾ ಸಮಾನತೆಗೆ ಒತ್ತು ನೀಡುತ್ತವೆ. ಕೆನಡಾ ದೇಶವು ಪ್ರಾಂತ್ಯಾಧಾರಿತ ಶಿಕ್ಷಣ ಬಜೆಟ್ ವ್ಯವಸ್ಥೆಯನ್ನು ಹೊಂದಿದ್ದು, ಬಹುಭಾಷಾ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಪರಿಗಣಿಸಿ ಸ್ಥಳೀಯ ಸಮುದಾಯಗಳ ಪಾಲ್ಗೊಳ್ಳುವಿಕೆಯ ಮೂಲಕ ಬಲಿಷ್ಠ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಂಡಿದೆ. ಸಿಂಗಪುರ ಮತ್ತು ಹಾಂಗ್‌ಕಾಂಗ್‌ನಂತಹ ದೇಶಗಳು ಉನ್ನತ ಕಾರ್ಯಕ್ಷಮತೆಯ ವ್ಯವಸ್ಥೆಗಳೊಂದಿಗೆ, ಶೈಕ್ಷಣಿಕ ಫಲಿತಾಂಶ ಹೆಚ್ಚಿಸಲು ಶಿಕ್ಷಕರ ಗುಣಮಟ್ಟದ ಮೇಲೆ ಕೇಂದ್ರೀಕರಿಸುತ್ತವೆ. ಇದೇ ಮಾದರಿಯಲ್ಲಿ ನಮ್ಮ ದೇಶದ ಕೆಲವು ರಾಜ್ಯಗಳು ಮೂಲಸೌಕರ್ಯದ ಜೊತೆ ಜೊತೆಗೆ ಶಿಕ್ಷಕರ ಗುಣಮಟ್ಟ ಮತ್ತು ಸಮಾನತೆಯತ್ತ ಗಮನಹರಿಸುತ್ತಿವೆ. ದೆಹಲಿ, ಕೇರಳ ಮತ್ತು ಹಿಮಾಚಲಪ್ರದೇಶ ಅತಿಯಾದ ಶೈಕ್ಷಣಿಕ ತಂತ್ರಜ್ಞಾನ ಅಥವಾ ನಿರ್ಮಾಣ ವೆಚ್ಚದ ಬದಲಾಗಿ, ಶಿಕ್ಷಕರ ತರಬೇತಿ, ನೇಮಕಾತಿ ಮತ್ತು ಶಿಕ್ಷಣ ಸುಧಾರಣೆಗೆ ಆದ್ಯತೆ ನೀಡುತ್ತಿವೆ.
ಈ ತತ್ತ್ವಗಳನ್ನು ನಾವು ಕರ್ನಾಟಕಕ್ಕೆ ಅನ್ವಯಿಸಿ ನೋಡುವುದಾರೆ, ಕರ್ನಾಟಕಕ್ಕೊಂದು ‘ಶಿಕ್ಷಣ ಬಜೆಟ್’ ಕಾರ್ಯಸಾಧುವಲ್ಲ ಎನ್ನಿಸುತ್ತದೆ. ಕರಾವಳಿ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು, ಬಯಲುಸೀಮೆ, ಹಳೆಯ ಮೈಸೂರು, ಇತ್ಯಾದಿ ಭಾಗಗಳಿಗೆ ಯಾವ ಬಗೆಯ ಸಂಪನ್ಮೂಲ ಹೂಡಬೇಕೆಂಬುದು ಬಜೆಟ್‌ನ ಆಶಯವಾಗಬೇಕು. ಉದಾಹರಣೆಗೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ಖಾಲಿ ಇರುವ ಸುಮಾರು 63,000 ಶಿಕ್ಷಕರ ಹುದ್ದೆಗಳ ಪೈಕಿ 22,595 ಹುದ್ದೆಗಳು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿವೆ. ಸ್ವಾಭಾವಿಕವಾಗಿ ಆ ಭಾಗದ ತಕ್ಷಣದ ಆದ್ಯತೆ ಶಿಕ್ಷಕರ ನೇಮಕಾತಿ. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ನಿರಂತರ ಮಳೆಯ ಕಾರಣದಿಂದ ಶಿಥಿಲಾವಸ್ಥೆಯಲ್ಲಿನ ಕಟ್ಟಡ ಗಳು ಮಕ್ಕಳ ಪ್ರಾಣಕ್ಕೆ ಮಾರಕವಾಗಿವೆ. ಎಲ್ಲ ಬಗೆಯ ಹವಾಮಾನಕ್ಕೆ ಹೊಂದಿಕೆಯಾಗಬಲ್ಲ ದೀರ್ಘಕಾಲಿಕ ಉತ್ತಮ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಇಲ್ಲಿನ ಆದ್ಯತೆ. ಹಳೇ ಮೈಸೂರು ಮತ್ತು ಬೆಂಗಳೂರಿನ ಸುತ್ತಮುತ್ತಲ ಭಾಗದಲ್ಲಿ ಸ್ವಲ್ಪಮಟ್ಟಿಗೆ ಉತ್ತಮ ಮೂಲ ಸೌಲಭ್ಯಗಳಿದ್ದರೂ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಖಾಸಗೀಕರಣಕ್ಕೆ ತಡೆಯೊಡ್ಡಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ಪಾಲಕ–ಪೋಷಕರಿಗೆ ಮತ್ತಷ್ಟು ಭರವಸೆ ಮೂಡಿಸುವ ಕೆಲಸಗಳು ಈ ಭಾಗದ ಆದ್ಯತೆಗಳಾಗಬೇಕಿದೆ.
ಶಿಕ್ಷಣ ಕೇಂದ್ರಿತ ಬಜೆಟ್ ಮಾದರಿಯೆಂದರೆ ಶಿಕ್ಷಣಕ್ಕೆ ಹೆಚ್ಚಿನ ಹಣ ಹೂಡಿಕೆ ಮಾತ್ರವಲ್ಲ. ಬದಲಿಗೆ,ಶಿಕ್ಷಣದಿಂದ ಎಲ್ಲವೂ ಸಾಧ್ಯವೆಂಬ ಬಲವಾದ ನಂಬಿಕೆ, ರಾಜಕೀಯ ಬದ್ಧತೆ, ಸ್ಪಷ್ಟ ಗುರಿ, ವಿಕೇಂದ್ರೀಕೃತ ಶೈಕ್ಷಣಿಕ ಆಡಳಿತ, ವಿದ್ಯಾರ್ಥಿ ಕೇಂದ್ರಿತ ಕಲಿಕೆ, ನಿರಂತರ ಮೌಲ್ಯಮಾಪನ, ಆದರ್ಶಪ್ರಾಯ ದಕ್ಷ ಶಿಕ್ಷಕರು ಮತ್ತು ಸಮರ್ಥ ನಾಯಕತ್ವ ಮುಖ್ಯ ವಾಗುತ್ತದೆ. ಬಹುತೇಕ ಸಂದರ್ಭದಲ್ಲಿ ನಮ್ಮ ಬಜೆಟ್ ಹಣದ ಬಹುಭಾಗ ಕಟ್ಟಡ ನಿರ್ಮಾಣ, ಸ್ಮಾರ್ಟ್ ತರಗತಿ ಕೋಣೆ ಅಗತ್ಯಗಳಾದ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಪೂರಕ ಸಾಮಗ್ರಿಗಳ ಖರೀದಿ, ಮುಖ ಗುರುತಿಸುವಿಕೆ ತಂತ್ರಜ್ಞಾನ ವ್ಯವಸ್ಥೆಯ (ಎಫ್‌ಆರ್‌ಎಸ್) ಅಳವಡಿಕೆ ಇತ್ಯಾದಿಗಳಲ್ಲೇ ಕಳೆದು ಹೋಗುತ್ತದೆ. ಮೂಲ ಸೌಕರ್ಯ ಸುಧಾರಣೆಗಳು ಅಗತ್ಯ. ಆದರೆ, ಬಜೆಟ್ ಕಟ್ಟಡ ನಿರ್ಮಾಣಕ್ಕೆ ಮತ್ತು ವಸ್ತುಗಳನ್ನು ಕೊಳ್ಳಲು ಸೀಮಿತವಾಗಬಾರದು.
2011–12ರಲ್ಲಿ ಶಾಲಾ ಶಿಕ್ಷಣಕ್ಕೆ ಮೀಸಲಿಟ್ಟ ಅನುದಾನ ₹11,064 ಕೋಟಿ. 2025–26ರಲ್ಲಿ ಆ ಮೊತ್ತ ₹45,286 ಕೋಟಿಗೆ ಏರಿದೆ. ಈಗಿನ ವಾಸ್ತವಿಕ ಮೌಲ್ಯ ಮತ್ತು ನೈಜ ಮೌಲ್ಯದ ವ್ಯತ್ಯಾಸಗಳನ್ನು ಪರಿಗಣಿಸಿದ್ದಾಗ್ಯೂ, ಗಣನೀಯ ಏರಿಕೆಯಾಗಿರುವುದು ಸತ್ಯ. ಏರಿಕೆಗೆ ಅನುಗುಣವಾದ ಫಲಿತಾಂಶ ದೊರೆತಿದೆಯೇ ಎಂದು ನೋಡಿದರೆ, ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಮಾಣ ಹಾಗೂ ಶಿಕ್ಷಕರ ಕೊರತೆ ಗಣನೀಯವಾಗಿ ಹೆಚ್ಚಿದೆ; ಕಲಿಕೆಯ ಗುಣಮಟ್ಟ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿದಿದೆ. ಕನ್ನಡದ ಮಕ್ಕಳು ಕನ್ನಡ ಭಾಷೆಯಲ್ಲಿ ಅನುತ್ತೀರ್ಣರಾಗುವ ಕಾಲವಿದು. 2024–25ರ ಯುಡೈಸ್ ವರದಿ ಅನ್ವಯ ಪ್ರೌಢ ಶಿಕ್ಷಣದ ಹಂತದಲ್ಲಿ ಶೇ 22.9ರಷ್ಟು ಮಕ್ಕಳು ಶಾಲೆ ತೊರೆಯುತ್ತಿರುವುದು ಆತಂಕ ಮೂಡಿಸುತ್ತದೆ. ಹಾಗಾದರೆ, ನಮ್ಮ ಹೂಡಿಕೆಯೆಲ್ಲ ಏನಾಯಿತೆಂದು ಗಂಭೀರವಾಗಿ ಯೋಚಿಸಬೇಕಿದೆ. ಈ ಹಿಂದೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ನೀಡುತ್ತಿದ್ದ ಉಚಿತ ಬೈಸಿಕಲ್ ವ್ಯವಸ್ಥೆಯ ಮರುಪ್ರಾರಂಭ ಸಹಾಯಕ ಆಗಬಲ್ಲುದೇ ಎಂದು ನೋಡಬೇಕಿದೆ.
ಸಾಂಪ್ರದಾಯಿಕವಾಗಿ ಬಜೆಟ್‌ಗಳು, ಬಜೆಟ್ ಸಂದರ್ಭದಲ್ಲಿ ಎಷ್ಟು ಅನುದಾನ ನೀಡಲಾಗಿದೆ ಎಂಬ ಚರ್ಚೆಗೆ ಸೀಮಿತವಾಗುತ್ತವೆ. ಒದಗಿಸಿದ ಹಣ ಎಷ್ಟು ಪರಿಣಾಮಕಾರಿಯಾಗಿ ಖರ್ಚಾಗಿದೆ ಎಂಬ ಬಗ್ಗೆ ಅಳತೆಗಳಾಗಲೀ ಚರ್ಚೆಗಳಾಗಲೀ ವಿರಳ. ಶಿಕ್ಷಣ ಕ್ಷೇತ್ರದಲ್ಲಿ ಕಲಿಕಾ ಕೇಂದ್ರಿತ ಬಜೆಟ್ ಅಳವಡಿಸಿದರೆ, ಕಲಿಕಾ ಗುಣಮಟ್ಟವನ್ನು ನಿಖರವಾಗಿ ಅಳೆಯಬಹುದು. ಉದಾಹರಣೆಗೆ, ತರಗತಿ 3, 5 ಮತ್ತು 7ರ ವಿದ್ಯಾರ್ಥಿಗಳ ನಿಗದಿತ ಗಣಿತ ಸಾಮರ್ಥ್ಯ ಎಷ್ಟರಮಟ್ಟಿಗೆ ಈಡೇರಿದೆ ಎಂಬುದನ್ನು ವಾರ್ಷಿಕವಾಗಿ ಮೌಲ್ಯಮಾಪನ ಮಾಡಿ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಕ್ರೋಡೀಕರಿಸಿ, ಆ ಫಲಿತಾಂಶಗಳ ಆಧಾರದಲ್ಲಿ ಬಜೆಟ್‌ನಲ್ಲಿ ಜಿಲ್ಲಾವಾರು ಅನುದಾನ ಹಂಚಿಕೆಯಾದರೆ, ಅದು ಪರಿಮಾಣಾತ್ಮಕ ಮಾತ್ರವಾಗಿರದೆ, ಗುಣಾತ್ಮಕವಾಗಿರುತ್ತದೆ. ಇದರಿಂದ ಬಜೆಟ್ ಬರೀ ವೆಚ್ಚದ ದಾಖಲೆಯಾಗದೆ ಗುಣಮಟ್ಟ ಸುಧಾರಣೆಯ ಸಾಧನವೂ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.