‘ಏಪ್ರಿಲ್ ಎರಡನೇ ತಾರೀಕನ್ನು ಇನ್ನು ಮುಂದೆ ಅಮೆರಿಕದ ವಿಮೋಚನಾ ದಿನವನ್ನಾಗಿ, ಅಮೆರಿಕ ಕೈಗಾರಿಕೆಯ ಮರುಹುಟ್ಟಿನ ದಿನವನ್ನಾಗಿ ಸ್ಮರಿಸಲಾಗುತ್ತದೆ. ಅಮೆರಿಕ ಮತ್ತೆ ಶ್ರೀಮಂತವಾಗುತ್ತದೆ. ದಶಕಗಳಿಂದ ಮಿತ್ರರು, ಶತ್ರುಗಳು ನಮ್ಮ ದೇಶವನ್ನು ಲೂಟಿ ಮಾಡಿದ್ದಾರೆ. ಮುಂದೆ ಹೀಗಾಗುವುದಕ್ಕೆ ಬಿಡುವುದಿಲ್ಲ. ಸುಂಕ ಹಾಕಿ ನಮ್ಮನ್ನು ದೋಚಿದವರ ಮೇಲೆ ನಾವು ಪ್ರತಿಸುಂಕ ಹಾಕುತ್ತೇವೆ. ಇದು ಅಮೆರಿಕದ ಇತಿಹಾಸದಲ್ಲಿ ಮಹತ್ವದ ದಿನ. ಅಮೆರಿಕದ ಆರ್ಥಿಕ ಬಿಡುಗಡೆಯ ದಿನ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ದೃಷ್ಟಿಯಲ್ಲಿ ಅಮೆರಿಕದ ಸಂಕಷ್ಟಕ್ಕೆ ಕಾರಣ ಸರಳ. ಅಮೆರಿಕ ಬೇರೆ ದೇಶಗಳ ಮೇಲೆ ಹಾಕುವುದಕ್ಕಿಂತ ಹಲವು ಪಟ್ಟು ಸುಂಕವನ್ನು ಉಳಿದವರು ಅಮೆರಿಕದ ಸರಕುಗಳ ಮೇಲೆ ಹಾಕುತ್ತಿದ್ದಾರೆ. ಮೋಟರ್‌ಸೈಕಲ್ ಮೇಲೆ ಅಮೆರಿಕ ಹಾಕುತ್ತಿರುವ ಸುಂಕ ಕೇವಲ ಶೇ 2.4ರಷ್ಟು. ಆದರೆ ಭಾರತ ಶೇ 70ರಷ್ಟು ಸುಂಕ ಹಾಕುತ್ತಿದೆ. ಕೆನಡಾ ದೇಶವು ಅಮೆರಿಕದ ಹಾಲಿನ ಉತ್ಪನ್ನಗಳ ಮೇಲೆ ಶೇ 200ರಷ್ಟು ಸುಂಕ ವಿಧಿಸುತ್ತಿದೆ. ಅಮೆರಿಕದ ಆಕ್ಕಿಯ ಮೇಲೆ ಶೇ 700ರಷ್ಟು ಸುಂಕವನ್ನು ಚೀನಾ ವಿಧಿಸುತ್ತಿದೆ. ಅಷ್ಟೇ ಅಲ್ಲ, ತಮ್ಮ ಹಣದ ಮೌಲ್ಯವನ್ನು ಕುಗ್ಗಿಸಿ ಅಮೆರಿಕದ ಸರಕುಗಳು ದುಬಾರಿಯಾಗುವಂತೆ ನೋಡಿಕೊಳ್ಳುತ್ತಿದೆ. ಅಮೆರಿಕದ ವಸ್ತುಗಳು ತಮ್ಮ ದೇಶ ಪ್ರವೇಶಿಸುವುದನ್ನು ಅಕ್ರಮ ವಿಧಾನಗಳಿಂದ ಹಲವು ದೇಶಗಳು ತಡೆಯುತ್ತಿವೆ. ಆದರೆ ಇಂದು ಕಾರು, ಹಡಗು, ಚಿಪ್ಸ್, ಔಷಧಿ ಎಲ್ಲವನ್ನೂ ಬೇರೆ ದೇಶಗಳಿಂದ ಕೊಳ್ಳುವ ಸ್ಥಿತಿಗೆ ಅಮೆರಿಕ ಬಂದಿದೆ. ಅಮೆರಿಕದ ವ್ಯಾಪಾರದ ಕೊರತೆಯು 1.2 ಲಕ್ಷ ಕೋಟಿ ಡಾಲರ್ ಆಗಿದೆ. ಇದು ಅಮೆರಿಕಕ್ಕೆ ಆಗುತ್ತಿರುವ ಅನ್ಯಾಯಕ್ಕೆ ದೊಡ್ಡ ಪುರಾವೆ ಎನ್ನುತ್ತಾರೆ ಟ್ರಂಪ್.
ಅದಕ್ಕೆ ಪರಿಹಾರವು ಪ್ರತಿಸುಂಕ ಎನ್ನುವುದರ ಬಗ್ಗೆ ಟ್ರಂಪ್‌ಗೆ ಯಾವುದೇ ಅನುಮಾನ ಇಲ್ಲ. ವ್ಯಾಪಾರದ ಕೊರತೆ, ರಾಷ್ಟ್ರದ ಸುರಕ್ಷತೆ, ಅಕ್ರಮ ವಲಸೆ, ನಿರುದ್ಯೋಗ... ಹೀಗೆ ಅಮೆರಿಕದ
ಸಮಸ್ಯೆಗಳಿಗೆಲ್ಲ ಸುಂಕವೇ ದಿವ್ಯ ಔಷಧ. ಅಮೆರಿಕವನ್ನು ದೋಚುವುದರಲ್ಲಿ ಎಲ್ಲ ದೇಶಗಳು ಭಾಗಿಯಾಗಿವೆ ಎಂದು ಅವರು ಬಲವಾಗಿ ನಂಬಿರುವುದರಿಂದ ಎಲ್ಲ ದೇಶಗಳ ಮೇಲೆ ಶೇ 10ರಷ್ಟು ಮೂಲ ಸುಂಕವನ್ನು ಘೋಷಿಸಲಾಗಿದೆ. ಅಮೆರಿಕಕ್ಕೆ ವಿಶೇಷವಾಗಿ ಅನ್ಯಾಯ ಮಾಡಿವೆ ಎಂದು ಭಾವಿಸಲಾಗಿರುವ ಹಲವು ದೇಶಗಳ ಮೇಲೆ ಪ್ರತ್ಯೇಕವಾಗಿ ಸುಂಕ ಹಾಕಿದ್ದಾರೆ. ಭಾರತದ ಮೇಲೆ ಶೇ 26ರಷ್ಟು, ಚೀನಾದ ಮೇಲೆ ಈಗಾಗಲೇ ಇರುವ ಶೇ 20ರಷ್ಟು ಸುಂಕದ ಜೊತೆಗೆ ಹೆಚ್ಚುವರಿಯಾಗಿ ಶೇ 34ರಷ್ಟು... ಹೀಗೆ ಹಲವು ದೇಶಗಳ ಮೇಲೆ ಸುಂಕ ಹಾಕಿದ್ದಾರೆ.
ಸುಂಕ ಕೂಡ ಒಂದು ಬಗೆಯ ತೆರಿಗೆ. ಸ್ಥಳೀಯ ಉದ್ದಿಮೆಗಳಿಗೆ ರಕ್ಷಣೆ ನೀಡಲು ಬೇರೆ ದೇಶಗಳ ಉತ್ಪನ್ನಗಳ ಮೇಲೆ ಹಾಕಲಾಗುತ್ತದೆ. ಯುರೋಪಿನ ಕಾರಿನ ಮೇಲೆ ಸುಂಕ ಹಾಕಿದರೆ ಯುರೋಪಿನ ಕಾರುಗಳ ಬೆಲೆ ಹೆಚ್ಚುತ್ತದೆ. ಅಮೆರಿಕದ ಕಾರುಗಳಿಗೆ ಬೇಡಿಕೆ ಹೆಚ್ಚುತ್ತದೆ. ಅಮೆರಿಕದಲ್ಲಿ ಉತ್ಪಾದನೆ ಹಾಗೂ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ಆದರೆ ವಾಸ್ತವ ಅಷ್ಟು ಸರಳವಾಗಿಲ್ಲ. ಕಾರು ಅಮೆರಿಕದಲ್ಲಿ ತಯಾರಾದರೂ ಅದರ ಬಿಡಿಭಾಗಗಳು ಇನ್ನೆಲ್ಲೋ ತಯಾರಾಗುತ್ತವೆ, ಇನ್ಯಾವುದೋ ದೇಶದಲ್ಲಿ ಜೋಡಣೆಯಾಗುತ್ತವೆ. ಹಾಗಾಗಿ ಕಾರು ತಯಾರಿಕೆ ಪ್ರಕ್ರಿಯೆ ಪೂರ್ಣವಾಗುವುದರೊಳಗೆ ಅದು ಹಲವು ಗಡಿಗಳನ್ನು ದಾಟುತ್ತದೆ. ಪ್ರತಿಬಾರಿ ಗಡಿ ದಾಟುವಾಗಲೂ ಸುಂಕ ಕಟ್ಟಬೇಕಾದಲ್ಲಿ ಅಂತಿಮವಾಗಿ ಕಾರಿನ ಬೆಲೆ ಏರುತ್ತದೆ. ಕೊನೆಗೆ, ಸುಂಕದ ಬೆಲೆಯನ್ನು ತೆರುವವನು ಬಳಕೆದಾರನೇ ಆಗಿರುತ್ತಾನೆ. ಯಾವ ಉದ್ಯಮಿಯೂ ಅದರ ಹೊರೆ ಹೊರುವುದಿಲ್ಲ.
ಸುಂಕದಿಂದ ಒಟ್ಟಾರೆ ಬೇಡಿಕೆ ಹೆಚ್ಚುವುದಿಲ್ಲ. ಅಮೆರಿಕದಲ್ಲಿ ಬೇಡಿಕೆ ಹೆಚ್ಚಿದರೆ ಇನ್ಯಾವುದೋ ದೇಶದಲ್ಲಿ ಕಡಿಮೆ ಆಗುತ್ತದೆ. ಒಂದು ದೇಶದ ಸಮಸ್ಯೆ ಇನ್ನೊಂದು ದೇಶಕ್ಕೆ ವರ್ಗಾವಣೆ ಆಗುತ್ತದೆ. ಸಂಕಟಕ್ಕೆ ಸಿಕ್ಕ ದೇಶಗಳು ತಮ್ಮ ಆರ್ಥಿಕತೆಯನ್ನು ರಕ್ಷಿಸಿಕೊಳ್ಳಲೇಬೇಕು. ಅವರೂ ಪ್ರತಿಸುಂಕ ಹಾಕುತ್ತಾರೆ. ಅಮೆರಿಕದ ರಫ್ತಿಗೆ ಹೊಡೆತ ಬೀಳುತ್ತದೆ, ಅಮೆರಿಕದ ಸರಕುಗಳಿಗೆ ಬೇಡಿಕೆ ಕಡಿಮೆಯಾಗುತ್ತದೆ. ಸುಂಕದ ಉದ್ದೇಶ ವಿಫಲವಾಗುತ್ತದೆ.
ಅಮೆರಿಕವು 1975ರಿಂದಲೇ ವ್ಯಾಪಾರದ ಕೊರತೆಯನ್ನು ಅನುಭವಿಸುತ್ತಿದೆ. ಆದರೆ ಸೇವಾಕ್ಷೇತ್ರದಲ್ಲಿ
ಅಮೆರಿಕ ರಫ್ತಿಗಿಂತ ಹೆಚ್ಚು ಆಮದು ಮಾಡುತ್ತಿದೆ. ಟ್ರಂಪ್ ಹೇಳುವಂತೆ ವ್ಯಾಪಾರದ ಕೊರತೆಯು ಅನ್ಯಾಯದ ಸೂಚಿಯಾದರೆ ಸೇವಾಕ್ಷೇತ್ರದಲ್ಲಿ ಅನ್ಯಾಯವಾಗುತ್ತಿರುವುದು ಹಿಂದುಳಿದ ದೇಶಗಳಿಗೆ. ಅನ್ಯಾಯ ಮಾಡುತ್ತಿರುವುದು ಅಮೆರಿಕ. ಸೇವಾಕ್ಷೇತ್ರ ವಿಪರೀತ ಲಾಭದಾಯಕ ಕ್ಷೇತ್ರವಾಗಿತ್ತು. ಹಾಗಾಗಿ ಅಮೆರಿಕದಂತಹ ದೇಶಗಳು ಅಲ್ಲಿಗೆ ಕಾಲಿಟ್ಟವು. ಅಗ್ಗದ ಕೂಲಿಗೆ ಕೆಲಸಗಾರರು ಸಿಗುವ ದೇಶಗಳಿಗೆ ಕಾರ್ಖಾನೆಗಳನ್ನು ಸ್ಥಳಾಂತರಿಸಿದವು. ಇಂದು ಅಮೆರಿಕದ ಬಹುಪಾಲು ಉದ್ಯೋಗ, ಲಾಭ, ರಫ್ತು ಎಲ್ಲವೂ ಸೃಷ್ಟಿಯಾಗುತ್ತಿರುವುದು ಅಲ್ಲಿಯೇ.
ಸೇವಾಕ್ಷೇತ್ರದಲ್ಲಿ ಬೌದ್ಧಿಕ ಆಸ್ತಿಗೆ ಸಂಬಂಧಿಸಿದ ಬಹುರಾಷ್ಟ್ರೀಯ ಒಪ್ಪಂದಗಳಲ್ಲಿ ಅನ್ಯಾಯ ಆಗಿರುವುದು ಹಿಂದುಳಿದ ದೇಶಗಳಿಗೆ. ವಿದೇಶಿ ಸ್ಪರ್ಧೆಯಿಂದ ಹಿಂದುಳಿದ ರಾಷ್ಟ್ರಗಳ ತಂತ್ರಜ್ಞಾನ, ಔಷಧಿ ಹಾಗೂ ಮನರಂಜನಾ ಕ್ಷೇತ್ರಗಳು ಬಡವಾಗುತ್ತಿವೆ. ಆದರೂ ಅವು ‘ಟ್ರಿಪ್ಸ್’ನ ಉರುಗ್ವೆ ಸುತ್ತಿನ ಒಪ್ಪಂದಕ್ಕೆ ಬದ್ಧವಾಗಿ ಶ್ರೀಮಂತ ರಾಷ್ಟ್ರಗಳ ಬೌದ್ಧಿಕ ಆಸ್ತಿಗೆ ರಕ್ಷಣೆ ಕೊಡುತ್ತಿವೆ. ಆದರೆ ಅದೇ ಒಪ್ಪಂದದಲ್ಲಿ ಆ ದೇಶಗಳ ಸರಕುಗಳಿಗೆ ತಮ್ಮ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆಯುತ್ತೇವೆ ಎಂದು ಒಪ್ಪಿಕೊಂಡಿರುವುದನ್ನು ಅಮೆರಿಕ ಮರೆತಿದೆ. ಹಿಂದುಳಿದ ದೇಶಗಳು ಅಮೆರಿಕದ ಬೌದ್ಧಿಕ ಸ್ವತ್ತಿಗೆ ರಕ್ಷಣೆ ಕೊಡುವುದನ್ನು ನಿಲ್ಲಿಸಿದರೆ, ಟ್ರಿಪ್ಸ್ ಒಪ್ಪಂದದಿಂದ ಹೊರಬಂದರೆ ಏನಾಗಬಹುದು ಅನ್ನುವುದನ್ನು ಟ್ರಂಪ್ ಯೋಚಿಸಬೇಕು.
ವ್ಯಾಪಾರದ ಕೊರತೆಗೆ ನಿಜವಾದ ಕಾರಣ ದೇಶದ ಉಳಿತಾಯ ಹಾಗೂ ಹೂಡಿಕೆಯ ನಡುವಿನ ಅಸಮತೋಲನ. ಅಮೆರಿಕದಲ್ಲಿ ಹೂಡಿಕೆಗೆ ಬೇಕಾದಷ್ಟು ಹಣ ಉಳಿತಾಯ ಆಗುತ್ತಿಲ್ಲ. ಹೂಡಿಕೆಗೆ ಹೊರಗಡೆ
ಯಿಂದ ಹಣ ಬರಬೇಕು. ಅದರಿಂದ ವ್ಯಾಪಾರದ ಕೊರತೆ ಹೆಚ್ಚುತ್ತದೆ. ವ್ಯಾಪಾರದ ಕೊರತೆಯನ್ನು ತಗ್ಗಿಸುವುದಕ್ಕೆ ಉತ್ತಮ ಮಾರ್ಗವೆಂದರೆ ಬಜೆಟ್ ಕೊರತೆಯನ್ನು ತಗ್ಗಿಸುವುದು. ಆಗ ಸರ್ಕಾರದ ಸಾಲ ಕಡಿಮೆಯಾಗುತ್ತದೆ. ಬಡ್ಡಿದರ ಕಡಿಮೆಯಾಗುತ್ತದೆ. ಅಮೆರಿಕದ ಸ್ವತ್ತನ್ನು ಕೊಳ್ಳುವುದಕ್ಕೆ ವಿದೇಶಿ ಬಂಡವಾಳಕ್ಕಿರುವ ಆಕರ್ಷಣೆಯೂ ಕಡಿಮೆಯಾಗುತ್ತದೆ. ಅದರಿಂದ ವ್ಯಾಪಾರದ ಕೊರತೆ ತಗ್ಗಬಹುದು.
ಸುಂಕದಿಂದ ವಿಪರೀತ ಹಣ ಸಂಗ್ರಹವಾಗುತ್ತದೆ. ಅದರಿಂದ ತೆರಿಗೆಯನ್ನು ಇಳಿಸಬಹುದು, ಸಾಲವನ್ನು ತೀರಿಸಿಬಿಡಬಹುದು ಎಂದು ಟ್ರಂಪ್ ಭಾವಿಸಿದ್ದಾರೆ. ಆದರೆ ಆ ಪ್ರಮಾಣದಲ್ಲಿ ಹಣ ಸಂಗ್ರಹವಾಗುವ ಸಾಧ್ಯತೆ ಇಲ್ಲ. ಟ್ರಂಪ್ ಅವರ ಸುಂಕ ಸಮರದ ಪರಿಣಾಮವನ್ನು ಈಗಲೇ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಬಹುತೇಕ ದೇಶಗಳು ಪ್ರತಿಕ್ರಮವನ್ನು ಘೋಷಿಸಿವೆ. ಅಮೆರಿಕದ ಕೃಷಿ ಉತ್ಪನ್ನಗಳನ್ನು ಚೀನಾ ನಿಷೇಧಿಸಲು ಹೊರಟಿದೆ. ಅಮೆರಿಕದ ಕೃಷಿಕರ ಉತ್ಪನ್ನಗಳಿಗೆ ಭಾರತದ ಮಾರುಕಟ್ಟೆಯನ್ನು ತೆರೆಯಬೇಕೆಂದು ಅಮೆರಿಕ ಭಾರತವನ್ನು ಒತ್ತಾಯಿಸುತ್ತಿದೆ. ಜರ್ಮನಿ ಮತ್ತು ಕೆನಡಾದಂತಹ ದೇಶಗಳ ಉದ್ಯಮಿಗಳಿಗೆ ಅಮೆರಿಕದಲ್ಲೇ ಉತ್ಪಾದನೆಯನ್ನು ಆರಂಭಿಸುವಂತೆ ಒತ್ತಡ ಬರಬಹುದು. ಅಮೆರಿಕದ ಮಾರುಕಟ್ಟೆಯನ್ನು ನೆಚ್ಚಿಕೊಂಡಿರುವ ಎಲ್ಲ ದೇಶಗಳೂ ಅಮೆರಿಕದ ಒತ್ತಡವನ್ನು ಅನುಭವಿಸಬೇಕು. ಅವುಗಳಿಗಿರುವ ಒಂದೇ ದಾರಿಯೆಂದರೆ ದೇಶದೊಳಗೆ ಅಥವಾ ಬೇರೆ ದೇಶಗಳಲ್ಲಿ ಮಾರುಕಟ್ಟೆಯನ್ನು ಕಂಡುಕೊಳ್ಳಬೇಕು.
ಭಾರತವು ಅಮೆರಿಕದಿಂದ ಮಾಡಿಕೊಳ್ಳುತ್ತಿರುವ ಆಮದಿಗೆ ಹೋಲಿಸಿದರೆ, ನಾವು ಅಮೆರಿಕಕ್ಕೆ ಮಾಡುತ್ತಿರುವ ರಫ್ತು ₹ 3.17 ಲಕ್ಷ ಕೋಟಿಗಿಂತ ಜಾಸ್ತಿ ಇದೆ. ಇದರಿಂದಾಗಿ ಅಮೆರಿಕದ ಕಣ್ಣು ಕೆಂಪಾಗಿದೆ. ಭಾರತವು ಅಮೆರಿಕವನ್ನು ರಮಿಸಲು ಬಹಳಷ್ಟು ಪ್ರಯತ್ನಿಸಿದೆ. ಶೇ 55ರಷ್ಟು ಸರಕುಗಳ ಮೇಲೆ ಸುಂಕದಲ್ಲಿ ಕಡಿತ ಮಾಡಲು ಒಪ್ಪಿದೆ. ಕೃಷಿ ಉತ್ಪನ್ನಗಳ ಮೇಲಿನ ಸುಂಕದ ಕಡಿತಕ್ಕೂ ತಯಾರಿದೆ. ಇದು, ಈಗಾಗಲೇ ಸಂಕಟದಲ್ಲಿರುವ ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಟಕ್ಕೆ ತಳ್ಳಬಹುದು. ನಮ್ಮ ಜನರ, ರೈತರ ಹಾಗೂ ಸಣ್ಣ ಉದ್ದಿಮೆಗಳ ಹಿತವನ್ನು ಕಾಪಾಡಿಕೊಳ್ಳುವ ಕಡೆ ನಾವು ಗಮನಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.