ADVERTISEMENT

ಶತ್ರುಗಳ ಡ್ರೋನ್‌ ನಾಶಕ್ಕೆ ಇಸ್ರೇಲ್ – ಭಾರತದ ಕ್ಷಿಪಣಿ: ಚೀನಾ - ಪಾಕ್‌ಗೆ ಉತ್ತರ

ಗಿರೀಶ್ ಲಿಂಗಣ್ಣ
Published 9 ಏಪ್ರಿಲ್ 2025, 13:27 IST
Last Updated 9 ಏಪ್ರಿಲ್ 2025, 13:27 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ರಾಯಿಟರ್ಸ್‌

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ಭಾರತೀಯ ಸೇನೆ ಅಭಿವೃದ್ಧಿ ಪಡಿಸಿರುವ ಮಧ್ಯಮ ಶ್ರೇಣಿಯ ನೆಲದಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ (ಮೀಡಿಯಂ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ -MRSM) ಯಶಸ್ವಿ ಪರೀಕ್ಷೆ ಏಪ್ರಿಲ್ 3 ಮತ್ತು 4ರಂದು ನಡೆದಿದ್ದು, ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದೆ. ಒಡಿಶಾ ಕರಾವಳಿಯ ಡಾ. ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿ ನಡೆಸಿರುವ ಪರೀಕ್ಷೆಗಳು ಎಂಆರ್‌ಎಸ್ಎಎಂ ಭಾರತದ ಆಗಸವನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆ ಎಂದು ಸಾಬೀತುಪಡಿಸಿದೆ. ಈ ಕ್ಷಿಪಣಿ ಸಾಕಷ್ಟು ದೂರದಲ್ಲಿ ಮತ್ತು ಸನಿಹದಲ್ಲಿ, ಎತ್ತರದಲ್ಲಿ ಮತ್ತು ಕೆಳಭಾಗದಲ್ಲಿ ವೇಗವಾಗಿ ಚಲಿಸುವ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿತು. ಆ ಮೂಲಕ ತನ್ನ ನಿಖರವಾದ ಗುರಿ ಸಾಧನೆಯನ್ನು ಪ್ರದರ್ಶಿಸಿತು. ಈ ಯಶಸ್ಸು ಭಾರತದ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಯಾಗಿದ್ದು, ಭಾರತದ ವಿಜ್ಞಾನಿಗಳು ಮತ್ತು ಯೋಧರು ಜೊತೆಯಾಗಿ ಕಾರ್ಯಾಚರಿಸುತ್ತಿರುವುದಕ್ಕೆ ಸಂದ ಯಶಸ್ಸಾಗಿದೆ.

ADVERTISEMENT

ಎಂಆರ್‌ಎಸ್ಎಎಂ ಕೇವಲ ಯಾವುದೋ ಒಂದು ಕ್ಷಿಪಣಿಯಲ್ಲ. ಇದು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಸಹಯೋಗದೊಡನೆ ನಿರ್ಮಿಸಿರುವ ಸ್ಮಾರ್ಟ್ ಆಯುಧ ವ್ಯವಸ್ಥೆಯಾಗಿದೆ. ಇದು ಪ್ರಮುಖವಾಗಿ ಬರಾಕ್ 8 ಎನ್ನುವ ಕ್ಷಿಪಣಿಯನ್ನು ಬಳಸಿಕೊಳ್ಳುತ್ತದೆ. ಈ ಕ್ಷಿಪಣಿ ಅತ್ಯಂತ ವೇಗವಾಗಿ ಚಲಿಸುವ ಕ್ಷಿಪಣಿಯಾಗಿದ್ದು, ಶಬ್ದದ ವೇಗಕ್ಕಿಂತ ಎರಡು ಪಟ್ಟು ಹೆಚ್ಚಿನ ವೇಗದಲ್ಲಿ (ಅಂದಾಜು ಪ್ರತಿ ಗಂಟೆಗೆ 2,400 ಕಿಲೋಮೀಟರ್) ಚಲಿಸಿ, ಗರಿಷ್ಠ 70 ಕಿಲೋಮೀಟರ್ ದೂರದಲ್ಲಿರುವ ಗುರಿಯನ್ನು ಹೊಡೆದುರುಳಿಸಬಲ್ಲದು. ಇದನ್ನು ಏಕಕಾಲದಲ್ಲಿ ಎಂಟು ಕ್ಷಿಪಣಿಗಳನ್ನು ಅಳವಡಿಸಬಲ್ಲ ಸಂಚಾರಿ ಟ್ರಕ್‌ಗಳಿಂದ ಪ್ರಯೋಗಿಸಲಾಗುತ್ತದೆ. ಬರಾಕ್ 8 ಕ್ಷಿಪಣಿಯ ಮೂಗಿನಲ್ಲಿ ನಿಖರವಾಗಿ ಕಾರ್ಯಾಚರಿಸುವ ರೇಡಾರ್ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಮಳೆ ಮತ್ತು ಕತ್ತಲಿನಂತಹ ಪ್ರತಿಕೂಲ ಹವಾಮಾನದಲ್ಲೂ ಶತ್ರುಗಳ ವಿಮಾನಗಳು, ಡ್ರೋಣ್‌ಗಳು ಅಥವಾ ಕ್ಷಿಪಣಿಗಳನ್ನು ಗುರುತಿಸಿ, ಹಿಂಬಾಲಿಸುತ್ತದೆ. 4.5 ಮೀಟರ್ ಉದ್ದವಿರುವ ಈ ಕ್ಷಿಪಣಿ 275 ಕೆಜಿ ತೂಕ ಹೊಂದಿದೆ. ಇದು ಗುರಿಗಳನ್ನು ಛಿದ್ರಗೊಳಿಸಬಲ್ಲ ಬಲಶಾಲಿ ಸಿಡಿತಲೆಗಳನ್ನು ಹೊಂದಿದೆ. ಈ ಪರೀಕ್ಷೆಗಳು ಕ್ಷಿಪಣಿ ಹೇಗೆ ಎಲ್ಲ ಅಪಾಯಗಳ ವಿರುದ್ಧವೂ ಸರಿಯಾಗಿ ಕಾರ್ಯಾಚರಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿವೆ.

ಭಾರತೀಯ ಸೇನೆಯ ಪೂರ್ವ ಮತ್ತು ದಕ್ಷಿಣ ಕಮಾಂಡ್‌ಗಳು ಹೈಟೆಕ್ ರೇಡಾರ್‌ಗಳು ಮತ್ತು ಕ್ಯಾಮರಾಗಳನ್ನು ಬಳಸಿ, ಎಲ್ಲವನ್ನೂ ಪರಿಶೀಲಿಸಿ, ಈ ಪರೀಕ್ಷೆಗಳನ್ನು ಕೈಗೊಂಡವು. ಸದ್ಯದಲ್ಲೇ ಎರಡು ಸೇನಾ ರೆಜಿಮೆಂಟ್‌ಗಳು ಈ ಆಯುಧ ವ್ಯವಸ್ಥೆಯನ್ನು ಪಡೆದುಕೊಂಡು, ಭಾರತದ ವಾಯು ರಕ್ಷಣೆಯನ್ನು ಇನ್ನಷ್ಟು ಬಲಪಡಿಸಲಿವೆ. ಇದು ಭಾರತ ತನ್ನ ರಕ್ಷಣಾ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿರುವುದರ ಸಂಕೇತವಾಗಿದೆ. ಎಂಆರ್‌ಎಸ್ಎಎಂ ವ್ಯವಸ್ಥೆ ಭಾರತಕ್ಕೆ ಯಾಕೆ ಮುಖ್ಯವಾಗಿದೆ ಎನ್ನುವುದನ್ನು ತಿಳಿದುಕೊಳ್ಳಲು ನಮ್ಮ ನೆರೆಯ ಚೀನಾ ಮತ್ತು ಪಾಕಿಸ್ತಾನಗಳ ಬಳಿ ಏನಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಭಾರತದ ಬಳಿ ಹಿಂದೆಯೂ ಈ ರೀತಿಯ ಎಂಆರ್‌ಎಸ್ಎಎಂ ಇತ್ತೇ?

ಭಾರತ ಇದೇ ಮೊದಲ ಬಾರಿಗೆ ಮಧ್ಯಮ ವ್ಯಾಪ್ತಿಯ ನೆಲದಿಂದ ಗಗನಕ್ಕೆ ದಾಳಿ ನಡೆಸುವ (MRSAM) ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿರುವುದಲ್ಲ. ಈ ಹಿಂದೆ ಸೋವಿಯತ್ ಕಾಲದ ಎಸ್-125 ಪೆಚೊರಾ ಮತ್ತು ದೇಶೀಯ ನಿರ್ಮಾಣದ, 25-30 ಕಿಲೋಮೀಟರ್ ವ್ಯಾಪ್ತಿ ಹೊಂದಿದ್ದ ಆಕಾಶ್ ಕ್ಷಿಪಣಿ ವ್ಯವಸ್ಥೆಗಳನ್ನು ಭಾರತವು ಅವಲಂಬಿಸಿತ್ತು. ಆದರೆ, ಬರಾಕ್ 8 ಕ್ಷಿಪಣಿ ಹೊಂದಿರುವ MRSAM ಭಾರತದ ಪಾಲಿಗೆ ಮಹತ್ವದ ಅಭಿವೃದ್ಧಿ. ಆಕಾಶ್ ವ್ಯವಸ್ಥೆಯು ಸ್ವಾವಲಂಬನೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದ್ದರೂ, ಅದು ವೇಗ, ವ್ಯಾಪ್ತಿ, ಮತ್ತು ಬಹುಮುಖಿ ಸಾಮರ್ಥ್ಯದಲ್ಲಿ ಬರಾಕ್ 8ಗೆ ಸರಿಸಮನಾಗಿರಲಿಲ್ಲ. ಬರಾಕ್ 8 ಅನ್ನು ಭಾರತ ತನ್ನ ನೌಕಾಪಡೆಯ ಬಳಕೆಗಾಗಿ 2016ರಲ್ಲಿ ಮೊದಲ ಬಾರಿ ಬಳಸಿತ್ತು. 2025ರಲ್ಲಿ ಭಾರತ ಪರೀಕ್ಷೆ ನಡೆಸಿರುವುದು ಸೇನಾ ಆವೃತ್ತಿಯ ವ್ಯವಸ್ಥೆಯಾಗಿದ್ದು, ಇದನ್ನು ಇಸ್ರೇಲ್ ಜೊತೆಗಿನ ಸಹಯೋಗದಲ್ಲಿ ನಿರ್ಮಿಸಲಾಗಿದೆ. ಇದು ಹೆಚ್ಚು ಆಧುನಿಕ, ಬಹು ಪಾತ್ರಗಳ ವ್ಯವಸ್ಥೆಯಾಗಿದ್ದು, ಆಧುನಿಕ ಅಪಾಯಗಳನ್ನು ಎದುರಿಸುವ ಭಾರತದ ಸಾಮರ್ಥ್ಯವನ್ನು ಬಹಳಷ್ಟು ಹೆಚ್ಚಿಸಲಿದೆ.

ಚೀನಾದ ವಾಯು ರಕ್ಷಣಾ ವ್ಯವಸ್ಥೆಗಳು

ಚೀನಾದ ಬಳಿ ಎಚ್‌ಕ್ಯು-9 ರೀತಿಯ ಒಂದಷ್ಟು ದೊಡ್ಡ ಕ್ಷಿಪಣಿ ವ್ಯವಸ್ಥೆಗಳಿವೆ. ಈ ದೀರ್ಘ ವ್ಯಾಪ್ತಿಯ ಕ್ಷಿಪಣಿ 125 - 200 ಕಿಲೋಮೀಟರ್ ದೂರದ ಗುರಿಗಳನ್ನು ಹೊಡೆದುರುಳಿಸಬಲ್ಲದು. ಇದು ರಷ್ಯಾದ ಎಸ್-300 ಕ್ಷಿಪಣಿಯ ಆಧರಿತವಾಗಿದ್ದು, ಅದನ್ನು ಚೀನಾ ಇನ್ನಷ್ಟು ಉತ್ತಮಗೊಳಿಸಿದೆ. ಸ್ಮಾರ್ಟ್ ರೇಡಾರ್‌ಗಳನ್ನು ಬಳಸುವ ಎಚ್‌ಕ್ಯು-9 ಅವುಗಳ ನೆರವಿನಿಂದ ವಿಮಾನಗಳು, ಕ್ರೂಸ್ ಕ್ಷಿಪಣಿಗಳು, ಮತ್ತು ಕೆಲವೊಂದು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನೂ ಹೊಡೆದುರುಳಿಸಬಲ್ಲದು. ಚೀನಾ ಎಚ್‌ಕ್ಯು-9 ವ್ಯವಸ್ಥೆಯನ್ನು ತನ್ನ ಹಡಗುಗಳು ಮತ್ತು ಭೂಮಿಯಲ್ಲಿ ಅಳವಡಿಸಿದ್ದು, ತನ್ನ ಸಾಮರ್ಥ್ಯ ಪ್ರದರ್ಶಿಸಲು ದಕ್ಷಿಣ ಚೀನಾ ಸಮುದ್ರ ಪ್ರದೇಶಗಳಲ್ಲಿ ಇರಿಸಿದೆ.

ಎಚ್‌ಕ್ಯು-9 ಬಹಳಷ್ಟು ವಿಶಾಲ ಪ್ರದೇಶದ ವ್ಯಾಪ್ತಿ ಹೊಂದಿದ್ದು, ಏಕಕಾಲದಲ್ಲಿ ಹಲವು ಗುರಿಗಳ ಮೇಲೆ ದಾಳಿ ನಡೆಸಬಲ್ಲದು. ಚೀನಾದ ಬಳಿ 40-70 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ಎಚ್‌ಕ್ಯು-16 ಮಧ್ಯಮ ವ್ಯಾಪ್ತಿಯ ಕ್ಷಿಪಣಿಯಿದ್ದು, ಅದು ಭಾರತದ ಎಂಆರ್‌ಎಸ್ಎಎಂ ವ್ಯವಸ್ಥೆಗೆ ಸಮನಾಗಿದೆ. ಇವುಗಳು ಚೀನಾ ತನ್ನ ಆಗಸವನ್ನು ಅಮೆರಿಕದಂತಹ ದೇಶಗಳ ಅಪಾಯದಿಂದ ಕಾಯ್ದುಕೊಳ್ಳುವ ಕುರಿತು ಎಷ್ಟು ಬದ್ಧವಾಗಿದೆ ಎಂದು ಸಾಬೀತುಪಡಿಸಿವೆ. ಎಂಆರ್‌ಎಸ್ಎಎಂ ನಲ್ಲಿ ಬರಾಕ್ 8 ಅಳವಡಿಸುವ ಮೂಲಕ ಭಾರತ ಚೀನಾದ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳಿಗೆ ಭಾರತದ ಗಡಿಯಾದ್ಯಂತ ಬಲವಾದ ಪ್ರತಿಕ್ರಿಯೆಯನ್ನೇ ನೀಡಿದೆ.

ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳು

ನಮ್ಮ ಇನ್ನೊಂದು ನೆರೆ ರಾಷ್ಟ್ರವಾದ ಪಾಕಿಸ್ತಾನವೂ ಚೀನಾದ ನೆರವಿನಿಂದ ವಾಯು ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಪಾಕಿಸ್ತಾನದ ಬಳಿ ಹಿಮಾದ್ಸ್ ಎಂಬ ಹೆಸರಿನ ಎಚ್‌ಕ್ಯು-9/ಪಿ ವ್ಯವಸ್ಥೆ ಇದ್ದು, ಅದು 125 ಕಿಲೋಮೀಟರ್ ತನಕದ ವ್ಯಾಪ್ತಿ ಹೊಂದಿದೆ. ನಮ್ಮ ಎಂಆರ್‌ಎಸ್ಎಎಂಗೆ ಸ್ಪರ್ಧಿಯಾಗಬಲ್ಲ ಎಲ್‌ವೈ-80 ವ್ಯವಸ್ಥೆಯನ್ನು ಪಾಕಿಸ್ತಾನ ಹೊಂದಿದ್ದು, ಅದು 40-70 ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ಪಾಕಿಸ್ತಾನವು ಭಾರತೀಯ ವಿಮಾನಗಳು ಮತ್ತು ಕ್ಷಿಪಣಿಗಳನ್ನು ತಡೆಗಟ್ಟಲು ಇವುಗಳನ್ನು ಬಳಸಿಕೊಳ್ಳುತ್ತದೆ.

2019ರ ಬಾಲಾಕೋಟ್ ವಾಯುದಾಳಿಯಲ್ಲಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದೊಳಗೆ ದಾಳಿ ನಡೆಸಿದಾಗ ಪಾಕಿಸ್ತಾನದ ಆಯುಧ ರಕ್ಷಣಾ ವ್ಯವಸ್ಥೆ ವಿಫಲವಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅಂದಿನಿಂದ ಪಾಕಿಸ್ತಾನ ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿದೆ. ಎಲ್‌ವೈ-80 ಏಕಕಾಲದಲ್ಲಿ ದಾಳಿ ನಡೆಸಬಲ್ಲದಾಗಿದ್ದು, 150 ಕಿಲೋಮೀಟರ್ ವ್ಯಾಪ್ತಿ ಹೊಂದಿರುವ ರೇಡಾರ್‌ಗಳನ್ನು ಹೊಂದಿದೆ. ಭಾರತವನ್ನು ಸರಿಗಟ್ಟುವ ಸಲುವಾಗಿ ಹೆಚ್ಚಿನ ವ್ಯಾಪ್ತಿಯ ಕ್ಷಿಪಣಿಗಳನ್ನು ಹೊಂದುವುದು ಪಾಕಿಸ್ತಾನದ ಗುರಿಯಾಗಿದೆ. ಭಾರತದ ಬಳಿ ಬರಾಕ್ 8 ಮತ್ತು ಎಂಆರ್‌ಎಸ್ಎಎಂ ವ್ಯವಸ್ಥೆ ಇದ್ದು, ಇವು ಮಧ್ಯಮ ವ್ಯಾಪ್ತಿಯ ಕದನದಲ್ಲಿ ಭಾರತಕ್ಕೆ ರಕ್ಷಣೆ ಕಲ್ಪಿಸುತ್ತವೆ.

ಭಾರತಕ್ಕೆ MRSAM ಯಾಕೆ ಮುಖ್ಯ?

ಬರಾಕ್ 8 ಕ್ಷಿಪಣಿಗಳನ್ನು ಹೊಂದಿರುವ ಎಂಆರ್‌ಎಸ್ಎಎಂ ವ್ಯವಸ್ಥೆ ಕೇವಲ ಪಾಕಿಸ್ತಾನ ಮತ್ತು ಚೀನಾಗಳೊಡನೆ ಸ್ಪರ್ಧಿಸುವುದು ಮಾತ್ರವಲ್ಲದೆ, ಅವುಗಳಿಂದ ಮುಂದಿರಲು ಭಾರತಕ್ಕೆ ನೆರವಾಗುತ್ತದೆ. ಪಾಕಿಸ್ತಾನದ ಬಳಿ ಇರುವ ಕೆಲವೊಂದು ಚೀನೀ ಕ್ಷಿಪಣಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿಲ್ಲ. ಆದರೆ, ಭಾರತದ ಎಂಆರ್‌ಎಸ್ಎಎಂ ಪರೀಕ್ಷೆಗಳಲ್ಲಿ ತನ್ನ ಸಾಮರ್ಥ್ಯವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ. ಚೀನಾದ ಎಚ್‌ಕ್ಯು-9 ಹೆಚ್ಚು ದೂರ ಕ್ರಮಿಸುತ್ತದೆ. ಆದರೆ, ಬರಾಕ್ 8 ಭಾರತದ ಗಡಿಗಳಾದ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್ಎಸಿ) ಮತ್ತು ಲೈನ್ ಆಫ್ ಕಂಟ್ರೋಲ್ (ಎಲ್ಒಸಿ) ಆದ್ಯಂತ ರಕ್ಷಣಾ ಆವಶ್ಯಕತೆಗಳನ್ನು ಪೂರೈಸಲು ಸೂಕ್ತವಾಗಿದೆ.

ಎಲ್ಲಕ್ಕಿಂತ ಮುಖ್ಯ ವಿಚಾರವೆಂದರೆ, ಭಾರತ ಈ ವ್ಯವಸ್ಥೆಯನ್ನು ತಾನೇ ಸ್ವತಃ ನಿರ್ಮಿಸಿದೆ. ಡಿಆರ್‌ಡಿಒ ಮತ್ತು ಐಎಐಗಳ ಸಹಭಾಗಿತ್ವದಲ್ಲಿ ಇದರ ನಿರ್ಮಾಣವಾಗುತ್ತಿದ್ದರೂ, ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ನಂತಹ ಸಂಸ್ಥೆಗಳು ಬಿಡಿಭಾಗಗಳನ್ನು ನಿರ್ಮಿಸುತ್ತಿವೆ. ಇದು ಭಾರತದ 'ಮೇಕ್ ಇನ್ ಇಂಡಿಯಾ' ಯೋಜನೆಗೆ ಬಹುದೊಡ್ಡ ಗೆಲುವಾಗಿದೆ. ಎಂಆರ್‌ಎಸ್ಎಎಂ ಬಿಡಿಭಾಗಗಳಿಗೆ ಭಾರತ ವಿದೇಶಗಳನ್ನು ಬೇಡುವ ಅವಶ್ಯಕತೆಯಿಲ್ಲ. ಭಾರತೀಯ ಸೇನೆ, ನೌಕಾಪಡೆ, ಮತ್ತು ವಾಯುಪಡೆಗಳು ಎಂಆರ್‌ಎಸ್ಎಎಂ ಆವೃತ್ತಿಗಳನ್ನು ಬಳಸಿಕೊಂಡು, ಸಾಕಷ್ಟು ಹಣ ಉಳಿಸಿ, ನಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬಹುದು.

ಜಗತ್ತಿಗೆ ಭಾರತದ ಸಂದೇಶ

ಈ ಪರೀಕ್ಷೆಗಳು ಜಗತ್ತಿಗೆ 'ಭಾರತ ಸಿದ್ಧವಾಗಿದೆ' ಎಂಬ ಸಂದೇಶವನ್ನು ರವಾನಿಸಿವೆ. ಗಡಿ ಉದ್ವಿಗ್ನತೆಗಳು ಮತ್ತು ಡ್ರೋಣ್‌ನಂತಹ ಅಪಾಯಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ, ಬರಾಕ್ 8 ಅಳವಡಿತ ಎಂಆರ್‌ಎಸ್ಎಎಂ ಭಾರತದ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಚೀನಾ ಮತ್ತು ಪಾಕಿಸ್ತಾನಗಳ ಬಳಿ ಅವುಗಳದೇ ಯೋಜನೆಗಳಿವೆ. ಆದರೆ, ಭಾರತದ ದೇಶೀಯ ನಿರ್ಮಾಣದ ತಂತ್ರಜ್ಞಾನ ಭಾರತಕ್ಕೆ ಮೇಲುಗೈ ಒದಗಿಸುತ್ತದೆ. ಎಂಆರ್‌ಎಸ್ಎಎಂ ಕೇವಲ ಒಂದು ಕ್ಷಿಪಣಿ ಮಾತ್ರವಲ್ಲ. ಭಾರತದ ಜನರು ಮತ್ತು ನೆಲವನ್ನು ಕಾಪಾಡುವ ಭರವಸೆಯೂ ಹೌದು.

ಅಂತಿಮವಾಗಿ, ಎಂಆರ್‌ಎಸ್ಎಎಂ ಯಶಸ್ಸು ಎಲ್ಲ ಭಾರತೀಯರ ಯಶಸ್ಸಾಗಿದೆ. ಇದು ಭಾರತೀಯ ವಿಜ್ಞಾನಿಗಳ ಕುರಿತು ಹೆಮ್ಮೆ, ಯೋಧರ ಕುರಿತು ನಂಬಿಕೆ, ಮತ್ತು ಭಾರತದ ಭದ್ರ ಭವಿಷ್ಯದ ಕುರಿತು ಆಶಾ ಭಾವನೆ ಮೂಡಿಸಿದೆ. ನಾವು ಹೊಸ ಹೊಸ ಆಯುಧ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸುವ ಮೂಲಕ, ರಕ್ಷಣಾ ಕ್ಷೇತ್ರದಲ್ಲಿ ನಾಯಕತ್ವ ವಹಿಸುತ್ತಿದ್ದೇವೆ ಎಂಬ ಸಂದೇಶ ರವಾನಿಸುತ್ತಿದ್ದೇವೆ. ಇದು ಭಾರತದ ಪಾಲಿಗೆ ಆರಂಭವಾಗಿದ್ದು, ಇಂತಹ ಹಲವು ನೂತನ ಆಯುಧ ವ್ಯವಸ್ಥೆಗಳ ಮೂಲಕ ಭಾರತ ಭವಿಷ್ಯದ ಅಪಾಯಗಳನ್ನು ಎದುರಿಸಲೂ ಸಜ್ಜಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.