ADVERTISEMENT

ವಿಶ್ಲೇಷಣೆ | ಎ.ಐ. ನುಡಿ: ಸಜ್ಜಾಗಿದೆಯೇ ಕನ್ನಡ?

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಎ.ಐ. ಬಳಸಿ ದೊಡ್ಡ ಬದಲಾವಣೆ ತರಲು ಸಾಧ್ಯ

ವಸಂತ ಶೆಟ್ಟಿ
Published 11 ಮಾರ್ಚ್ 2025, 23:30 IST
Last Updated 11 ಮಾರ್ಚ್ 2025, 23:30 IST
   

ಅದೊಂದು ಅತ್ಯಂತ ಹಿಂದುಳಿದ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಇರುವ ಸರ್ಕಾರಿ ಶಾಲೆ. ಒಂದರಿಂದ ಐದನೆಯ ತರಗತಿಯ ಐವತ್ತು ಮಕ್ಕಳು ಓದುತ್ತಿರುವ ಶಾಲೆಯಲ್ಲಿ ಇರುವವರು ಇಬ್ಬರು ಶಿಕ್ಷಕರು. ಅವರೇ ಎಲ್ಲ ತರಗತಿಗಳನ್ನು ನಡೆಸುವುದರ ಜೊತೆಗೆ ಬಿಸಿಯೂಟ ಸೇರಿದಂತೆ ಶಾಲೆಯ ಆಡಳಿತವನ್ನೂ ನಿರ್ವಹಿಸಬೇಕು. ಸಹಜವಾಗಿಯೇ ಅಲ್ಲಿ ಮಕ್ಕಳಿಗೆ ಕೊಡಬೇಕಾದ ಗಮನವನ್ನಾಗಲಿ, ಸಮಯವನ್ನಾಗಲಿ ಕೊಡಲಾಗದ ಶಿಕ್ಷಕರಿಂದ ಮಕ್ಕಳ ಕಲಿಕೆ ಕುಂಠಿತವಾಗುತ್ತಿದೆ.

ಈಗ ಅದೇ ಶಾಲೆಗೆ ಉಪಗ್ರಹ ಆಧಾರಿತ ವೇಗದ ಅಂತರ್ಜಾಲದ ಸಂಪರ್ಕ ಕೊಟ್ಟು, ಎಲ್ಲ ಕೋಣೆಗಳಲ್ಲೂ ಒಂದು ಸ್ಮಾರ್ಟ್ ಟಿ.ವಿ.ಯ ಮೂಲಕ ಕೃತಕ ಬುದ್ಧಿಮತ್ತೆ (ಎ.ಐ) ಬಳಸಿ ಸೃಷ್ಟಿಸಲಾದ ಶಿಕ್ಷಕರೊಬ್ಬರನ್ನು ನೇಮಿಸಲಾಗುತ್ತದೆ. ಪ್ರತಿ ವಿಷಯದ ಬಗ್ಗೆಯೂ ಆಳವಾದ ತಿಳಿವುಳ್ಳ, ಮಕ್ಕಳ ನುಡಿಯನ್ನು ಸಹ ಚೆನ್ನಾಗಿ ಬಲ್ಲ ಈ ಎ.ಐ. ಶಿಕ್ಷಕ, ಯಾವ ಪ್ರಶ್ನೆಯನ್ನು ಕೇಳಿದರೂ ಕಿಂಚಿತ್ತೂ ಬೇಸರಿಸಿಕೊಳ್ಳದೆ ಮಕ್ಕಳಿಗೆ ಹೇಳಿಕೊಡುತ್ತದೆ. ಶಾಲೆ ಮುಗಿದ ಮೇಲೆ ಮಕ್ಕಳು ಮನೆಯಲ್ಲಿ ಓದಿಕೊಳ್ಳುವಾಗಲೂ ಅವರಿಗೆ ಯಾವುದಾದರೂ ಪ್ರಶ್ನೆಗಳು ಎದುರಾದರೆ, ತಕ್ಷಣವೇ ತಂದೆ-ತಾಯಿಯ ಮೊಬೈಲ್ ಫೋನ್‌ ಮೂಲಕ ಮಕ್ಕಳೊಡನೆ ಒಡನಾಡಿ ಅದನ್ನು ಬಗೆಹರಿಸುತ್ತದೆ. ಹಳ್ಳಿಯ ಈ ಶಾಲೆಯ ಎಲ್ಲ ಮಕ್ಕಳ ಕಲಿಕೆಯ ಮಟ್ಟವನ್ನೂ ಕೆಲ ವರ್ಷಗಳಲ್ಲೇ ಮೇಲಕ್ಕೆತ್ತುವ ಇಂತಹ ಕಲಿಕೆಯು ಸಿದ್ಧಗೊಂಡರೆ ಹೇಗಿರುತ್ತದೆ?

ಇನ್ನೊಂದು ಉದಾಹರಣೆ. ಅದೇ ಹಳ್ಳಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ವೈದ್ಯರಿಲ್ಲ. ಈ ಸ್ಥಿತಿ ಆರು ತಿಂಗಳಿಂದ ಹೀಗೇ ಇದೆ. ಹಳ್ಳಿಯ ಜನ ಸಣ್ಣಪುಟ್ಟ ಅನಾರೋಗ್ಯಕ್ಕೂ ಮೂವತ್ತು ಕಿ.ಮೀ. ದೂರದ ಪಟ್ಟಣಕ್ಕೆ ಹೋಗಬೇಕಾದ ಸ್ಥಿತಿಯಿದೆ. ಹಳ್ಳಿಯ ಈ ಆಸ್ಪತ್ರೆಗೆ ಇದೇ ತಂತ್ರಜ್ಞಾನದ ಸಹಾಯದಿಂದ ಒಬ್ಬ ಎ.ಐ. ವೈದ್ಯರನ್ನು ಒದಗಿಸಲಾಗುತ್ತದೆ. ಈ ವೈದ್ಯರ ಬಳಿ ಮೈಬಿಸಿ, ಬಿ.ಪಿ, ಇ.ಸಿ.ಜಿ., ರಕ್ತದಲ್ಲಿನ ಆಮ್ಲಜನಕವನ್ನು ಕಣ್ಸೂಚನೆಯಲ್ಲೇ ಅಳೆಯುವ ಸಾಧನಗಳು, ಕ್ಯಾಮೆರಾ ಮೂಲಕ ರೋಗಿಯ ಕಣ್ಣು ಮತ್ತು ನಾಲಿಗೆ ಪರೀಕ್ಷೆಯ ಅನುಕೂಲಗಳು ಇರುತ್ತವೆ. ಯಾವುದೇ ರೋಗಿಯ ಮೊದಲ ಹಂತದ ತಪಾಸಣೆಯನ್ನು ಅಚ್ಚುಕಟ್ಟಾಗಿ ರೋಗಿಗೆ ತಿಳಿದಿರುವ ಕನ್ನಡ ಭಾಷೆಯಲ್ಲೇ ಮಾಡಿ ಮುಗಿಸಿ, ನಂತರ ಅಲ್ಲಿಂದಲೇ ಜಿಲ್ಲಾ ಕೇಂದ್ರದಲ್ಲಿರುವ ನುರಿತ ವೈದ್ಯರ ಕೇಂದ್ರವನ್ನು ಅದು  ಸಂಪರ್ಕಿಸುತ್ತದೆ. ನಂತರ ರೋಗಿಗೆ ಯಾವ ಚಿಕಿತ್ಸೆ, ಔಷಧಿ ನೀಡಬೇಕು ಎಂದು ಖಾತರಿಪಡಿಸಿಕೊಂಡು ಚಿಕಿತ್ಸೆ ನೀಡುತ್ತದೆ. ಇಂತಹ ವ್ಯವಸ್ಥೆಯೊಂದು ಸಜ್ಜುಗೊಂಡರೆ ಹೇಗಿರುತ್ತದೆ? ಹಳ್ಳಿಗಾಡಿನಲ್ಲಿ ಸೇವೆ ಒದಗಿಸುವ ವೈದ್ಯರು ಸಿಗದೆ ಒದ್ದಾಡುವ ಹಳ್ಳಿಯ ಜನರಿಗೆ ದಿನದ ಇಪ್ಪತ್ನಾಲ್ಕು ಗಂಟೆಯೂ ಲಭ್ಯವಿರುವ ಇಂತಹದ್ದೊಂದು ಎ.ಐ. ವೈದ್ಯರು ಸಿಕ್ಕರೆ ಹಳ್ಳಿಗಳಲ್ಲಿ ಆರೋಗ್ಯದ ವಿಷಯದಲ್ಲಿ ಎಂತಹ ಕ್ರಾಂತಿಯಾಗಬಹುದು?

ADVERTISEMENT

ಕೇಳಲೇನೋ ಇದು ಸೈನ್ಸ್ ಫಿಕ್ಷನ್ ಕಾದಂಬರಿಯಂತೆ ಸೊಗಸಾಗಿ ಕೇಳಿಸುತ್ತದೆ. ಆದರೆ ಇಂತಹ ಕನಸನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯದಲ್ಲಿ ಅಗಾಧ ಕೊರತೆ ಇರುವ ಭಾರತದಂತಹ ದೇಶದಲ್ಲಿ ಇದು ನನಸಾಗಲು ಸಾಧ್ಯವೇ ಅನ್ನುವ ಪ್ರಶ್ನೆ ಯಾರಲ್ಲೂ ಏಳಬಹುದು. ಅದು ಸಹಜವೂ ಹೌದು. ಆದರೆ ಎ.ಐ. ತಂತ್ರಜ್ಞಾನ ಕ್ಷೇತ್ರದಲ್ಲಿ ದಿನ ದಿನಕ್ಕೂ ಆಗುತ್ತಿರುವ ದಾಪುಗಾಲಿನ ಪ್ರಗತಿಯನ್ನು ಕಂಡಾಗ, ಈ ಕನಸುಗಳೆಲ್ಲ ಮುಂದಿನ ಐದರಿಂದ ಹತ್ತು ವರ್ಷಗಳಲ್ಲೇ ನಿಜವಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗುತ್ತಿವೆ. ಇಪ್ಪತ್ತು ವರ್ಷದ ಹಿಂದೆ ಯಾರಾದರೂ ಕೈಯಲ್ಲಿನ ಮೊಬೈಲ್ ಫೋನ್‌ನಲ್ಲೇ ದಿನನಿತ್ಯದ ನೂರಾರು ಕೆಲಸಗಳನ್ನು ಮಾಡಿ ಮುಗಿಸಬಹುದು, ವಾಟ್ಸ್ಆ್ಯಪ್‌ ತರಹದ ಸಂಪರ್ಕ ಸಾಧನಗಳು ದೇಶದೇಶಗಳ ಚುನಾವಣೆಯ ದಿಕ್ಕನ್ನೇ ಬದಲಿಸಬಹುದು ಅಂತ ಹೇಳಿದ್ದರೆ ಯಾರೂ ಹೇಗೆ ನಂಬುತ್ತಿರಲಿಲ್ಲವೋ ಇದೂ ಕೊಂಚ ಹಾಗೆಯೇ ಅಂದುಕೊಳ್ಳಿ. ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಯನ್ನು ಹತ್ತಿರದಿಂದ ಗಮನಿಸುತ್ತಿರುವವರಿಗೆ ಚೆನ್ನಾಗಿ ತಿಳಿದಿದೆ: ಬುದ್ಧಿವಂತಿಕೆಯು ಅಂಗಡಿಯಲ್ಲಿ ಕೊಳ್ಳುವ ಸರಕಿನಂತಾಗುವ ಕಾಲ ಬಹಳ ಹತ್ತಿರದಲ್ಲಿದೆ.

ಮೇಲಿನ ಎರಡು ಉದಾಹರಣೆಗಳನ್ನು ಕಂಡಾಗ ಯಾವ ಪ್ರಶ್ನೆಗಳು ಮೂಡಬಹುದು? ಇಂತಹ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಲು ಸಾಧ್ಯವೇ? ಅದಕ್ಕೆ ಬೇಕಾದ ಸಂಪನ್ಮೂಲ ನಮ್ಮಲ್ಲಿ ಇದೆಯೇ? ಒಂದೊಮ್ಮೆ ಅಳವಡಿಸಿಕೊಂಡರೂ ನಂತರ ನಮ್ಮ ಭ್ರಷ್ಟ ವ್ಯವಸ್ಥೆಯಲ್ಲಿ ಅದನ್ನು ನಿರ್ವಹಿಸುವುದು ಸಾಧ್ಯವೇ? ಕಲಿಕೆ ಮತ್ತು ಆರೋಗ್ಯದಂತಹ ಕ್ಷೇತ್ರಗಳನ್ನು ಒಂದು ತಂತ್ರಜ್ಞಾನದ ಕೈಯಲ್ಲಿ ಕೊಡುವುದು ತರವೇ? ಈ ತಂತ್ರಜ್ಞಾನ ತಪ್ಪೆಸಗಿದರೆ ಅದಕ್ಕೆ ಯಾರು ಹೊಣೆ? ಈ ತಂತ್ರಜ್ಞಾನದ ತರಬೇತಿಯಲ್ಲಿ ಒಳಹೊಕ್ಕಿರಬಹುದಾದ ಪೂರ್ವಗ್ರಹಗಳು ತೊಂದರೆ ತರುವುದಿಲ್ಲವೇ? ಈ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಉದ್ಯೋಗಕ್ಕೆ ಇದು ಕುತ್ತು ತರಲಿದೆಯೇ? ಹೀಗೆ ಹಲವಾರು ಪ್ರಶ್ನೆಗಳು ಎದುರಾಗಬಹುದು. ಆದರೆ ಗಮನಿಸಿದರೆ, ಯಾವುದೇ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವಾಗಲೂ ಮೂಡುವಂತಹ ಸಾಮಾನ್ಯ ಪ್ರಶ್ನೆಗಳೇ ಇವಾಗಿವೆ ಎಂಬುದು ತಿಳಿಯುತ್ತದೆ.

ಹಳ್ಳಿಯ ಸಮಾಜ ಮತ್ತು ಆರ್ಥಿಕತೆಯ ಪಾಲುದಾರರಾದ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಶಾಲಾ ಅಭಿವೃದ್ಧಿ ಸಮಿತಿಯ ಎಲ್ಲರನ್ನೂ ತೊಡಗಿಸಿಕೊಂಡು ಸೂಕ್ತವಾದ ನೀತಿ, ನಿಲುವುಗಳನ್ನು ರೂಪಿಸಿಕೊಳ್ಳುತ್ತ ಈ ತಂತ್ರಜ್ಞಾನವನ್ನು ನಮ್ಮ ಒಳಿತಿನ ಭಾಗವಾಗಿ ತಂದುಕೊಂಡರೆ ಖಂಡಿತವಾಗಿಯೂ ಇದು ಇವತ್ತಿನ ಹಳ್ಳಿಗಾಡಿನ ಸ್ಥಿತಿಯಲ್ಲಿ ದೊಡ್ಡ ಬದಲಾವಣೆ ತರಬಹುದು. ಐದರಿಂದ ಹತ್ತು ವರ್ಷಗಳಲ್ಲಿ ಈ ತಂತ್ರಜ್ಞಾನ ಎಲ್ಲ ರೀತಿಯಲ್ಲೂ ವ್ಯಾಪಕವಾಗಿ, ಅಗ್ಗವಾಗಿ ಅನುಷ್ಠಾನಕ್ಕೆ ತರುವ ಮಟ್ಟಕ್ಕೆ ಹೋಗಲಿದೆ. ಅದಕ್ಕೆ ನಾವು ಸಜ್ಜಾಗಬೇಕಷ್ಟೆ. ಹೀಗೆ ಸಜ್ಜಾಗುವುದರ ಒಂದು ಮುಖ್ಯ ಆಯಾಮ ಭಾಷೆಯದ್ದು. ಈ ತಂತ್ರಜ್ಞಾನ ಎಷ್ಟೇ ಚೆನ್ನಾಗಿದ್ದರೂ ಅದು ಕೊನೆಯಲ್ಲಿ ಸಾಮಾನ್ಯ ಜನರೊಡನೆ ಅವರ ಭಾಷೆಯಲ್ಲಿ ಒಡನಾಡದಿದ್ದರೆ ಪರಿಣಾಮಕಾರಿಯಾಗದು. ಇಂತಹ ತಂತ್ರಜ್ಞಾನಕ್ಕೆ ಕನ್ನಡ ಸಜ್ಜಾಗಿದೆಯೇ?

ಎ.ಐ. ತಂತ್ರಜ್ಞಾನದ ಹಿಂದಿರುವುದು, ಡಿಜಿಟಲ್ ರೂಪದಲ್ಲಿರುವ ಅಗಾಧ ಮಾಹಿತಿಯ ಕಣಜವನ್ನು ನುಡಿಮಾದರಿ ಎನ್ನುವ ಒಂದು ಕಂಪ್ಯೂಟರ್ ವ್ಯವಸ್ಥೆಗೆ ಉಣಬಡಿಸಿ, ಸರಿಯಾದ ತರಬೇತಿಯ ಮೂಲಕ ಈ ಮಾಹಿತಿಯನ್ನು ತಿಳಿವಳಿಕೆಯ ರೂಪಕ್ಕೆ ಇಳಿಸುವ ಏರ್ಪಾಡು. ಮಾಹಿತಿ ಮತ್ತು ತರಬೇತಿ ಎಷ್ಟು ಗುಣಮಟ್ಟದ್ದಾಗಿರುತ್ತವೋ ಅಷ್ಟೇ ಗುಣಮಟ್ಟದಲ್ಲಿ ಈ ಎ.ಐ. ಕೆಲಸ ಮಾಡುತ್ತದೆ. ಸದ್ಯಕ್ಕೆ ಅಂತರ್ಜಾಲದಲ್ಲಿರುವ ಹೆಚ್ಚಿನ ಮಾಹಿತಿ ಇಂಗ್ಲಿಷ್ ಭಾಷೆಯಲ್ಲಿರುವ ಕಾರಣದಿಂದಾಗಿ ಈ ತಂತ್ರಜ್ಞಾನ ಇಂಗ್ಲಿಷ್ ಭಾಷೆಯಲ್ಲಿ ಹೆಚ್ಚು ಸಶಕ್ತವಾಗಿ ಕೆಲಸ ಮಾಡುತ್ತಿದೆ. ಹಾಗಿದ್ದರೆ ಮೇಲೆ ತಿಳಿಸಿದ ಎರಡು ಉದಾಹರಣೆಗಳು ನಿಜಕ್ಕೂ ಪರಿಣಾಮಕಾರಿಯಾಗಿ ಕನ್ನಡದಲ್ಲೂ ಕೆಲಸ ಮಾಡಬೇಕು ಎಂದರೆ ಏನಾಗಬೇಕು? ಉತ್ತರ: ಯಾವೆಲ್ಲ ತಿಳಿವಳಿಕೆಯನ್ನು ಇಂಗ್ಲಿಷ್ ಮೂಲಕ ಈ ನುಡಿಮಾದರಿಗಳಲ್ಲಿ ಕಟ್ಟಲಾಗಿದೆಯೋ ಅದೆಲ್ಲವನ್ನು ಕನ್ನಡದಲ್ಲೂ ಕಟ್ಟಲು ಸಾಧ್ಯವಾಗಬೇಕು.

ಸದ್ಯಕ್ಕೆ ಅಂತರ್ಜಾಲದಲ್ಲಿ ಸಿನಿಮಾ, ರಾಜಕೀಯ, ಕತೆ, ಕಾದಂಬರಿ, ಅಡುಗೆ, ಆಟೋಟದಂತಹ ಕೆಲ ಕ್ಷೇತ್ರಗಳ ಮಾಹಿತಿ ಕನ್ನಡದಲ್ಲಿದೆ. ಆದರೆ ಇಂದಿನ ಆರ್ಥಿಕತೆಯನ್ನು ರೂಪಿಸಿರುವ ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ, ಕಾನೂನಿನಂತಹ ಕ್ಷೇತ್ರಗಳ ಮಾಹಿತಿ ಕನ್ನಡದಲ್ಲಿ ಬಹಳ ಕಡಿಮೆಯಿದೆ. ಸಹಜವಾಗಿಯೇ ಕನ್ನಡದಲ್ಲಿ ಎ.ಐ. ನುಡಿಮಾದರಿಯೊಂದನ್ನು ಕಟ್ಟಲು ಹೊರಟಾಗ, ಎಲ್ಲೆಲ್ಲಿ ಕನ್ನಡದಲ್ಲಿ ಕೊರತೆ ಇದೆಯೋ ಅಲ್ಲೆಲ್ಲ ಈ ನುಡಿಮಾದರಿಗಳು ಎಡವುತ್ತವೆ. ಈ ಕ್ಷೇತ್ರಗಳಲ್ಲಿ ಇಂಗ್ಲಿಷಿನಲ್ಲಿರುವ ಮಾಹಿತಿ ಅಥವಾ ತಿಳಿವನ್ನು ಅನುವಾದದ ಮೂಲಕ ಕನ್ನಡಕ್ಕೆ ತರುವ ಪ್ರಯತ್ನಗಳು ಆಗುತ್ತಿವೆ. ಆದರೂ ಅನುವಾದಕ್ಕೆ ಬೇಕಿರುವ ಪಾರಿಭಾಷಿಕ ಪದಗಳ ಕೊರತೆಯಿಂದಾಗಿ ಅವೆಲ್ಲವೂ ನಮ್ಮ ವಿಜ್ಞಾನ ಮತ್ತು ಗಣಿತದ ಪಠ್ಯಪುಸ್ತಕಗಳಲ್ಲಿ ಕಾಣುವಂತಹ, ಸಾಮಾನ್ಯವಾಗಿ ಯಾರಿಗೂ ಅರ್ಥವಾಗದ, ಕಷ್ಟದ ಪದಗಳನ್ನೇ ಎರವಲಾಗಿ ಪಡೆದು, ಕನ್ನಡದಲ್ಲಿ ಎ.ಐ. ಬಳಸುವಲ್ಲಿ ಹೊಸ ತೊಡಕುಗಳನ್ನು ಸೃಷ್ಟಿ ಮಾಡುತ್ತಿವೆ.

ಕನ್ನಡದಲ್ಲಿ ಸರಳವಾದ ಪಾರಿಭಾಷಿಕ ಪದಗಳನ್ನು ಕಟ್ಟಬೇಕು ಎಂದರೆ ಕನ್ನಡದ ನುಡಿ ಮತ್ತು ನುಡಿಯರಿಮೆಯ ಸ್ವರೂಪದ ಕುರಿತು ಸಂಶೋಧನೆ, ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವಾಗ ಕನ್ನಡದ ಒಳನುಡಿಗಳನ್ನು ಹೇಗೆ ತೊಡಗಿಸಿಕೊಳ್ಳುವುದು ಅನ್ನುವ ಬಗ್ಗೆ ಅರಕೆ, ಪದ ಕಟ್ಟಣೆಯತ್ತ ಸಮುದಾಯದ ಪಾಲ್ಗೊಳ್ಳುವಿಕೆಯ ಯೋಜನೆಗಳು ಸೇರಿದಂತೆ ಹತ್ತಾರು ಬಗೆಯ ಕೆಲಸಗಳು ಆಗಬೇಕಿವೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯವು ತಂತ್ರಜ್ಞಾನವನ್ನು ಕನ್ನಡದಲ್ಲಿ ಕಟ್ಟುವತ್ತಲಿನ ಕೆಲಸಗಳಿಗೂ ಒಂದಿಷ್ಟು ಗಮನ ಹರಿಸಬೇಕು. ಎಷ್ಟು ಬೇಗ ಸರಳವಾದ ಕನ್ನಡದಲ್ಲಿ ಜ್ಞಾನ- ವಿಜ್ಞಾನದ ಎಲ್ಲ ಕವಲುಗಳನ್ನು ಕಟ್ಟುತ್ತ ಅಂತರ್ಜಾಲದಲ್ಲಿ ಅದನ್ನು ಪಸರಿಸುತ್ತೇವೆಯೋ ಅಷ್ಟೇ ಬೇಗ ಎ.ಐ. ನುಡಿಮಾದರಿಗಳು ಕನ್ನಡಕ್ಕೆ ಸಜ್ಜಾಗುವುದರ ಜೊತೆಗೆ ಕಲಿಕೆ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಮೇಲೆ ಬಣ್ಣಿಸಿದ ಕನಸನ್ನು ನನಸಾಗಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.