ADVERTISEMENT

ತುರ್ತು ಪರಿಸ್ಥಿತಿ ಸವಾಲು ಗೆದ್ದ ಪ್ರಜಾಪ್ರಭುತ್ವ- ಬಸವರಾಜ ಬೊಮ್ಮಾಯಿ ಅವರ ಬರಹ

ಬಸವರಾಜ ಬೊಮ್ಮಾಯಿ
Published 24 ಜೂನ್ 2025, 23:57 IST
Last Updated 24 ಜೂನ್ 2025, 23:57 IST
<div class="paragraphs"><p> ತುರ್ತು ಪರಿಸ್ಥಿತಿ ವಿರುದ್ಧ ಜನತಾ ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.</p></div>

ತುರ್ತು ಪರಿಸ್ಥಿತಿ ವಿರುದ್ಧ ಜನತಾ ಪಕ್ಷದ ಕಾರ್ಯಕರ್ತರು ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.

   

1975ರ ಜೂನ್‌ 25 ರಂದು ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ಆಂತರಿಕ ತುರ್ತು ಪರಿಸ್ಥಿತಿಗೆ ಈಗ 50 ವರ್ಷ. ತುರ್ತು ಪರಿಸ್ಥಿತಿಯು 1947ರ ಸ್ವಾತಂತ್ರ್ಯಾನಂತರ ಭಾರತದ ಪ್ರಜಾಪ್ರಭುತ್ವಕ್ಕೆ ಇಂದಿರಾ ಗಾಂಧಿಯವರು ತಂದು ಒಡ್ಡಿದ ಅತ್ಯಂತ ದೊಡ್ಡ ಸವಾಲು. ರಾಜಕೀಯ ಕಾರಣಕ್ಕೆ ಜಾರಿಗೊಳಿಸಿದ ತುರ್ತು ಪರಿಸ್ಥಿತಿಯಿಂದಾಗಿ ಇಡೀ ದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿತ್ತು. ಭಾರತದ ಸುರಕ್ಷತೆಗೆ ಧಕ್ಕೆ ತರುವಂತಹ ದೇಶದ್ರೋಹದ ಚಟುವಟಿಕೆಗಳು, ಹಿಂಸಾಚಾರಗಳು ನಡೆದಾಗ ಮತ್ತು ದೇಶದ್ರೋಹ ಎಸಗಲು ನಿರಂತರ ಪ್ರಚೋದನೆ ನಡೆದರೆ ಆಂತರಿಕ ತುರ್ತು ಪರಿಸ್ಥಿತಿ ಹೇರಲು ಸಂವಿಧಾನದ 352ನೇ ವಿಧಿಯು ಅವಕಾಶ ಕಲ್ಪಿಸಿದೆ. ಆದರೆ, ಮೇಲಿನ ಯಾವುದೇ ಅಂಶಗಳು ಇಲ್ಲದಿದ್ದರೂ ಅಲಹಾಬಾದ್‌ ಹೈಕೋರ್ಟ್ ನೀಡಿದ ತೀರ್ಪಿನಿಂದ ತಮ್ಮ ಪ್ರಧಾನಿ ಸ್ಥಾನಕ್ಕೆ ಕುತ್ತು ಬರುತ್ತದೆ ಎಂಬ ಕಾರಣಕ್ಕೆ, ತಮ್ಮ ಕುರ್ಚಿ ಉಳಿಸಿಕೊಳ್ಳುವ ಉದ್ದೇಶದಿಂದ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದರು. 

ಆ ದಿನಗಳಲ್ಲಿ ನಾವೆಲ್ಲಾ ಕಾಲೇಜು ವಿದ್ಯಾರ್ಥಿಗಳು. ತುರ್ತು ಪರಿಸ್ಥಿತಿ ಹೇರಿಕೆಯಿಂದ ದೇಶದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕಲಾಯಿತು. ಜನರಿಗೆ ಸ್ವಾತಂತ್ರ್ಯ ಎನ್ನುವುದೇ ಇರಲಿಲ್ಲ. ಯಾರೂ ಸರ್ಕಾರದ ವಿರುದ್ಧ ಮಾತನಾಡುವಂತಿರಲಿಲ್ಲ, ಮಾಧ್ಯಮಗಳನ್ನೂ ಸೆನ್ಸಾರ್‌ಗೆ ಒಳಪಡಿಸಲಾಗಿತ್ತು. ಇಂದಿರಾ ಕೈಗೊಂಡ ಕ್ರಮದ ವಿರುದ್ಧ ಮಾತನಾಡಿದವರನ್ನು ಬಂಧನಕ್ಕೊಳಪಡಿಸುತ್ತಿದ್ದರು. ನಮ್ಮ ತಂದೆಯವರನ್ನು ಬಂಧಿಸಲು ಪ್ರಯತ್ನ ನಡೆಯಿತು. ಆದರೆ, ಅವರು ಭೂಗತರಾಗಿ ತುರ್ತು ಪರಿಸ್ಥಿತಿ ಹೇರಿಕೆ ವಿರುದ್ಧ ಎಲ್ಲ ರೀತಿಯ ಹೋರಾಟಗಳಿಗೆ ಬೆಂಬಲ ಕೊಡಲು ಪ್ರಾರಂಭಿಸಿದರು.

ADVERTISEMENT

ಹುಬ್ಬಳ್ಳಿಯಲ್ಲಿ ಇದರ ಬಗ್ಗೆ ಯಾವುದೇ ಪ್ರತಿಭಟನೆ ನಡೆದಿರಲಿಲ್ಲ. ನಮ್ಮ ಹಕ್ಕು ಮೊಟಕುಗೊಳಿಸುತ್ತಿದ್ದರೂ ಎಲ್ಲರೂ ಸುಮ್ಮನಿದ್ದಾರೆ ಎಂಬ ಭಾವನೆ ವಿದ್ಯಾರ್ಥಿಗಳಲ್ಲಿತ್ತು. ನಾನು ಮತ್ತು ನನ್ನ ಗೆಳೆಯ, ಎಬಿಪಿವಿಯಲ್ಲಿ ಸಕ್ರಿಯರಾಗಿದ್ದ ಅನಂತಕುಮಾರ ಈ ಬಗ್ಗೆ ಹಲವಾರು ಬಾರಿ ಚಿಂತನೆ ಮಾಡಿ ನಾವಿದ್ದ ವಿಜ್ಞಾನ ಕಾಲೇಜು, ಕಲಾ, ವಾಣಿಜ್ಯ ಮತ್ತು ಎಂಜಿನಿಯರಿಂಗ್‌ ಕಾಲೇಜು ಗೆಳೆಯರೊಂದಿಗೆ ಮಾತನಾಡಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದೆವು. ಅದಕ್ಕೆ ಬೇಕಾದ ರೂಪುರೇಷೆ ಸಿದ್ಧಪಡಿಸಿದೆವು. ಆದರೆ, ಅದರ ಬಗ್ಗೆ ಮಾತನಾಡಲು ಪೊಲಿಸರ ಭಯ ಇತ್ತು.

ಎಂದಿನಂತೆ ಕಾಲೇಜಿಗೆ ಹೋಗುವ ನೆಪದಲ್ಲಿ ಬಸ್ಸಿನಲ್ಲಿ ತೆರಳಿ, ಎಲ್ಲ ವಿದ್ಯಾರ್ಥಿಗಳು ಪಿಸಿ ಜಾಬಿನ್ ಕಾಲೇಜು ಬಸ್ ತಂಗುದಾಣದಲ್ಲಿ ಸೇರಿ ರಸ್ತೆ ತಡೆ ಪ್ರಾರಂಭಿಸಿದೆವು‌. ಇದರ ಬಗ್ಗೆ ಮಾಹಿತಿ ಇರದ ಕಾರಣ ಅಲ್ಲಿ ಪೊಲೀಸರು ಇರಲಿಲ್ಲ. ಪೊಲೀಸರು ಬಂದು ನಿಯಂತ್ರಣ ಮಾಡುವ ಸಂದರ್ಭದಲ್ಲಿಯೇ ಪೊಲೀಸರ ಜೊತೆ ನಾನು ಮತ್ತು ಅನಂತಕುಮಾರ ವಾಗ್ವಾದಕ್ಕೆ ಇಳಿದೆವು. ಇದೇ ಸಂದರ್ಭದಲ್ಲಿ ಹಿಂದೆ ಬಂದ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ಬಿತ್ತು. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿ ನಮ್ಮನ್ನು ಬಂಧಿಸುವ ಪ್ರಯತ್ನ ಮಾಡಿದರು. ನಾವು ಕಾಲೇಜು ಒಳಗೆ ಓಡಿ ಹೋದೆವು. ನಮ್ಮ ಕೆಲವು ಮಿತ್ರರು ಪೊಲೀಸರ ಕೈಗೆ ಸಿಕ್ಕಿಬಿದ್ದರು. ಅವರನ್ನು ಬಿಡಿಸಲು ಹೋದ ಅನಂತ ಕುಮಾರ ಬಂಧನಕ್ಕೆ ಒಳಗಾದರು. ಆ ಸಂದರ್ಭದಲ್ಲಿ ನಮಗೆಲ್ಲ ಜಯಪ್ರಕಾಶ ನಾರಾಯಣ ಅವರ ಭಾಷಣಗಳೇ ಸ್ಫೂರ್ತಿಯಾಗಿದ್ದವು. ಅವರ ಸಂಪೂರ್ಣ ಕ್ರಾಂತಿ ವಿಚಾರಕ್ಕೆ ಮನಸೋತು ನಾವೆಲ್ಲ ಚಳವಳಿಗೆ ಧುಮುಕಿದ್ದೆವು. ಬಹುಕಾಲ ಪೊಲೀಸರ ಬಂಧನದ ಭೀತಿಯಲ್ಲಿ ಓಡಾಡಿದ್ದು ಇನ್ನೂ ಹಚ್ಚಹಸಿರಾಗಿದೆ. ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ವಿರುದ್ಧ ದೊಡ್ಡ ಕ್ರಾಂತಿ ಪ್ರಾರಂಭವಾಗಿ ಪೊಲೀಸರು ಕೂಡ ಸರ್ಕಾರಕ್ಕೆ ವಿರುದ್ಧವಾಗಿರುವ ಮನಃಸ್ಥಿತಿಯನ್ನು ತೋರಿಸಲು ಪ್ರಾರಂಭವಾದಾಗ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿಯನ್ನು ವಾಪಸ್‌ ಪಡೆದರು. ‌

ದೇಶದ ಹಲವು ಮುಖಂಡರು, ವಿರೋಧ ಪಕ್ಷದ ಮಹಾನ್ ನಾಯಕರೆಲ್ಲರನ್ನು ಜೈಲಿಗೆ ಕಳುಹಿಸಿ ಜನರ ಧ್ವನಿಯನ್ನು ಹತ್ತಿಕ್ಕಿ, ಪ್ರಧಾನಿ ಸ್ಥಾನದಲ್ಲಿ ಮುಂದುವರಿದು ಈ ದೇಶವನ್ನು ಆಳಬಲ್ಲೆ ಎಂದು ತಿಳಿದುಕೊಂಡಂತಹ ಇಂದಿರಾ ಗಾಂಧಿ ಅವರಿಗೆ ಇದ್ದ ಭ್ರಮೆ ಹುಸಿಯಾಯಿತು. ವ್ಯಕ್ತಿ ಮತ್ತು ಸಂಘಟನೆಗಿಂತ ನಮ್ಮ ಪ್ರಜಾಪ್ರಭುತ್ವ, ಸಂವಿಧಾನ ಬಹಳ ಗಟ್ಟಿ ಇದೆ ಎಂಬುದನ್ನು ತುರ್ತು ಪರಿಸ್ಥಿತಿ ತೋರಿಸಿಕೊಟ್ಟಿತು. ದುರಾಡಳಿತ, ಸರ್ವಾಧಿಕಾರ, ದೌರ್ಜನ್ಯ, ಹಿಂಸೆ, ಭ್ರಷ್ಟಾಚಾರದಿಂದ ಭಾರತದಂತಹ ದೇಶದ ಆಡಳಿತ ನಡೆಸಲು ಸಾಧ್ಯವಿಲ್ಲ ಎಂಬುದನ್ನೂ ಇದು ತೋರಿಸಿಕೊಟ್ಟಿದೆ. ಜನರಿಂದ, ಜನರಿಗಾಗಿ, ಜನರೇ ಆಡಳಿತ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚಿಲುಮೆಯಾಗಿದ್ದು, ಸ್ವಾತಂತ್ರ್ಯ ಹೋರಾಟ. ಸ್ವತಂತ್ರ ಭಾರತದ ಜೊತೆಗೆ ಪ್ರಜಾಸತ್ತಾತ್ಮಕ ಭಾರತ ಕೂಡ ಜನಿಸಿದೆ ಎನ್ನುವುದನ್ನು ಎಲ್ಲ ಆಡಳಿತಗಾರರೂ ಮನಗಾಣಬೇಕು.

ಜನಪ್ರಿಯತೆಯ ಉತ್ತುಂಗದಲ್ಲಿದ್ದ ಇಂದಿರಾ ಅವರಿಗೆ ಪ್ರಜಾಪ್ರಭುತ್ವ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಗೊತ್ತಾಗಲು 20 ತಿಂಗಳು ಬೇಕಾಯಿತು. ತುರ್ತು ಪರಿಸ್ಥಿತಿಯಿಂದ ಉದ್ಭವಿಸಿದ ಪ್ರಜಾಪ್ರಭುತ್ವದ ಯುದ್ಧವು ಜನಶಕ್ತಿ ಮತ್ತು ರಾಜ್ಯಶಕ್ತಿಯ ನಡುವೆ ನಡೆದ ಸಂಘರ್ಷವಾಗಿತ್ತು. ಇದರಲ್ಲಿ ಜನಶಕ್ತಿಗೆ ಗೆಲುವಾಗಿ ಪ್ರಜಾಪ್ರಭುತ್ವ ಇನ್ನಷ್ಟು ಆಳವಾಗಿ ಗಟ್ಟಿಯಾಗಿ ಬೇರೂರಿರುವುದು ಭವ್ಯ ಭಾರತದ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಈ ಪ್ರಜಾಪ್ರಭುತ್ವದ ಯುದ್ಧದಲ್ಲಿ ಜಯಗಳಿಸಿದ ಜನತೆಯ ರಾಷ್ಟ್ರಪ್ರಜ್ಞೆ ಇಂದಿಗೂ ಜೀವಂತವಾಗಿದೆ. ನ್ಯಾಯಸಮ್ಮತ ಮತ್ತು ಸ್ವತಂತ್ರವಾಗಿರುವ ಪ್ರಜಾಪ್ರಭುತ್ವ ಈ ದೇಶದ ಹಿರಿಮೆ.

ಲೇಖಕ: ಸಂಸದ, ಮಾಜಿ ಮುಖ್ಯಮಂತ್ರಿ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.