ಸಣ್ಣವರಿಗಷ್ಟೇ ಅಲ್ಲ, ದೊಡ್ಡವರಿಗೂ ನೆಲ್ಲಿಕಾಯಿ ಅಂದರೆ ಬಾಯಲ್ಲಿ ನೀರೂರುತ್ತದೆ. ಕೆಲ ಆರೋಗ್ಯ ಸಮಸ್ಯೆಗೆ ನೆಲ್ಲಿಕಾಯಿ ರಾಮಬಾಣ. ಹಾಗೇ ಸೌಂದರ್ಯವರ್ಧಕವೂ ಹೌದು. ನೆಲ್ಲಿಕಾಯಿ ಸೇವನೆಯಿಂದ ಚರ್ಮ ಹೊಳಪಾಗುತ್ತದೆ. ನೆಲ್ಲಿಕಾಯಿ ಎಣ್ಣೆ ಕೂದಲಿಗೆ ಹಚ್ಚುವುದರಿಂದ ಬುಡಕ್ಕೆರಕ್ತದ ಪರಿಚಲನೆಯನ್ನು ಹೆಚ್ಚಿಸಿ, ಕೂದಲಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ದೊರೆಯುತ್ತದೆ. ಕೂದಲನ್ನೂ ಹೊಳೆಯುವಂತೆ ಮಾಡಿ ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.
ಕಪ್ಪು ಕಲೆಗಳನ್ನು ದೂರ ಮಾಡುತ್ತದೆ
ನೆಲ್ಲಿಕಾಯಿ ಜ್ಯೂಸ್ ಮಾಡಿ ಕುಡಿಯುವುದರಿಂದ ಮೈಮೇಲಿನ ಕಪ್ಪು ಕಲೆಗಳು ಕ್ರಮೇಣ ಕಡಿಮೆಯಾಗುತ್ತದೆ. ಇದರ ರಸವನ್ನು ಮುಖಕ್ಕೆ ಹಚ್ಚಿ 30 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ಮೃದು ಚರ್ಮದವರಾದರೆ ರಸ ಹಾಗೂ ನೀರನ್ನು ಮಿಶ್ರ ಮಾಡಿಕೊಂಡು ಹಚ್ಚಿಕೊಳ್ಳುವುದು ಉತ್ತಮ. ಇದುಇದು ಅಕಾಲಿಕ ನೆರಿಗೆಯನ್ನು ತಡೆಗಟ್ಟುತ್ತದೆ. ಬಿಳಿಮಚ್ಚೆ, ಮೊಡವೆಗಳನ್ನು ಕಡಿಮೆ ಮಾಡುತ್ತದೆ. ಉತ್ತಮ ಫಲಿತಾಂಶ ಸಿಗಲು ನಿಯಮಿತವಾಗಿ ಇದನ್ನು ಹಚ್ಚಬೇಕು. ಪ್ರತಿದಿನ ಇದರ ಜ್ಯೂಸ್ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಇದರ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಿದರೆ ಅಸ್ತಮಾ ಕಾಯಿಲೆ ಗುಣವಾಗುತ್ತದೆ. ಉರಿಮೂತ್ರದ ಸಮಸ್ಯೆಯೂ ಕಡಿಮೆಯಾಗುತ್ತದೆ
ನೆಲ್ಲಿಯನ್ನು ಮುಖಕ್ಕೆ ಸ್ಕ್ರಬ್‌ನಂತೆ ಬಳಸಬಹುದು. ಇದು ಮುಖದ ತ್ವಚೆಯಲ್ಲಿನ ಕಲ್ಮಶ, ಧೂಳು ಹೊರ ಹಾಕಿ ಸ್ವಚ್ಛ ಮಾಡುತ್ತದೆ. ಒಂದು ಚಮಚ ನೆಲ್ಲಿಯ ಪುಡಿಯನ್ನು ಸ್ವಲ್ಪ ಬಿಸಿನೀರಿನಲ್ಲಿ ಕಲಸಿ, ಸ್ಕ್ರಬ್‌ನಂತೆ ಬಳಸಬಹುದು. ಐದು ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಬೇಕು. ಇದಕ್ಕೆ ಅರಸಿನದ ಪುಡಿಯನ್ನೂ ಮಿಶ್ರ ಮಾಡಿಕೊಳ್ಳಬಹುದು.
ಕೂದಲು ಉದುರುವಿಕೆಯನ್ನು ತಡೆಯುತ್ತದೆ
ಕೂದಲು ಉದುರುವಿಕೆಯನ್ನು ಕಡಿಮೆ ಮಾಡುವಲ್ಲಿ ನೆಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಒಂದು ಗ್ಲಾಸ್ ನೀರಿಗೆ ಒಂದು ಹಿಡಿಯಷ್ಟು ಒಣ ನೆಲ್ಲಿಕಾಯಿ ಹಾಕಿ ಕುದಿಸಬೇಕು. ಅದು ತಣ್ಣಗಾದ ನಂತರ ನೆಲ್ಲಿಕಾಯಿಗಳನ್ನು ನೀರಿನಿಂದ ಹೊರತೆಗೆದು ಚೆನ್ನಾಗಿ ಕಿವುಚಿ, ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಕೂದಲ ಬುಡದಿಂದ ದಪ್ಪವಾಗಿ ಹಚ್ಚಬೇಕು. ಇದನ್ನು ವಾರಕ್ಕೊಮ್ಮೆ ಮಾಡಿಕೊಂಡರೆ ಉತ್ತಮ ಪರಿಣಾಮ ಕಾಣಬಹುದು. ಇದಲ್ಲದೇ ನೆಲ್ಲಿರಸವನ್ನು ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತೊಳೆದರೆ ಕೂದಲು ಹೊಳಪಾಗುತ್ತದೆ. ಒಣಕೂದಲು ಸಮಸ್ಯೆ ಉಳ್ಳವರೂ ಇದನ್ನು ಬಳಸಬಹುದು. ಇದರ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆಯಲ್ಲದೇ ತಲೆಹೊಟ್ಟುವಿನಂತಹ ಸಮಸ್ಯೆ ದೂರವಾಗುತ್ತದೆ. ಈ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಮಿದುಳಿಗೆ ರಕ್ತಸಂಚಾರ ಸುಗಮಗೊಳ್ಳುತ್ತದೆ.
ಬಾಲನರೆಯನ್ನು ಕಡಿಮೆ ಮಾಡುತ್ತದೆ
ನೆಲ್ಲಿಕಾಯಿಗಳನ್ನು ನೀರಿನಲ್ಲಿ ನೆನೆಸಿ, ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು. ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ, ಲಿಂಬೆ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಎರಡು ಗಂಟೆಗಳ ಬಳಿಕ ಸ್ನಾನ ಮಾಡಬೇಕು. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಸಣ್ಣವಯಸ್ಸಿನಲ್ಲಿ ನರೆತ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ನೆಲ್ಲಿಕಾಯಿ ಎಣ್ಣೆ ಮಾಡಿಕೊಳ್ಳಿ
ಒಂದು ಕಪ್ ನೆಲ್ಲಿಕಾಯಿಗೆ ನೀರು ಬೆರೆಸದೇ ಮಿಕ್ಸರ್‌ನಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ಒಂದು ಪ್ಯಾನ್‌ಗೆ ಕೊಬ್ಬರಿ ಎಣ್ಣೆ ಹಾಗೂ ನೆಲ್ಲಿಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. 10–15 ನಿಮಿಷ ಕುದಿದ ಬಳಿಕ ಅದರಲ್ಲಿನ ನೀರಿನ ಅಂಶ ಆವಿಯಾಗುತ್ತದೆ. ತಳದಲ್ಲಿ ನೆಲ್ಲಿಕಾಯಿ ಕಣಕ ಗಟ್ಟಿಯಾಗಿ ನಿಲ್ಲುತ್ತದೆ. ಅದನ್ನು ತಣ್ಣಗಾಗಲು ಬಿಡಬೇಕು. ಈ ಎಣ್ಣೆಯನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಂಡು ಬಳಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.