
ಸಂವಿಧಾನದ ಬಲದಿಂದ ‘ಜಾತ್ಯತೀತ ಭಾರತ’ ಎಂದು ಸುಲಭವಾಗಿ ಹೇಳುತ್ತೇವೆಯಾದರೂ, ಆ ಆದರ್ಶವನ್ನು ಇಲ್ಲಿಯವರೆಗೂ ಸಮಾಜ ಮುಟ್ಟಿಸಿಕೊಂಡಿರುವುದು ಕಡಿಮೆ. ಜನಸಾಮಾನ್ಯರಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೆಗೆ, ಯಾರೊಬ್ಬರೂ ಜಾತಿಯ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
ಇತ್ತೀಚಿನ ಮೂರು ಘಟನೆಗಳು 25 ವರ್ಷಗಳ ಹಿಂದೆ ನಾನು ಕೇಳಿದ ಕಥೆಯೊಂದನ್ನು ನೆನಪಿಸಿದವು. ಸ್ಪರ್ಧಾತ್ಮಕ ಪರೀಕ್ಷೆ ಉತ್ತೀರ್ಣನಾಗಿ ಅಧಿಕಾರಿಯಾಗಿ ನೇಮಕವಾಗಿರುವ ಬುದ್ಧಿವಂತ ಮತ್ತು ಬಿಚ್ಚು ಮಾತಿನ ದಲಿತ ಯುವಕ ನನಗೆ ಮೊದಲಿನಿಂದಲೂ ಗೊತ್ತು. ಹೋಲಿಕೆಯಲ್ಲಿ ತನಗಿಂತ ಸ್ವಲ್ಪ ಉತ್ತಮ ಹಿನ್ನೆಲೆಯ ಹುಡುಗಿಯನ್ನು ಮದುವೆಯಾದ ಬಳಿಕ ನಾನು ಅವರನ್ನು ಭೇಟಿಯಾಗಿದ್ದೆ. ಆ ಹುಡುಗಿಗೆ ‘ಎಸ್‌ಸಿ’ ಎಂಬ ಹಣೆಪಟ್ಟಿ ಕಳಚಿ ‘ಸಾಮಾನ್ಯ’ ಅಧಿಕಾರಿ ವರ್ಗದ ಜೊತೆಗೆ ಸೇರಿಕೊಳ್ಳುವ ಇಚ್ಛೆ ಇತ್ತು. ಬಹುಶಃ ಆತನಿಗೂ ಇತ್ತೇನೊ. ಆತನ ಸ್ಥಿತಿಯ ಕುರಿತು ಏನನ್ನಾದರೂ ನಾನು ಹೇಳುವ ಮುನ್ನವೇ ‘ಹೇಗೋ ಅಡ್ಜಸ್ಟ್‌ಮೆಂಟ್ ಮಾಡ್ಕೊಂಡೆ ಸಾರ್’ ಅಂದ. ಸೇರ್ಪಡೆಯೊ ಅಂತರ್ಗತಗೊಳಿಸುವಿಕೆಯೊ ಶರಣಾಗತಿಯೊ, ಯಾವುದಾದರೂ ಆಗಬಹುದಾದ ಆತನ ಭಾರತೀಯ ಅಭಿವ್ಯಕ್ತಿಯ ಹೊಂದಾಣಿಕೆ ಗುಣಕ್ಕೆ ಚಕಿತನಾದೆ.
ಕೆಲವು ವರ್ಷಗಳ ಬಳಿಕ ಮತ್ತೆ ಅವರ ಮನೆಗೆ ಹೋದಾಗ ಪಡಸಾಲೆಯಲ್ಲಿ ಅಂಬೇಡ್ಕರ್ ಭಾವಚಿತ್ರ ನೋಡಿ ಆಶ್ಚರ್ಯವಾಯಿತು. ನನ್ನ ಕಣ್ಣುಗಳಲ್ಲಿದ್ದ ಪ್ರಶ್ನೆ ಅವರಿಗೆ ಅರ್ಥವಾಯಿತು ಮತ್ತು ನಾನು ಏನನ್ನಾದರೂ ಕೇಳುವ ಮುನ್ನವೇ ಅವರೇ ವಿವರಿಸಿದರು. ತಮ್ಮ ಮೊದಲ ಮಗು ನಡೆಯಲು ಆರಂಭಿಸಿದ್ದನ್ನು ಅಧಿಕಾರಿಗಳ ಕಾಲೊನಿಯ ತಮ್ಮ ನೆರೆಯವರೊಂದಿಗೆ ಹಂಚಿಕೊಳ್ಳಲು ಅವರು ಬಯಸಿದರು. ಅದಕ್ಕಾಗಿ ತಮ್ಮ ಪದ್ಧತಿಯಂತೆ ಬೆಲ್ಲ ಮತ್ತು ಕಡಲೆಯನ್ನು ಎಲ್ಲರಿಗೂ ಹಂಚಿದರು. ಸಂಜೆಯ ವಾಯುವಿಹಾರಕ್ಕೆ ಹೋಗಿದ್ದಾಗ, ಒಬ್ಬರಿಗಿಂತ ಹೆಚ್ಚು ನೆರೆಮನೆಯವರು ‘ಬೆಲ್ಲ–ಕಡಲೆ’ಯನ್ನು ಮನೆಮುಂದೆ ಇದ್ದ ಕಸದ ಗುಪ್ಪೆಗೆ ಎಸೆದಿರುವುದು ಕಂಡಿತು. ಯಾರೊಬ್ಬರೂ ಒಂದೇ ಒಂದು ಮಾತು ಆಡಿರಲಿಲ್ಲ, ಜಾತಿನಿಂದನೆಯಂತೂ ಇರಲೇ ಇಲ್ಲ. ಹಾಗಿದ್ದರೂ ಕ್ಷಣಮಾತ್ರದಲ್ಲಿ ಆ ಸತ್ಯ ಅವರಿಗೆ ಅರಿವಾಯಿತು: ‘ಈ ಜಾತಿ ಎಂಬುದು ಇಲ್ಲಿಂದ ತೊಲಗುವುದೇ ಇಲ್ಲ’. ಅವರು ಕಳೆದುಕೊಳ್ಳಲು ಬಯಸಿದ್ದ ಹಣೆಪಟ್ಟಿ ಅವರನ್ನು ಬಿಟ್ಟುಹೋಗಲು ಸಿದ್ಧವಿಲ್ಲ. ಹಾಗಾಗಿ, ಅದೇ ಜಾತಿಯನ್ನು ಅವರು ಅಪ್ಪಿಕೊಂಡರು.
ಮೂರು ಸರಳ ವಿಚಾರಗಳನ್ನು ಮನದಟ್ಟು ಮಾಡುವುದಕ್ಕಾಗಿ ಈ ಕಥೆಯನ್ನು ನಾನು ಅಸಂಖ್ಯ ಬಾರಿ ಹೇಳಿದ್ದೇನೆ. ಮೊದಲನೆಯದು, ಜಾತಿ ಎಂಬುದು ನಮ್ಮ ಭೂತಕಾಲ ಅಲ್ಲ, ಅದು ನಮ್ಮೊಂದಿಗೇ ವರ್ತಮಾನದಲ್ಲಿ ಇರುವ ವಾಸ್ತವ. ಭವಿಷ್ಯದಲ್ಲಿಯೂ ಇದು ಜೊತೆಯಲ್ಲಿಯೇ ಇರಲಿದೆ ಎಂಬ ಭೀತಿಯೂ ಇದೆ. ಎರಡನೆಯದಾಗಿ, ಇದು ಗ್ರಾಮೀಣ ಪ್ರದೇಶಗಳಿಗೆ ಅಥವಾ ಸಾಂಪ್ರದಾಯಿಕವಾಗಿ ‘ಹಿಂದುಳಿದ’ ಪ್ರದೇಶಗಳಿಗೆ ಸೀಮಿತವೂ ಅಲ್ಲ; ನಮ್ಮ ಸಮಾಜದ ಆಧುನಿಕ ವರ್ಗಗಳಲ್ಲಿ ಜಾತಿಯು ಹೊಸ ರೂಪ ಧರಿಸಿ ಬಂದಿದೆ. ಜಾತಿ ಆಧಾರಿತ ದೌರ್ಜನ್ಯ ಮತ್ತು ಅನ್ಯಾಯ ಬಹಿರಂಗವಾಗಿ ಗೋಚರಿಸುವುದು ಬಹಳ ವಿರಳ. ಪದರ ಪದಗಳಲ್ಲಿ ಮುಚ್ಚಿರುವ ಇದನ್ನು ಕಾಣಬೇಕಾದರೆ ಪದರಗಳನ್ನು ಬಿಚ್ಚಬೇಕಾಗುತ್ತದೆ. ಮೂರನೆಯದಾಗಿ, ಜಾತಿಯು ಅಂಟಿನಂತೆ, ಅದರ ಪರಿಣಾಮವನ್ನು ನಿರ್ಮೂಲನೆ ಮಾಡುವುದು ಸರಳವಲ್ಲ. ಶಿಕ್ಷಣ ಮತ್ತು ಉದ್ಯೋಗಗಳು ಜಾತಿಯ ಅಸಮಾನತೆಯನ್ನು ಎದುರಿಸಲು ಅಗತ್ಯ. ಆದರೆ, ಅವಷ್ಟೇ ಸಾಲದು.
ಈ ಮೂರೂ ಪಾಠಗಳು ಇತ್ತೀಚೆಗಿನ, ಮೂರು ಘಟನೆಗಳಿಂದಾಗಿ ನನ್ನ ಮನಸ್ಸಿಗೆ ಬಂದವು. ಆ ಘಟನೆಗಳೆಂದರೆ: ರಾಯಬರೇಲಿಯಲ್ಲಿ ಹರಿಓಂ ವಾಲ್ಮೀಕಿ ಅವರ ಮೇಲೆ ಹಲ್ಲೆ, ಚಂಡೀಗಢದಲ್ಲಿ ಐಪಿಎಸ್ ಅಧಿಕಾರಿ ವೈ. ಪೂರನ್ ಕುಮಾರ್ ಆತ್ಮಹತ್ಯೆ ಮತ್ತು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯಾಲಯದಲ್ಲಿ ಚಪ್ಪಲಿ ಎಸೆಯುವ ಯತ್ನ.
ಇವರೆಲ್ಲರೂ ದಲಿತರು ಎಂಬುದನ್ನು ಬಿಟ್ಟರೆ, ಸಂಪೂರ್ಣವಾಗಿ ಭಿನ್ನವಾದ ಮೂವರು ವ್ಯಕ್ತಿಗಳಿಗೆ ಸಂಬಂಧಿಸಿದ ಈ ಘಟನೆಗಳನ್ನು ಜೋಡಿಸುವ ತಂತು ಯಾವುದೂ ಇಲ್ಲ. ಸಂತ್ರಸ್ತರು ದಲಿತರು ಎಂಬ ಒಂದು ಸತ್ಯವು ಈ ಎಲ್ಲ ಪ್ರಕರಣಗಳನ್ನು ಜಾತಿ ಆಧಾರಿತ ದೌರ್ಜನ್ಯದ ವರ್ಗಕ್ಕೆ ಸೇರಿಸುವುದಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಹರಿಓಂ ಮೇಲೆ ಹಲ್ಲೆ ನಡೆಯಲು ಆತ ದಲಿತ ಎಂಬುದು ಕಾರಣವಲ್ಲ; ಬದಲಿಗೆ ಆತ ಕಳ್ಳ ಎಂಬ ಸಂದೇಹವಿದ್ದ ಜನರ ಗುಂಪಿಗೆ ಸಮಂಜಸ ಉತ್ತರ ನೀಡಿಲ್ಲ ಎಂಬುದು ಕಾರಣ. ನ್ಯಾಯಮೂರ್ತಿ ಗವಾಯಿ ಅವರ ಮೇಲೆ ದಾಳಿ ನಡೆಸಿದಾತ ಅವರ ಜಾತಿಯ ಹೆಸರು ಹೇಳಿಲ್ಲ, ಬದಲಿಗೆ ಹಿಂದೂ ಧರ್ಮಕ್ಕೆ ಅವರು ಅವಮಾನ ಮಾಡಿದ್ದಾರೆ ಎಂದ. ಅಧಿಕಾರಶಾಹಿಯಲ್ಲಿ ಕೇಳಿಸಿದ ಪಿಸುಗುಡುವಿಕೆ ಪ್ರಕಾರ, ಪೂರನ್ ಕುಮಾರ್ ಮರಣ ಪತ್ರದಲ್ಲಿ ಉಲ್ಲೇಖಿಸಿದ ಜಾತಿ ತಾರತಮ್ಯಕ್ಕಿಂತ ಅಧಿಕಾರಿಗಳ ನಡುವಿನ ಸ್ಪರ್ಧೆಯೇ ಸಾವಿಗೆ ಕಾರಣ. ನಾವು ಇದನ್ನು ನಂಬಬೇಕು ಎಂದು ಪ್ರಬಲ ಸಂಕಥನವನ್ನು ನಮ್ಮ ಮೇಲೆ ಹೇರಲಾಗಿದೆ. ಪ್ರತಿ ಪ್ರಶ್ನೆಗಳನ್ನು ಕೇಳುವ ಮೂಲಕ ಈ ಕೃತ್ರಿಮವನ್ನು ನಾವು ಸುಲಿದು ಹಾಕಬಹುದು: ಈ ಎಲ್ಲರೂ ದಲಿತರು ಅಲ್ಲದೇ ಇದ್ದರೆ ಏನಾಗುತ್ತಿತ್ತು? ಅವರಿಗೆ ಇದೇ ಗತಿ ಬರುತ್ತಿತ್ತೇ? ಕಳ್ಳ ಎಂಬ ಸಂದೇಹದಲ್ಲಿ ಗುಂಪು ಹರಿಓಂನನ್ನು ಸುತ್ತುವರಿದಿದ್ದಾಗ ಆತ ತಾನು ಠಾಕೂರ್ ಎಂದು ಕೂಗಿದ್ದರೆ ಏನಾಗುತ್ತಿತ್ತು? ಸ್ವಲ್ಪ ಅವಮಾನ ಮತ್ತು ಹೊಡೆತದಿಂದ ತಪ್ಪಿಸಿಕೊಳ್ಳುವುದು ಸಾಧ್ಯವಾಗದಿರಬಹುದಿತ್ತು. ಆದರೆ, ಯಾರೂ ಸಹಾಯಕ್ಕೆ ಇಲ್ಲದೆ ಆತ ಹೊಡೆತ ತಿಂದು ಸಾಯುತ್ತಿದ್ದನೇ? ಮರುದಿನ ಪೊಲೀಸರು ಬರುವವರೆಗೆ ದೇಹವನ್ನು ಕೊಳೆಯಲು ಬಿಡಲಾಗುತ್ತಿತ್ತೇ? ಕ್ರಮ ಕೈಗೊಳ್ಳಲು ಪೊಲೀಸರು ಮತ್ತು ಆಡಳಿತ ವ್ಯವಸ್ಥೆಯು ಇಷ್ಟೊಂದು ವಿಳಂಬ ಮಾಡುತ್ತಿತ್ತೇ? ಹರಿಓಂಗೆ ಈ ಗತಿ ಬರಲು ಆತ ಕಳ್ಳ ಎಂಬುದಾಗಲಿ, ಮಾನಸಿಕ ಅಸ್ವಸ್ಥ ಎಂಬುದಾಗಲಿ ಕಾರಣ ಅಲ್ಲ, ಬದಲಿಗೆ ಆತ ವಾಲ್ಮೀಕಿ ಎಂಬುದು ಕಾರಣ.
ಅಥವಾ, ಮುಖ್ಯ ನ್ಯಾಯಮೂರ್ತಿ ಗವಾಯಿ ಅವರಿಗೆ ನ್ಯಾಯಾಲಯದಲ್ಲಿ ಏನಾಯಿತು ಎಂಬುದನ್ನು ನೋಡಿ. ತಲೆಕೆಟ್ಟ ವ್ಯಕ್ತಿಯೊಬ್ಬ ಯಾವುದೇ ನ್ಯಾಯಾಲಯದಲ್ಲಿ ನ್ಯಾಯಮೂರ್ತಿಯ ಸಾಮಾಜಿಕ ಹಿನ್ನೆಲೆ ಏನು ಎಂಬುದನ್ನು ನೋಡದೆಯೇ ಹೀಗೆ ಮಾಡಬಹುದು ಎಂಬುದನ್ನು ಅಲ್ಲಗಳೆಯಲಾಗದು. ಬೇರೆ ಸಂದರ್ಭಗಳಲ್ಲಿ ‘ಸಮತೋಲನ’ ಹೊಂದಿದ್ದ ವಕೀಲನೊಬ್ಬನ ಕಣ್ಣಿನಲ್ಲಿ ಮುಖ್ಯ ನ್ಯಾಯಮೂರ್ತಿಯ ಘನತೆ ಅಷ್ಟೊಂದು ಕುಗ್ಗಲು ಕಾರಣವೇನು? ಸನಾತನ ಧರ್ಮಕ್ಕೆ ಮಾಡಿದ್ದಾರೆ ಎನ್ನಲಾದ ಅವಮಾನವು ಧಾರ್ಮಿಕ ಪರಂಪರೆಗಷ್ಟೇ ಸೀಮಿತವೇ? ಅಥವಾ ಅವರು ಹೇಳಿದ್ದರಲ್ಲಿ ಜಾತಿ ಶ್ರೇಷ್ಠತೆಯ ಉಪಪಠ್ಯವೂ ಇದೆಯೇ? ಅಂದರೆ, ಏನು ಹೇಳಿದರು ಎನ್ನುವುದಕ್ಕಿಂತ ಯಾರು ಹೇಳಿದರು ಎಂಬುದಕ್ಕೆ ಆತ ನೀಡಿದ ಪ್ರತಿಕ್ರಿಯೆ ಅಲ್ಲವೇ ಇದು? ಎನ್. ಸುಕುಮಾರ್ ಹೇಳುವಂತೆ ಇದು, ನಮ್ಮ ಕಾಲದಲ್ಲಿ ಸಹಜವೇ ಆಗಿರುವ ‘ದ್ವೇಷದ ಜಾತೀಯತೆಯ ಅಭಿವ್ಯಕ್ತಿ’.
ಇಂತಹುದೊಂದು ಘಟನೆಯು ಡಿ.ವೈ. ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿ ಆಗಿದ್ದಾಗ ನಡೆದಿದ್ದರೆ ಮತ್ತು ಚಪ್ಪಲಿ ಎಸೆಯಲು ಯತ್ನಿಸಿದಾತ ಮುಸ್ಲಿಂ ಆಗಿದ್ದರೆ ಏನಾಗುತ್ತಿತ್ತು? ಇಡೀ ದೇಶವು ಇಷ್ಟೊಂದು ನಿಸ್ತೇಜವಾಗಿ ಪ್ರತಿಕ್ರಿಯೆ ನೀಡುತ್ತಿತ್ತೇ? ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಂಸ್ಥೆಗಳು ಈಗ ನಡೆದುಕೊಂಡ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದವೇ? ಸುದ್ದಿ ವಾಹಿನಿಗಳು ಇದನ್ನು ದಿನಗಟ್ಟಲೆ ಹಬ್ಬ ಮಾಡುತ್ತಿರಲಿಲ್ಲವೇ? ಆರೋಪಿಯು ಕೆಲವೇ ಕೆಲವು ಸೌಮ್ಯ ಪ್ರಶ್ನೆಗಳಿಗೆ ಉತ್ತರಿಸಿ ನಡೆದುಹೋಗುವುದನ್ನು ನಾವು ಕಾಣಲಾಗುತ್ತಿತ್ತೇ? ನ್ಯಾಯಮೂರ್ತಿ ಗವಾಯಿ ಅವರು ನ್ಯಾಯಾಂಗದ ಅತ್ಯುನ್ನತ ಹುದ್ದೆಗೆ ಏರಿರಬಹುದು. ಆದರೆ, ಅದು ಸಾಮಾಜಿಕ ಸ್ಥಾನಮಾನವನ್ನು ಬದಲಾಯಿಸದು ಎಂಬುದು ಇದರಿಂದ ತಿಳಿಯುತ್ತದೆ.
ಕೊನೆಯದಾಗಿ, ಪ್ರಶ್ನೆಗಳನ್ನು ಕೇಳೋಣ: ಪೂರನ್ ಕುಮಾರ್ ದಲಿತ ಅಲ್ಲದೇ ಇದ್ದರೆ ಏನಾಗುತ್ತಿತ್ತು? ಅಧಿಕಾರಿಗಳ ನಡುವೆ ಪೈಪೋಟಿ ಮತ್ತು ಅಪಥ್ಯ ಎನಿಸುವ ಧ್ವನಿಗಳಿಗೆ ಕಿರುಕುಳ ನೀಡುವುದು ಅಧಿಕಾರಶಾಹಿ ಜಗತ್ತಿನಲ್ಲಿ ಹೊಸದೇನೂ ಅಲ್ಲ. ಆದರೆ, ಪೂರನ್ ಕುಮಾರ್ ಅವರ ಮರಣಪತ್ರವು ತಮ್ಮ ಮೇಲಧಿಕಾರಿಗಳು ಪದೇ ಪದೇ ತಮ್ಮನ್ನು ಏಕಾಂಗಿಯಾಗಿಸಿ ಮತ್ತು ಮೂಲೆಗುಂಪು ಮಾಡಿದ ಕಥೆ ಹೇಳುತ್ತದೆ. ಏಕಾಂಗಿಯಾಗಿಸುವಿಕೆಯ ಹಿಂದೆ ಭಿನ್ನ ದನಿಯನ್ನು ದೂರ ಇರಿಸುವ ಪ್ರಯತ್ನ ಮಾತ್ರ ಇದೆಯೇ ಅಥವಾ ಸಾಮಾಜಿಕ ಮೂಲೆಗುಂಪು ಮಾಡುವಿಕೆಯೂ ಇದೆಯೇ? ತಮ್ಮದೇ ಸಮುದಾಯದ ಅಧಿಕಾರಿಗಳು ಅವರ ಸುತ್ತ ಇದ್ದಿದ್ದರೆ ಅವರು ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತಿತ್ತೇ? ತಮಗೆ ಆದ ಕಿರುಕುಳಕ್ಕೆ ಜಾತಿ ತಾರತಮ್ಯವೇ ಕಾರಣ ಎಂದು ಅವರೇ ಗುರುತಿಸಿದ್ದಾರೆ. ಈ ಘಟನೆಯ ಕುರಿತು ವ್ಯಾಪಕವಾದ ಕಳಕಳಿ ವ್ಯಕ್ತವಾಗಿದೆ ಮತ್ತು ಘಟನೆಗೆ ಪ್ರಚಾರವೂ ಸಿಕ್ಕಿದೆ. ಐಎಎಸ್ ಅಧಿಕಾರಿಗಳ ಸಂಘವು ಶೋಕಪತ್ರ ಬರೆದುಕೊಟ್ಟಿದೆ; ಐಪಿಎಸ್ ಅಧಿಕಾರಿಗಳ ಸಮೂಹವು ಶಿಷ್ಟಾಚಾರದ ಸಂತಾಪ ಸೂಚಿಸಿದೆ. ಹಾಗಿದ್ದರೂ ಈ ಘಟನೆಯ ಹಿಂದೆ ಜಾತಿ ತಾರತಮ್ಯದ ಆಯಾಮವೂ ಇದೆ ಎಂಬುದನ್ನು ಯಾರೂ ಗುರುತಿಸಲೂ ಇಲ್ಲ, ಆ ಕುರಿತು ಚರ್ಚೆಯೂ ಆಗಿಲ್ಲ. ಸುಮೀತ್ ಮಸ್ಕರ್ ಮತ್ತು ಪ್ರಬೋಧನ್ ಪಾಲ್ ಅವರು ಹೇಳಿರುವಂತೆ, ‘ಜಾತಿರಹಿತ ಅಧಿಕಾರಿ ಎಂಬುದು ಮಿಥ್ಯೆ’. ನಾನು ಕೇಳಿದ ಕಡಲೆ–ಬೆಲ್ಲದ ಕಥೆಯು ಬಾಬಾಸಾಹೇಬ್ ಅವರ ಚಿತ್ರವನ್ನು ಮತ್ತೆ ಹಾಕಲು ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.