ADVERTISEMENT

ವಿಶ್ಲೇಷಣೆ | ಸಿಎಂ: ಆಯ್ಕೆಯೋ? ನೇಮಕವೋ?

ಚಂದ್ರಕಾಂತ ವಡ್ಡು
Published 19 ಅಕ್ಟೋಬರ್ 2025, 23:30 IST
Last Updated 19 ಅಕ್ಟೋಬರ್ 2025, 23:30 IST
   
ಸ್ವಾತಂತ್ರ್ಯ ಮತ್ತು ‍ಪ್ರಜಾಪ್ರಭುತ್ವದ ಪರಿಕಲ್ಪನೆಗಳು ಅಣಕಕ್ಕೆ ಒಳಗಾಗುತ್ತಿರುವ ನಿದರ್ಶನಗಳನ್ನು ವರ್ತಮಾನದಲ್ಲಿ ಮತ್ತೆ ಮತ್ತೆ ಕಾಣುತ್ತಿದ್ದೇವೆ. ಮುಖ್ಯಮಂತ್ರಿಗೆ ಇರುವ ಪರಮಾಧಿಕಾರದಲ್ಲಿ ಪಕ್ಷದ ಹೈಕಮಾಂಡ್‌ ಮಾಡುವ ಹಸ್ತಕ್ಷೇಪವೂ ಪ್ರಜಾಸತ್ತಾತ್ಮಕ ಮೌಲ್ಯಗಳ ಉಲ್ಲಂಘನೆಯೇ.

ಕಾರ್ಪೊರೇಟ್ ಅತಿರೇಕ, ದ್ವೇಷ ರಾಜಕಾರಣ ಮತ್ತು ಪ್ರಭುತ್ವದ ದೌರ್ಜನ್ಯವನ್ನು ಸಬೂಬುಗಳ ಮೂಲಕ ಸಮರ್ಥಿಸಲು ಹಾಗೂ ಸತ್ಯವನ್ನು ಸುಳ್ಳೆಂದು, ಸುಳ್ಳನ್ನು ಸತ್ಯವೆಂದು ಸಾಧಿಸಲು ‘ನೆಪ ಸ್ವಾತಂತ್ರ್ಯ’ ಸುಲಭವಾಗಿ ಲಭ್ಯವಾಗುತ್ತಿದೆ. ಆದರೆ, ಜಾರಿಯಲ್ಲಿರಬೇಕಾದ ‘ನೈಜ ಸ್ವಾತಂತ್ರ್ಯ’ವನ್ನು ಮೊಟಕುಗೊಳಿಸುವ ಸಕಲ ಕಾರ್ಯತಂತ್ರಗಳನ್ನು ಪ್ರಯೋಗಿಸುವುದು ಪ್ರಭುತ್ವಗಳ ಅಲಿಖಿತ ನೀತಿಯೇ ಆಗಿದೆ. ಹಾಗೆಯೇ ಸಮಾನತೆ ಮತ್ತು ಹೊಣೆಗಾರಿಕೆಯ ಆಶಯ ಹೊತ್ತ ಪ್ರಜಾಪ್ರಭುತ್ವದ ಚೈತನ್ಯ ಕಾಲಾನುಕ್ರಮೇಣ ದಾಖಲಿಸುತ್ತಿರುವ ಕುಸಿತದ ವೇಗ ಗಾಬರಿ ಹುಟ್ಟಿಸುವಂತಿದೆ. ಸ್ಪಷ್ಟವಾಗಿ ಹೇಳುವುದಾದರೆ, ಪ್ರಜಾಪ್ರಭುತ್ವ ಹೆಸರಿನ ವ್ಯವಸ್ಥೆಗೆ ಚುನಾವಣಾ ಪ್ರಕ್ರಿಯೆಯ ನಂತರದ ಪ್ರಬುದ್ಧತೆಯನ್ನು ತಲುಪಲು ದಶಕಗಳ ನಂತರವೂ ಸಾಧ್ಯವಾಗಿಲ್ಲ! ಸಾಂವಿಧಾನಿಕ ಸಂಸ್ಥೆಗಳು ದುರ್ಬಲವಾಗಿ, ಮಾಧ್ಯಮ ರಾಜಿಯಾಗಿ, ನಾಗರಿಕರು ಮೌನಿಗಳಾದರೆ ಇನ್ನೇನು ಆಗಲು ಸಾಧ್ಯ?

ಕರ್ನಾಟಕದ ರಾಜಕೀಯ ಮತ್ತು ಆಡಳಿತದ ಅಂಗಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಅವಲೋಕಿಸಿದರೆ, ಆಧುನಿಕ ವ್ಯವಸ್ಥೆಯ ವಿಕಾಸ–ವಿವೇಕಕ್ಕೆ ದಿಕ್ಸೂಚಿಗಳಾಗಬೇಕಿದ್ದ ಸ್ವಾತಂತ್ರ್ಯ ಮತ್ತು
ಪ್ರಜಾತಂತ್ರ ಪರಿಕಲ್ಪನೆಗಳು ಆಚರಣೆಯಲ್ಲಿ ತಲುಪಿರುವ ಅಧೋಗತಿಯನ್ನು ಗುರ್ತಿಸಬಹುದು.

ರೈತರ ಪರವಾಗಿ ನ್ಯಾಯ ಕೇಳಿದ ಕೆ.ಆರ್.ಎಸ್.ಪಕ್ಷದವರ ಮೇಲೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ಎಸಗಿದ ದೌರ್ಜನ್ಯದ ದೃಶ್ಯಗಳು ಜಾರಿಯಲ್ಲಿರುವ ದುರಾಡಳಿತದ ದುಷ್ಟಮುಖವನ್ನು ನಿರೂಪಿಸುತ್ತವೆ. ನ್ಯಾಯಕ್ಕಾಗಿ ಪ್ರತಿಭಟನೆಗೆ ಮುಂದಾಗುವವರ ದನಿ ಅಡಗಿಸಲು ಪೊಲೀಸರು ಎಸಗುತ್ತಿರುವ ದಬ್ಬಾಳಿಕೆ ಪ್ರಕರಣಗಳು ರಾಜ್ಯದಾದ್ಯಂತ ವರದಿಯಾಗುತ್ತಿವೆ. ಧರ್ಮಸ್ಥಳ ಪ್ರಕರಣದಲ್ಲಿ ಹೋರಾಟಗಾರರನ್ನೇ ಆರೋಪಿಗಳನ್ನಾಗಿಸುವ, ದೂರುದಾರರ ವಿರುದ್ಧವೇ ತನಿಖೆ ನಡೆಸುವ ಸಂಶಯಾಸ್ಪದ ನಿಲುವನ್ನು ಸರ್ಕಾರ ತಳೆದಿದೆ. ಹೀಗೆ ಪ್ರತಿಭಟಿಸುವ, ದೂರು ನೀಡುವ ಪ್ರಜೆಗಳ ಪ್ರಾಥಮಿಕ ಸ್ವಾತಂತ್ರ್ಯವನ್ನೇ ಕಸಿಯುವ ಪ್ರಜಾಡಳಿತ ಜಾರಿಯಲ್ಲಿದೆ.

ADVERTISEMENT

ಗೌರವಯುತ ಬದುಕಿನ ಹಕ್ಕನ್ನೇ ಮುಕ್ಕಿ ತಿನ್ನುವ ವ್ಯವಸ್ಥೆಯನ್ನು ‘ಪ್ರಜಾ’ಪ್ರಭುತ್ವ ಹೆಸರಿನಿಂದ ಸಮರ್ಥಿಸುವ ವಿರೋಧಾಭಾಸ ಎದುರಾಗಿದೆ. ಜನಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು ಮರೆಮಾಚಲೋ ಎಂಬಂತೆ ಆಡಳಿತ ಮತ್ತು ವಿರೋಧ ಪಕ್ಷಗಳು ಜಂಟಿಯಾಗಿ ಜಾತಿ–ಧರ್ಮ ಕೇಂದ್ರಿತ ಭಾವನಾತ್ಮಕ ವಿಷಯಗಳನ್ನು ಚರ್ಚೆಗಿರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ನಾಡಿನ ವಿವೇಕ ಪ್ರಜ್ಞೆ ಮೆರೆಯಬೇಕಿದ್ದ ಸಾಹಿತ್ಯವಲಯ ಕೂಡ ಪ್ರಭುತ್ವದ ಸಮರ್ಥನೆಗೆ ತನ್ನ ಸೃಜನಶೀಲತೆಯನ್ನು ವ್ಯಯಿಸುತ್ತಿರುವುದು ಸಾರ್ವತ್ರಿಕವಾಗಿ ಜಾಗೃತವಾಗಿರುವ ಸ್ವಾರ್ಥ ಮತ್ತು ಜಾತಿ ಪ್ರಜ್ಞೆಗೆ ಪ್ರತೀಕವಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅವರಂತಹ ಪ್ರಗತಿಪರ ಸಾಹಿತಿಯೇ, ‘ಡಿಕೆಶಿಗೆ 2023ರಲ್ಲೇ ಸಿ.ಎಂ. ಸ್ಥಾನ ತಪ್ಪಿತು’ ಎಂದು ಬಹಿರಂಗವಾಗಿ ಕೊರಗುವಷ್ಟು ಕಾಂಗ್ರೆಸ್ ಪಕ್ಷದ ಬಣರಾಜಕಾರಣದ ಒಳಸುಳಿಗಳು ಬುದ್ಧಿಜೀವಿಗಳನ್ನು ವ್ಯಾಪಿಸಿರುವುದು ಆತಂಕಕಾರಿ ಬೆಳವಣಿಗೆ.

ಇತ್ತೀಚೆಗೆ ನೇಪಾಳಕ್ಕೆ ಭೇಟಿ ನೀಡಿದ್ದ ಪತ್ರಕರ್ತ ಮಿತ್ರರಿಗೆ ಅಲ್ಲಿಯ ಯುವಕನೊಬ್ಬ, ‘ನಾವಿಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವಾಗ, ಭಾರತದಲ್ಲಿ ನೀವೇಕೆ ಧಾರ್ಮಿಕ ಭಾವನೆಗಳ ಸಂಘರ್ಷದಲ್ಲಿ ತೊಡಗಿದ್ದೀರಿ?’ ಎಂದು ಪ್ರಶ್ನಿಸಿದನಂತೆ. ‘ಜೆನ್‌–ಝೀ’ ಕ್ರಾಂತಿ ನಂತರ ನೇಪಾಳದ ಸರ್ಕಾರಿ ಅಧಿಕಾರಿಗಳು, ವಿಶೇಷವಾಗಿ ಪೊಲೀಸರು ಲಂಚ ಸ್ವೀಕರಿಸಲು ಹೆದರುವ ಸ್ಥಿತಿ ಏರ್ಪಟ್ಟಿದೆ. ನೇಪಾಳದ ಬೆಳವಣಿಗೆಯು ನಾಡಿನ ಯುವ ಮನಸ್ಸುಗಳಲ್ಲಿ ಹೊಸಬಗೆಯ ಕಿಚ್ಚಿಗೆ ಪ್ರೇರಣೆಯಾದರೆ ಅಚ್ಚರಿಯಿಲ್ಲ.

ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಧಾರವಾಡದಲ್ಲಿ ಸಂಘಟಿಸಿದ್ದ ಸಮಾವೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ‘ಯುವಜನರಲ್ಲಿ ನಿರಾಶೆ ಮೂಡಿದಷ್ಟೂ ಸಮಾಜದ ಶಾಂತಿ ಕದಡುತ್ತದೆ’ ಎಂದು ಎಚ್ಚರಿಸಿದ್ದಾರೆ. ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠರು ಸ್ವಾತಂತ್ರ‍್ಯ ಹೋರಾಟದ ಮಾದರಿಯಲ್ಲಿ ಗಟ್ಟಿ ಹೋರಾಟ ಕಟ್ಟಲು ಯುವಜನರಿಗೆ ಕರೆ ಕೊಟ್ಟಿದ್ದಾರೆ. ಹೊಸಪೇಟೆ ಮತ್ತು ಕಲಬುರಗಿಯಲ್ಲಿಯೂ ನಿರುದ್ಯೋಗಿ ಯುವಪಡೆಯ ಹತಾಶೆ ಮತ್ತು ಪ್ರತಿಭಟನೆ ಪ್ರಕಟವಾಗಿದೆ.

ಸಮಕಾಲೀನ ರಾಜಕಾರಣದಲ್ಲಾದರೂ ಸಂವಿಧಾನದ ಆಶಯಗಳಿಗೆ, ಮೌಲ್ಯಗಳಿಗೆ ಮಣೆ ಹಾಕುವ ಸಜ್ಜನಿಕೆ ಇದೆಯೇ ಎಂದು ಪರಿಶೀಲಿಸಿದರೆ ನಿರಾಶೆಯೇ ಎದುರಾಗುತ್ತದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವಾಗ ಏರ್ಪಟ್ಟ ಚೌಕಾಸಿ ಆಟ, ಪ್ರಜಾತಂತ್ರದ ಸ್ಫೂರ್ತಿಯನ್ನು ಅಷ್ಟರ ಮಟ್ಟಿಗೆ ಮಂಕಾಗಿಸಿತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತದ್ವಿರುದ್ಧ ಹೇಳಿಕೆಗಳಿಂದಾಗಿ ಮುಖ್ಯಮಂತ್ರಿ ಆಯ್ಕೆಯ ಸಾಂವಿಧಾನಿಕ ಪ್ರಕ್ರಿಯೆಯ ರೀತಿ–ನೀತಿಯನ್ನು ಮನವರಿಕೆ ಮಾಡಿಕೊಳ್ಳುವ, ಸಂಬಂಧಿಸಿದವರಿಗೆ ಮನವರಿಕೆ ಮಾಡಿಸುವ ಅವಕಾಶ ಸಾರ್ವಜನಿಕ ವೇದಿಕೆಗಳಿಗೆ ಲಭಿಸಿದೆ.

‘ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಯ ಆಯ್ಕೆ ವಿಚಾರವು ಬೆಂಬಲಿಸುವ ಶಾಸಕರ ಸಂಖ್ಯಾಬಲದಿಂದ ನಿರ್ಧಾರವಾಗುವುದಿಲ್ಲ; ಇದನ್ನು ನಿರ್ಧರಿಸುವುದು ಹೈಕಮಾಂಡ್‌’ ಎಂಬುದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಖಡಕ್ ವ್ಯಾಖ್ಯಾನ. ‘ಯಾರನ್ನು ಎಲ್ಲಿಡಬೇಕು, ಯಾವಾಗ ಸ್ಥಾನಮಾನ ನೀಡಬೇಕು, ಎಷ್ಟು ದಿನ ಕೊಡಬೇಕು ಎಂಬುದನ್ನು ಸಹ ಹೈಕಮಾಂಡ್‌ ತೀರ್ಮಾನಿಸುತ್ತದೆ’ ಎಂದೂ ವಿವರಿಸಿದ್ದಾರೆ. ಅವರ ಈ ಹೇಳಿಕೆಯ ಆಳದಲ್ಲಿ ಎರಡು ಅಂಶಗಳು ಅಡಕವಾಗಿವೆ: ಮುಖ್ಯಮಂತ್ರಿ ಪದವಿಗಾಗಿ ಕಾತರಿಸಿರುವ ಡಿಕೆಶಿಗೆ ಅಗತ್ಯ ಸಂಖ್ಯೆಯ ಶಾಸಕರ ಬೆಂಬಲವಿಲ್ಲ ಹಾಗೂ ಹೈಕಮಾಂಡ್ ಓಲೈಸುವ ಅಥವಾ ಬೆದರಿಸುವ ವಿಶ್ವಾಸ ಹೊಂದಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ ಸಿ.ಎಂ. ಸಿದ್ದರಾಮಯ್ಯ, ‘ಶಾಸಕರ ಬೆಂಬಲವಿಲ್ಲದೆ ಯಾರೂ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ’ ಎಂದು ಹೇಳುವುದರ ಜೊತೆಗೆ, ‘ಶಾಸಕರ ಬೆಂಬಲದೊಂದಿಗೆ ಹೈಕಮಾಂಡ್‌ ಆಶೀರ್ವಾದವೂ ಅಗತ್ಯ’ ಎಂದು ಸೇರಿಸುವ ಮೂಲಕ ತಮ್ಮ ಎಂದಿನ ಚಾಣಾಕ್ಷತನ ತೋರಿಸಿದ್ದಾರೆ. ‘ಈ ಮನೆಗೆ ನಾನೇ ಯಜಮಾನ; ಹೀಗೆ ಘೋಷಿಸಲು ನನ್ನ ಹೆಂಡತಿಯ ಅನುಮತಿ ಪಡೆದಿದ್ದೇನೆ’ ಎನ್ನುವ ಧೋರಣೆ! ಅವರ ಹೇಳಿಕೆಯ ಸಾಲುಗಳ ನಡುವಿನ ಓದುವಿಕೆಯಲ್ಲಿ ವ್ಯಕ್ತವಾಗುವ ಎರಡು ಸಂಗತಿಗಳು: ಅವರಿಗೆ ಶಾಸಕರ ಬೆಂಬಲವಿದೆ ಹಾಗೂ ಹೈಕಮಾಂಡ್ ಮಣಿಸುವ ಸತತ ಯತ್ನ ಸಾಗಿದೆ.

ಸಿದ್ದರಾಮಯ್ಯ ಹೇಳಿಕೆಯ ಮೊದಲರ್ಧ ಅಪ್ಪಟ ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನದ 164ನೇ ವಿಧಿಯ ಆಶಯಕ್ಕೆ ಅನುಗುಣ, ಉತ್ತರಾರ್ಧ ಮಾತ್ರ ರಾಜಿಕಬೂಲಿ. ಹಾಗಾಗಿ, ಅವರದು ಅರೆ ಪ್ರಜಾಸತ್ತಾತ್ಮಕ ನಿಲುವು. ಸಿ.ಎಂ. ಧೋರಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಾರಂಪರಿಕ ಹೈಕಮಾಂಡ್ ಸಂಸ್ಕೃತಿಯನ್ನು ಮೃದುವಾಗಿ ಕೆಣಕುವ ದಿಟ್ಟತನವನ್ನೂ ಗುರುತಿಸಬಹುದು. ಮತ್ತೊಂದೆಡೆ ಡಿಕೆಶಿ ಅವರದು ಕಾಂಗ್ರೆಸ್ ಪಕ್ಷದ ಸಂಪ್ರದಾಯಬದ್ಧ ‘ಹೈಕಮಾಂಡೇ ಅಂತಿಮ’ ಎಂದು ನಂಬುವ ನುಡಿನಡೆ; ಆಂತರಿಕ ಪ್ರಜಾಸತ್ತೆಯ ಮೂಲತತ್ವದ ಬಗ್ಗೆ ನಿಷ್ಠೆ ಅಷ್ಟಕ್ಕಷ್ಟೇ. ಪಕ್ಷದ ಚಿಹ್ನೆಯ ಮೇಲೆ ಚುನಾಯಿತರಾದ ಶಾಸಕರು ಪಕ್ಷದ ಆಜ್ಞಾಪಾಲಕರು ಎಂಬ ಭಾವನೆ.

ಪ್ರಜಾತಂತ್ರ ವ್ಯವಸ್ಥೆಯ ಪ್ರಾಥಮಿಕ ಪ್ರಕ್ರಿಯೆಯಾದ ಚುನಾವಣೆಯ ನೀತಿ ಮತ್ತು ಮಹತ್ವವನ್ನು ಕಡೆಗಣಿಕೆಯಲ್ಲಿಯೇ ಪಾಲಿಸುತ್ತಿರುವ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಈ ಕುರಿತು ಮರು ಮನನ ಮಾಡಿಕೊಳ್ಳುವ ತುರ್ತು ಇದೆ. ವಿವಿಧ ಮತಕ್ಷೇತ್ರಗಳ ನಿಗದಿತ ಮತದಾರರಿಂದ ಚುನಾಯಿತರಾಗುವ ಶಾಸಕರು ರಾಜ್ಯ ಸರ್ಕಾರವನ್ನು ರಚಿಸುವ ಮೊದಲ ಹಂತದ ಪ್ರಜಾಪ್ರತಿನಿಧಿಗಳು. ಹೀಗೆ ಚುನಾಯಿತರಾದ, ಬಹುಮತ ಪಡೆದು ಸರ್ಕಾರ ರಚಿಸಲು ಸಜ್ಜಾದ ಪಕ್ಷದ ಸದಸ್ಯರು ಶಾಸಕಾಂಗ ಪಕ್ಷದ ನಾಯಕನನ್ನು, ಆ ಮೂಲಕ ಮುಖ್ಯಮಂತ್ರಿಯನ್ನು ಆರಿಸಬೇಕಾಗುತ್ತದೆ. ಹಾಗಾದಾಗ ಮುಖ್ಯಮಂತ್ರಿ ಗಾದಿಗೆ ಏರುವವರು ಪರೋಕ್ಷವಾಗಿ ಮತದಾರರಿಂದ ಚುನಾಯಿತರಾದ ಪ್ರತಿನಿಧಿ ಎನ್ನಿಸಿಕೊಳ್ಳುತ್ತಾರೆ. ಇಂಥ ಸಹಜ ಪ್ರಜಾಸತ್ತಾತ್ಮಕ ‘ಆಯ್ಕೆ’ ಪ್ರಕ್ರಿಯೆಗೆ ವ್ಯತಿರಿಕ್ತವಾಗಿ ಹೈಕಮಾಂಡ್ ಮೂಲಕ ‘ನೇಮಕ’ ಆಗುವ ಮುಖ್ಯಮಂತ್ರಿ ರಾಜ್ಯದ ಬಹುಮತದಾರರನ್ನು ಪ್ರತಿನಿಧಿಸಲು ಹೇಗೆ ಸಾಧ್ಯ?

ಪ್ರಜಾಸತ್ತಾತ್ಮಕ ಮೌಲ್ಯಗಳ ಉಲ್ಲಂಘನೆಯನ್ನು ಮುಖ್ಯಮಂತ್ರಿಯ ಹಲವಾರು ಹೊಣೆಗಾರಿಕೆಯ ನಿರ್ವಹಣೆಯಲ್ಲಿ, ಹೈಕಮಾಂಡ್ ಹಸ್ತಕ್ಷೇಪದ ರೂಪದಲ್ಲಿ ಮುಂದುವರಿಯುವುದನ್ನೂ ಕಾಣಬಹುದು. ಮಂತ್ರಿಮಂಡಲ ರಚನೆಯು ಮುಖ್ಯಮಂತ್ರಿಯ ಪರಮಾಧಿಕಾರ ಎಂಬ ನಿಯಮ, ಪ್ರಚಲಿತ ರಾಜಕೀಯ ಸಂದರ್ಭದಲ್ಲಿ ಅನುಷ್ಠಾನಯೋಗ್ಯ ಅನ್ನಿಸಿಕೊಳ್ಳುತ್ತಿಲ್ಲ. ಇನ್ನು ವಿವಿಧ ಮಂಡಳಿ, ಪ್ರಾಧಿಕಾರ, ಸಲಹೆಗಾರರ ನೇಮಕಾತಿಯ ತೀರ್ಥ ಹೈಕಮಾಂಡ್ ಶಂಖದಿಂದಲೇ ಸ್ರವಿಸಬೇಕಾಗಿದೆ.

ಈತನಕ ಬಾಯಿಮಾತಿನಲ್ಲಿ ಸೂಚ್ಯವಾಗಿ ಸಂವಹನ ಆಗುತ್ತಿದ್ದ ವರಿಷ್ಠರ ಪಟ್ಟಿ ಇದೀಗ ಪಾರದರ್ಶಕತೆಯ ಮತ್ತೊಂದು ಮಜಲು ಪ್ರವೇಶಿಸಿದಂತಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಮ್ಮ ಅಧಿಕೃತ ಲೆಟರ್ ಹೆಡ್‌ನಲ್ಲಿಯೇ 39 ನಿಗಮ, ಮಂಡಳಿಗಳಿಗೆ ಅಧ್ಯಕ್ಷರು–ಉಪಾಧ್ಯಕ್ಷರ ನೇಮಕಾತಿಯ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿಗೆ ದಕ್ಕಿದ್ದು ಅನುಮೋದನೆಯ ಅಧಿಕಾರ! ಇದು ಸಂವಿಧಾನ ರಕ್ಷಕ ಎಂದು ಕರೆದುಕೊಳ್ಳುವ ಪಕ್ಷದ ಸ್ವರೂಪ. ಹೀಗೆ ಸಂವಿಧಾನ ಉಳಿಸುವವರು ಮತ್ತು ಉಲ್ಲಂಘಿಸುವವರು ಒಬ್ಬರೇ ಆದರೆ ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.