ADVERTISEMENT

ವಿಶ್ಲೇಷಣೆ | ಪರಿಸರ: ಸರ್ಕಾರಕ್ಕೆ ಸದರ!

ಜ್ಯೋತಿ
Published 23 ಡಿಸೆಂಬರ್ 2025, 23:30 IST
Last Updated 23 ಡಿಸೆಂಬರ್ 2025, 23:30 IST
   

ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿ ಅವರ ಚಾರಿತ್ರಿಕ ಉಪವಾಸ ಸತ್ಯಾಗ್ರಹ
ಗಳಿಂದ ಹಿಡಿದು, ಸ್ವಾತಂತ್ರ್ಯೋತ್ತರ ಭಾರತದ ಪರಿಸರ ಹೋರಾಟಗಳವರೆಗೆ ನಾವು ಈ ನೆಲದಲ್ಲಿ ಸಾಕಷ್ಟು ಪ್ರತಿಭಟನೆ, ಸತ್ಯಾಗ್ರಹಗಳನ್ನು ನೋಡಿದ್ದೇವೆ. ದೇಶದ ಪರಿಸರಕ್ಕಾಗಿ ಹೋರಾಡಿದ ಇಬ್ಬರು ಶ್ರೇಷ್ಠ ಎಂಜಿನಿಯರ್‌ಗಳ ಉದಾಹರಣೆಗಳನ್ನು ವರ್ತಮಾನದಲ್ಲಿ ಕಂಡಿದ್ದೇವೆ. ಗಂಗಾ ನದಿಯ ಸ್ವಚ್ಛತೆಗಾಗಿ ಹೋರಾಡುತ್ತಲೇ ದೇಹತ್ಯಾಗ ಮಾಡಿದ ಜಿ.ಡಿ. ಅಗರ್ವಾಲ್ ಮತ್ತು ಲಡಾಖ್‌ನ ಸೂಕ್ಷ್ಮ ಹಿಮಾಲಯ ತಪ್ಪಲಿನ ಉಳಿವಿಗಾಗಿ ಹೋರಾಡಿ ಜೈಲು ಸೇರಿರುವ ಸೋನಮ್ ವಾಂಗ್ಚುಕ್ ಹಲವು ಕಾರಣಗಳಿಂದಾಗಿ ನಮಗೆ ಮಾದರಿ.

2018ರ ಅಕ್ಟೋಬರ್‌ನಲ್ಲಿ, ಐಐಟಿ ಕಾನ್ಪುರದ ಪರಿಸರ ಎಂಜಿನಿಯರಿಂಗ್‌ನ ನಿವೃತ್ತ ಪ್ರಾಧ್ಯಾಪಕ ಜಿ.ಡಿ. ಅಗರ್ವಾಲ್ ತಮ್ಮ ನೂರು ದಿನಗಳ ಅಮರಣಾಂತ ಉಪವಾಸದ ನಂತರ ನಿಧನರಾದರು. ಗಂಗಾ ನದಿಯನ್ನು ಮುಕ್ತವಾಗಿ ಹರಿಯಲು ಬಿಡಿ, ಮಾಲಿನ್ಯ, ವಿನಾಶಕಾರಿ ಜಲವಿದ್ಯುತ್ ಯೋಜನೆಗಳು ಮತ್ತು ಅಕ್ರಮ ಗಣಿಗಾರಿಕೆಯಿಂದ ರಕ್ಷಿಸಿ, ಮತ್ತು ನದಿಯನ್ನು ಕೇವಲ ಸಂಪನ್ಮೂಲಕ್ಕಿಂತ ಹೆಚ್ಚಾಗಿ ಜೀವಂತ ಪರಿಸರ ಘಟಕವಾಗಿ ಪರಿಗಣಿಸಿ ಎನ್ನುವುದು ಅವರ ಬೇಡಿಕೆಯಾಗಿತ್ತು. ಅಗರ್ವಾಲ್‌ ಅವರ ಮರಣದ ಏಳು ವರ್ಷಗಳ ನಂತರ, 2025ರಲ್ಲಿ ತನ್ನ ಶೈಕ್ಷಣಿಕ ಆವಿಷ್ಕಾರಗಳು ಮತ್ತು ಸುಸ್ಥಿರ ನೀರಿನ ಪರಿಹಾರಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಸೋನಮ್ ವಾಂಗ್ಚುಕ್, ಲಡಾಖ್‌ನ ಜನರನ್ನು ತಮ್ಮ ಭೂಮಿ, ಪರಿಸರ ಮತ್ತು ಸಾಂವಿಧಾನಿಕ ರಕ್ಷಣೆಗಾಗಿ ಒತ್ತಾಯಿಸಲು ಸಜ್ಜುಗೊಳಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದಾರೆ.

ಅಗರ್ವಾಲ್ ಅವರ ಬಲಿದಾನ ಮತ್ತು ವಾಂಗ್ಚುಕ್ ಅವರ ಬಂಧನದ ಪ್ರಕರಣಗಳು, ದೇಶದ ಆಡಳಿತ ವ್ಯವಸ್ಥೆಗಳು ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿ ರಕ್ಷಕರ ಸದ್ದಡಗಿಸುವ ಕೆಲಸವನ್ನು ಮಾಡುತ್ತಿವೆ ಎನ್ನುವುದಕ್ಕೆ ನಿದರ್ಶನದಂತಿವೆ.

ADVERTISEMENT

ಅಗರ್ವಾಲ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದವರು. ಐಐಟಿ ಕಾನ್ಪುರದಲ್ಲಿ ಬೋಧಿಸಿದ ಶಿಕ್ಷಣತಜ್ಞ ಮತ್ತು ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯ ಮೊದಲ ಸದಸ್ಯ ಕಾರ್ಯದರ್ಶಿ. ದೇಶದ ಅಭಿವೃದ್ಧಿ ಯೋಜನೆಗಳು ಪರಿಸರ ನಾಶಕ್ಕೆ ಕಾರಣವಾಗುತ್ತಿರುವುದರಿಂದ ಅವರು ಭ್ರಮನಿರಸನಗೊಂಡಿದ್ದರು. ಹಲವಾರು ‘ಸ್ವಚ್ಛತಾ ಕಾರ್ಯಾಚರಣೆ’ಗಳ ಹೊರತಾಗಿಯೂ, ಗಂಗಾ ನದಿಯು ಕಲುಷಿತಗೊಳ್ಳುತ್ತಿರುವುದು ಬರೀ ನೀತಿಯ ವೈಫಲ್ಯವಲ್ಲ, ನೈತಿಕ ಕುಸಿತ ಎಂದವರು ಭಾವಿಸಿದ್ದರು. ಪ್ರಾಪಂಚಿಕ ಆಗುಹೋಗುಗಳಿಂದ ಭ್ರಮನಿರಸನಗೊಂಡ ಅವರು ತಮ್ಮ ಲೌಕಿಕ ಜೀವನವನ್ನು ತ್ಯಜಿಸಿ ಸನ್ಯಾಸತ್ವ ಪಡೆದರು.

ಗಂಗಾ ನದಿಯ ರಕ್ಷಣೆಗಾಗಿ ಅಗರ್ವಾಲ್, ಉಪವಾಸ ಸತ್ಯಾಗ್ರಹಗಳ ಮೂಲಕ ನದಿಯ ಪರಿಸರಕ್ಕೆ ಹಾನಿಕಾರಕ ಜಲವಿದ್ಯುತ್ ಯೋಜನೆಗಳ ರದ್ದತಿ, ಮರಳು ಗಣಿಗಾರಿಕೆಯ ನಿಷೇಧ ಮತ್ತು ನದಿ ರಕ್ಷಣೆಗಾಗಿ ಸಮಗ್ರ ಕಾನೂನು ಚೌಕಟ್ಟು ಬೇಕೆಂಬ ಸ್ಪಷ್ಟ ಬೇಡಿಕೆಗಳೊಂದಿಗೆ ಸರ್ಕಾರಕ್ಕೆ ಎಚ್ಚರಿಕೆ ಮತ್ತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಯತ್ನಿಸಿದರು. 2018ರ ಜೂನ್‌ನಲ್ಲಿ ಪ್ರಾರಂಭವಾದ ಅವರ ಅಂತಿಮ ಉಪವಾಸವನ್ನು 86ನೇ ವಯಸ್ಸಿನಲ್ಲಿ ಕೈಗೊಂಡರು. ಸರ್ಕಾರವು ಅವರಿಗೆ ಯಾವುದೇ ಖಚಿತ ಭರವಸೆ ನೀಡುವುದರಿಂದ ನುಣುಚಿಕೊಂಡಿತು. 2018ರ
ಅ. 11ರಂದು ಉಪವಾಸ ನಿರತರಾಗಿದ್ದಲೇ ಸಂಭವಿಸಿದ ಅವರ ಸಾವು, ಪರಿಸರ ಕಾಳಜಿಗೆ ದೇಶದ ಆಡಳಿತ ವ್ಯವಸ್ಥೆ ಎಷ್ಟು ಸೀಮಿತ ಬದ್ಧತೆ ಹೊಂದಿದೆ ಎಂಬುದನ್ನು ಬಹಿರಂಗಪಡಿಸಿತು.

ಅಗರ್ವಾಲ್ ಅವರ ನಿಧನವು ಒಂದು ಅಹಿತಕರ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಗಂಗೆಯನ್ನು ತಾಯಿಯಾಗಿ ಗೌರವಿಸುವ ಈ ದೇಶದಲ್ಲಿ ಅವಳ ರಕ್ಷಣೆಗಾಗಿ ಹೋರಾಡಿದ ಒಬ್ಬ ಸಂತನನ್ನು ಮೌನವಾಗಿ ಸಾಯಲು ಏಕೆ ಬಿಡಲಾಯಿತು?  

ಹಿಂದಿ ಸಿನಿಮಾ ‘3 ಈಡಿಯೆಟ್ಸ್’ ಪಾತ್ರಕ್ಕೆ ಪ್ರೇರಣೆಯಾಗಿ ಪ್ರಸಿದ್ಧರಾದ ಸೋನಮ್ ವಾಂಗ್ಚುಕ್, ದೇಶದ ಪರಿಸರವಾದದ ಕುರಿತಂತೆ ಒಂದು ವಿಭಿನ್ನ ಮತ್ತು ಮಹತ್ವದ ಎಳೆಯನ್ನು ಪ್ರತಿನಿಧಿಸುತ್ತಾರೆ. ಶಿಕ್ಷಣ, ಸುಸ್ಥಿರತೆ ಮತ್ತು ಸ್ಥಳೀಯ ಜ್ಞಾನದ ಪ್ರಸಾರದಲ್ಲಿ ಅವರು ದೀರ್ಘಕಾಲ ಕೆಲಸ ಮಾಡಿದ್ದಾರೆ. ಪರಿಸರ ಸಮತೋಲನಕ್ಕಾಗಿ ಅಭಿವೃದ್ಧಿಯ ಪರ್ಯಾಯ ಮಾದರಿಗಳನ್ನು ರಚಿಸಿದ್ದಾರೆ. 

ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಲಡಾಖ್ ರಾಜಕೀಯ
ದಲ್ಲಿ ವಾಂಗ್ಚುಕ್ ಅವರ ಪಾತ್ರವು ನಾಟಕೀಯವಾಗಿ ಬದಲಾಯಿತು. ಸೂಕ್ಷ್ಮ ಪರಿಸರ ವ್ಯವಸ್ಥೆ ಮತ್ತು ವಿಶೇಷವಾಗಿ ಬುಡಕಟ್ಟು ಜನಸಂಖ್ಯೆ ಹೊಂದಿರುವ ಲಡಾಖ್ ಪ್ರದೇಶವು ತನ್ನ ಭೂಮಿ, ಸಂಪನ್ಮೂಲ ಮತ್ತು ಉದ್ಯೋಗಾವಕಾಶಗಳ ಮೇಲೆ ಶಾಸಕಾಂಗದ ರಕ್ಷಣೆಗಳಿಲ್ಲದ ಪರಿಸ್ಥಿತಿಯನ್ನು ಎದುರಿಸಿತು. ಆದ್ದರಿಂದ, ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆಯನ್ನು ಒತ್ತಾಯಿಸುವ ಪ್ರಮುಖ ಧ್ವನಿಯಾಗಿ ವಾಂಗ್ಚುಕ್ ಹೊರಹೊಮ್ಮಿದರು. ಇವರ ಮುಂದಾಳತ್ವದಲ್ಲಿ ನಡೆದ ಸಾಮುದಾಯಿಕ ಮೆರವಣಿಗೆ, ಉಪವಾಸ, ಮುಷ್ಕರ ಮತ್ತು ಸಾರ್ವಜನಿಕ ಸಂವಾದದ ಮೂಲಕ ಪ್ರಜಾಸತ್ತಾತ್ಮಕ ಹಕ್ಕುಗಳ ಪ್ರತಿಪಾದನೆಯನ್ನು, ಆಡಳಿತ ವ್ಯವಸ್ಥೆಯು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿ ಬಿಂಬಿಸಿತು. ವಾಂಗ್ಚುಕ್ ಅವರ ಬಂಧನ ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಗಳ ವಿರುದ್ಧ ತೆಗೆದುಕೊಂಡ ಶಿಕ್ಷಾರ್ಹ ಕ್ರಮಗಳು, ಸರ್ಕಾರವು ತನ್ನ ನಾಗರಿಕರ ಭಿನ್ನಾಭಿಪ್ರಾಯವನ್ನು ಗ್ರಹಿಸುವ ವಿಧಾನದಲ್ಲಿ ಆಗಿರುವ ಬದಲಾವಣೆಯನ್ನು ಸೂಚಿಸುತ್ತವೆ. ಪರಿಸರ ಮತ್ತು ಪ್ರಾದೇಶಿಕ ಬೇಡಿಕೆಗಳನ್ನು ಕಾನೂನುಬದ್ಧ ಪ್ರಜಾಪ್ರಭುತ್ವ ಹೋರಾಟಗಳಾಗಿ ಪರಿಗಣಿಸದೆ, ರಾಷ್ಟ್ರೀಯ ಭದ್ರತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಗಳಾಗಿ ನೋಡಲಾಗುತ್ತಿದೆ. 

ಅಗರ್ವಾಲ್ ಒಬ್ಬ ಪರಿಸರವಾದಿಯಾಗಿ ಸಂತನಂತೆ ಕಾಣಿಸಿದರೆ, ವಾಂಗ್ಚುಕ್ ಒಂದು ವಿಶಿಷ್ಟ ಸಾಂಸ್ಕೃತಿಕ ಮತ್ತು ಪರಿಸರ ಅಸ್ಮಿತೆಯನ್ನು ಹೊಂದಿರುವ ಪ್ರದೇಶದ ಪ್ರತಿನಿಧಿಯಾಗಿ ಮಾತನಾಡುತ್ತಾರೆ. ಈ ಎರಡೂ ಪ್ರಕರಣಗಳು, ಪರಿಸರ ಕಾಳಜಿಯ ಪ್ರಶ್ನೆಗಳು ಮತ್ತು ಅಧಿಕಾರ ಕೇಂದ್ರವನ್ನು ಪ್ರಶ್ನಿಸುವುದು ಬೇರೆ ಬೇರೆಯಲ್ಲ ಎನ್ನುವುದನ್ನು ಹೇಳುವಂತಿವೆ. ಗಂಗಾ ನದಿಯು, ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಿಕಲ್ಪನೆಯ ಕೇಂದ್ರದಲ್ಲಿದೆ. ಆದರೆ, ಅದಕ್ಕೆ ಸಂಬಂಧಿಸಿದ ಪರಿಸರ ಹೋರಾಟಕ್ಕೆ ಅಧಿಕಾರ ವ್ಯವಸ್ಥೆಯು ಸೂಕ್ತ ಗಮನ ಹರಿಸುತ್ತಿಲ್ಲ. ಲಡಾಖ್, ಭೌಗೋಳಿಕವಾಗಿ ಅಧಿಕಾರ ಕೇಂದ್ರದಿಂದ ದೂರವಿದ್ದರೂ ದೇಶದ ಭೌಗೋಳಿಕ ರಾಜಕೀಯಕ್ಕೆ ಮಹತ್ವದ ಪ್ರದೇಶವಾಗಿದೆ. ಈ ಎರಡೂ ಪ್ರಕರಣಗಳಲ್ಲಿ, ಪರಿಸರ ಕಾಳಜಿಯು ಆರ್ಥಿಕ ಬೆಳವಣಿಗೆ ಅಥವಾ ಕಾರ್ಯತಂತ್ರದ ಹಿತಾಸಕ್ತಿಗಳ ಅಧೀನದಲ್ಲಿದೆ. ಇಲ್ಲೊಂದು ಪ್ರಶ್ನೆ ಕೇಳಿಕೊಳ್ಳಬೇಕು: ರಾಜಕೀಯ ವಿಕೇಂದ್ರೀಕರಣವಾಗದ ಅಥವಾ ಪ್ರಾದೇಶಿಕ ಧ್ವನಿಗಳಿಗೆ ಗೌರವ ಕೊಡದ ಕೇಂದ್ರೀಕೃತ ವ್ಯವಸ್ಥೆಯಲ್ಲಿ ಪರಿಸರ ನ್ಯಾಯ ಸಾಧ್ಯವೇ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳದಿದ್ದರೆ, ಪರಿಸರ ರಕ್ಷಣೆ ಘೋಷಣೆಯಾಗಿಯಷ್ಟೇ ಉಳಿಯುತ್ತದೆ.

ಅಗರ್ವಾಲ್‌ರ ಬಲಿದಾನವು ದೇಶದ ಪರಿಸರಕಾಳಜಿ, ಚಳವಳಿಗಳಿಗೆ ಮಹತ್ವದ ತಿರುವು ನೀಡ
ಬೇಕಿತ್ತು. ಬದಲಾಗಿ, ಅದು ಮರೆತುಹೋದ ಅಧ್ಯಾಯವಾಗಿದೆ. ಅದೇ ರೀತಿ, ವಾಂಗ್ಚುಕ್ ಅವರ ಬಂಧನವು
ಪರಿಸರ ಹಕ್ಕು ಮತ್ತು ಪ್ರಜಾಪ್ರಭುತ್ವಕ್ಕಾಗಿ ಧ್ವನಿ ಎತ್ತಲು ಧೈರ್ಯ ಮಾಡುವವರಿಗೆ ಒಂದು ಎಚ್ಚರಿಕೆಯ
ಸಂಕೇತವಾಗಿದೆ. ಭಾರತದ ಸುಸ್ಥಿರ ಅಭಿವೃದ್ಧಿ ಮತ್ತು ಪ್ರಜಾಪ್ರಭುತ್ವದ ಭವಿಷ್ಯಕ್ಕಾಗಿ, ಅದು ತನ್ನ ಆತ್ಮಸಾಕ್ಷಿಯನ್ನು ಎಚ್ಚರಗೊಳಿಸುವವರನ್ನು ಮೌನಗೊಳಿಸುವ ಬದಲು ಅವರ ಪರಿಸರ ಕಾಳಜಿಗಳನ್ನು ಆಲಿಸಲು ಕಲಿಯಬೇಕು. ನದಿ, ಪರ್ವತ, ಗಾಳಿ, ಮಣ್ಣು, ಮತ್ತು ಪ್ರಾಣಿ– ಪಕ್ಷಿಗಳು ಮನುಷ್ಯನ ಭಾಷೆಯಲ್ಲಿ ತಮಗಾಗಿ ಮಾತನಾಡಲು ಸಾಧ್ಯವಿಲ್ಲ. ಸದಾ ವೇಗವಾಗಿ ಮುನ್ನುಗುವ ನಮಗೆ ಅವುಗಳ ಭಾಷೆಯನ್ನು ಗಮನಿಸುವಷ್ಟು ವ್ಯವಧಾನ ನಮಗಿಲ್ಲ. ಆದ್ದರಿಂದ, ಅವು ಆತ್ಮಸಾಕ್ಷಿ ಉಳಿಸಿಕೊಂಡಿರುವ ಮನುಷ್ಯರ ಧ್ವನಿಯನ್ನು ಅವಲಂಬಿಸಿವೆ.

ವಾಂಗ್ಚುಕ್ ಎಚ್ಚರಿಸಿದಂತೆ, ‘ಹಿಮನದಿಗಳ ಕರಗುವಿಕೆ ಮತ್ತು ಅದರೊಂದಿಗೆ ಅರಣ್ಯನಾಶ ಮುಂದುವರಿದರೆ, ನಮ್ಮ ಪವಿತ್ರ ನದಿಗಳಾದ ಗಂಗಾ, ಬ್ರಹ್ಮಪುತ್ರ ಮತ್ತು ಸಿಂಧೂ ಭವಿಷ್ಯದಲ್ಲಿ ಋತುಮಾನದ ನದಿಗಳಾಗಬಹುದು. ಅಗರ್ವಾಲ್ ಅವರು ತಮ್ಮ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವಾಗ ಹೇಳಿದ, ‘ಗಂಗಾ ನದಿಯನ್ನು ಉಳಿಸುವ ಪ್ರಕ್ರಿಯೆಯಲ್ಲಿ ನಾನು ಸತ್ತರೂ ನನಗೆ ಯಾವುದೇ ವಿಷಾದವಿಲ್ಲ. ನನ್ನ ಜೀವನದ ಅಂತ್ಯವು ನದಿಯನ್ನು ಉಳಿಸಲು ಕೈಗೊಳ್ಳುತ್ತಿರುವ ಪ್ರಯತ್ನಗಳ ಅಂತ್ಯವೆಂದು ನಾನು ಅರ್ಥೈಸುವುದಿಲ್ಲ’ ಎನ್ನುವ ಮಾತಿನ ಅರ್ಥವನ್ನು ನಾವು ಗಮನಿಸಬೇಕು. ಪ್ರಸ್ತುತ, ‘ಅರಾವಳಿ ಬೆಟ್ಟಗಳನ್ನು ಅಕ್ರಮ ಗಣಿಗಾರಿಕೆಯಿಂದ ಉಳಿಸಿ’ ಎನ್ನುವ ಜನಜಾಗೃತಿ ಸದ್ದು ಮಾಡುತ್ತಿದೆ. ಪರಿಸರ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಜೊತೆಯಾಗಿ ಹೋಗದಿದ್ದರೆ ಈ ಜಗತ್ತಿಗೆ ಉಳಿಗಾಲವಿಲ್ಲ ಎನ್ನುವುದನ್ನು ಪ್ರಕೃತಿಯು ನಮಗೆ ಮತ್ತೆ ಮತ್ತೆ ಮನದಟ್ಟು ಮಾಡುತ್ತಿದ್ದರೂ, ನಾವು ಕಿವುಡರಾಗಿದ್ದೇವೆ, ಕುರುಡರಾಗಿದ್ದೇವೆ.

ನಮ್ಮ ಲೋಕದೃಷ್ಟಿ ಕಿರಿದಾದಂತೆ, ಪರಿಸರದ ಉಳಿವಿಗಾಗಿ ಧ್ವನಿಯಾಗುವವರ ಬವಣೆಗಳು ಏಕಾಂಗಿ ಹೋರಾಟವಾಗಿ ಉಳಿಯುವುದು ಅಥವಾ ಸದ್ದಿಲ್ಲದೇ ಕಣ್ಮರೆಯಾಗುವುದು ವರ್ತಮಾನದ ದುರಂತ. ಅಗರ್ವಾಲ್ ಅವರ ಮೌನ ಹೋರಾಟಕ್ಕೆ ಬಂದ ದಾರುಣ ಅಂತ್ಯ ಸೋನಮ್ ವಾಂಗ್ಚುಕ್ ಅವರಿಗೆ ಅಥವಾ ಇನ್ನಾವುದೇ ಪರಿಸರ ಹೋರಾಟಗಾರರಿಗೆ ಪುನರಾವರ್ತನೆ ಆಗಬಾರದು. ಅದುವೇ ನಮ್ಮ ಕಾಲದ ತುರ್ತು ನೈತಿಕ ಜವಾಬ್ದಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.