ADVERTISEMENT

Manmohan Singh: ಅರ್ಥಮಾಂತ್ರಿಕ ಅಸ್ತಂಗತ

ನಾರಾಯಣ ಎ.
Published 26 ಡಿಸೆಂಬರ್ 2024, 22:43 IST
Last Updated 26 ಡಿಸೆಂಬರ್ 2024, 22:43 IST
<div class="paragraphs"><p>ಮನಮೋಹನ್ ಸಿಂಗ್</p></div>

ಮನಮೋಹನ್ ಸಿಂಗ್

   

ಮನಮೋಹನ ಸಿಂಗ್ ಸಾರ್ಥಕ ಬದುಕನ್ನು ಕಂಡ ಅರ್ಥಮಾಂತ್ರಿಕ. ಮಿತಮಾತು ಮತ್ತು ಮೃದುಮಾತಿನ ಶಕ್ತಿ ಏನು ಎಂದು ತೋರಿಸಿಕೊಟ್ಟ ಸಾಧಕ. ಪ್ರಪಂಚದಲ್ಲಿ ಮನಮೋಹನ ಸಿಂಗ್ ಅವರಿಗಿಂತ ಹೆಚ್ಚು ಪ್ರಖ್ಯಾತ ಅರ್ಥಶಾಸ್ತ್ರಜ್ಞರು ಇರಬಹುದು. ಆದರೆ, ಒಬ್ಬ ಅರ್ಥಶಾಸ್ತ್ರಜ್ಞನಾಗಿ ಅರ್ಥವ್ಯವಸ್ಥೆಯ ಎಲ್ಲಾ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ ಇನ್ನೊಬ್ಬ ಅರ್ಥಶಾಸ್ತ್ರಜ್ಞನನ್ನು ಭಾರತ ಮಾತ್ರವಲ್ಲ, ಯಾವ ದೇಶವೂ ಕಂಡಿರಲಾರದು. ಅರ್ಥಶಾಸ್ತ್ರದ ಪ್ರಾಧ್ಯಾಪಕ, ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ, ಕೇಂದ್ರ ವಿತ್ತ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷ, ಸೌತ್-ಸೌತ್ ಕಮಿಷನ್‌ನ ಅಧ್ಯಕ್ಷ, ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ, ನಂತರ ಕೇಂದ್ರ ವಿತ್ತ ಸಚಿವ, ಕೊನೆಗೆ ಪ್ರಧಾನ ಮಂತ್ರಿ, ಅದೂ ಎರಡು ಅವಧಿಗೆ. ಇವುಗಳಲ್ಲಿ ಯಾವುದಾದರೂ ಒಂದು ಹುದ್ದೆಯನ್ನು ಪಡೆದರೆ ಅದೇ ಸಾರ್ಥಕ ಎಂದು ಭಾವಿಸುವವರಿದ್ದಾರೆ. ಮನಮೋಹನ್ ಸಿಂಗ್ ಎಲ್ಲಾ ಹುದ್ದೆಗಳನ್ನು ಅಲಂಕರಿಸಿಯೂ ನಿಗರ್ವಿಯಾಗಿ ಉಳಿದು ನಿರ್ಗಮಿಸಿದರು. 

ಮನಮೋಹನ ಸಿಂಗ್ ಅವರು ಅರ್ಥ ಮಂತ್ರಿಯಾದ ಸಂದರ್ಭವೇ ವಿಚಿತ್ರ. ಒಳ್ಳೆಯ ಕಾಲದಲ್ಲಿ ಸವಾಲಿನ ಹುದ್ದೆ ಎಲ್ಲರೂ ಬಯಸುತ್ತಾರೆ. ಅದು ಸಾವಿರದ ಒಂಬೈನೂರರ ತೊಂಬತ್ತೊಂದರ ಬೇಸಗೆ. ಅದೊಂದು ದಿನ ಯುಜಿಸಿ ಕಚೇರಿಯಲ್ಲಿ ಯಾವುದೋ ಕಡತದ ಪರಿಶೀಲನೆಯಲ್ಲಿ ಮೈಮರೆತಿದ್ದಾಗ ಮನಮೋಹನ ಸಿಂಗ್ ಅವರಿಗೆ ಫೋನ್ ಕರೆಯೊಂದು ಬರುತ್ತದೆ. ಫೋನ್ ಮಾಡಿದವರು ಆಗ ತಾನೇ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹ ರಾವ್. ಹೊಸ ಸರ್ಕಾರದಲ್ಲಿ ವಿತ್ತ ಮಂತ್ರಿಯಾಗಬೇಕು ಎಂದು ನರಸಿಂಹ ರಾವ್ ಕೇಳಿಕೊಳ್ಳುತ್ತಾರೆ. ಭಾರತದ ಅರ್ಥವ್ಯವಸ್ಥೆ ರಸಾತಳಕ್ಕೆ ಕುಸಿದಿದ್ದ ದಿನಗಳವು. ಭಾರತದ ರಾಜಕೀಯದ ಎರಡು ಮಹಾಮೌನಿಗಳ ನಡುವೆ ಅದ್ಯಾವ ಮಾತುಕತೆ ನಡೆಯಿತೋ? ಆ ದುರ್ಬರ ಪರಿಸ್ಥಿತಿಯಲ್ಲೂ ಅರ್ಥಮಂತ್ರಿಯಾಗಲು ಮನಮೋಹನ ಸಿಂಗ್ ಒಪ್ಪಿಕೊಳ್ಳುತ್ತಾರೆ. ಆ ನಂತರದ್ದು ಇತಿಹಾಸ.

ADVERTISEMENT

1991ರ ಜೂನ್ 24ನೆಯ ದಿನ ಸಾಯಂಕಾಲ ಲೋಕಸಭೆಯಲ್ಲಿ ಮನಮೋಹನ ಸಿಂಗ್ ಮಂಡಿಸಿದ ಹೊಸ ಸರಕಾರದ ಹೊಸ ಬಜೆಟ್ ಭಾರತದ ಅರ್ಥ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದನ್ನು ತೆರೆಯಿತು. ‘ಯಾವುದು ಯಾವ ಕಾಲಕ್ಕೆ ಆಗಬೇಕೋ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ (Nobody power on earth can stop an idea whose time has come) ಎಂದು ಮನಮೋಹನ್ ಸಿಂಗ್ ಒಬ್ಬ ತತ್ವಶಾಸ್ತ್ರಜ್ಞನ ರೀತಿ ಆ ಸಂದರ್ಭದಲ್ಲಿ ಹೇಳಿದ್ದರು. ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಕ್ಕೆ ಅನನ್ಯ ನಂಟಿದೆ. ಆದರೆ, ತನ್ನ ಜೀವನವಿಡೀ ಅರ್ಥ ಅಧಿಕಾರಶಾಹಿಯ ಭಾಗವಾಗಿದ್ದ ಮನಮೋಹನ ಸಿಂಗ್ ಅವರೊಳಗೊಬ್ಬ ಆಳನೋಟದ ತತ್ವಶಾಸ್ತ್ರಜ್ಞನಿದ್ದ ಎಂದು ಆ ದಿನ ದೇಶಕ್ಕೆ ತಿಳಿಯಿತು. ದೇಶದ ಪಾಲಿಗೆ ಐತಿಹಾಸಿಕ ಮತ್ತು ತನ್ನ ಪಾಲಿಗೆ ಚೊಚ್ಚಲ ಎನ್ನಿಸಿದ್ದ ಆ ಬಜೆಟ್ ಭಾಷಣದ ಆರಂಭದ ಸಾಲುಗಳಲ್ಲಿ ‘ಒಂದು ಅನಾಥಪ್ರಜ್ಞೆಯೊಂದಿಗೆ ನಾನು ಈ ಬಜೆಟ್ ಅನ್ನು ಮಂಡಿಸುತಿದ್ದೇನೆ’ ಎಂದು ಹೇಳಿದ್ದರು. ಅವರು ಹಾಗೆ ಹೇಳಿದ್ದು ದೇಶವು ಹಿಂದಿನ ತಿಂಗಳು ರಾಜೀವ್‌ ಗಾಂಧಿ ಅವರನ್ನು ಕಳೆದುಕೊಂಡ ಘಟನೆ ನೆನಪಿಸಿಕೊಳ್ಳಲು. ಯಾರೇ ಬಜೆಟ್ ಮಂಡಿಸಿದರೂ ನಗುಮೊಗದಿಂದ ಕುಳಿತು ಕೇಳುತ್ತಿದ್ದ ರಾಜೀವ್ ಗಾಂಧಿ ಪಾರ್ಲಿಮೆಂಟ್‌ನಲ್ಲಿ ಇಲ್ಲದ ಕಾರಣ ನಾನು ಏಕಾಂಗಿಯಾಗಿದ್ದೇನೆ ಅಂತ ಹೇಳಿದ್ದರು. ಆದರೆ ಏಕಾಂಗಿತನ ಎನ್ನುವುದು ಆ ನಂತರದ ವೃತ್ತಿಬದುಕಿನುದ್ದಕ್ಕೂ ಅವರನ್ನು ಕಾಡಿತ್ತು ಎನ್ನಿಸುತ್ತದೆ. ವಿತ್ತ ಸಚಿವರಾಗಿದ್ದಷ್ಟು ಕಾಲ ನರಸಿಂಹ ರಾವ್ ಬೆನ್ನಿಗಿದ್ದರು ಎನ್ನುವುದನ್ನು ಬಿಟ್ಟರೆ, ಆ ನಂತರ ಪ್ರಧಾನಿಯಾಗಿದ್ದಷ್ಟೂ ಕಾಲ ಸೋನಿಯಾ ಗಾಂಧಿಯವರ ಶ್ರೀರಕ್ಷೆಯ ಬಲ ಇತ್ತು ಎನ್ನುವುದನ್ನು ಬಿಟ್ಟರೆ, ಮನಮೋಹನ ಸಿಂಗ್ ಭಾರತದ ಅರ್ಥವ್ಯವಸ್ಥೆಯ ದಟ್ಟಾರಣ್ಯದಲ್ಲಿ ಒಂಟಿ ಸಲಗದಂತೆ ಸಂಚರಿಸಿದರು. ಸಾಧಕ ಭಾದಕಗಳೇನೇ ಇರಲಿ, ಭಾರತದ ಅರ್ಥವ್ಯವಸ್ಥೆಯನ್ನು ನೆಹರೂ ಯುಗದಿಂದ ಬಿಡುಗಡೆಗೊಳಿಸಿದ ಯುಗಪ್ರವರ್ತಕಾರಾಗಿ ಮನಮೋಹನ ಸಿಂಗ್ ದೇಶದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದರು.

ಮನಮೋಹನ ಸಿಂಗ್ ಅವರನ್ನು ಮಹಾ ಮೌನಿ ಎನ್ನುವ ಅರ್ಥದಲ್ಲಿ ಮೌನ ಮೋಹನ ಸಿಂಗ್ ಎಂದು ಕೆಲವರು ಹಂಗಿಸಿದರು. ಮಾತು ಮೌನ ಎಲ್ಲವೂ ಹೊಸ ಅರ್ಥ ಪಡೆದುಕೊಂಡಿರುವ ಇಂದಿನ ರಾಜಕಾರಣ ನೋಡಿದಾಗ ಮನಮೋಹನ ಸಿಂಗ್ ಖಂಡಿತಾ ಮೌನಿಯಾಗಿರಲಿಲ್ಲ. ಅವರು ಎಲ್ಲಿ ಮಾತನಾಡಬೇಕಿತ್ತೋ ಅಲ್ಲಿನ ಮಾತನಾಡಿದ್ದರು. ಎಲ್ಲಿ ಮೌನವಾಗಿರಬೇಕಿತ್ತೋ ಅಲ್ಲಿ ಮೌನವಾಗಿದ್ದರು. ಮನಮೋಹನ ಸಿಂಗ್ ಅವರನ್ನು ಅಚಾನಕ್ ಪ್ರಧಾನಿ ಎಂದು ಕೆಲವರು ಕರೆಯುತ್ತಾರೆ. ಹೌದು. ಅರ್ಥಶಾಸ್ತ್ರಜ್ಞರಾಗಿ ಅವರ ಸಾಧನೆಯ ಹಿಂದೆ ಇದ್ದದ್ದು ಅವರ ಪ್ರತಿಭೆ ಮತ್ತು ಅವರ ಪರಿಶ್ರಮ. ಆದರೆ ಅವರ ರಾಜಕೀಯ ಬದುಕು ಆಕಸ್ಮಿಕ. ತೀರಾ ಆಕಸ್ಮಿಕ. 1991ರ ಮೇ ತಿಂಗಳಲ್ಲಿ ರಾಜೀವ್ ಗಾಂಧಿಯವರ ಹತ್ಯೆ ಆಗದೆ ಹೋಗಿದ್ದರೆ ಮನಮೋಹನ ಸಿಂಗ್ ಅರ್ಥಮಂತ್ರಿಯಾಗುವ ಪ್ರಮೇಯವೇ ಇರಲಿಲ್ಲ. ಎಲ್ಲಾ ನಿರೀಕ್ಷೆಗಳನ್ನೂ ಮೀರಿ 2004ರಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲದೇ ಹೋಗಿದ್ದರೆ ಅವರು ಪ್ರಧಾನಿಯಾಗುವ ಸಾಧ್ಯತೆಯೇ ಇರಲಿಲ್ಲ. ಮನಮೋಹನ ಸಿಂಗ್ ಅವರ ಬದುಕಿನ ಆಕಸ್ಮಿಕ ತಿರುವು ದೇಶದ ಚರಿತ್ರೆಯ ನಿರ್ಣಾಯಕ ತಿರುವುಗಳಿಗೆ ಕಾರಣವಾಗಿ ಹೋಯಿತು. ಪ್ರಧಾನ ಮಂತ್ರಿಯಾಗಿ ಕೊನೆಯ ದಿನಗಳಲ್ಲಿ ಟೀಕೆಗಳಿಂದ ಬಸವಳಿದ ಹೋಗಿದ್ದ ಸಂದರ್ಭದಲ್ಲಿ ಒಮ್ಮೆ ಅವರು ಹೇಳಿದ್ದರು: ‘ಚರಿತ್ರೆ ನನಗೆ ನ್ಯಾಯ ಒದಗಿಸೀತು ಎನ್ನುವ ವಿಶ್ವಾಸ ಇದೆ’ ಅಂತ. ಆ ಮಾತಿನ ಸತ್ಯ ನಮಗೀಗಾಗಲೇ ಗೋಚರಿಸಲಾರಂಭಿಸಿದೆ.

ದೇಶ ಗೌರವಾನ್ವಿತ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಅವರು ದೇಶದ ಆರ್ಥಿಕ ನೀತಿಗೆ ಹೊಸ ರೂಪ ನೀಡಿದವರು. ಹಣಕಾಸು ಸಚಿವರಾಗಿ, ಪ್ರಧಾನಿಯಾಗಿ ದೇಶದ ಜನರ ಜೀವನಮಟ್ಟವನ್ನು ಸುಧಾರಿಸಲು ಗಣನೀಯವಾದ ಕೊಡುಗೆ ನೀಡಿದ್ದಾರೆ
ನರೇಂದ್ರ ಮೋದಿ, ಪ್ರಧಾನಿ
ಮನಮೋಹನ ಸಿಂಗ್ ಅವರ ಅಗಲಿಕೆಯೊಂದಿಗೆ ದೇಶ ಮುತ್ಸದ್ದಿ ನಾಯಕರೊಬ್ಬರನ್ನು ಕಳೆದುಕೊಂಡಿದೆ. ಆರ್ಥಿಕ ಉದಾರೀಕರಣ ಕುರಿತ ಅವರ ನೀತಿಗಳು ಕೋಟ್ಯಂತರ ಜನರ ಬದುಕು ಬದಲಿಸಿದೆ.
ಮಲ್ಲಿಕಾರ್ಜುನ ಖರ್ಗೆ,ಎಐಸಿಸಿ ಅಧ್ಯಕ್ಷ
ಮನಮೋಹನ್ ಸಿಂಗ್ ಅವರು ನಿರ್ಣಾಯಕ ಕಾಲಘಟ್ಟದಲ್ಲಿ ದೇಶವನ್ನು ಮುನ್ನಡೆಸಿದ್ದರು ಹಾಗೂ ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಹಾದಿಯನ್ನು ತೋರಿದ್ದರು.
ಜಗದೀಪ್‌ ಧನಕರ್,ಉಪ ರಾಷ್ಟ್ರಪತಿ
ಅಪಾರ ಜ್ಞಾನ ಹೊಂದಿದ್ದ ಅವರು ಅಭಿವೃದ್ಧಿಯ ಪಥದಲ್ಲಿ ದೇಶವನ್ನು ಮುನ್ನಡೆಸಿದವರು. ನಮ್ರತೆ ಮತ್ತು ಆರ್ಥಿಕತೆ ಕುರಿತ ಅವರ ಅರಿವು ರಾಷ್ಟ್ರಕ್ಕೆ ಸ್ಫೂರ್ತಿದಾಯಕವಾಗಿತ್ತು. 
ರಾಹುಲ್‌ಗಾಂಧಿ , ಲೋಕಸಭೆ ವಿರೋಧಪಕ್ಷದ ನಾಯಕ
ರಾಜಕಾರಣದಲ್ಲಿ ಕೆಲವರು ಪ್ರೇರಕಶಕ್ತಿಯಾಗಿದ್ದು, ವಿಶೇಷ ಗೌರವಕ್ಕೆ ಪಾತ್ರರಾಗುತ್ತಾರೆ. ಮನಮೋಹನ್ ಸಿಂಗ್ ಅಂತಹ ನಾಯಕರಲ್ಲಿ ಒಬ್ಬರು.
ಪ್ರಿಯಾಂಕಾ ಗಾಂಧಿ, ಸಂಸದೆ, ಕಾಂಗ್ರೆಸ್

ಮನಮೋಹನ ಸಿಂಗ್‌ ಇನ್ನಿಲ್ಲ

ನವದೆಹಲಿ (ಪಿಟಿಐ): ಭಾರತದ ಆರ್ಥಿಕ ಸುಧಾರಣೆಗಳ ಹರಿಕಾರ, ಮಾಜಿ ಪ್ರಧಾನಿ ಮನಮೋಹನ ಸಿಂಗ್‌ (92) ಅವರು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಗುರುವಾರ ನಿಧನರಾದರು.

ಅವರಿಗೆ ಪತ್ನಿ ಗುರುಶರಣ್ ಸಿಂಗ್‌ ಹಾಗೂ ಮೂವರು ಪುತ್ರಿಯರು ಇದ್ದಾರೆ. ಅವರು ಕೆಲ ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

ಇಂದು ರಜೆ

ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಗೌರವಾರ್ಥ ರಾಜ್ಯದಲ್ಲಿ 27ರಂದು ಸರ್ಕಾರಿ ರಜೆ ಘೋಷಿಸಲಾಗಿದೆ.ಜೊತೆಗೆ, ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.