ADVERTISEMENT

ವಿಶ್ಲೇಷಣೆ | ಕರಾಳ ಅಧ್ಯಾಯದ ಆ ದಿನಗಳು...

ಸಂವಿಧಾನವನ್ನು ಅಣಕ ಮಾಡಿದ ತುರ್ತು ಪರಿಸ್ಥಿತಿ ಜಾರಿಗೊಂಡು ಐವತ್ತು ವರ್ಷಗಳು ತುಂಬಿವೆ.

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 0:37 IST
Last Updated 24 ಜೂನ್ 2025, 0:37 IST
   

ಐವತ್ತು ವರ್ಷ ಕಳೆದುಹೋದವು. 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ಮಧ್ಯರಾತ್ರಿಯಲ್ಲಿ ಹೇರಿದ ಆಂತರಿಕ ತುರ್ತು ಪರಿಸ್ಥಿತಿಯು 50 ವರ್ಷಗಳ ನಂತರವೂ ಮನದಲ್ಲಿ ಹಚ್ಚ ಹಸಿರು. ಆಂತರಿಕ ಭದ್ರತೆ ನಿರ್ವಹಣಾ ಕಾಯ್ದೆಯಡಿ (ಮೀಸಾ) 15 ತಿಂಗಳು ಬಂದಿಯಾಗಿ ಸೆರೆವಾಸ, ಆ ಅವಧಿಯಲ್ಲಿ ಅತಿರಥ ಮಹಾರಥರ ಸಹವಾಸ, ಅವೆಲ್ಲವೂ ಮರೆಯಲಾಗದ ನೆನಪುಗಳು.

ದೇಶದ ಇತಿಹಾಸದಲ್ಲಿ 19 ತಿಂಗಳ ತುರ್ತು ಪರಿಸ್ಥಿತಿಯ ಸಮಯ, ಸಂವಿಧಾನದ ದೃಷ್ಟಿಯಿಂದ ಕರಾಳ ಅವಧಿ. ಓರ್ವ ವ್ಯಕ್ತಿಯ ಸರ್ವಾಧಿಕಾರಿ ಮನಃಸ್ಥಿತಿ ಹಾಗೂ ಅಭದ್ರತೆ ದೇಶವನ್ನು ಪತನದ ದಿಕ್ಕಿಗೆ ಕರೆದೊಯ್ಯಬಹುದು ಎಂಬುದಕ್ಕೆ ತುರ್ತು ಪರಿಸ್ಥಿತಿಯು ಜ್ವಲಂತ ಉದಾಹರಣೆ.

1974ರಲ್ಲಿಯೇ ಇಂದಿರಾ ಗಾಂಧಿ ಅವರ ಸರ್ವಾಧಿಕಾರಿ ನಡವಳಿಕೆಯ ಅನಾವರಣವಾಗಿತ್ತು. ಕಾಲೇಜು ಹಾಸ್ಟೆಲ್‌ಗಳಲ್ಲಿ ಸರಬರಾಜಾಗುತ್ತಿದ್ದ ಕಳಪೆ ಆಹಾರ ವಿರೋಧಿಸಿ ಗುಜರಾತ್‌ನಲ್ಲಿ ಆರಂಭವಾದ ಚಳವಳಿಗೆ ಆ ರಾಜ್ಯದ ಮುಖ್ಯಮಂತ್ರಿಯ ತಲೆದಂಡ ಆಗಿದ್ದು ಇತಿಹಾಸ. ತದನಂತರ, ಜಯಪ್ರಕಾಶ ನಾರಾಯಣ್‌ ನಾಯಕತ್ವದಲ್ಲಿ ಬಿಹಾರದಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನ ಪ್ರಾರಂಭ ಗೊಂಡಿದ್ದು, ಬಿಹಾರದ ಮುಖ್ಯಮಂತ್ರಿ ಅಬ್ದುಲ್ ಗಫೂರ್ ಪದಚ್ಯುತಿಗೆ ಕಾರಣವಾಯಿತು. ಆ ವಿದ್ಯಮಾನಗಳು ದೇಶದಲ್ಲಿ ಜೆ.ಪಿ. ಆಂದೋಲನ ವ್ಯಾಪಕವಾಗಲು ಬೀಜವಾದವು. ಚುನಾವಣೆಗಳ ಸುಧಾರಣೆ ಸೇರಿದಂತೆ ವಂಶಪಾರಂಪರ್ಯ ಆಡಳಿತ ಹಾಗೂ ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಹಾಗೂ ದೆಹಲಿಯ ಸಿಂಹಾಸನ ಅಲುಗಾಡಲು ಚಳವಳಿ ನಾಂದಿಯಾಯಿತು.

ADVERTISEMENT

1975ರ ಜೂನ್ 12ರಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜೆ.ಎಂ.ಎಲ್. ಸಿನ್ಹಾ ನೀಡಿದ ತೀರ್ಪು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. 1971ರಲ್ಲಿ ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರದಿಂದ ಇಂದಿರಾ ಗಾಂಧಿ ಆಯ್ಕೆಯಾಗಿದ್ದರು.
ಚುನಾವಣೆಯಲ್ಲಿ ಅವರು ಪ್ರಧಾನ ಮಂತ್ರಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ರಾಜಕೀಯ ಭ್ರಷ್ಟಾಚಾರ ಹಾಗೂ ಅಧಿಕಾರದ ದುರುಪಯೋಗ ಎಸಗಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ರಾಜ್‌ನಾರಾಯಣ್ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಪುರಸ್ಕರಿಸಿದ್ದರು; ಇಂದಿರಾ ಅವರ ಆಯ್ಕೆಯನ್ನು ರದ್ದುಗೊಳಿಸಿ, ಪ್ರಧಾನ ಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಹಾಗೂ ಮುಂದಿನ ಆರು ವರ್ಷಗಳ ಕಾಲ ಚುನಾವಣೆಯಲ್ಲಿ ನಿಲ್ಲಬಾರದು ಎಂದು ತೀರ್ಪು ನೀಡಿದ್ದರು.

ಅದೇ ದಿನ ಸಂಜೆ ಗುಜರಾತ್‌ನಲ್ಲಿ ನಡೆದಿದ್ದ ಮಧ್ಯಂತರ ಚುನಾವಣೆಯ ಫಲಿತಾಂಶ ಹೊರಬಿದ್ದು, ಕಾಂಗ್ರೆಸ್‌ ಸೋಲು ಅನುಭವಿಸಿತು. ಜನಸಂಘದ ಭಾಗವಾಗಿದ್ದ ಜನತಾ ಮೋರ್ಚಾ ಅಧಿಕಾರಕ್ಕೆ ಬಂದಿತು.

ಒಂದೇ ದಿನ ಘಟಿಸಿದ ಎರಡು ಘಟನೆಗಳು ಇಂದಿರಾ ಅವರನ್ನು ಕಂಗೆಡಿಸಿದ್ದವು. ಪ್ರಧಾನ ಮಂತ್ರಿ ಸ್ಥಾನ ಬಿಟ್ಟುಕೊಡುವ ಮನಃಸ್ಥಿತಿಯಲ್ಲಿರದ ಅವರು, ‘ಇಂದಿರಾ ಹಟಾವೊ’ ಘೋಷಣೆಗಳ ನಡುವೆಯೂ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಆಗ ನೀಡಿದ ತೀರ್ಪು ವಿಚಿತ್ರವೆಂದೇ ಹೇಳಬೇಕು. ಇಂದಿರಾ ಅವರು ಪ್ರಧಾನ ಮಂತ್ರಿಯಾಗಿ ಮುಂದುವರಿಯಬಹುದು; ಆದರೆ, ಪ್ರಕರಣ ಮುಗಿಯುವವರೆಗೂ ಲೋಕಸಭೆಯಲ್ಲಿ ಅವರಿಗೆ ಮತ ಚಲಾಯಿಸುವ ಹಕ್ಕು ಇರುವುದಿಲ್ಲ ಎನ್ನುವುದು ತೀರ್ಪಿನ ಸಾರಾಂಶವಾಗಿತ್ತು.

ದೇಶದಲ್ಲಿ ಇಂದಿರಾ ವಿರುದ್ಧದ ವಾತಾವರಣ ಬಲಗೊಳ್ಳುತ್ತಿತ್ತು. ಆದರೂ ಇಂದಿರಾ ಗಾಂಧಿ ಅವರು ಸಚಿವ ಸಂಪುಟದ ಅನುಮೋದನೆ ಇಲ್ಲದೆ, ‘ತುರ್ತು ಪರಿಸ್ಥಿತಿ ಹೇರಿಕೆ’ಗೆ ಮುಂದಾದರು. ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹಮದ್ ಅವರನ್ನು ಮಧ್ಯರಾತ್ರಿ ನಿದ್ದೆಯಿಂದ ಎಬ್ಬಿಸಿ ಅನುಮೋದನೆ ಪಡೆದು, ತುರ್ತು ಪರಿಸ್ಥಿತಿಯನ್ನು ಜಾರಿಗೆ ತಂದೇಬಿಟ್ಟರು.

ತುರ್ತು ಪರಿಸ್ಥಿತಿ ಜಾರಿಯಿಂದಾಗಿ ಜಯಪ್ರಕಾಶ ನಾರಾಯಣ್‌, ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ, ಮಧು ದಂಡವತೆ, ಶಾಮ್‌ ನಂದನ್‌ ಮಿಶ್ರಾ, ಪೀಲೂ ಮೋದಿ ಮುಂತಾದ ರಾಜಕೀಯ ನೇತಾರರನ್ನು ಸೆರೆಮನೆಗೆ ದೂಡಲಾಯಿತು. ಪತ್ರಕರ್ತ ಕುಲದೀಪ್ ನಯ್ಯರ್ ಅವರನ್ನು ಬಂಧಿಸಲಾಯಿತು. ತುರ್ತು ಪರಿಸ್ಥಿತಿ ಘೋಷಣೆ ನಂತರ ದೇಶದಲ್ಲಿ ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಕ್ಕೂ ಧಕ್ಕೆಯಾಯಿತು. ಪ್ರಮುಖ ನಾಯಕರ ಬಂಧನದ ವಿಚಾರಗಳು ಪತ್ರಿಕೆಗಳಲ್ಲಿ
ಪ್ರಕಟವಾಗದಂತೆ ದೆಹಲಿಯಲ್ಲಿನ ಪತ್ರಿಕಾ ಕಾರ್ಯಾಲಯಗಳಿಗೆ ವಿದ್ಯುತ್ ಕಡಿತಗೊಳಿಸಲಾಯಿತು.

ಜೂನ್‌ 26ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವಾಹರಾಗಿದ್ದ ಕೃ. ನರಹರಿ, ತುರ್ತು ಪರಿಸ್ಥಿತಿ ವಿರುದ್ಧ ಪ್ರತಿಭಟನೆ ಯೋಜಿಸಲು ನನಗೆ ಸೂಚಿಸಿದರು. ನಾನು, ಆಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರಾಗಿದ್ದ ಪಿ.ಜಿ.ಆರ್. ಸಿಂಧ್ಯ ಅವರನ್ನು ಭೇಟಿಯಾದೆ. ತುರ್ತು ಪರಿಸ್ಥಿತಿ ವಿರುದ್ಧ ಅಂದು ನಡೆದದ್ದು ರಾಜ್ಯದ ಪ್ರಥಮ ಪ್ರತಿಭಟನೆ. ಆ ಪ್ರತಿಭಟನೆಯಲ್ಲಿ ಎಂ. ಚಂದ್ರಶೇಖರ್, ಎಸ್. ವೆಂಕಟರಾಮ್, ವಿ.ಎಸ್. ಕೃಷ್ಣ ಅಯ್ಯರ್, ಪ್ರಮೀಳಾ ನೇಸರ್ಗಿ, ಎ. ಲಕ್ಷ್ಮೀಸಾಗರ್ ಮುಂತಾದ ನಾಯಕರು ಸೇರಿದಂತೆ 120ರಿಂದ 150 ಜನ ಭಾಗವಹಿಸಿದ್ದರು.

ಆಶ್ಚರ್ಯವೆಂದರೆ ಅಂದು ನಮ್ಮನ್ನು ಬಂಧಿಸಲಿಲ್ಲ. ಅಂದು ಮುಂಜಾನೆಯೇ ಸಂಸದೀಯ ನಿಯೋಗದೊಂದಿಗೆ ಬಂದಿದ್ದ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ, ಮಧು ದಂಡವತೆ ಹಾಗೂ ಶಾಮ್‌ ನಂದನ್ ಮಿಶ್ರಾ ಅವರನ್ನು ಬೆಂಗಳೂರಿನ ಶಾಸಕರ ಭವನದಲ್ಲಿ ಬಂಧಿಸಲಾಗಿತ್ತು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಸತ್ಯ ಸುದ್ದಿ ಪ್ರಕಟವಾಗಲು ಸರ್ಕಾರದ ಸೆನ್ಸಾರ್ ವಿಭಾಗ ಬಿಡುತ್ತಿರಲಿಲ್ಲ. ‘ಕಹಳೆ’ ಎಂಬ ಪತ್ರಿಕೆಯನ್ನು ನಾವೇ ರೂಪಿಸಿ, ಹಂಚಲು ಪ್ರಾರಂಭಿಸಿದೆವು. ಅದೆಷ್ಟೋ ಬಾರಿ ಯಶವಂತಪುರದಲ್ಲಿದ್ದ ಮುದ್ರಣಾಲಯದಲ್ಲಿ ಸಿದ್ಧಗೊಳ್ಳುತ್ತಿದ್ದ ಕಹಳೆಯ ಪ್ರತಿಗಳನ್ನು ತೆಗೆದುಕೊಂಡು, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನ ಹಲವೆಡೆ ಹಂಚಿರುವೆ.

1975ರ ಜುಲೈ 4ರಂದು ಆರ್‌ಎಸ್‌ಎಸ್ ಸೇರಿದಂತೆ ಹಲವಾರು ಸಂಘಟನೆಗಳ ಮೇಲೆ ನಿಷೇಧ ಹೇರಲಾಯಿತು. ಆದರೆ, ವಾಲಿಬಾಲ್, ಕಬಡ್ಡಿ ಆಟದ ನೆಪದಲ್ಲಿ ನಾವು ಒಟ್ಟಿಗೆ ಸೇರುತ್ತಿದ್ದೆವು. ತುರ್ತು ಪರಿಸ್ಥಿತಿಯ ಹೋರಾಟಗಾರರ ಮೇಲಿನ ಪೊಲೀಸರ ದೌರ್ಜನ್ಯಗಳು ಆಗಾಗ ತಿಳಿಯುತ್ತಿದ್ದವು. ಅನೇಕರು ಪೊಲೀಸರ ಹಿಟ್ ಲಿಸ್ಟ್‌ನಲ್ಲಿದ್ದರು. ಆದರೂ, ಪೊಲೀಸರಿಗೆ ಚಳ್ಳೆಹಣ್ಣನ್ನು ತಿನ್ನಿಸಿ, 19 ತಿಂಗಳು ಭೂಗತ ಚಟುವಟಿಕೆಗಳನ್ನು ಮುಂದುವರೆಸುವಲ್ಲಿ ಹಲವರು ಯಶಸ್ವಿಯಾದರು.

ಸಂವಿಧಾನ ನಮಗೆ ನೀಡಿರುವ ಮೂಲಭೂತ ಹಕ್ಕುಗಳನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ
ನಿರಾಕರಿಸಲಾಗಿತ್ತು. ‘ಭಾರತ್ ಮಾತಾ ಕಿ ಜೈ’ ಎನ್ನುವುದೂ ಅಪರಾಧವಾಗಿದ್ದುದು ಪ್ರಜಾಸತ್ತೆಯ ಕ್ರೂರ ಅಣಕ. ನಾಯಕರ ಬಂಧನ ಹಾಗೂ ತುರ್ತು ಪರಿಸ್ಥಿತಿ ಹೇರಿಕೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಕೇಳಿ ಬಂದ ಜನಪರ ಧ್ವನಿ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರದ್ದು.

‘ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಪೊಲೀಸರು ಯಾವುದೇ ಕಾರಣವಿಲ್ಲದೆ ಗುಂಡು ಹಾರಿಸಿ
ನಿರಪರಾಧಿಯನ್ನು ಸಾಯಿಸಿದರೆ ಅದು ಅಪರಾಧ ಆಗುವುದಿಲ್ಲವೇ?’ ಎಂಬ ನ್ಯಾಯಮೂರ್ತಿ ಅವರ ಪ್ರಶ್ನೆಗೆ, ಅಟಾರ್ನಿ ಜನರಲ್ ನೀರೇನ್ ಡೇ ಕೊಟ್ಟ ಉತ್ತರ: ‘ಕ್ಷಮಿಸಿ, ಈ ಅವಧಿಯಲ್ಲಿ ಯಾವುದೇ ವ್ಯಕ್ತಿಯ ಪ್ರಾಣಹರಣವಾದರೂ ಅದು ಅಪರಾಧ ಆಗುವುದಿಲ್ಲ’. ದುರದೃಷ್ಟಕರ ಸಂಗತಿಯೆಂದರೆ, ಎಚ್.ಆರ್. ಖನ್ನಾ ಅವರ ಭಿನ್ನಮತದ ನಡುವೆಯೂ ತುರ್ತು ಪರಿಸ್ಥಿತಿಯ ಹೇರಿಕೆಯನ್ನು ಸಮರ್ಥಿಸುವ ಬಹುಮತದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕೊಟ್ಟಿತು. ಭಾರತೀಯ ನ್ಯಾಯಾಂಗದ ನೈತಿಕ ಪ್ರಜ್ಞೆ ಅಂದು ಕಾಣೆಯಾಗಿತ್ತು.

1975ರ ನವೆಂಬರ್ 7ರಂದು ಬೆಂಗಳೂರಿನ ಅಶೋಕ ಹೋಟೆಲ್‌ಗೆ ಆಗಮಿಸಿದ್ದ ಕಾಮನ್‌ವೆಲ್ತ್‌ ರಾಷ್ಟ್ರಗಳ ನಿಯೋಗದ ಸದಸ್ಯರನ್ನು ಸಂಪರ್ಕಿಸಿದ ನಾನು, ತುರ್ತು ಪರಿಸ್ಥಿತಿಯ ಅತಿರೇಕಗಳನ್ನು ವಿವರಿಸುವ ಕಿರು ಹೊತ್ತಿಗೆಗಳನ್ನು ಹಂಚುವಾಗ, ಗೆಳೆಯರೊಂದಿಗೆ ಬಂಧನಕ್ಕೊಳಗಾದೆ.

ನವೆಂಬರ್ 7ರಿಂದ 10ರವರೆಗಿನ ದಿನಗಳು ನನ್ನ ಪಾಲಿಗೆ ನರಕಸದೃಶವಾಗಿದ್ದವು. ಆಗ ವಿಧಾನಸೌಧದ ಸನಿಹದಲ್ಲಿಯೇ ಇದ್ದ ಹೈ ಗ್ರೌಂಡ್ಸ್‌ ಪೊಲೀಸ್ ಸ್ಟೇಷನ್ ಕಟ್ಟಡದಲ್ಲಿ ನಾವು ಅನುಭವಿಸಿದ ಚಿತ್ರಹಿಂಸೆ ವರ್ಣಿಸಲು ಪದಗಳಿಲ್ಲ. ಪೊಲೀಸರು ಅಕ್ಷರಶಃ ರುಬ್ಬಿಬಿಟ್ಟರು. ನಾನು ಆಗಾಗ್ಗೆ, ‘ಜೀವನದಲ್ಲಿ ನಾನು ಮೊದಲ ಬಾರಿ ಏರೋಪ್ಲೇನ್ ಹತ್ತಿದ್ದು ಹೈ ಗ್ರೌಂಡ್ಸ್‌ ಪೊಲೀಸ್ ಸ್ಟೇಷನ್‌ನಲ್ಲಿ’ ಎಂದು ತಮಾಷೆಯಾಗಿ ಹೇಳುವುದಿದೆ.

ನನ್ನ ತಾಯಿ ನನ್ನನ್ನು ಹುಡುಕಿ ಅನೇಕ ಪೊಲೀಸ್ ಠಾಣೆಗಳಿಗೆ ಅಲೆದಾಡಿ, ಕೊನೆಗೆ ರಾಮಾ ಜೋಯಿಸ್ (ಮುಂದೆ, ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಯಾಗಿ, ಪಂಜಾಬ್, ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದರು) ಮತ್ತು ಮುಂದೆ ಲೋಕಾಯುಕ್ತ ರಾದ ಸಂತೋಷ್ ಹೆಗ್ಡೆ ಅವರನ್ನು ಸಂಪರ್ಕಿಸಿದರು.

‘ನನ್ನ ಮಗನನ್ನು ಹುಡುಕಿಕೊಡಿ’ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದರು. ಆದರೆ, ನಮ್ಮನ್ನು ಕೋರ್ಟಿಗೆ ಹಾಜರುಪಡಿಸದೆ ‘ಮೀಸಾ’ ಬಂದಿಗಳನ್ನಾಗಿ ಮಾಡಿ, 1975ರ ನವೆಂಬರ್‌ 10ರಂದು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ತಳ್ಳಿದರು. ನಾನು ಬಿಡುಗಡೆಯಾಗಿ ಹೊರಬಂದದ್ದು 1977ರ ಜನವರಿ 22ರಂದು.

ಸೆರೆಮನೆಯಲ್ಲಿ ಅತಿರಥ ಮಹಾರಥರ ಸಹವಾಸದ ಸೌಭಾಗ್ಯ ನನಗೆ ಸಿಕ್ಕಿತ್ತು. ಧೀಮಂತ ನಾಯಕರ ವಿಚಾರಗಳನ್ನು ಆಲಿಸುವ, ಅವರ ನಡವಳಿಕೆಯನ್ನು ಗಮನಿಸುವ ಅವಕಾಶ ಸಿಕ್ಕಿತ್ತು. ಒಂದರ್ಥದಲ್ಲಿ ನಾನು ತುರ್ತು ಪರಿಸ್ಥಿತಿಯಲ್ಲಿ ಜನಿಸಿದ ರಾಜಕೀಯ ಶಿಶು.

ಐವತ್ತು ವರ್ಷಗಳ ನಂತರ ಹಿಂತಿರುಗಿ ನೋಡಿದರೆ, ತುರ್ತು ಪರಿಸ್ಥಿತಿ ಹೆಸರಿನಲ್ಲಿ ಸಂವಿಧಾನದ ಮೇಲೆ ನಡೆದ ಅಪಚಾರ, ವ್ಯಕ್ತಿ ಸ್ವಾತಂತ್ರ್ಯದ ಹರಣ, ಹೋರಾಟಗಾರರ ಮೇಲಿನ ಪೈಶಾಚಿಕ ಕೃತ್ಯಗಳು ಕಾಡುತ್ತವೆ. ಕಠಿಣ ಪರಿಸ್ಥಿತಿಯಲ್ಲೂ ಸತ್ಯಾಗ್ರಹ ಮಾಡಿದ ಸಾಮಾನ್ಯ ಸ್ವಯಂಸೇವಕರು ಮತ್ತು ಕಾರ್ಯಕರ್ತರು ನೆನಪಾಗುತ್ತಾರೆ. 

ಇಂದಿರಾ ಗಾಂಧಿ ಅವರಿಗೆ ಗುಪ್ತಚರ ವಿಭಾಗ ಕೊಟ್ಟ ‘ನಿಮ್ಮ ವಿಜಯ ಖಚಿತ’ ಎಂಬ ಮಾಹಿತಿ ಚುನಾವಣೆ ನಡೆಸುವಂತೆ ಮಾಡಿತು. ಆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿತು. ಇಂದಿರಾ ಅವರ ಪುತ್ರ ಸಂಜಯ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಸೋಲುಂಡರು. ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಜನತಾ ಪಕ್ಷ ಆಡಳಿತಕ್ಕೆ ಬಂದಿತು. ಇನ್ನೆಂದೂ ಯಾವುದೇ ಸರ್ವಾಧಿಕಾರಿಯು ತುರ್ತು ಪರಿಸ್ಥಿತಿಯನ್ನು ಮತ್ತೆ ಹೇರದಂತೆ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಯಿತು. ದೇಶದ ಪ್ರತಿಯೊಬ್ಬ ರಾಜಕೀಯ ವಿದ್ಯಾರ್ಥಿಯು ಅಧ್ಯಯನ ಮಾಡಲೇಬೇಕಾದುದು, 19 ತಿಂಗಳ ಅವಧಿಯ ‘ತುರ್ತು ಪರಿಸ್ಥಿತಿ’ ಎಂಬ ಕರಾಳ ಅಧ್ಯಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.