ADVERTISEMENT

ವಿಶ್ಲೇಷಣೆ | ಟ್ರಸ್ ನಿಭಾಯಿಸಲಾರದ್ದನ್ನು ರಿಷಿ ನಿಭಾಯಿಸಬೇಕಿದೆ

ವೇಣುಗೋಪಾಲ್‌ ಟಿ.ಎಸ್‌.
Published 28 ಅಕ್ಟೋಬರ್ 2022, 20:59 IST
Last Updated 28 ಅಕ್ಟೋಬರ್ 2022, 20:59 IST
ರಿಷಿ ಸುನಕ್
ರಿಷಿ ಸುನಕ್   

ರಿಷಿ ಸುನಕ್ ಕೊನೆಗೂ ಬ್ರಿಟನ್ನಿನ ಪ್ರಧಾನಿಯಾಗಿದ್ದಾರೆ.ಅವರು, ಇನ್ಫೊಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿಯವರ ಅಳಿಯ. ಬಿಳಿಯನಲ್ಲದ ಮೊದಲ ಪ್ರಧಾನಿ. ಬೋರಿಸ್ ಜಾನ್ಸನ್ ಅವರು ಹಗರಣಗಳಿಂದ ಪದಚ್ಯುತಿಗೊಂಡ ನಂತರ ಸ್ಪರ್ಧೆಯಲ್ಲಿ ಉಳಿದವರು ರಿಷಿ ಮತ್ತು ಲಿಜ್ ಟ್ರಸ್. ಜಾನ್ಸನ್ ನೇತೃತ್ವದ ಸಂಪುಟದಲ್ಲಿ ರಿಷಿ ಹಣಕಾಸು ಸಚಿವರಾಗಿದ್ದರು. ಜಾನ್ಸನ್‌ ರಾಜೀನಾಮೆ ನಂತರ ಪ್ರಧಾನಿ ಪಟ್ಟಕ್ಕೆ ನಡೆದ ಸ್ಪರ್ಧೆಯಲ್ಲಿ ರಿಷಿ ಅವರನ್ನು ಕನ್ಸರ್ವೇಟಿವ್‌ ಪಕ್ಷ ಆಗ ಒಪ್ಪಿಕೊಂಡಿರ ಲಿಲ್ಲ. ಲಿಜ್ ಟ್ರಸ್ ಪ್ರಧಾನಿಯಾದರು. ಆದರೆ ತುಂಬಾ ದಿನ ಬಾಳಲಿಲ್ಲ. ಆಕೆಯ ಮಿನಿ ಬಜೆಟ್ಟನ್ನು ಜನ ಒಪ್ಪಲಿಲ್ಲ. 44 ದಿನಕ್ಕೇ ಅಧಿಕಾರದಿಂದ ಇಳಿಯಬೇಕಾಯಿತು.

ಪರಿಣಾಮವಾಗಿ ರಿಷಿಗೆ ಹಾದಿ ಸುಗಮವಾಯಿತು. ಮೊದಲಿನಿಂದಲೂ ಲಿಜ್ ಟ್ರಸ್‌ ಅವರ ಆರ್ಥಿಕ ನೀತಿಯ ಬಗ್ಗೆ ರಿಷಿ ಎಚ್ಚರಿಸುತ್ತಲೇ ಇದ್ದರು. ಈಗ ‘ನಾನು ಆಗಲೇ ಹೇಳಿರಲಿಲ್ಲವಾ?’ ಅಂತ ಧೈರ್ಯದಿಂದಹೇಳಿಕೊಳ್ಳಬಹುದು.

ಟ್ರಸ್ ಎಡವಿದ್ದು ಎಲ್ಲಿ? ಆಕೆಯ ಮಿನಿ ಬಜೆಟ್ಟಿಗೆ ಯಾಕಿಷ್ಟು ವಿರೋಧ? ಬ್ರಿಟನ್ನಿನ ಆರ್ಥಿಕತೆ ಒಳ್ಳೆಯ ಸ್ಥಿತಿಯಲ್ಲೇನೂ ಇಲ್ಲ. ಹಣದುಬ್ಬರ, ನಿರುದ್ಯೋಗ ತೀವ್ರವಾಗಿಯೇ ಇವೆ. ಇಂಧನದ ಬೆಲೆ ವಿಪರೀತವಾಗಿ ಜನ ತತ್ತರಿಸಿಹೋಗಿದ್ದಾರೆ. ಅವರಿಗೆ ಸರ್ಕಾರದ ಬೆಂಬಲ ಬೇಕಿದೆ. ತೆರಿಗೆ ಕಡಿತ ಮಾಡ್ತೀನಿ, ಆರ್ಥಿಕ ಪ್ರಗತಿ ತನ್ನ ಆದ್ಯತೆ ಅಂತ ಲಿಜ್ ಟ್ರಸ್ ಮೊದಲೇ ಹೇಳಿಕೊಂಡಿದ್ದರು. ಸೆಪ್ಟೆಂಬರ್ 23ರಂದು ತಮ್ಮ ಮಿನಿ ಬಜೆಟ್ಟಿನಲ್ಲಿ ಅವರು ಮಾಡಿದ್ದು ಇದನ್ನೇ. ಆದರೆ ಎಲ್ಲರ ನಿರೀಕ್ಷೆ ಮೀರಿ ಉದಾರವಾಗಿ ಶ್ರೀಮಂತರ ಆದಾಯಕ್ಕೆ ಶೇ 45ರಷ್ಟು ತೆರಿಗೆ ಕಡಿತ ಘೋಷಿಸಿದ್ದರು. ಜೊತೆಗೆ ಇಂಧನ ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡುವುದಕ್ಕೆ 6,000 ಕೋಟಿ ಪೌಂಡ್ ನೆರವು ಪ್ರಕಟಿಸಿದ್ದರು. ಆದರೆ ಇದನ್ನು ಬಜೆಟ್ ಪರಿಶೀಲನಾ ಸಮಿತಿಯ ಮುಂದಿಡುವ ಗೋಜಿಗೂ ಹೋಗಿರಲಿಲ್ಲ.

ADVERTISEMENT

ಬಜೆಟ್ ಮಂಡಿಸಿದ ಕೆಲವೇ ಕ್ಷಣಗಳಲ್ಲಿ ವಿರೋಧ ವ್ಯಕ್ತವಾಯಿತು. ಕೊಟ್ಟ ಸಮಜಾಯಿಷಿ ವಿಶ್ವಾಸ ಮೂಡಿಸಲಿಲ್ಲ. ಹಣಕಾಸಿನ ಮಾರುಕಟ್ಟೆ ಅಸ್ತವ್ಯಸ್ತ ಗೊಂಡಿತು. ಪೌಂಡ್ ಮೌಲ್ಯ ಕುಸಿಯಿತು. ಬಾಂಡುಗಳ ಬೆಲೆ ಕುಸಿಯಿತು. ಎಲ್ಲರೂ ಬಾಂಡ್‌ ಮಾರುವುದಕ್ಕೆ ಪ್ರಾರಂಭಿಸಿದರು. ಗೊಂದಲವನ್ನು ತಪ್ಪಿಸುವುದಕ್ಕೆ ಅಲ್ಲಿನ ಕೇಂದ್ರೀಯ ಬ್ಯಾಂಕ್ ತಕ್ಷಣ ಮಧ್ಯಪ್ರವೇಶಿಸಬೇಕಾಯಿತು. ಆದರೂ ಅತೃಪ್ತಿ, ವಿರೋಧ ಜೋರಾ ಗುತ್ತಲೇ ಹೋಯಿತು. ಹಣಕಾಸು ಸಚಿವರು ರಾಜೀನಾಮೆ ನೀಡಿದರೂ ಸಮಾಧಾನವಾಗಲಿಲ್ಲ. ಕೊನೆಗೆ ಪ್ರಧಾನಿಯವರೇ ರಾಜೀನಾಮೆ ಕೊಡಬೇಕಾಯಿತು.

ಯಾಕೆ ಹೀಗಾಯಿತು? ಅದು ನಿಭಾಯಿಸಲಾಗದಷ್ಟುದೊಡ್ಡ ಮೊತ್ತವೇ? ಒಂದು ಅಂದಾಜಿನ ಪ್ರಕಾರ, ಇದರಿಂದ 5 ವರ್ಷಕ್ಕೆ ಸರ್ಕಾರದ ಬೊಕ್ಕಸಕ್ಕೆ 14,600 ಕೋಟಿ ಪೌಂಡ್ ಹೊರೆಯಾಗುತ್ತದೆ. ಅದು ಬ್ರಿಟನ್ನಿನ ಜಿಡಿಪಿಯ ಶೇಕಡ 1ರಷ್ಟು. ಕಡಿಮೆಯೇನಲ್ಲ. ಆದರೆ ತುಂಬಾ ಜಾಸ್ತಿಯೂ ಅಲ್ಲ. ಬ್ರಿಟನ್‌ ಶ್ರೀಮಂತ ದೇಶ. ಅದಕ್ಕೆ ಇದನ್ನು ಸರಿದೂಗಿಸಿಕೊಳ್ಳುವುದು ದೊಡ್ಡ ವಿಷಯವಾಗಿರಲಿಲ್ಲ.

ಆದರೂ ಮಾರುಕಟ್ಟೆ ವಿರೋಧಿಸಿತು. ಇಂಧನದ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿ ಇರುವವರಿಗೆ ನೆರವು ನೀಡುವುದಕ್ಕಾಗಲಿ, ಸಾರ್ವಜನಿಕ ಸೇವೆಗಳಿಗೆ ಖರ್ಚು ಮಾಡುವುದಕ್ಕಾಗಲಿ ಮಾರುಕಟ್ಟೆಗೆ ತಕರಾರು ಇರಲಿಲ್ಲ. ಮಾರುಕಟ್ಟೆಗೆ ತಕರಾರು ಇದ್ದುದು ಸರ್ಕಾರದ ನೀತಿ ಹೆಚ್ಚು ಪಾರದರ್ಶಕವಾಗಿಲ್ಲ, ವಿಶ್ವಾಸಾರ್ಹವಾಗಿಲ್ಲ ಹಾಗೂ ಅದು ಬಾಳಿಕೆಯ ನೀತಿಯಾಗಿರಲಿಲ್ಲ ಅನ್ನುವ ಕಾರಣಕ್ಕೆ. ಹೊಸ ನೀತಿಯಿಂದ ಹೆಚ್ಚುವರಿಯಾಗಿ ಭರಿಸಬೇಕಾದ ಹಣವನ್ನು ಕ್ರೋಡೀಕರಿಸುವ ಕ್ರಮದ ಬಗ್ಗೆ ಎಲ್ಲೂ ಉಲ್ಲೇಖವಿರಲಿಲ್ಲ.
ಅದನ್ನು ಸರಿದೂಗಿಸುವುದಕ್ಕೆ ಸರ್ಕಾರದ ಖರ್ಚಿನಲ್ಲಿ ಕಡಿತ ಮಾಡುವ ಯೋಚನೆಯಿದ್ದರೆ ಯಾವೆಲ್ಲಾ ಖರ್ಚುಗಳನ್ನು ಕಡಿತ ಮಾಡಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ.

ಜೊತೆಗೆ ಸರ್ಕಾರದ ವೆಚ್ಚ ಈಗಾಗಲೇ ಅಷ್ಟೊಂದು ಕಡಿಮೆ ಇರುವಾಗ ಇನ್ನೂ ಖರ್ಚು ಕಡಿಮೆ ಮಾಡುವುದಕ್ಕೆ ಸಾಧ್ಯವೇ ಎಂಬ ಅನುಮಾನವೂ ಇತ್ತು. ಇವೆಲ್ಲ ಆರ್ಥಿಕ ಅನಿಶ್ಚಿತತೆಯನ್ನು ಮೂಡಿಸಿದ್ದವು. ಹಾಗಾಗಿ ಜನ ಹಾಗೂ ಮಾರುಕಟ್ಟೆಯು ಸರ್ಕಾರದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದವು. ಮಾರುಕಟ್ಟೆ ನಿಜವಾಗಿಪ್ರತಿಕ್ರಿಯಿಸಿದ್ದು ಬಜೆಟ್ ಮೂಡಿಸಿದ ಈ ಅನಿಶ್ಚಿತತೆಗೆ.

ಎರಡನೆಯದಾಗಿ, ಶ್ರೀಮಂತರ ಮೇಲಿನ ತೆರಿಗೆ ಕಡಿಮೆ ಮಾಡಿಬಿಟ್ಟರೆ, ಅವರು ಹೂಡಿಕೆಯನ್ನು ಹೆಚ್ಚಿಸಿ ಆರ್ಥಿಕ ಪ್ರಗತಿಯನ್ನು ತ್ವರಿತಗೊಳಿಸುತ್ತಾರೆ ಅನ್ನುವ ನಂಬಿಕೆಗೆ ಆಧಾರವಿಲ್ಲ. ಶ್ರೀಮಂತರ ಮೇಲಿನ ತೆರಿಗೆ ಕಡಿಮೆ ಮಾಡಿ ಆರ್ಥಿಕ ಪ್ರಗತಿ ಸಾಧಿಸಿರುವುದಕ್ಕೆ
ಎಲ್ಲೂ ಪುರಾವೆಗಳಿಲ್ಲ. ರೇಗನ್ ಕಾಲದಲ್ಲಿ ಅಮೆರಿಕದಲ್ಲಿ ಆಗಿತ್ತು ಅನ್ನುವುದನ್ನೂ ಕ್ರುಗ್ಮನ್ ಅಂತಹವರು ಮಿಥ್ಯೆ ಎಂದು ತೋರಿಸಿದ್ದಾರೆ. ಹಾಗಾಗಿ ಟ್ರಸ್ ನಿಂತ ನೆಲವೇ ಭದ್ರವಿರಲಿಲ್ಲ.

ಜೊತೆಗೆ ಇದು ಅಂತಹ ಆರ್ಥಿಕ ಕಾರ್ಯಕ್ರಮಕ್ಕೆ ಸಮಯವೂ ಅಲ್ಲ. ಇದು ಯುದ್ಧದ ಸಮಯ. ದೇಶ ಆರ್ಥಿಕ ಸಂಕಷ್ಟದಲ್ಲಿದೆ. ಅದರಲ್ಲೂ ಸಾಮಾನ್ಯಜನ ಜೀವನ ನಡೆಸುವುದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ. ಬಿಕ್ಕಟ್ಟಿನ ಸಮಯದಲ್ಲಿ ಹೇರಳ ಲಾಭ ಮಾಡಿಕೊಂಡವರ ಮೇಲೆ ತೆರಿಗೆ ಹಾಕಿ ಸಂಕಷ್ಟದಲ್ಲಿದ್ದವರಿಗೆ ನೆರವು ನೀಡಬೇಕಾದ ಸಮಯ. ಇಂತಹ ಸಮಯದಲ್ಲಿ ಶ್ರೀಮಂತರ ಮೇಲಿನ ತೆರಿಗೆಯಲ್ಲಿ ಕಡಿತ ಮಾಡಿದರೆ ಜನರಿಗೆ ಸರ್ಕಾರದ ಮೇಲೆ ವಿಶ್ವಾಸ ಮೂಡುವುದಾದರೂ ಹೇಗೆ? ಶಿಕ್ಷಣ, ಆರೋಗ್ಯ, ಉದ್ಯೋಗ ಎಲ್ಲವೂ ಕೈಗೆಟುಕದೇ ಹೋಗುತ್ತಿರುವಾಗ ಆತಂಕ ಸಹಜವೆ. ನಾಯಕತ್ವಕ್ಕೆ ಇದನ್ನು ಅರ್ಥಮಾಡಿಕೊಳ್ಳುವ ಸಂವೇದನೆ ಸಾಧ್ಯವಾಗಬೇಕು.

ಪಿಂಚಣಿ ನಿಧಿಯ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಆತಂಕ ತೀವ್ರವಾಗಿತ್ತು. ಬ್ರಿಟನ್ನಿನ ಪಿಂಚಣಿ ನಿಧಿ ಒಂದು ಸಂಕೀರ್ಣವಾದ ವ್ಯವಸ್ಥೆ. ನಿರ್ದಿಷ್ಟ ದಿನದಂದು ನಿವೃತ್ತಿದಾರರಿಗೆ ಪೂರ್ವನಿರ್ಧರಿತ ಮೊತ್ತವನ್ನು ಕೊಡುವ ವ್ಯವಸ್ಥೆ. ಇಲ್ಲಿ ನಿಧಿಯ ಸುರಕ್ಷತೆ ಮುಖ್ಯ. ಹಾಗಾಗಿ ಹೆಚ್ಚು ಸುರಕ್ಷಿತವಾದ ಬ್ರಿಟಿಷ್ ಸರ್ಕಾರದ ಬಾಂಡುಗಳಲ್ಲಿ ಹಣವನ್ನು ತೊಡಗಿಸಲಾಗಿರುತ್ತದೆ. ಬ್ರಿಟನ್ನಿನಲ್ಲಿಇದು ಜನಪ್ರಿಯವಾದ ಒಂದು ಬೃಹತ್ ವ್ಯವಸ್ಥೆ. ಬಡ್ಡಿ ದರಕ್ಕೂ ಬಾಂಡಿನ ಬೆಲೆಗೂ ಪ್ರತಿಲೋಮ ಸಂಬಂಧವಿರುತ್ತದೆ. ಬ್ಯಾಂಕಿನ ಬಡ್ಡಿ ದರ ಹೆಚ್ಚಿದರೆ, ಬಾಂಡಿನ ಬೆಲೆ ಕುಸಿಯುತ್ತದೆ. ಬಾಂಡಿನ ಬೆಲೆ ಕುಸಿದರೆ ಪಿಂಚಣಿಯ ಸ್ವತ್ತಿನ ಮೌಲ್ಯ ಅಂದರೆ ಪಿಂಚಣಿದಾರರಿಗೆ ಭವಿಷ್ಯದಲ್ಲಿ ಕೊಡುವುದಕ್ಕಾಗಿ ಇಟ್ಟಿರುವ ಹಣದ ಮೊತ್ತ ಕಡಿಮೆಯಾಗುತ್ತದೆ. ಕಿರು ಬಜೆಟ್ಟಿನಿಂದಾಗಿ ಬಡ್ಡಿ ದರ ದಿಢೀರನೆ ಏರಿದಾಗ ಹಣವನ್ನು ಕ್ರೋಡೀಕರಿಸಲಾ ಗದೆ ಬಾಂಡುಗಳನ್ನು ಮಾರಬೇಕಾಯಿತು. ಎಲ್ಲರೂ ಮಾರುವವರೇ ಆಗಿಬಿಟ್ಟಿದ್ದರಿಂದ ಕೊಳ್ಳುವವರಿಲ್ಲದೆಬಿಕ್ಕಟ್ಟು ಪ್ರಾರಂಭವಾಗಿತ್ತು. ಬ್ರಿಟನ್ನಿನ ಕೇಂದ್ರೀಯ ಬ್ಯಾಂಕು ಮಧ್ಯಪ್ರವೇಶಿಸಬೇಕಾಯಿತು. ಸರ್ಕಾರದ ಬಾಂಡುಗಳನ್ನು ಕೊಳ್ಳಲು ಮುಂದಾಯಿತು. ಪರಿಣಾಮ
ವಾಗಿ ಮಾರುಕಟ್ಟೆಯ ಬಿಕ್ಕಟ್ಟು ಸ್ವಲ್ಪಮಟ್ಟಿಗೆ ಸುಧಾರಿಸಿತು.

ಲಿಜ್ ಟ್ರಸ್‌ ಅವರಿಗೆ ಬಂದ ವಿರೋಧಕ್ಕೆ ಆಕೆಯ ಚಿಂತನೆಯ ಕ್ರಮವೂ ಕಾರಣವಿರಬಹುದು.ಆಕೆ ತೆಗೆದುಕೊಂಡ ಆರ್ಥಿಕ ನಿಲುವು ತೀರಾ ಸಾಂಪ್ರದಾಯಿಕವಾದದ್ದು. ರಾಜೀನಾಮೆ ಕೊಡುವ ಸಮಯದಲ್ಲಿ ‘ಬ್ರೆಕ್ಸಿಟ್ ದೊರಕಿಸಿಕೊಟ್ಟ ಸ್ವಾತಂತ್ರ್ಯ ವನ್ನು ಬಳಸಿಕೊಂಡು ತೆರಿಗೆ ಕಡಿಮೆ ಮಾಡಿ, ಹೆಚ್ಚಿನ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವುದಕ್ಕೆ ಇನ್ನು ಸಾಧ್ಯವಾಗುವುದೇ ಇಲ್ಲವಲ್ಲ’ ಎಂದು ಬೇಸರಿಸಿ
ಕೊಂಡಿದ್ದರು. ತೆರಿಗೆ ಕಡಿತ, ಸರ್ಕಾರಿ ವೆಚ್ಚದ ಕಡಿತ... ಇವೆಲ್ಲಾ ಆರ್ಥಿಕವಾಗಿ ಬಲಪಂಥೀಯವಾದ ನಿಲುವು. ಆದರೆ ಆಕೆಯ ಸಾಮಾಜಿಕ ನಿಲುವು ಎಡಪಂಥೀಯ ವಾದುದು. ಆಕೆ ವಲಸೆಯನ್ನು ವಿರೋಧಿಸಲಿಲ್ಲ. ತಮ್ಮ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವೆಯಾಗಿದ್ದ ಸ್ಯುಯೆಲ್ಲಾ ಬ್ರೇವರ್ಮನ್ ಅವರು ವಲಸೆಗಾರರ ಸಂಖ್ಯೆಯನ್ನು ಕಡಿಮೆ ಮಾಡಲಿಲ್ಲ ಎಂದು ಟೀಕಿಸಿದಾಗ ‘ಬ್ರಿಟನ್ನಿನ ಬೆಳವಣಿಗೆಯನ್ನು ತ್ವರಿತಗೊಳಿಸುವುದಕ್ಕೆ ವಲಸೆಗಾರರು ಅವಶ್ಯಕ’ ಎಂದು ವಾದಿಸಿದ್ದರು.

ಕ್ರುಗ್ಮನ್ ಹೇಳುವಂತೆ, ಉದಾರ ಸಾಮಾಜಿಕ ನೀತಿಯನ್ನು ಬೆಂಬಲಿಸುತ್ತಲೇ, ಸಾಂಪ್ರದಾಯಿಕ ಆರ್ಥಿಕ ನೀತಿಯನ್ನೂ ಬೆಂಬಲಿಸುವ ಜನರ ಸಂಖ್ಯೆ ತುಂಬಾ ಕಡಿಮೆ. ಬಹುಪಾಲು ಜನರಿಗೆ ಸರ್ಕಾರದ ಸೌಲಭ್ಯ ಬೇಕು. ಅದು ತಮ್ಮವರಲ್ಲದವರಿಗೆ ಹೋಗಿಬಿಡುತ್ತದೆ ಎಂದು ಭಾವಿಸುವ ಕೆಲವರು ಮಾತ್ರ ಅದನ್ನು ವಿರೋಧಿಸುತ್ತಾರೆ. ಬಹುಶಃ ಅದರಿಂದಲೂ ಟ್ರಸ್ ರಾಜಕೀಯವಾಗಿ ಒಂಟಿ ಯಾಗಿಬಿಟ್ಟರೋ ಏನೊ.

ಒಟ್ಟಿನಲ್ಲಿ ರಾಜಕೀಯವಾಗಿ, ಆರ್ಥಿಕವಾಗಿ ದೇಶದಲ್ಲಿ ಸ್ಥಿರತೆ ತಂದು ಜನರಲ್ಲಿ ವಿಶ್ವಾಸ ಮೂಡಿಸುವ, ಬಿಕ್ಕಟ್ಟಿನಿಂದ ಬ್ರಿಟನ್ನನ್ನು ಪಾರು ಮಾಡುವ ಜವಾಬ್ದಾರಿ ಹಾಗೂ ಹೊರೆ ರಿಷಿ ಸುನಕ್ ಅವರ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.