ಸ್ವಾತಂತ್ರ್ಯೋತ್ಸವ ದಿನಾಚರಣೆ ( ಸಾಂಕೇತಿಕ ಚಿತ್ರ)
ಸದ್ಗುರು: ಭಾರತವು ತನ್ನ ಎಪ್ಪತ್ತೊಂಬತ್ತನೇ ಸ್ವಾತಂತ್ರ್ಯ ವರ್ಷವನ್ನು ಆಚರಿಸುತ್ತಿರುವಾಗ, ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ಅರ್ಥವು ತೀಕ್ಷ್ಣವಾಗಿ ಗಮನಕ್ಕೆ ಬರುತ್ತದೆ.
ಪ್ರಸ್ತುತ ಸವಾಲುಗಳು ಬಹುಮುಖಿಯಾಗಿವೆ - ಜಾಗತಿಕ ಆರ್ಥಿಕ ಪರಿಸ್ಥಿತಿಯ ಏರುಪೇರುಗಳಿಂದ ಹಿಡಿದು ಆಳವಾಗುತ್ತಿರುವ ರಾಜಕೀಯ ಪ್ರತ್ಯೇಕತೆಯವರೆಗೆ, ಜಾತಿ, ಮತ ಮತ್ತು ಪ್ರಾದೇಶಿಕ ಗುರುತಿನ ಸುತ್ತಲಿನ ದೇಶೀಯ ಸಮಸ್ಯೆಗಳಿಂದ ಹಿಡಿದು ಯುವಜನತೆಯಲ್ಲಿ ಹೆಚ್ಚುತ್ತಿರುವ ‘ಮಾನಸಿಕ ಆರೋಗ್ಯ’ದ ಸಮಸ್ಯೆಗಳವರೆಗೆ. ಆದರೂ, ಧೃಢವಾದ ಸಂಕಲ್ಪ ಹೊಂದಿರುವ ರಾಷ್ಟ್ರಕ್ಕೆ, ಧೈರ್ಯಶಾಲಿ ನಾಯಕತ್ವಕ್ಕೆ, ಸವಾಲುಗಳು ಎಂದಿಗೂ ಹಿನ್ನಡೆಗಳಲ್ಲ; ಅವು ಬೆಳವಣಿಗೆಗೆ ಆಹಾರ. ವಾತಾವರಣದಲ್ಲಿ ಹಬ್ಬಿರುವ ಚೈತನ್ಯ, ಆಶಾವಾದ ಹಾಗೂ ಬೆಳೆಯುತ್ತಿರುವ ಆತ್ಮಸ್ಥೈರ್ಯವು ಸ್ಪಷ್ಟವಾಗಿ ಗೋಚರಿಸುತ್ತಿದೆ.
ಕೇವಲ ‘ಉದಾರೀಕರಣ’ವಲ್ಲ, ಇದು ‘ಮುಕ್ತ’ರಾಗುವ ಸಮಯ, ನಮಗೆ ಈಗ ಬೇಕಾಗಿರುವುದು ಧೈರ್ಯಶಾಲಿ, ಆತ್ಮವಿಶ್ವಾಸಿ ಮತ್ತು ಸಾಹಸದಿಂದ ತುಂಬಿದ ‘ಮುಕ್ತ ಉದ್ಯಮ’ದ ಅವಕಾಶ. ಶಿಕ್ಷಣ, ಉದ್ಯಮ, ತಂತ್ರಜ್ಞಾನ ಮತ್ತು ಮೂಲಸೌಕರ್ಯವನ್ನು ಸರ್ಕಾರಿ ನಿಯಂತ್ರಣದ ಹಿಡಿತದಿಂದ ಮುಕ್ತಗೊಳಿಸುವ ಸಮಯ ಬಂದಿದೆ, ಇದರಿಂದ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಉದ್ಯಮಶೀಲತೆ ಅರಳಬಲ್ಲದು, ಮತ್ತು ಮಾನವ ಸೃಜನಶೀಲತೆಯ ಶಕ್ತಿಯು ಎಲ್ಲಾ ಮಿತಿಗಳನ್ನು ಒಡೆದು ಹಾಕಬಲ್ಲದು - ‘ಬಲವಂತವಾಗಿ ಹೇರಲಾದ’ ಮತ್ತು ಕಾಲ್ಪನಿಕವಾದ ಗಾಜಿನ ಗೋಡೆಗಳನ್ನು ಛಿದ್ರಗೊಳಿಸಬಲ್ಲದು. ಜನರು ದೊಡ್ಡದಾಗಿ ಕನಸು ಕಾಣುವಾಗ, ಅವರು ತಮ್ಮ ಜೀವನವನ್ನು ಕಟ್ಟಿಕೊಳ್ಳಲು ಮತ್ತು ರಾಷ್ಟ್ರವನ್ನು ಕಟ್ಟಲು ಬಯಸುವಾಗ, ಕೆಲವು ಅಡಚಣೆಗಳು ಉಂಟಾಗುವುದು ಖಂಡಿತ. ಕೆಲವು ಸಣ್ಣ ಕಾಯ್ದೆಗಳನ್ನು ಉಲ್ಲಂಘಿಸಬಹುದು, ಕೆಲವು ಪುರಾತನ ನಿಯಮಗಳನ್ನು ಬಗ್ಗಿಸಬಹುದು. ಕೆಲವು ಹಳೆಯ ನೌಕರಶಾಹಿ ಕಟ್ಟಳೆಗಳು ಮತ್ತು ಹಳೆಯ ತೆರಿಗೆ ಕಾನೂನುಗಳನ್ನು ಪರಿಷ್ಕರಿಸಬೇಕಾಗಬಹುದು. ಗೋಜಲಾಗಿ ಕಂಡರೂ ಈ ಪ್ರಕ್ರಿಯೆಗಳು ಬದಲಾವಣೆಯ ಅವಿಭಾಜ್ಯ ಅಂಗ. ನಾವು ಒಂದಿಷ್ಟು ಮೂಲಭೂತ ನಿಯಮಗಳನ್ನು ರಚಿಸೋಣ ಹಾಗೂ ಜನರು ಅದನ್ನು ಅನುಸರಿಸುವರೆಂದು ವಿಶ್ವಾಸವಿಡೋಣ . ಹೊಸ ಆಲೋಚನೆಗಳನ್ನು ಹಳೆಯ ಸರ್ಕಾರಿ ನಿಯಮಗಳು ಕುಂಠಿತಗೊಳಿಸದಿರಲಿ. ಮುಕ್ತ ಮತ್ತು ಜೀವಂತ ರಾಷ್ಟ್ರವನ್ನು ಸೃಷ್ಟಿಸಲು ಇದೊಂದೇ ಮಾರ್ಗ.
ಶಿಕ್ಷಣವು ಮಾನವರನ್ನು ಪರಿವರ್ತಿಸದಿದ್ದರೆ, ಅದು ಅಪ್ರಸ್ತುತವಾಗುತ್ತದೆ. ನಾವು ಜನಸಂಖ್ಯಾ ಲಾಭಾಂಶವನ್ನು ಪಡೆಯಬೇಕಾದರೆ, ಯುವಕರು ಸ್ವತಂತ್ರ ಚಿಂತನೆಯ ಶಕ್ತಿಯನ್ನು ಕಳೆದುಕೊಳ್ಳುವ ಮೊದಲೇ, ಅವರಲ್ಲಿ ಆರಂಭಿಕ ವಯಸ್ಸಿನಲ್ಲಿಯೇ ನವೀನತೆಯನ್ನು ಪ್ರೋತ್ಸಾಹಿಸಬೇಕು. ಈಗಿನ ಅಗತ್ಯವೆಂದರೆ, ರಾಜ್ಯದ ಬಲವಂತವಾದ ಹಸ್ತಕ್ಷೇಪದಿಂದ ಮುಕ್ತವಾಗಿ - ಮಾನಸಿಕ ಚುರುಕುತನ ಮತ್ತು ದೈಹಿಕ ಆರೋಗ್ಯಕ್ಕೆ ಆದ್ಯತೆ ನೀಡುವಂತಹ ಪುನರುಜ್ಜೀವಿತವಾದ ಶಿಕ್ಷಣ ವ್ಯವಸ್ಥೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ, ಪ್ರಭುತ್ವ ಸಾಧಿಸಲು ಹವಣಿಸುತ್ತಿರುವ ದೇಶಗಳ ಬಲಪ್ರಯೋಗದ ತಂತ್ರಗಳನ್ನು ಎದುರಿಸಲು, ಭೌಗೋಳಿಕವಾಗಿ ಹೊಂದಾಣಿಕೆಯಾಗುವ ರಾಷ್ಟ್ರಗಳೊಂದಿಗೆ ಮೈತ್ರಿಯನ್ನು ಆಳವಾಗಿಸುವ ಸಮಯ ಬಂದಿದೆ. ರಾಷ್ಟ್ರಗಳ ನಡುವಿನ ದ್ವಾರಗಳು ತೆರೆದಾಗ, ಜನರಿಗೆ ಲಾಭವಾಗುತ್ತದೆ. ನಮಗೆ ಇನ್ನಷ್ಟು ಗೋಡೆಗಳ ಅಗತ್ಯವಿಲ್ಲ; ನಮಗೆ ಇನ್ನಷ್ಟು ಕಿಟಕಿಗಳ ಅಗತ್ಯವಿದೆ.
ಎಲ್ಲಕ್ಕಿಂತ ಮುಖ್ಯವಾಗಿ, ಈ ಸಂಸ್ಕೃತಿಯು ಪ್ರಜ್ಞೆಯ ಕ್ಷೇತ್ರದಲ್ಲಿ ಅಸಾಧಾರಣ ಅನ್ವೇಷಣೆಯ ಕುಲುಮೆಯಾಗಿದೆ. ನಾವು ಸ್ವರ್ಗಕ್ಕೆ ಟಿಕೆಟ್ ಮಾರುವುದರ ಮೂಲಕ ಬದುಕನ್ನು ನಡೆಸುವವರಲ್ಲ, ಬದಲಾಗಿ ಮಾನವ ಅಸ್ತಿತ್ವದ ಕಾರ್ಯವಿಧಾನದ ಬಗ್ಗೆ ನಮ್ಮ ಆಳವಾದ ಜ್ಞಾನವನ್ನು ಹೆಚ್ಚಿಸುವುದರ ಮೂಲಕ ನಡೆಸುವವರು. ನಮ್ಮ ಗುರಿ ಯಾವುದೋ ಪಂಥಗಳ ಅಥವಾ ಯಾವುದೋ ಸಿದ್ಧಾಂತಗಳಿಗೆ ಕಟ್ಟುಬಿದ್ದಿರುವ ಮಕ್ಕಳನ್ನು ಬೆಳೆಸುವುದಾಗಿರಬಾರದು, ಆದರೆ ಹೆಚ್ಚು ಮುಕ್ತ ಮತ್ತು ಪ್ರಜ್ಞಾವಂತ ಮಕ್ಕಳನ್ನು ಬೆಳೆಸುವುದಾಗಿರಬೇಕು.
ಮಕ್ಕಳನ್ನು ಬೆಳೆಸುವುವಾಗ ರಕ್ಷಣಾತ್ಮಕ ವ್ಯವಸ್ಥೆಯ, ಕ್ರಮಗಳ ಅಗತ್ಯವಿದೆ. ಆದರೆ ಇದು ಇನ್ನು ಶೈಶವಾವಸ್ಥೆಯಲ್ಲಿರುವ ದೇಶವಲ್ಲ. ಇದು ವಿಶ್ರಾಂತಿಯಿಲ್ಲದ ಹದಿಹರೆಯದಲ್ಲಿದೆ, ಅಪಾಯಗಳನ್ನು ತೆಗೆದುಕೊಳ್ಳಲು, ಹೊಸ ಆಲೋಚನೆಗಳನ್ನು, ಹೊಸ ಸಂಸ್ಥೆಗಳನ್ನು, ಹೊಸ ವ್ಯವಸ್ಥೆಗಳನ್ನು ನಿರ್ಮಿಸಲು ಸಿದ್ಧವಾಗಿದೆ. ಕೆಲವು ರಕ್ಷಣಾತ್ಮಕತೆಯು ಹಿಂದಿನ ಸಮಯದಲ್ಲಿ ಉಪಯುಕ್ತವಾಗಿದ್ದರೂ, ನಾವು ಒಂದು ಧೈರ್ಯರಹಿತ ಸಮಾಜವಾದಕ್ಕೂ ಒಳಗಾಗಿದ್ದಿದೆ - ಹೆಚ್ಚು ಭಾಷಣ, ಕಡಿಮೆ ಕಾಯಕ. ರಕ್ಷಣಾತ್ಮಕ ಪೋಷಕರು ಲಗಾಮನ್ನು ಬಿಡುವ ಸಮಯ ಬಂದಿದೆ. ಸವಾಲುಗಳು ಅಡಚಣೆಯಾಗಬಾರದು, ನಂದಾದೀಪವಾಗಬೇಕು. ಈ ರಾಷ್ಟ್ರದ ಆತ್ಮವು ಅರಳಬೇಕಾದರೆ, ಭಾರತೀಯರು ತಮ್ಮ ದೇಶದ ಭವಿಷ್ಯವನ್ನು ನಿಜವಾಗಿಯೂ ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಅವಕಾಶ ಕೊಡಬೇಕು. ಕೇವಲ ‘ಉದಾರೀಕರಣ’ವಲ್ಲ, ಇದು ‘ಮುಕ್ತ’ರಾಗುವ ಸಮಯ, ನಾವು ಇದನ್ನು ಸಾಕಾರಗೊಳಿಸೋಣ.
–ಲೇಖಕರು: ಸದ್ಗುರು ಜಗ್ಗಿ ವಾಸುದೇವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.