ವಾಹನಗಳಿಗೆ ಬಳಸುವ ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್ ಸಂಯುಕ್ತವನ್ನು ಸೇರಿಸುತ್ತಿರುವುದರ ಕುರಿತು ಚರ್ಚೆಗಳು ನಡೆಯು
ತ್ತಿವೆ. ಪೆಟ್ರೋಲ್‌ನಿಂದ ಓಡುವ ಎಲ್ಲಾ ವಾಹನಗಳು ಶೇ 20ರಷ್ಟು ಎಥೆನಾಲ್‌ಯುಕ್ತ ಇಂಧನ ಬಳಸಬೇಕು ಎಂಬ ಕೇಂದ್ರ ಸರ್ಕಾರದ ನಿಯಮವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಆದರೆ, ಎಥೆನಾಲ್ ಸಂಯುಕ್ತ ಮಿಶ್ರಿತ ಪೆಟ್ರೋಲ್‌ನಿಂದ ತಮ್ಮ ವಾಹನಗಳ ಇಂಧನ ಕ್ಷಮತೆ ಕುಸಿದಿದೆ ಎಂದು ಜನ ದೂರುತ್ತಿದ್ದಾರೆ.
ಪೆಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್ ಸಂಯುಕ್ತವನ್ನು ಸೇರಿಸುವುದರಿಂದ ಬಳಕೆದಾರರಿಗೆ ಸದ್ಯಕ್ಕೆ ಅನನುಕೂಲ ಆಗುತ್ತಿದ್ದರೂ, ಅದರಿಂದ ಅನುಕೂಲಗಳೂ ಇವೆ. ಇಲ್ಲಿಯವರೆಗೆ ವಾಹನ
ಗಳಲ್ಲಿ ತುಂಬಿಸುತ್ತಿದ್ದ ಪೆಟ್ರೋಲ್‌ನಲ್ಲಿ ಶೇ 10ರಷ್ಟು ಎಥೆನಾಲ್ ಇರುತ್ತಿತ್ತು. ಈಗ ಅದರ ಪ್ರಮಾಣ ದುಪ್ಪಟ್ಟಾಗಿದೆ. ಇದರಿಂದ ದೇಶದ ಆರ್ಥಿಕತೆ ಮೇಲಿನ ಹೊರೆ ತಕ್ಕಮಟ್ಟಿಗೆ ಕಡಿಮೆ ಆಗುತ್ತದೆ ಮತ್ತು ವಾತಾವರಣಕ್ಕೆ ಸೇರುವ ಇಂಗಾಲದ ಡೈಆಕ್ಸೈಡ್ ಪ್ರಮಾಣವೂ ತಗ್ಗುತ್ತದೆ. ಅಂದರೆ, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಎಥೆನಾಲ್‌ಯುಕ್ತ ಪೆಟ್ರೋಲ್ ಮಹತ್ವದ ಪಾತ್ರ ವಹಿಸುತ್ತದೆ. ಈ ಅನುಕೂಲಕ್ಕೆ ಹೋಲಿಸಿದರೆ, ಪ್ರಸ್ತುತ ಬಳಕೆದಾರರು ಎದುರಿಸುತ್ತಿರುವ ತೊಂದರೆಗಳು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾದವು ಎನ್ನಿಸುತ್ತದೆ. ಅಲ್ಲದೆ, ಎಥೆನಾಲ್‌ಗೆ ಪೂರಕವಾದ ತಂತ್ರಜ್ಞಾನವನ್ನು ವಾಹನಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
‘ರಾಷ್ಟ್ರೀಯ ಜೈವಿಕ ಇಂಧನ ನೀತಿ–2018’ರ ಪ್ರಕಾರ, ಪೆಟ್ರೋಲ್‌ಗೆ ಶೇ 20ರಷ್ಟು ಎಥೆನಾಲ್ ಸೇರಿಸುವ ಯೋಜನೆ, 2030ರ ವೇಳೆಗೆ ಜಾರಿಗೆ ಬರಬೇಕಿತ್ತು. ಇದಕ್ಕಾಗಿ ರೋಡ್ ಮ್ಯಾಪ್ ತಯಾರಿಸಿದ ಕೇಂದ್ರ ಸರ್ಕಾರದ ತಜ್ಞ ಸಮಿತಿಯು 2021ರಲ್ಲಿ ವರದಿ ನೀಡಿ, 2022ಕ್ಕೆ ‘ಇ–10’ ಮತ್ತು 2023–25ರ ಅವಧಿಯಲ್ಲಿ ‘ಇ–20’ ಮಿಶ್ರಿತ ಇಂಧನ ಬಳಸಲು ಶಿಫಾರಸು ಮಾಡಿತ್ತು. ಇದಕ್ಕೆ ಪೂರಕವಾಗಿ, ಮಾರುಕಟ್ಟೆಗೆ ಬರುವ ಹೊಸ ವಾಹನಗಳು ಶೇ 20 ಎಥೆನಾಲ್ ಬಳಸಿಕೊಂಡು ಓಡುವ ಕ್ಷಮತೆ ಪಡೆದಿರಬೇಕು ಎಂದೂ ಹೇಳಿತ್ತು. 2070ರ ಶೂನ್ಯ ಇಂಗಾಲ ಉತ್ಸರ್ಜನೆ ಗುರಿ ತಲುಪಲು ಇದು ಅನಿವಾರ್ಯ ಎಂದು ಸಮಿತಿ ನಿರ್ಧರಿಸಿತ್ತು
ಎಥೆನಾಲ್ ಒಂದು ಬಗೆಯ ಆಲ್ಕೋಹಾಲ್. ಪ್ರಮುಖವಾಗಿ ಕಬ್ಬು, ಮೆಕ್ಕೆಜೋಳ ಮತ್ತು ಅಕ್ಕಿಯಂತಹ ಬೆಳೆಗಳಿಂದ ತಯಾರಿಸಲಾಗುವ ಜೈವಿಕ ಇಂಧನ. ರಸಾಯನ ವಿಜ್ಞಾನದಲ್ಲಿ ಇದನ್ನು ಈಥೈಲ್ ಆಲ್ಕೋಹಾಲ್ ಎನ್ನುತ್ತೇವೆ. ಕಾರು ಮತ್ತು ಬೈಕುಗಳಿಗೆ ತುಂಬಿಸುವ ಪೆಟ್ರೋಲ್‌ಗೆ ಇದನ್ನು ಸೇರಿಸುವುದರಿಂದ, ಇಂಧನ ಕ್ಷಮತೆ ಕಡಿಮೆ ಆಗಿರುವುದು ನಿಜ. 2023ಕ್ಕೂ ಮುಂಚೆ ತಯಾರಾದ ವಾಹನಗಳು ಎಥೆನಾಲ್‌ಯುಕ್ತ ಇಂಧನ ಬಳಕೆಗೆ ಯೋಗ್ಯವಲ್ಲ ಎಂಬುದೂ ಸಮಸ್ಯೆಯಾಗಿ ಪರಿಣಮಿಸಿದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಡಿಮೆ ದಹನ ಶಕ್ತಿಯನ್ನು ಹೊಂದಿರುವುದರಿಂದ, ಮೈಲೇಜ್‌ನಲ್ಲಿ ಕುಸಿತವಾಗುತ್ತದೆ ಎಂದು ಭಾರತೀಯ ಆಟೋಮೊಬೈಲ್ ತಯಾರಕರ ಸೊಸೈಟಿ ಹೇಳಿದೆ. ಎಥೆನಾಲ್ ಬಳಕೆಗೆ ಯೋಗ್ಯವಿರುವ ನಾಲ್ಕು ಚಕ್ರ ವಾಹನಗಳ ಇಂಧನ ಕ್ಷಮತೆ ಶೇ 6ರಿಂದ 8ರಷ್ಟು ಮತ್ತು ದ್ವಿಚಕ್ರ ವಾಹನಗಳ ಮೈಲೇಜ್ ಶೇ 3ರಿಂದ 4ರಷ್ಟು ಕಡಿಮೆಯಾಗಿದೆ. ಈ ವಾಹನಗಳು ಶೇ 5ರಿಂದ 10ರಷ್ಟು ಎಥೆನಾಲ್ ಬಳಕೆಗೆ ಸೂಕ್ತವಾಗಿದ್ದವು ಎನ್ನಲಾಗಿದೆ. ಇದ್ದಕ್ಕಿದ್ದಂತೆ ಶೇ 20ರಷ್ಟು ಎಥೆನಾಲ್‌ಯುಕ್ತ ಇಂಧನ ಕಡ್ಡಾಯದ ಸರ್ಕಾರದ ಕ್ರಮದಿಂದ ಕೋಟ್ಯಂತರ ವಾಹನ ಸವಾರರು ಆತಂಕದಲ್ಲಿದ್ದಾರೆ.
ಎಥೆನಾಲ್ ಬಳಕೆಯಿಂದ ಶೇ 65ರಷ್ಟು ಇಂಗಾಲದ ಡೈಆಕ್ಸೈಡ್ ಉತ್ಸರ್ಜನೆ ಕಡಿಮೆ ಆಗುತ್ತದೆ ಎಂದು ನೀತಿ ಆಯೋಗ ಹೇಳುತ್ತದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಪ್ರಕಾರ, ಶೇ 20 ಎಥೆನಾಲ್ ಬಳಕೆಯಿಂದಾಗಿ ವಾರ್ಷಿಕ ಸುಮಾರು 10 ದಶಲಕ್ಷ ಟನ್‌ಗಳಷ್ಟು ಶಾಖವರ್ಧಕ ಅನಿಲಗಳ ಹೊರಸೂಸುವಿಕೆ ಕಡಿಮೆ ಮಾಡಬಹುದು. ನಿವ್ವಳ ಶೂನ್ಯ ಹೊರಸೂಸುವಿಕೆ (ನೆಟ್ ಜೀರೊ ಎಮಿಷನ್) ಗುರಿಯನ್ನು ಇಟ್ಟುಕೊಂಡಿರುವ ನಾವು, ಎಥೆನಾಲ್ ಬಳಕೆಗೆ ಮುಂದಾಗಿರುವುದು ಹಲವರ ಮೆಚ್ಚುಗೆಗೆ ಪಾತ್ರವಾಗಿದೆ
ಭಾರತವು ತನ್ನ ಕಚ್ಚಾ ತೈಲ ಅಗತ್ಯಗಳಿಗಾಗಿ ಶೇ 85ಕ್ಕೂ ಹೆಚ್ಚು ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿದೆ. ಇದರಿಂದ ದೇಶದ ವಿದೇಶಿ ವಿನಿಮಯ ಮೀಸಲು ತಗ್ಗುತ್ತದೆ ಮತ್ತು ರೂಪಾಯಿ ಮೌಲ್ಯ ಕುಸಿಯತ್ತದೆ. ಎಥೆನಾಲ್ ಮಿಶ್ರಣವು ತೈಲ ಆಮದನ್ನು ಕಡಿಮೆ ಮಾಡಲು ನೇರವಾಗಿ ಸಹಾಯ ಮಾಡುತ್ತದೆ. ಪ್ರತಿ ವರ್ಷ ಕೋಟ್ಯಂತರ ರೂಪಾಯಿಗಳ ಆಮದು ವೆಚ್ಚ ಕಡಿಮೆಯಾಗಿ, ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಮತ್ತು ಇಂಧನ ಭದ್ರತೆ ಹೆಚ್ಚಾಗುತ್ತದೆ. ಇದು ಪರಿಸರವನ್ನು ರಕ್ಷಿಸುವುದರ ಜೊತೆಗೆ, ರೈತರಿಗೆ ಆರ್ಥಿಕ ಶಕ್ತಿಯನ್ನು ನೀಡುವ ಶಕ್ತಿ ಪಡೆದಿದೆ. ‘ಇ–20’ ಗುರಿ ಸಾಧನೆಯಿಂದ 2024ರಿಂದೀಚೆಗೆ ಎಥೆನಾಲ್ ಕಾರ್ಯಕ್ರಮದಿಂದ ದೇಶಕ್ಕೆ ಸುಮಾರು ₹1.44 ಲಕ್ಷ ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ಉಳಿದಿದೆ.
ತೈಲ ಆಮದಿನ ವೆಚ್ಚವು ದೇಶದ ಒಟ್ಟು ರಫ್ತು ಆದಾಯಕ್ಕಿಂತ ಹೆಚ್ಚಾದಾಗ ಚಾಲ್ತಿ ಖಾತೆ ಕೊರತೆ (ಸಿಎಡಿ) ಗಣನೀಯವಾಗಿ ಹೆಚ್ಚಾಗುತ್ತದೆ. ಕಚ್ಚಾ ತೈಲ ಬೆಲೆ ಏರಿಕೆಯಾದಾಗ, ಸಾರಿಗೆ ವೆಚ್ಚ ಹೆಚ್ಚಾಗಿ– ಆಹಾರ, ಸರಕು ಸಾಗಣೆ ಮತ್ತು ಸೇವೆಗಳ ಬೆಲೆಗಳು ಏರಿಕೆಗೊಂಡು, ದೇಶದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಈ ಆರ್ಥಿಕ ಹೊರೆಯಿಂದ ಪಾರಾಗಲು ಮತ್ತು ಇಂಧನ ಭದ್ರತೆಯನ್ನು ಸಾಧಿಸಲು ಎಥೆನಾಲ್ ಮಿಶ್ರಣ ಆಪತ್ಬಾಂಧವನಂತೆ ಕಾಣಿಸುತ್ತಿದೆ.
ಎಥೆನಾಲ್ ಮಿಶ್ರಣದಿಂದ ಹಳೆಯ ವಾಹನಗಳ ಎಂಜಿನ್‌ಗಳು ಮತ್ತು ಭಾಗಗಳು ಹಾನಿಗೊಳ ಗಾಗುತ್ತವೆ. ರಬ್ಬರ್, ಪ್ಲಾಸ್ಟಿಕ್ ಮತ್ತು ಕೆಲವು ಲೋಹದ ಘಟಕಗಳನ್ನು ಎಥೆನಾಲ್ ವೇಗವಾಗಿ ಸವೆಸುತ್ತದೆ. ‘ಇ–20’ ಇಂಧನಕ್ಕೆ ಹೊಂದಿಕೊಳ್ಳುವಂತೆ ವಾಹನ ತಯಾರಕರು ಹೊಸ ಎಂಜಿನ್‌ಗಳನ್ನು ವಿನ್ಯಾಸಗೊಳಿಸುವುದು ಸದ್ಯದ ತುರ್ತುಗಳಲ್ಲೊಂದು. ಸುಧಾರಿತ ಎಂಜಿನ್ ತಂತ್ರಜ್ಞಾನ (ಫ್ಲೆಕ್ಸ್–ಫ್ಯೂಯೆಲ್ ಎಂಜಿನ್‌ಗಳು) ಅಳವಡಿಕೆಯಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಅಮೆರಿಕ, ಬ್ರೆಜಿಲ್ ಮತ್ತು ಕೆನಡಾಗಳಲ್ಲಿ ‘ಇ–20’ರಿಂದ ‘ಇ–100’ವರೆಗಿನ ಎಥೆನಾಲ್ ಬಳಸಿ ಓಡುವ ವಾಹನಗಳಿವೆ. ಟಿವಿಎಸ್ ಕಂಪನಿಯು ಪುಣೆಯ ತನ್ನ ಘಟಕದಲ್ಲಿ ‘ಇ–80’ರಿಂದ ‘ಇ–100’ ಬಳಸಿ ಓಡುವ ‘ಅಪಾಚೆ’ ಹೆಸರಿನ ದ್ವಿಚಕ್ರ ವಾಹನ ತಯಾರಿಸುವಲ್ಲಿ ಯಶಸ್ವಿಯಾಗಿದೆ.
ಎಥೆನಾಲ್ ಉತ್ಪಾದನೆಗೆ ಧಾನ್ಯಗಳನ್ನು ಬಳಸು ವುದರಿಂದ ಆಹಾರ ಭದ್ರತೆಗೆ ಧಕ್ಕೆ ಬರುತ್ತದೆ ಮತ್ತು ಆಹಾರ ಬೆಳೆಗಳಿಗೆ ಮೀಸಲಾದ ಜಮೀನು ಒತ್ತುವರಿ ಯಾಗುತ್ತದೆ ಎಂಬ ಅಭಿಪ್ರಾಯವಿದೆ. ಕಬ್ಬು ಮತ್ತು ಮೆಕ್ಕೆಜೋಳದಂತಹ ಬೆಳೆಗಳ ಅಗತ್ಯ ಹೆಚ್ಚಾದಾಗ, ಅವುಗಳ ಕೃಷಿಗೆ ಹೆಚ್ಚಿನ ಪ್ರಮಾಣದ ನೀರು ಬೇಕಾಗು ತ್ತದೆಂಬ ಆತಂಕವೂ ಇದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ದತ್ತಾಂಶವು ಈ ಹೇಳಿಕೆಯನ್ನು ನಿರಾಕರಿಸುತ್ತದೆ. ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಯಲ್ಲಿ ಹೆಚ್ಚುವರಿ ಮತ್ತು ಮಾನವ ಬಳಕೆಗೆ ಅನರ್ಹವಾದ, ಹಾನಿಗೊಳಗಾದ ಆಹಾರೇತರ ಧಾನ್ಯಗಳನ್ನು ಬಳಸಲಾಗುತ್ತದೆ. ಇದರಿಂದ ಆಹಾರ ತ್ಯಾಜ್ಯ ಕಡಿಮೆಯಾಗುತ್ತದೆ ಮತ್ತು ಆಹಾರ ಲಭ್ಯತೆಗೆ ಧಕ್ಕೆಯಾಗುವುದಿಲ್ಲ. ಆಹಾರ ಧಾನ್ಯಗಳನ್ನು ಇಂಧನ ತಯಾರಿಕೆಗೆ ಬಳಸಿಯೂ ಭಾರತ ಧಾನ್ಯಗಳ ನಿವ್ವಳ ರಫ್ತುದಾರನಾಗಿದ್ದು, ಅಕ್ಕಿಯ ರಫ್ತಿನ ಪ್ರಮಾಣವು ಒಟ್ಟು ಉತ್ಪಾದನೆಯ ಶೇ 12ರಷ್ಟಿದೆ. ಕಳೆದೆರಡು ವರ್ಷಗಳಲ್ಲಿ ಭಾರತದ ಒಟ್ಟು ಕೃಷಿ ಪ್ರದೇಶವು 18 ದಶಲಕ್ಷ ಹೆಕ್ಟೇರ್‌ನಷ್ಟು ಹೆಚ್ಚಾಗಿದೆ.
ಪ್ರಸ್ತುತ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆ ಶೇ 51ರಷ್ಟಿದೆ. ದೇಶದ 90,000 ಪೆಟ್ರೋಲ್ ಬಂಕ್‌ಗಳಲ್ಲಿ ‘ಇ–20’ ಇಂಧನ ಲಭ್ಯವಿದೆ. ಎಥೆನಾಲ್ ಉತ್ಪಾದನೆಗೆ ಕಬ್ಬಿನ ಮೇಲಿನ ಅವಲಂಬನೆ ಕಡಿಮೆಯಾಗಿ, ಉತ್ಪಾದನಾ ವೆಚ್ಚವು ಕಡಿಮೆಯಾಗಿದೆ. ಆದರೆ, ಪೆಟ್ರೋಲ್ ದರ ಮಾತ್ರ 10 ಪೈಸೆಯೂ ಕಡಿಮೆಯಾಗಿಲ್ಲ.
ಕಬ್ಬು, ಜೋಳದಂತಹ ಬೆಳೆಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸುವುದರಿಂದ, ರೈತರಿಗೆ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗುತ್ತದೆ. ಇದು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿ, ಗ್ರಾಮೀಣ ಆರ್ಥಿಕತೆಗೆ ಚೈತನ್ಯ ತುಂಬಿ, ಕೃಷಿಕರ ಕಲ್ಯಾಣಕ್ಕೆ ಮತ್ತು ಆದಾಯ ಹೆಚ್ಚಳಕ್ಕೆ ಕೊಡುಗೆ ನೀಡುತ್ತದೆ. ಭಾರತದ ವಾರ್ಷಿಕ ಧಾನ್ಯ ಉತ್ಪಾದನೆಯು ಸರಿಸುಮಾರು 3,000 ಲಕ್ಷ ಟನ್‌ಗಳಷ್ಟಿದ್ದರೆ, ದೇಶೀಯ ಬಳಕೆ ಸುಮಾರು 2,000 ಲಕ್ಷ ಟನ್‌ಗಳಷ್ಟಿದೆ. ಈ ಹೆಚ್ಚುವರಿಯು, ಬಳಕೆ ಮತ್ತು ಎಥೆನಾಲ್ ಉತ್ಪಾದನೆ ಎರಡಕ್ಕೂ ಸಾಕಾಗುತ್ತದೆ.
ಪೆಟ್ರೋಲ್‌ಗೆ ಶೇ 20 ಎಥೆನಾಲ್ ಮಿಶ್ರಣ ಮಾಡುವ ಸರ್ಕಾರದ ನಿರ್ಧಾರವು ದೂರದೃಷ್ಟಿಯುಳ್ಳ ಕ್ರಮವಾಗಿದ್ದು, ಪಳೆಯುಳಿಕೆ ಇಂಧನಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುವತ್ತ ಇಟ್ಟಿರುವ ಪ್ರಮುಖ ಹೆಜ್ಜೆಯಾಗಿದೆ. ಈ ಬದಲಾವಣೆ ಯಶಸ್ವಿ ಆಗಬೇಕಾದರೆ, ಮೈಲೇಜ್ ಕಡಿತ ಮತ್ತು ಹಳೆಯ ವಾಹನಗಳ ‘ಇ–20’ ಹೊಂದಾಣಿಕೆಯ ಸವಾಲುಗಳನ್ನು ವಿಳಂಬವಿಲ್ಲದೆ ಪರಿಹರಿಸಬೇಕು. ಹಾಗೆಯೇ, ಆಹಾರ ಮತ್ತು ನೀರಿನ ಸಂಪನ್ಮೂಲಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗದಂತೆ ಎಥೆನಾಲ್ ಉತ್ಪಾದನಾ ನೀತಿಗಳನ್ನು ಸರ್ಕಾರ ರೂಪಿಸಬೇಕು. ಒಟ್ಟಿನಲ್ಲಿ, ದೂರಗಾಮಿ ಪರಿಣಾಮಗಳನ್ನುಳ್ಳ ಈ ಇಂಧನ ಕ್ರಾಂತಿಯು ಭಾರತಕ್ಕೆ ಬಹುದೊಡ್ಡ ಲಾಭ ತರಬಲ್ಲದು. ಆದರೆ, ಪೆಟ್ರೋಲ್‌ನಲ್ಲಿ ಹೆಚ್ಚಿನ ಎಥೆನಾಲ್ ಬಳಕೆಗೆ ಸಂಬಂಧಿಸಿದ ನೀತಿಯಲ್ಲಿ ಸರ್ಕಾರ ಸಮತೋಲನ ಕಾಪಾಡಿಕೊಳ್ಳುವುದು ಹಾಗೂ ಬಳಕೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.