ಮನ್‌ಸುಖ್ ಮಾಂಡವಿಯಾ
2047ರ ವೇಳೆಗೆ 'ವಿಕಸಿತ ಭಾರತ'ವನ್ನು ನಿರ್ಮಿಸುವತ್ತ ನಾವು ದಾಪುಗಾಲಿಡುತ್ತಿರುವ ಈ ಸಂದರ್ಭದಲ್ಲಿ, ಈ ಮಹತ್ವಾಕಾಂಕ್ಷಿ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಬಲ ಶಕ್ತಿಗಳಲ್ಲಿ ಭಾರತೀಯ ಕ್ರೀಡಾ ಕ್ಷೇತ್ರದ ಪುನರುತ್ಥಾನವೂ ಒಂದಾಗಿದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತೀಯ ಕ್ರೀಡೆಯು ಇಂದು ವಿಶ್ವ ವೇದಿಕೆಯಲ್ಲಿ ಹೊಸ ಶಿಖರಗಳನ್ನು ಏರುತ್ತಿದೆ. ತಳಮಟ್ಟದಿಂದ ಜಾಗತಿಕ ವೇದಿಕೆಗಳವರೆಗೆ, ಪ್ರಧಾನಮಂತ್ರಿಯವರ ದೃಷ್ಟಿಕೋನವು ಕ್ರೀಡಾ ಕ್ಷೇತ್ರದ ಬಗೆಗಿನ ಭಾರತದ ನಿಲುವನ್ನೇ ಪರಿವರ್ತಿಸಿದೆ. ಇದರ ಫಲವಾಗಿ, ನಮ್ಮ ಕ್ರೀಡಾಪಟುಗಳಿಗೆ ಇಂದು ವಿಶ್ವದರ್ಜೆಯ ಬೆಂಬಲ, ಅತ್ಯಾಧುನಿಕ ಸೌಲಭ್ಯಗಳು ಹಾಗೂ ಪ್ರತಿಭೆ ಮತ್ತು ಕಠಿಣ ಪರಿಶ್ರಮಕ್ಕೆ ಮನ್ನಣೆ ನೀಡುವ ಪಾರದರ್ಶಕ ವ್ಯವಸ್ಥೆಯು ಲಭ್ಯವಾಗಿದೆ.
ಇತ್ತೀಚೆಗಷ್ಟೇ, ನಮ್ಮ ಭಾರತೀಯ ಕ್ರೀಡಾಪಟುಗಳು ವಿಶ್ವ ವೇದಿಕೆಯಲ್ಲಿ ತಮ್ಮ ದಿಗ್ವಿಜಯದ ಪ್ರದರ್ಶನಗಳಿಂದ ರಾಷ್ಟ್ರದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾರೆ. ದಕ್ಷಿಣ ಕೊರಿಯಾದ ಗುಮಿಯಲ್ಲಿ ನಡೆದ 2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಿಂದ ಹಿಡಿದು, ಮಂಗೋಲಿಯಾದ ಉಲಾನ್ ಬಾತರ್ ನಲ್ಲಿ ನಡೆದ ವಿಶ್ವ ಕುಸ್ತಿ ರ್‍ಯಾಂಕಿಂಗ್ ಸರಣಿ 4ರ ವರೆಗೆ, ನಮ್ಮ ಕ್ರೀಡಾ ತಾರೆಯರು ತಮ್ಮ ಅದಮ್ಯ ಛಲ ಮತ್ತು ಪ್ರತಿಭೆಯಿಂದ ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. ವಿಶೇಷವಾಗಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತೀಯ ತಂಡವು ಪಾರಮ್ಯ ಮೆರೆದು, 24 ಪದಕಗಳನ್ನು ಕೊರಳಿಗೇರಿಸಿಕೊಳ್ಳುವುದರ ಜೊತೆಗೆ, ಹಲವು ರಾಷ್ಟ್ರೀಯ ದಾಖಲೆಗಳನ್ನು ಧೂಳೀಪಟ ಮಾಡಿತು.
ಇದೇ ವೇಳೆ, ನಮ್ಮ ಮಹಿಳಾ ಕುಸ್ತಿಪಟುಗಳು ಮಂಗೋಲಿಯಾದಿಂದ ದಾಖಲೆಯ 21 ಪದಕಗಳೊಂದಿಗೆ ಹಿಂತಿರುಗಿ, ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯವನ್ನೇ ಬರೆದಿದ್ದಾರೆ. ಇದು ರ‍್ಯಾಂಕಿಂಗ್ ಸರಣಿ ಸ್ಪರ್ಧೆಯೊಂದರಲ್ಲಿ ಅವರ ಸಾರ್ವಕಾಲಿಕ ಶ್ರೇಷ್ಠ ಸಾಧನೆಯಾಗಿದೆ. ಈ ಯಶಸ್ಸು ರಾತ್ರೋರಾತ್ರಿ ಬಂದಿದ್ದಲ್ಲ. ಸ್ವಾತಂತ್ರ್ಯ-ಪೂರ್ವ ಅವಧಿ ಸೇರಿದಂತೆ, ಮೊದಲ 23 ಒಲಿಂಪಿಕ್ ಆವೃತ್ತಿಗಳಲ್ಲಿ ಭಾರತವು ಗೆದ್ದಿದ್ದು ಕೇವಲ 26 ಪದಕಗಳು. ಆದರೆ, ಕಳೆದ ಮೂರು ಆವೃತ್ತಿಗಳಲ್ಲಿಯೇ (2016, 2020 ಮತ್ತು 2024) ಭಾರತವು 15 ಪದಕಗಳನ್ನು ಬಾಚಿಕೊಂಡಿದೆ. ಪ್ಯಾರಾಲಿಂಪಿಕ್ಸ್ ನಲ್ಲಿ ಈ ಏರಿಕೆಯು ಇನ್ನಷ್ಟು ಪ್ರಭಾವಶಾಲಿಯಾಗಿದೆ. 1968 ರಿಂದ 2012ರವರೆಗೆ ಕೇವಲ 8 ಪದಕಗಳನ್ನು ಗೆದ್ದಿದ್ದ ಭಾರತ, ಇದೀಗ ಕಳೆದ ಮೂರು ಆವೃತ್ತಿಗಳಲ್ಲಿ 52 ಪದಕಗಳನ್ನು ಗೆದ್ದಿದೆ. ಇದರಲ್ಲಿ 2024ರ ಪ್ಯಾರಿಸ್ ನಲ್ಲಿ ಪಡೆದ ದಾಖಲೆಯ 29 ಪದಕಗಳೂ ಸೇರಿವೆ.
ಈ ಸಾಧನೆಗಳು ಆಕಸ್ಮಿಕವಲ್ಲ. ಇವು ಕಳೆದ ಹನ್ನೊಂದು ವರ್ಷಗಳಲ್ಲಿ ನಿರ್ಮಿಸಲಾದ ಸಾಧನೆ-ಕೇಂದ್ರಿತ ಪರಿಸರ ವ್ಯವಸ್ಥೆಯ ಫಲಿತಾಂಶವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಪ್ರತಿಯೊಬ್ಬ ಕ್ರೀಡಾಪಟುವಿಗೂ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ವಿಶ್ವದರ್ಜೆಯ ತರಬೇತಿ, ಮೂಲಸೌಕರ್ಯ, ಆರ್ಥಿಕ ನೆರವು, ಕ್ರೀಡಾಪಟು-ಕೇಂದ್ರಿತ ಆಡಳಿತ ಮತ್ತು ಅವರು ಉನ್ನತಿ ಸಾಧಿಸಲು ಪೂರಕವಾದ ಪಾರದರ್ಶಕ ವ್ಯವಸ್ಥೆಯು ಸಿಗಬೇಕು ಎಂಬ ಸ್ಪಷ್ಟ ಮತ್ತು ನಿರ್ದಿಷ್ಟ ದೃಷ್ಟಿಕೋನವನ್ನು ತಂದಿದ್ದಾರೆ. 2014 ರಿಂದ, ಮೋದಿ ಸರ್ಕಾರವು ಪರಿವರ್ತನಾಶೀಲ ಸುಧಾರಣೆಗಳ ಮೂಲಕ ಬಲಿಷ್ಠ ಅಡಿಪಾಯವನ್ನು ಹಾಕಿದ್ದು, ಇವು ಭಾರತೀಯ ಕ್ರೀಡಾ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿವೆ.
ಈ ಕ್ರೀಡಾ ಸುಧಾರಣೆಗಳ ಕೇಂದ್ರಬಿಂದುವೇ 'ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ' (TOPS). 2014ರಲ್ಲಿ ಆರಂಭವಾದ ಈ ಯೋಜನೆಯು, ದೇಶದ ಅಗ್ರಗಣ್ಯ ಕ್ರೀಡಾಪಟುಗಳನ್ನು ಗುರುತಿಸಿ, ಅವರಿಗೆ ಬೆಂಬಲ ನೀಡುವುದನ್ನು ಗುರಿಯಾಗಿಸಿಕೊಂಡಿದೆ. ಕೇವಲ 75 ಕ್ರೀಡಾಪಟುಗಳಿಂದ ಆರಂಭವಾದ ಈ ಯೋಜನೆಯ ವ್ಯಾಪ್ತಿಯು, ಇದೀಗ ಲಾಸ್ ಏಂಜಲೀಸ್ 2028ರ ಒಲಿಂಪಿಕ್ಸ್ ಗಾಗಿ 213 ಕ್ರೀಡಾಪಟುಗಳಿಗೆ ವಿಸ್ತರಿಸಿದೆ. ಇವರಲ್ಲಿ 52 ಪ್ಯಾರಾ-ಅಥ್ಲೀಟ್ ಗಳು ಮತ್ತು ಅಭಿವೃದ್ಧಿ ವಿಭಾಗದ 112 ಕ್ರೀಡಾಪಟುಗಳು ಸೇರಿದ್ದಾರೆ. ಇದಲ್ಲದೆ, ಸಾಂಪ್ರದಾಯಿಕವಾಗಿ ಮುನ್ನೆಲೆಗೆ ಬಾರದ ಕ್ರೀಡೆಗಳನ್ನು ಬೆಂಬಲಿಸಲು ಸಹ ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ವರ್ಷ ಪರಿಚಯಿಸಲಾದ 'ಟಾರ್ಗೆಟ್ ಏಷ್ಯನ್ ಗೇಮ್ಸ್ ಗ್ರೂಪ್' (TAGG) ಅಂತಹ ಒಂದು ಮಹತ್ವದ ಉಪಕ್ರಮ. ಈ ಯೋಜನೆಯು, ಫೆನ್ಸಿಂಗ್, ಸೈಕ್ಲಿಂಗ್, ಈಕ್ವೆಸ್ಟ್ರಿಯನ್ (ಅಶ್ವಾರೋಹಣ), ಸೈಲಿಂಗ್, ಕಯಾಕಿಂಗ್ ಮತ್ತು ಕ್ಯಾನೋಯಿಂಗ್, ಜುಡೋ, ಟೇಕ್ವಾಂಡೋ, ಟೆನಿಸ್, ಟೇಬಲ್ ಟೆನಿಸ್ ಮತ್ತು ವುಶು ಸೇರಿದಂತೆ 10 ಕ್ರೀಡೆಗಳಲ್ಲಿ, ಪದಕ ಗೆಲ್ಲುವ ಸಾಮರ್ಥ್ಯವಿರುವ 40 ಕ್ರೀಡಾಪಟುಗಳನ್ನು ಬೆಂಬಲಿಸುತ್ತದೆ.
ಈ ಕ್ರೀಡಾ ಸಾಧನೆಗಳ ಹಿಂದಿರುವುದು ಕೇವಲ ದೂರದೃಷ್ಟಿಯಲ್ಲ, ಬದಲಿಗೆ ಸರ್ಕಾರದ ಗಣನೀಯ ಆರ್ಥಿಕ ಬದ್ಧತೆಯೂ ಸೇರಿದೆ. ಕಳೆದ ದಶಕದಲ್ಲಿ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಅನುದಾನವು ಮೂರು ಪಟ್ಟು ಅಧಿಕಗೊಂಡಿದೆ; 2013-14ರಲ್ಲಿ ಕೇವಲ ₹1,219 ಕೋಟಿಯಷ್ಟಿದ್ದ ಬಜೆಟ್, 2025-26ರ ಹೊತ್ತಿಗೆ ₹3,794 ಕೋಟಿಗೆ ಜಿಗಿದಿದೆ. ತಳಮಟ್ಟದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ನಿರ್ಮಿಸಿ, ವರ್ಷಪೂರ್ತಿ ಸ್ಪರ್ಧೆಗಳಿಗೆ ವೇದಿಕೆ ಕಲ್ಪಿಸಲು 2017ರಲ್ಲಿ 'ಖೇಲೋ ಇಂಡಿಯಾ' ಯೋಜನೆಗೆ ಚಾಲನೆ ನೀಡಲಾಯಿತು. ಈ ಯೋಜನೆಗೆ ಮೀಸಲಿಟ್ಟ ಅನುದಾನವು ಈ ವರ್ಷ ₹1,000 ಕೋಟಿಗೆ ಏರಿದೆ. ಈ ಹೂಡಿಕೆಗಳು ದೇಶದ ಮೂಲೆಮೂಲೆಯ ಪ್ರತಿಭೆಗಳನ್ನು ಪೋಷಿಸಿ, ಯುವ ಕ್ರೀಡಾಪಟುಗಳಿಗಾಗಿ ಒಂದು ಚೈತನ್ಯಪೂರ್ಣ ಸ್ಪರ್ಧಾತ್ಮಕ ವಾತಾವರಣವನ್ನು ರೂಪಿಸುತ್ತಿವೆ.
ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಬೆಂಬಲವನ್ನು ನೀಡಲಾಗುತ್ತಿದೆ. ಅಂತರರಾಷ್ಟ್ರೀಯ ಪಂದ್ಯಾವಳಿಗಳು ಮತ್ತು ರಾಷ್ಟ್ರೀಯ ಚಾಂಪಿಯನ್ಶಿಪ್ಗಳ ಆಯೋಜನೆಗೆ ನೀಡುವ ಆರ್ಥಿಕ ನೆರವನ್ನು ದ್ವಿಗುಣಗೊಳಿಸಲಾಗಿದೆ, ತರಬೇತುದಾರರ ಪ್ರೋತ್ಸಾಹಧನವನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ ಮತ್ತು ಉನ್ನತ ಮಟ್ಟದ ತರಬೇತಿಗೆ ಅನುಗುಣವಾಗಿ ಕ್ರೀಡಾಪಟುಗಳ ಪೌಷ್ಟಿಕ ಆಹಾರ ಭತ್ಯೆಯನ್ನೂ ಏರಿಸಲಾಗಿದೆ.
ಈ ಗುರಿ-ಕೇಂದ್ರಿತ ಪ್ರಯತ್ನಗಳು, ಭಾರತವು ವಿವಿಧ ಕ್ರೀಡೆಗಳಲ್ಲಿ ಪದಕ ಗೆಲ್ಲುವ ಸಾಧ್ಯತೆಗಳನ್ನು ವಿಸ್ತರಿಸಲು ಮತ್ತು ಸದೃಢ ಪ್ರತಿಭೆಗಳ ಪಡೆಯೊಂದನ್ನು ಸೃಷ್ಟಿಸಲು ನೆರವಾಗುತ್ತಿವೆ.
ಪಾರದರ್ಶಕತೆಗೆ ಒತ್ತು ನೀಡಿರುವುದು, ಇತ್ತೀಚಿನ ಸುಧಾರಣೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ. ಎಲ್ಲಾ ಕ್ರೀಡಾ ಒಕ್ಕೂಟಗಳು ಈಗ ಪ್ರಮುಖ ಸ್ಪರ್ಧೆಗಳಿಗೆ ಎರಡು ವರ್ಷ ಮುಂಚಿತವಾಗಿ ಆಯ್ಕೆ ಮಾನದಂಡಗಳನ್ನು ಪ್ರಕಟಿಸುವುದು ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ವೀಡಿಯೊ ರೆಕಾರ್ಡ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕ್ರಮವು ಆಯ್ಕೆಯಲ್ಲಿ ನಿಷ್ಪಕ್ಷಪಾತವನ್ನು ಖಾತ್ರಿಪಡಿಸುತ್ತದೆ, ಕ್ರೀಡಾಪಟುಗಳಲ್ಲಿ ಭರವಸೆಯನ್ನು ಮೂಡಿಸುತ್ತದೆ ಮತ್ತು ಸಂಪೂರ್ಣ ವ್ಯವಸ್ಥೆಯನ್ನು ಅರ್ಹತೆಯ ಮೇಲೆ ನಿಲ್ಲುವಂತೆ ಮಾಡುತ್ತದೆ. ವಾಸ್ತವವಾಗಿ, ಇತ್ತೀಚಿನ ಕ್ರೀಡಾ ನೀತಿ ರಚನೆಯಲ್ಲಿ ಕ್ರೀಡಾಪಟು-ಕೇಂದ್ರಿತ ಸುಧಾರಣೆಗಳಿಗೆ ಅಗ್ರಸ್ಥಾನ ನೀಡಲಾಗಿದೆ. ಕ್ರೀಡಾ ಪ್ರಮಾಣಪತ್ರಗಳನ್ನು ಈಗ 'ಡಿಜಿಲಾಕರ್' ಮೂಲಕ ವಿತರಿಸಿ, 'ರಾಷ್ಟ್ರೀಯ ಕ್ರೀಡಾ ರೆಪೊಸಿಟರಿ ವ್ಯವಸ್ಥೆ'ಗೆ ಜೋಡಿಸುವ ಮೂಲಕ, ಕ್ರೀಡಾಪಟುಗಳಿಗೆ ಸುಭದ್ರ ಮತ್ತು ಬದಲಾಯಿಸಲಾಗದ ದಾಖಲೆಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ಅಂತಿಮ ಹಂತದಲ್ಲಿರುವ 'ಕರಡು ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ' ಮತ್ತು 'ಕರಡು ರಾಷ್ಟ್ರೀಯ ಕ್ರೀಡಾ ನೀತಿ 2024' - ಇವೆರಡೂ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಿ, ಕ್ರೀಡಾಪಟುಗಳ ಕಲ್ಯಾಣವನ್ನು ನೀತಿ-ರಚನೆಯ ಕೇಂದ್ರಬಿಂದುವಾಗಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಿವೆ. ಹೊಸ ವೈದ್ಯಕೀಯ ತಪಾಸಣೆ ಮತ್ತು ಕಠಿಣ ದಂಡಗಳ ಮೂಲಕ ವಯಸ್ಸಿನ ವಂಚನೆಗೆ ಕಡಿವಾಣ ಹಾಕಲಾಗುತ್ತಿದೆ. ಇದಲ್ಲದೆ, ನಿಯಮಗಳ ಉತ್ತಮ ಪಾಲನೆ ಮತ್ತು ಹೆಚ್ಚಿದ ಪಾರದರ್ಶಕತೆಯನ್ನು ಖಚಿತಪಡಿಸಲು ಒಕ್ಕೂಟಗಳು 'ಸಮಗ್ರತಾ ಅಧಿಕಾರಿಗಳನ್ನು' (Integrity Officers) ನೇಮಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ಒಲಿಂಪಿಕ್ ಕ್ರೀಡೆಗಳ ಜೊತೆಗೆ, ನಮ್ಮ ಸಾಂಪ್ರದಾಯಿಕ ಭಾರತೀಯ ಕ್ರೀಡೆಗಳಾದ ಮಲ್ಲಕಂಬ, ಕಲರಿಪಯಟ್ಟು, ಯೋಗಾಸನ, ಗಟ್ಕಾ ಮತ್ತು ಥಂಗ್-ಟಾಗಳನ್ನು ಖೇಲೋ ಇಂಡಿಯಾ ಕ್ರೀಡಾಕೂಟದ ಮೂಲಕ ಪುನರುಜ್ಜೀವನಗೊಳಿಸಿ ಉತ್ತೇಜಿಸಲಾಗುತ್ತಿದೆ. ಕಬಡ್ಡಿ ಮತ್ತು ಖೋ-ಖೋದಂತಹ ಸ್ಥಳೀಯ ಕ್ರೀಡೆಗಳು ಈಗ ಅಂತರರಾಷ್ಟ್ರೀಯ ಮನ್ನಣೆಯನ್ನು ಪಡೆಯುತ್ತಿವೆ, ಆ ಮೂಲಕ ಭಾರತದ ವೈಭವಯುತ ಕ್ರೀಡಾ ಪರಂಪರೆಯನ್ನು ಜಗತ್ತಿನ ಮುಂದೆ ಹೆಮ್ಮೆಯಿಂದ ಅನಾವರಣಗೊಳಿಸುತ್ತಿವೆ.
ಕ್ರೀಡಾ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವ ಪ್ರಯತ್ನವೂ ಒಂದು ಮಹತ್ವದ ಮೈಲಿಗಲ್ಲಾಗಿದೆ. ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಆರಂಭಿಸಲಾದ 'ಅಸ್ಮಿತಾ ಲೀಗ್' (ASMITA - Achieving Sports Milestones by Inspiring Women Through Action) ಅತಿ ವೇಗವಾಗಿ ಬೆಳೆದಿದೆ. 2021-22ರಲ್ಲಿ ಕೇವಲ 840 ಮಹಿಳಾ ಕ್ರೀಡಾಪಟುಗಳೊಂದಿಗೆ ಆರಂಭವಾದ ಈ ಲೀಗ್, 2024-25ರ ಹೊತ್ತಿಗೆ 26 ಕ್ರೀಡೆಗಳಲ್ಲಿ 60,000ಕ್ಕೂ ಹೆಚ್ಚು ಮಹಿಳೆಯರನ್ನು ತಲುಪುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. 'ಅಸ್ಮಿತಾ ಲೀಗ್' ಈ ಕ್ರೀಡಾಪಟುಗಳನ್ನು 'ಖೇಲೋ ಇಂಡಿಯಾ'ದ ಮುಖ್ಯವಾಹಿನಿಗೆ ಸೇರಿಸಿ, ಅವರಿಗೆ ನಿರ್ಣಾಯಕ ವೇದಿಕೆ ಮತ್ತು ಸ್ಪರ್ಧಾತ್ಮಕ ಅವಕಾಶಗಳನ್ನು ಕಲ್ಪಿಸುತ್ತದೆ.
ಕಳೆದ 11 ವರ್ಷಗಳಲ್ಲಿ ಭಾರತದ ಕ್ರೀಡಾ ಮೂಲಸೌಕರ್ಯವು ಅಭೂತಪೂರ್ವ ಮಟ್ಟದಲ್ಲಿ ವಿಸ್ತರಣೆಗೊಂಡಿದೆ. 2014ಕ್ಕೆ ಮುನ್ನ ಕೇವಲ 38ರಲ್ಲಿದ್ದ ಕ್ರೀಡಾ ಮೂಲಸೌಕರ್ಯ ಯೋಜನೆಗಳ ಸಂಖ್ಯೆ, ಇದೀಗ 350ರ ಗಡಿ ದಾಟಿದೆ. ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನಿರ್ವಹಿಸುತ್ತಿರುವ 23 'ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರ'ಗಳಲ್ಲಿ, TOPS ಮತ್ತು ಖೇಲೋ ಇಂಡಿಯಾ ಯೋಜನೆಗಳ ಅಡಿಯಲ್ಲಿ ದೇಶದ ಶ್ರೇಷ್ಠ ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ರಾಷ್ಟ್ರೀಯ ಕೇಂದ್ರಗಳ ಜೊತೆಗೆ, ದೇಶದ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 34 'ರಾಜ್ಯ ಮಟ್ಟದ ಉತ್ಕೃಷ್ಟತಾ ಕೇಂದ್ರ'ಗಳು ಹಾಗೂ 757 ಜಿಲ್ಲೆಗಳಲ್ಲಿ 1,048 'ಖೇಲೋ ಇಂಡಿಯಾ ಕೇಂದ್ರ'ಗಳ ಬೃಹತ್ ಜಾಲವನ್ನೇ ಸ್ಥಾಪಿಸಲಾಗಿದೆ. ಈ ವಿಸ್ತಾರವಾದ ಜಾಲವು, ತಳಮಟ್ಟದಲ್ಲಿಯೇ ಪ್ರತಿಭೆಗಳನ್ನು ಅನ್ವೇಷಿಸಿ, ಅವರಿಗೆ ಸೂಕ್ತ ಪೋಷಣೆ ನೀಡಿ, ರಾಷ್ಟ್ರಮಟ್ಟಕ್ಕೆ ಸಿದ್ಧಪಡಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ.
'ಖೇಲೋ ಇಂಡಿಯಾ ಗೇಮ್ಸ್' ಈಗ ಒಂದು ರಾಷ್ಟ್ರೀಯ ಆಂದೋಲನವಾಗಿ ರೂಪುಗೊಂಡಿದೆ. ಯೂತ್ (ಯುವ), ಯೂನಿವರ್ಸಿಟಿ (ವಿಶ್ವವಿದ್ಯಾಲಯ), ಪ್ಯಾರಾ, ವಿಂಟರ್ (ಚಳಿಗಾಲದ) ಮತ್ತು ಬೀಚ್ ಗೇಮ್ಸ್ ಸೇರಿದಂತೆ, ಇಲ್ಲಿಯವರೆಗೆ ಹತ್ತೊಂಬತ್ತು ಆವೃತ್ತಿಗಳು ನಡೆದಿವೆ. ಇವುಗಳಲ್ಲಿ 56,000ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ವಿಶೇಷವಾಗಿ, 'ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್' ಒಂದು ಮಹತ್ವದ ಬದಲಾವಣೆಗೆ ಕಾರಣವಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನೇಕ ಕ್ರೀಡಾಪಟುಗಳು ಮುಂದೆ ಪ್ಯಾರಾಲಿಂಪಿಕ್ಸ್ ನಲ್ಲಿ ಪದಕಗಳನ್ನು ಗೆದ್ದಿದ್ದಾರೆ.
ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, 2030ರ ಕಾಮನ್ ವೆಲ್ತ್ ಗೇಮ್ಸ್ ಮತ್ತು 2036ರ ಒಲಿಂಪಿಕ್ ಗೇಮ್ಸ್ ಗೆ ಆತಿಥ್ಯ ವಹಿಸುವ ಸಂಭಾವ್ಯ ಬಿಡ್ ಗಾಗಿ ಭಾರತವು ಸಿದ್ಧತೆ ನಡೆಸುತ್ತಿದೆ. ಈ ದೃಷ್ಟಿಕೋನವನ್ನು ಬೆಂಬಲಿಸಲು, ವರ್ಷಪೂರ್ತಿ ಸ್ಪರ್ಧೆ ಮತ್ತು ಪ್ರತಿಭಾ ಶೋಧವನ್ನು ಖಚಿತಪಡಿಸಲು 'ಖೇಲೋ ಇಂಡಿಯಾ' ಅಡಿಯಲ್ಲಿ ಸ್ಕೂಲ್ ಗೇಮ್ಸ್ (ಶಾಲಾ ಕ್ರೀಡೆಗಳು), ಟ್ರೈಬಲ್ ಗೇಮ್ಸ್ (ಬುಡಕಟ್ಟು ಕ್ರೀಡೆಗಳು), ನಾರ್ತ್-ಈಸ್ಟ್ ಗೇಮ್ಸ್ (ಈಶಾನ್ಯ ಕ್ರೀಡೆಗಳು), ವಾಟರ್ ಗೇಮ್ಸ್ (ಜಲಕ್ರೀಡೆಗಳು), ಮಾರ್ಷಲ್ ಆರ್ಟ್ಸ್ ಗೇಮ್ಸ್ (ಸಮರ ಕಲೆಗಳ ಕ್ರೀಡೆಗಳು), ಮತ್ತು ಸ್ವದೇಶಿ ಗೇಮ್ಸ್ (ದೇಶಿ ಕ್ರೀಡೆಗಳು) ನಂತಹ ಹೊಸ ವಿಭಾಗಗಳನ್ನು ಪ್ರಾರಂಭಿಸಲಾಗುತ್ತಿದೆ. ಇವುಗಳ ಪೈಕಿ, ಮುಂಬರುವ 'ಖೇಲೋ ಇಂಡಿಯಾ ಸ್ಕೂಲ್ ಗೇಮ್ಸ್', ಚಿಕ್ಕ ವಯಸ್ಸಿನಿಂದಲೇ ಕ್ರೀಡಾಪಟುಗಳನ್ನು ಗುರುತಿಸಿ ಪೋಷಿಸುವ ಮೂಲಕ, ಕ್ರೀಡಾ ಪರಿಸರ ವ್ಯವಸ್ಥೆಗೆ ಹೊಸ ಪ್ರತಿಭೆಗಳನ್ನು ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಕೇವಲ ಕ್ರೀಡೆಗಳಷ್ಟೇ ಅಲ್ಲ, ಫಿಟ್ ನೆಸ್ ನಲ್ಲಿ ಸಮುದಾಯದ ಭಾಗವಹಿಸುವಿಕೆಯೂ ಇದೀಗ ಒಂದು ಜನಾಂದೋಲನವಾಗಿ ರೂಪುಗೊಂಡಿದೆ. 2024ರ ಡಿಸೆಂಬರ್ ನಲ್ಲಿ ಆರಂಭವಾದ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಅಭಿಯಾನವು ಇದಕ್ಕೆ ಸಾಕ್ಷಿಯಾಗಿದೆ. ಕೇವಲ 150 ಜನರಿಂದ ಆರಂಭವಾದ ಈ ಅಭಿಯಾನ, ಈಗ 10,000ಕ್ಕೂ ಹೆಚ್ಚು ಸ್ಥಳಗಳಿಗೆ ವಿಸ್ತರಿಸಿದ್ದು, 3.5 ಲಕ್ಷಕ್ಕೂ ಹೆಚ್ಚು ನಾಗರಿಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಜೂನ್ 1 ರಂದು ಆಯೋಜಿಸಲಾದ 25ನೇ ಆವೃತ್ತಿಯನ್ನು, ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಲು ಮತ್ತು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲು 'ತಿರಂಗಾ ರ‍್ಯಾಲಿ'ಯಾಗಿ ಆಚರಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ದೂರದ ಜಿಲ್ಲೆಗಳೂ ಸೇರಿದಂತೆ, 5,000 ಸ್ಥಳಗಳಲ್ಲಿ 75,000ಕ್ಕೂ ಹೆಚ್ಚು ನಾಗರಿಕರು ಈ ರ‍್ಯಾಲಿಯಲ್ಲಿ ಪಾಲ್ಗೊಂಡರು.
ಫಿಟ್ ನೆಸ್ ನ ಮಹತ್ವವನ್ನು ಸಾರಲು, ವೈದ್ಯರು, ಸರ್ಕಾರಿ ನೌಕರರು, ಶಿಕ್ಷಕರು ಸೇರಿದಂತೆ ಸಮಾಜದ ವಿವಿಧ ವರ್ಗದವರು ಈ ಸಾಪ್ತಾಹಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ, 'ಫಿಟ್ ಇಂಡಿಯಾ ಆಂದೋಲನ'ವು ಫಿಟ್ ನೆಸ್ ನ ಸಂದೇಶವನ್ನು ದೇಶದ ಪ್ರತಿ ಮನೆ-ಮನೆಗೂ ತಲುಪಿಸುತ್ತಿದೆ.
2036ರ ಒಲಿಂಪಿಕ್ಸ್ ಗೆ ಭಾರತ ಆತಿಥ್ಯ ವಹಿಸುವ ಹೊತ್ತಿಗೆ, ಜಗತ್ತಿನ ಅಗ್ರ 10 ಕ್ರೀಡಾ ರಾಷ್ಟ್ರಗಳ ಸಾಲಿಗೆ ಸೇರುವುದು ಮತ್ತು 2047ರಲ್ಲಿ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ, ಅಗ್ರ 5 ರಾಷ್ಟ್ರಗಳಲ್ಲಿ ಒಂದಾಗಿ ಮೆರೆಯುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ದೃಷ್ಟಿಯಾಗಿದೆ. ಈ ಗುರಿ ಸಾಧನೆಗೆ ಬಲಿಷ್ಠ ಅಡಿಪಾಯ ಹಾಕಲು, ದೇಶದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ನಿರ್ಣಾಯಕವಾದ ಪ್ರಮುಖ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ಈ ದೃಷ್ಟಿಕೋನವನ್ನು ಈಡೇರಿಸಲು ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಲಾಗಿದ್ದರೂ, ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ.
ಇಂದು ಭಾರತದ ಕ್ರೀಡಾ ಕ್ರಾಂತಿಯು ದೂರದೃಷ್ಟಿ, ದೃಢ ಸಂಕಲ್ಪ ಮತ್ತು ಸರ್ವರನ್ನೊಳಗೊಂಡ ಬೆಳವಣಿಗೆಯ ಯಶೋಗಾಥೆಯಾಗಿದೆ. ಈ ಪರಿವರ್ತನೆಯ ಕೇಂದ್ರಬಿಂದು ನಮ್ಮ ಯುವಶಕ್ತಿಯೇ ಆಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕ್ರಿಯಾಶೀಲ ನಾಯಕತ್ವದಲ್ಲಿ ಭಾರತವು ಜಾಗತಿಕ ಕ್ರೀಡಾಲೋಕದಲ್ಲಿ ಒಂದು ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಕೇವಲ ಪದಕಗಳಲ್ಲ, ಮನಸ್ಥಿತಿಗಳಲ್ಲಿಯೂ ಆದ ಈ ಪರಿವರ್ತನೆಯು ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಮತ್ತು 'ವಿಕಸಿತ ಭಾರತ'ದತ್ತ ಸಾಗುವ ನಮ್ಮ ಮಹಾನ್ ಪಯಣಕ್ಕೆ ಕ್ರೀಡಾ ಸ್ಪೂರ್ತಿಯು ಚೈತನ್ಯ ತುಂಬುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.