ADVERTISEMENT

ವಿಶ್ಲೇಷಣೆ | ಇರುಳನು ನುಂಗುವ ಬೆಳಕು

ಅತಿಯಾದ ಶಬ್ದ ಹೇಗೆ ನಮಗೆ ಮಾರಕವೋ ಹಾಗೆಯೇ ಅತಿಯಾದ ಬೆಳಕು ಕೂಡ

ಟಿ.ಆರ್.ಅನಂತರಾಮು
Published 18 ಜನವರಿ 2025, 0:30 IST
Last Updated 18 ಜನವರಿ 2025, 0:30 IST
   

ಪ್ರಕೃತಿಯ ಸಹಜ ವಿದ್ಯಮಾನಗಳಲ್ಲಿ ಮೂಗು ತೂರಿಸುವುದು, ಅದಕ್ಕೆ ಬೆಲೆ ತೆತ್ತು ಮತ್ತೆ ಪರಿತಪಿಸುವುದು ನಾಗರಿಕ ಮನುಷ್ಯನ ಇತಿಹಾಸದುದ್ದಕ್ಕೂ ನಡೆದೇ ಇದೆ. ಕಾಡಾಯಿತು, ನಾಡಾಯಿತು, ನೆಲ, ಜಲ, ಬಾನಾಯಿತು... ಈಗ ಮಾಲಿನ್ಯದ ಸರದಿ ಬೆಳಕಿನದು.

ಬೆಳಕನ್ನು ಬರಮಾಡಿಕೊಳ್ಳುವುದೆಂದರೆ ಅದು ಜ್ಞಾನದ ಆವಾಹನೆ, ಬೌದ್ಧಿಕ ಪ್ರಗತಿ ಎನ್ನುವುದು ತಲೆತಲಾಂತರದಿಂದ ಬಂದ ಅರ್ಥ. ‘ಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ, ಕಿಟಕಿ ಬಾಗಿಲು ತೆರೆದು ಬರಮಾಡಿಕೋ ಒಳಗೆ’ ಎನ್ನುವ ರಾಘವೇಂದ್ರ ಇಟಗಿ ಅವರ ಕವನದ ಸಾಲು ಇದನ್ನೇ ಧ್ವನಿಸುತ್ತದೆ. ಆದರೆ ಈಗಿನ ಪರಿಸ್ಥಿತಿ ಉಲ್ಟಾ ಆಗಿದೆ. ರಾತ್ರಿಯ ಕೃತಕ ಬೆಳಕು ಅಂದರೆ ನಮ್ಮ ವಿದ್ಯುದ್ದೀಪ ಅಗತ್ಯಕ್ಕಿಂತ ಹೆಚ್ಚಾಗಿ ಕೋರೈಸಿ ಇಡೀ ಜೀವಿಸಂಕುಲದ ದೈನಿಕ ಲಯವನ್ನೇ ತಪ್ಪಿಸುತ್ತಿದೆ ಎಂಬ ಅಳುಕು ಪರಿಸರ ಪ್ರಿಯರಿಗಷ್ಟೇ ಅಲ್ಲ, ವೈದ್ಯಕೀಯ ಕ್ಷೇತ್ರದಲ್ಲೂ ತಳಮಳ ತಂದಿದೆ.

ಬೆಳಕೆಂದರೆ ರಾತ್ರಿಯನ್ನು ಕದಿಯುವ ಕಳ್ಳ, ಒಂದರ್ಥದಲ್ಲಿ ಹಗಲು ದರೋಡೆ ಕೂಡ. ಇದು ಆಧುನಿಕ ಬದುಕಿನ ಪ್ರಸಾದ. ಬೆಳಕಿನ ಮಾಲಿನ್ಯವೆಂದರೆ ಅದರ ಅರ್ಥ ಅಗತ್ಯಕ್ಕಿಂತ ಹೆಚ್ಚು ಬೆಳಕಿನ ಬಳಕೆ. ಅತಿ ಶಬ್ದ ಹೇಗೆ ನಮಗೆ ಮಾರಕವೋ ಹಾಗೆಯೇ ಅತಿ ಬೆಳಕು ಕೂಡ.

ADVERTISEMENT

ಇಂದಿನ ದಿನಗಳಲ್ಲಿ ಜಗತ್ತಿನಲ್ಲಿ ಅತಿ ಮಾಲಿನ್ಯಕಾರಕ ದೇಶಗಳು ಯಾವುವು, ಅತಿಯಾಗಿ ಭೂಮಿಯಿಂದ ನೀರನ್ನೆತ್ತಿ ಬರಡು ಮಾಡುತ್ತಿರುವ ದೇಶಗಳು ಯಾವುವು, ಅತಿ ತೈಲದ ಬಳಕೆಯ ದೇಶಗಳು ಯಾವುವು ಎಂಬುದನ್ನು ಬೊಟ್ಟು ಮಾಡುವುದು ಕಷ್ಟವಲ್ಲ. ಈ ಪಟ್ಟಿಯನ್ನೇ ಮುಂದುವರಿಸಿ, ಅತಿ ಬೆಳಕನ್ನು ಬಳಸಿದ ಆರೋಪಕ್ಕೆ ಗುರಿಯಾಗಿರುವ ದೇಶಗಳು ಯಾವುವು ಎಂಬುದನ್ನು ಗುರುತಿಸುವುದೂ ಕಷ್ಟವಲ್ಲ. ಸಿಂಗಪುರ, ಕುವೈತ್‌, ಕತಾರ್, ಯುಎಇ, ದಕ್ಷಿಣ ಕೊರಿಯಾ ಇವು ಬೆಳಕಿನ ಮಾಲಿನ್ಯಕ್ಕೆ ಹೆಸರಾದ ದೇಶಗಳು. ಈ ದೇಶಗಳ ನಗರವಾಸಿಗಳು ರಾತ್ರಿಯಾಕಾಶದಲ್ಲಿ ನಕ್ಷತ್ರ, ಗ್ರಹಗಳನ್ನು ಗುರುತಿಸುವ ಹವ್ಯಾಸ ಕೈಬಿಟ್ಟು ಹಲವು ದಶಕಗಳೇ ಆಗಿವೆ. ಜಗತ್ತಿನಾದ್ಯಂತ ಐವತ್ತು ಸಾವಿರಕ್ಕೂ ಮಿಕ್ಕು ಆಕಾಶ ವೀಕ್ಷಕರದು ಅದೇ ಅಳಲು. ಅಂದರೆ ವರ್ಷದಿಂದ ವರ್ಷಕ್ಕೆ ನಕ್ಷತ್ರ ವೀಕ್ಷಣೆಯಲ್ಲಿ ಶೇ 10ರಷ್ಟು ಭಾಗ ಕುಸಿಯುತ್ತಿದೆ. ಅಷ್ಟರಮಟ್ಟಿಗೆ ಬೆಳಕು ರಾತ್ರಿಯಾಗಸವನ್ನು ಆಕ್ರಮಿಸಿದೆ. ಅದರಲ್ಲೂ ನಗರವಾಸಿಗಳು ನಮ್ಮ ಕ್ಷೀರಪಥವನ್ನು ಕಾಣುವುದಂತೂ ತೀರಾ ಅಸಂಭವ.

ಸಮೀಕ್ಷೆಯೊಂದರ ಪ್ರಕಾರ, ಜಗತ್ತಿನ ಜನಸಂಖ್ಯೆಯ ಮೂರನೇ ಒಂದು ಭಾಗ ಕ್ಷೀರಪಥದ ವೀಕ್ಷಣೆಯಿಂದ ವಂಚಿತವಾಗಿದೆ. ‘ಡಾರ್ಕ್‌ ಸ್ಕೈ ಇಂಟರ್‌ನ್ಯಾಷನಲ್‌’ ಎಂಬ ಸಂಸ್ಥೆ ಬೆಚ್ಚಿಬೀಳಿಸುವ ಇನ್ನೊಂದು ಅಂಶವನ್ನೂ ವರದಿ ಮಾಡಿದೆ. ಜಗತ್ತಿನ ಬಹಳಷ್ಟು ನಗರಗಳ ಜನ ಬೆಳಕು ಮಾಲಿನ್ಯದ ಪ್ರದೇಶಗಳಲ್ಲೇ ಬದುಕುತ್ತಿದ್ದಾರೆ. ಇದೀಗ ಅತಿ ಬೆಳಕು ಬೀರುತ್ತಿರುವ ದೇಶಗಳ ನಕ್ಷೆಯೂ ತಯಾರಾಗಿದೆ.

ಇನ್ನೊಂದು ವೈರುಧ್ಯ ನೋಡಿ. ಜಾಗತಿಕ ಮಟ್ಟದಲ್ಲಿ ತಯಾರಿಸಿದ ‘ಸುಸ್ಥಿರ ಅಭಿವೃದ್ಧಿ ಗುರಿ– 2023’ ವರದಿಯ ಪ್ರಕಾರ, ಈಗಲೂ ಜಗತ್ತಿನಲ್ಲಿ ವಿದ್ಯುದ್ದೀಪವಿಲ್ಲದೆ ಬಾಳ್ವೆ ಮಾಡುತ್ತಿರುವವರ ಸಂಖ್ಯೆ ಸುಮಾರು 75 ಕೋಟಿ. ಇವರೆಲ್ಲ ಅಭಿವೃದ್ಧಿ ಕಾಣದ ದೇಶಗಳಲ್ಲಿ ಇರುವುದೇ ಹೆಚ್ಚು. ಝಗಮಗಿಸುವ ಬೆಳಕು ಹೆಚ್ಚು ಕಂಡುಬರುವುದು ಚರ್ಚು, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಸ್ಮಾರಕಗಳ ಸುತ್ತಮುತ್ತ. ಇದು ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ ಕಂಡುಬರುವ ಸರ್ವಸಾಮಾನ್ಯ ನೋಟ.

ಭಾರತದಲ್ಲಿ ಅತಿ ಬೆಳಕನ್ನು ಮಾಲಿನ್ಯವೆಂದು ಪರಿಗಣಿಸದೆ, ಕೋರೈಸುವ ಬೆಳಕೇ ಸಾರ್ವಜನಿಕರ ಆಕರ್ಷಣೆಯ ಮೂಲ ಎಂದು ಭಾವಿಸಿದಂತಿದೆ. ಹೋದ ವರ್ಷ ಮುಂಬೈ ಹೈಕೋರ್ಟ್‌ನಲ್ಲಿ ಒಂದು ವಿಶಿಷ್ಟ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗಿತ್ತು. ಮುಂಬೈನ ಮಲಬಾರ್‌ ಹಿಲ್ಸ್‌, ಬ್ರೀಚ್‌ ಕ್ಯಾಂಡಿ, ವಾಲ್ಕೇಶ್ವರ, ಅಂಧೇರಿ ಪ್ರದೇಶಗಳಲ್ಲಿ ಮರಗಿಡಗಳು ಎಲ್ಲಿ ನೋಡಿದರೂ ಸೀರಿಯಲ್‌ ಲೈಟ್‌ನಿಂದ ಝಗಮಗಿಸುತ್ತಿದ್ದವು. ಠಾಣೆಯಲ್ಲೂ ಇದೇ ಪರಿಸ್ಥಿತಿ. ಕೊನೆಗೆ ಕಾರ್ಪೊರೇಷನ್‌ಗೆ ಹೈಕೋರ್ಟ್‌ ನೋಟಿಸ್‌ ನೀಡಿ, ಈ ಸೀರಿಯಲ್‌ ಲೈಟ್‌ಗಳ ಪ್ರಖರತೆಯನ್ನು ತಗ್ಗಿಸಲು ಸೂಚಿಸಿತ್ತು.

ಝಗಮಗಿಸುವ ಬೆಳಕು ವೈಭವದ ಸಂಕೇತವೂ ಅಲ್ಲ, ಸಾಂಸ್ಕೃತಿಕ ಸಂಭ್ರಮದ ಪ್ರತೀಕವೂ ಅಲ್ಲ ಎಂಬುದನ್ನು ಪ್ರಜ್ಞಾವಂತ ಜನ ಅರಿತಿದ್ದಾರೆ. ಪ್ರಖರ ಬೆಳಕು ಏಕೆ ಸ್ವಾಗತಾರ್ಹವಲ್ಲ ಎಂಬುದರ ಕುರಿತು ದೀರ್ಘ ಸಂಶೋಧನೆಗಳೇ ಆಗಿವೆ. ‘ಲ್ಯಾನ್ಸೆಟ್‌’ ಎಂಬ ಅಂತರರಾಷ್ಟ್ರೀಯ ಪತ್ರಿಕೆ ಈ ಕುರಿತು ವಿಶೇಷ ಲೇಖನವನ್ನೇ ಪ್ರಕಟಿಸಿದೆ. ರಾತ್ರಿಯ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಪ್ರಖರ ಬೆಳಕು ಮಾರಕವಾಗಿ ಪರಿಣಮಿಸುತ್ತದೆ. ಅಂತಹವರಲ್ಲಿ ನಿರೋಧಕ ಗುಣ ಕಡಿಮೆಯಾಗಿ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹೃದಯಸಂಬಂಧಿ ಬೇನೆಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ. ಹಗಲು– ರಾತ್ರಿಗೆ ಹೊಂದಿಕೊಂಡೇ ವಿಕಾಸವಾಗಿರುವ ನಮ್ಮ ದೇಹದ ದೈನಂದಿನ ಲಯ ತಪ್ಪುತ್ತದೆ. ಹೀಗಾದಾಗ, ಶರೀರದ ಗ್ಲೂಕೋಸ್‌ ಮಟ್ಟವೂ ಏರುಪೇರಾಗಬಹುದು. ಅದು ಮಧುಮೇಹಕ್ಕೆ ಆಹ್ವಾನ ಕೊಡಬಹುದು. ನಮ್ಮ ಬೆಳಗಿನ ಚಟುವಟಿಕೆಗಳನ್ನು ಈ ಕೃತಕ ಬೆಳಕು ರಾತ್ರಿಗೂ ವಿಸ್ತರಿಸುತ್ತದೆ.

‘ಡಾರ್ಕ್‌ ಸ್ಕೈ ಇಂಟರ್‌ನ್ಯಾಷನಲ್‌ ಸಂಸ್ಥೆ’ ಸಮೀಕ್ಷೆ ಮಾಡಿ, ಸುಮಾರು 160 ವಿವಿಧ ಸಸ್ಯ, ಪ್ರಾಣಿಗಳ ಮೇಲೆ ಕೃತಕ ಬೆಳಕು ತರುವ ಪರಿಣಾಮವನ್ನು ಬಹಿರಂಗಪಡಿಸಿದೆ. ಹೆಚ್ಚಿನ ಸಂದರ್ಭಗಳಲ್ಲಿ ಪ್ರಖರ ಬೆಳಕು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಇದರಿಂದಾಗಿ ಪರಿಸರ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ಕುಗ್ಗುತ್ತದೆ. ಜೊತೆಗೆ ಕೆಲವು ಕೀಟಗಳು ಈ ಬೆಳಕಿನ ಆಕರ್ಷಣೆಗೆ ಬಲಿಯಾಗಿ ಪರೋಪಜೀವಿಗಳಿಗೆ ಆಹಾರವಾಗುತ್ತವೆ. ಇದು ಪರಾಗಸ್ಪರ್ಶದ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ.

ಕೋರೈಸುವ ಬೆಳಕು ಜೀವಿಕೋಶದ ಡಿಎನ್‌ಎಯನ್ನು ಗಾಸಿಗೊಳಿಸಬಹುದು, ಅಸಹಜ ಅಧಿಕ ಒತ್ತಡ ತರಬಹುದು, ಜೀರ್ಣಶಕ್ತಿಯ ಮೇಲೆ ದುಷ್ಪರಿಣಾಮ ಬೀರಬಹುದು. ಈ ಫಲಿತಾಂಶವನ್ನು ಪ್ರಕಟಿಸಿರು
ವುದು ಜಾಗತಿಕ ಮಟ್ಟದಲ್ಲಿ ಆರೋಗ್ಯದ ಕುರಿತು ಪ್ರಕಟ ಆಗುತ್ತಿರುವ ‘ಹೆಲ್ತ್ ಜಿಯಾಗ್ರಫಿಕ್‌’ ಎಂಬ ಪತ್ರಿಕೆ. ನಮ್ಮ ಸ್ವಆಸಕ್ತಿಯನ್ನು ಬದಿಗಿಟ್ಟು ನೋಡಿದರೂ ಜೀವಿಸಂಕುಲಕ್ಕೆ ಕೃತಕ ಬೆಳಕು ಎಂದೂ ಮಾರಕವೇ. ರಾತ್ರಿಯಲ್ಲಿ ವಲಸೆ ಹೋಗುವ ಹಕ್ಕಿಗಳಿಗೆ ಕೃತಕ ಬೆಳಕು ಹದಿನೈದು ಕಿಲೊಮೀಟರ್‌ ಆಚೆಯಿಂದಲೇ ದಾರಿತಪ್ಪಿಸುತ್ತದೆ. ಇದೀಗ ವಿಶ್ವದಾದ್ಯಂತ ವಲಸೆ ಹಕ್ಕಿಗಳ ಮಾರ್ಗ ಕುರಿತು ನಕ್ಷೆ ತಯಾರಾಗಿದೆ. ಪ್ರಜ್ಞಾವಂತ ದೇಶಗಳು ಅಂಥ ಮಾರ್ಗಗಳಲ್ಲಿ ಬೆಳಕಿನ ಪ್ರಖರತೆಯನ್ನು ಕಡಿಮೆ ಮಾಡಬೇಕೆಂದು ಆಯಾ ದೇಶಗಳನ್ನು ಕೇಳಿಕೊಳ್ಳುತ್ತಿವೆ.

ಕೆಲವು ದೇಶಗಳು ಬೆಳಕಿನ ಪ್ರಖರತೆಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಪರಿಹಾರ ಅಷ್ಟೇನೂ ಜರೂರಲ್ಲ ಎಂದು ಭಾವಿಸಿವೆ. ಆದರೆ ಸ್ಲೊವೇನಿಯಾ ದೇಶವು ಬೆಳಕಿನ ಪ್ರಖರತೆಯನ್ನು ತಗ್ಗಿಸಲು, ಬಳಸುವ ಬೆಳಕಿನ ಪ್ರಮಾಣವನ್ನೇ ತಗ್ಗಿಸುವಂಥ ಕಾನೂನನ್ನು 2007ರಲ್ಲೇ ಜಾರಿಗೆ ತಂದಿದೆ. ಪ್ರತಿ ಮನೆಯಲ್ಲಿ ವರ್ಷಕ್ಕೆ 44.5 ಕಿಲೊವಾಟ್‌ ವಿದ್ಯುತ್ತಿಗಿಂತ ಹೆಚ್ಚಿನ ಪ್ರಮಾಣವನ್ನು ಬಳಸುವಂತಿಲ್ಲ. ಜನ ಇದಕ್ಕೆ ಹೊಂದಿಕೊಂಡಿದ್ದಾರೆ. ಝೆಕ್‌ ಗಣರಾಜ್ಯ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ, ಬೀದಿದೀಪಗಳು ಬೀದಿಗಷ್ಟೇ ಬೆಳಕು ಬೀರಬೇಕೇ ವಿನಾ ಅಕ್ಕಪಕ್ಕದ ಕಟ್ಟಡಗಳಿಗಲ್ಲ ಎಂಬ ನಿರ್ದಿಷ್ಟ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಎಷ್ಟು ಪ್ರಮಾಣದ ಬೆಳಕು ಬಳಸಬಹುದು ಎಂಬ ಬಗ್ಗೆ ಮಾರ್ಗಸೂಚಿಯನ್ನೂ ಹೊರತಂದಿದೆ.

ಕಲ್ಲಿದ್ದಲು, ತೈಲ ದಹನದಿಂದ ಆಗಿರುವ ಮಾಲಿನ್ಯವನ್ನು ನಿವಾರಿಸಬೇಕೆಂದರೆ ಕನಿಷ್ಠ ನೂರು ವರ್ಷಗಳಾ
ದರೂ ಬೇಕು. ಆದರೆ ಪ್ರಖರ ಬೆಳಕನ್ನು ತಡೆಯಲು ಇಷ್ಟೊಂದು ಪ್ರಯತ್ನ ಅನಗತ್ಯ. ಒಡನೆಯೇ ಕೈಗೊಳ್ಳಬಹುದಾದ ಕಾರ್ಯತಂತ್ರ ಕೂಡ. ಕಡಿಮೆ ಬೆಳಕು ಎಂದರೆ ಅದು ಪ್ರಗತಿಯ ಸಂಕೇತ ಎಂಬ ವಾಸ್ತವದ ಅರಿವು ನಮಗೆ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.