ADVERTISEMENT

ಕಂಗನಾ ಅವರ ‘ಅನಧಿಕೃತ’ ನಿರ್ಮಾಣ ನೆಲಸಮ: ಅಕ್ರಮವೇ ಸಕ್ರಮವೇ?

ಉದಯು ಯು.
Published 9 ಸೆಪ್ಟೆಂಬರ್ 2020, 19:30 IST
Last Updated 9 ಸೆಪ್ಟೆಂಬರ್ 2020, 19:30 IST
ಕಂಗನಾ ಅವರ ಕಚೇರಿಯ ನೆಲಸಮ ಕಾರ್ಯ
ಕಂಗನಾ ಅವರ ಕಚೇರಿಯ ನೆಲಸಮ ಕಾರ್ಯ    

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಸುತ್ತ ಎದ್ದಿರುವ ವಿವಾದ ಹಾಗೂ ಆನಂತರದ ಬೆಳವಣಿಗೆಗಳು ಬಾಲಿವುಡ್‌ನ ಮಸಾಲೆಯುಕ್ತ ಸಿನಿಮಾಗಿಂತಲೂ ಕುತೂಹಲಕಾರಿಯಾದ ತಿರುವು ಪಡೆದುಕೊಳ್ಳುತ್ತಾ ಅನಾವರಣಗೊಳ್ಳುತ್ತಿವೆ.

ಸುಶಾಂತ್‌ ಅವರದ್ದು ಆತ್ಮಹತ್ಯೆಯೋ– ಕೊಲೆಯೋ ಎಂಬಲ್ಲಿಂದ ಆರಂಭವಾದ ವಿವಾದವು ಡ್ರಗ್ಸ್‌ ಜಾಲದತ್ತ ತಿರುಗಿ, ಡ್ರಗ್ಸ್‌ ಜಾಲದ ಬಗ್ಗೆ ನಟಿ ಕಂಗನಾ ರನೋತ್‌ ಅವರು ನೀಡಿದ ಹೇಳಿಕೆಯ ನಂತರ ಕಂಗನಾ–ಶಿವಸೇನಾ ನಡುವಿನ ಸಂಘರ್ಷವಾಗಿ, ಈಗ ಇಡೀ ವಿವಾದ ರಾಜಕೀಯದ ಅಂಗಳಕ್ಕೆ ಬಂದು ನಿಂತಿದೆ. ಈಗ ಅದು ಬಿಜೆಪಿ (ಕೇಂದ್ರ ಸರ್ಕಾರ) ಮತ್ತು ಶಿವಸೇನಾ (ಮಹಾರಾಷ್ಟ್ರ ರಾಜ್ಯ ಸರ್ಕಾರಗಳ) ನಡುವಿನ ಸಂಘರ್ಷವಾಗಿ ಪರಿವರ್ತನೆ ಆದಂತೆ ಕಾಣಿಸುತ್ತಿದೆ. ಇದರ ಮಧ್ಯದಲ್ಲೇ, ಮಹಾರಾಷ್ಟ್ರ ಸರ್ಕಾರ ಅಥವಾ ಬೃಹನ್‌ಮುಂಬೈ ಮಹಾನಗರ ಪಾಲಿಕೆ ಈಗ ಮತ್ತು ಹಿಂದೆ ಕೈಗೊಂಡ ಕ್ರಮಗಳು ‘ಪ್ರತೀಕಾರ ರಾಜಕಾರಣವೇ’ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಬಾಲಿವುಡ್‌ನಲ್ಲಿ ಡ್ರಗ್ಸ್‌ ಮಾಫಿಯಾ ಬಗೆಗಿನ ವಾದ–ವಿವಾದ ತೀವ್ರವಾಗಿದ್ದ ಸಂದರ್ಭದಲ್ಲಿ ಮುಂಬೈ ಪೊಲೀಸ್‌ ವ್ಯವಸ್ಥೆಯನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ಕಂಗನಾ, ‘ನನಗೆ ಮೂವಿ ಮಾಫಿಯಾಗಿಂತಲೂ ಮುಂಬೈ ಪೊಲೀಸರ ಭಯ ಹೆಚ್ಚಾಗಿದೆ. ಆದ್ದರಿಂದ ನಾನು ಹಿಮಾಚಲಪ್ರದೇಶದ ಪೊಲೀಸರಿಂದ ಅಥವಾ ಕೇಂದ್ರ ಸರ್ಕಾರದಿಂದ ಭದ್ರತೆಯನ್ನು ಪಡೆಯಲು ಬಯಸುತ್ತೇನೆ’ ಎಂದಿದ್ದರು.

ADVERTISEMENT

ಕಂಗನಾ ಅವರ ಈ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಶಿವಸೇನಾ ಮುಖಂಡ ಸಂಜಯ್‌ ರಾವುತ್‌, ‘ಮುಂಬೈ ಬಗ್ಗೆ ಮತ್ತು ಇಲ್ಲಿನ ಪೊಲೀಸ್‌ ವ್ಯವಸ್ಥೆಯ ಬಗ್ಗೆ ಗೌರವ ಇಲ್ಲದಿದ್ದರೆ ಕಂಗನಾ ಮುಂಬೈಗೆ ಬರುವುದೇ ಬೇಡ. ಮುಂಬೈಯಲ್ಲಿ ನೆಲೆಸುವ ಮತ್ತು ಇಲ್ಲಿ ಕೆಲಸ ಮಾಡುವವರು ಮಹಾರಾಷ್ಟ್ರ, ಮುಂಬೈ ಹಾಗೂ ಮರಾಠಿ ಜನರ ಬಗ್ಗೆ ಕೀಳಾಗಿ ಮಾತನಾಡಬಾರದು. ತಮ್ಮ ಹೇಳಿಕೆಗೆ ಕಂಗನಾ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದರು.

ಇದನ್ನು ಬೆದರಿಕೆ ಎಂಬಂತೆ ಪರಿಗಣಿಸಿದ ಕಂಗನಾ, ಮಾಧ್ಯಮದಲ್ಲಿ ಪ್ರಕಟವಾದ ರಾವುತ್‌ ಅವರ ಹೇಳಿಕೆಯ ತುಣುಕನ್ನು ಟ್ಯಾಗ್‌ ಮಾಡಿ, ‘ಮುಂಬೈ ಏಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಕಾಣಿಸುತ್ತಿದೆ’ ಎಂದು ಪ್ರಶ್ನಿಸಿದರು. ಮುಂಬೈಯನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ್ದರಿಂದ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ಮಹಾರಾಷ್ಟ್ರದ ಗೃಹಸಚಿವ ಅನಿಲ್‌ ದೇಶ್‌ಮುಖ್‌ ಅವರೂ ‘ಆಕೆಗೆ ಮಹಾರಾಷ್ಟ್ರ ಅಥವಾ ಮುಂಬೈಯಲ್ಲಿ ವಾಸಿಸುವ ಹಕ್ಕು ಇಲ್ಲ’ ಎಂಬ ಹೇಳಿಕೆ ನೀಡಿದರು. ಇದಕ್ಕೆ ಪ್ರತಿಯಾಗಿ ಕಂಗನಾ, ‘ನಾನು ಮುಂಬೈಗೆ ಬಂದೇ ಬರುತ್ತೇನೆ, ಧೈರ್ಯವಿದ್ದರೆ ತಡೆಯಿರಿ’ ಎಂಬ ಸವಾಲು ಹಾಕಿದರು.

ಇದಾಗಿ ಕೆಲವೇ ದಿನಕ್ಕೆ, ‘ಕಂಗನಾ ಅವರ ಬಾಂದ್ರಾದಲ್ಲಿರುವ ಕಚೇರಿಯು ಅಕ್ರಮ ನಿರ್ಮಾಣ’ ಎಂದು ಆರೋಪಿಸಿ, ಮನೆಯ ಗೇಟ್‌ಗೆ ಮಂಗಳವಾರ ನೋಟಿಸ್‌ ಅಂಟಿಸಲಾಯಿತು. ಮರುದಿನವೇ ಬಂದು ಕಟ್ಟಡದ ಒಂದು ಭಾಗವನ್ನು ನೆಲಸಮಗೊಳಿಸಲಾಯಿತು. ಕಂಗನಾ ಅವರ ಹೇಳಿಕೆಯನ್ನು ವಿರೋಧಿಸುವವರು ಸಹ ಬಿಎಂಸಿಯ ಈ ಕ್ರಮವನ್ನು ಟೀಕಿಸಿದ್ದಾರೆ. ಇದು ‘ಬಾಯಿ ಮುಚ್ಚಿಸುವ ಮತ್ತು ಬೆದರಿಸುವ ಕ್ರಮ. ಬಿಎಂಸಿಯ ಈ ಕ್ರಮದ ಹಿಂದಿರುವುದು ರಾಜಕೀಯ ಎಂಬುದು ಸ್ಪಷ್ಟ’ ಎಂದಿದ್ದಾರೆ.

ಇದು ಮೊದಲೇನೂ ಅಲ್ಲ

ಸರ್ಕಾರದ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ಕಟ್ಟಡ ನೆಲಸಮದಂತಹ ಕ್ರಮ ಕೈಗೊಂಡಿರುವುದು ಮಹಾರಾಷ್ಟ್ರದಲ್ಲಿ ಇದೇ ಮೊದಲಲ್ಲ. ಕೆಲವೇ ವರ್ಷಗಳ ಹಿಂದೆ, 2016ರ ಸೆಪ್ಟೆಂಬರ್‌ ತಿಂಗಳಲ್ಲಿ ನಟ ಕಪಿಲ್‌ ಶರ್ಮಾ, ತಮ್ಮ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ, ‘ಐದು ವರ್ಷಗಳಿಂದ ನಾನು ₹ 15 ಕೋಟಿ ತೆರಿಗೆ ಪಾವತಿಸುತ್ತಿದ್ದೇನೆ. ಹೀಗಿದ್ದರೂ ನನ್ನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಬಿಎಂಸಿ ಅಧಿಕಾರಿಗಳು ₹5 ಲಕ್ಷ ಲಂಚ ಕೇಳುತ್ತಿರುವುದೇಕೆ’ ಎಂದು ಟ್ವೀಟ್‌ ಮೂಲಕ ಪ್ರಶ್ನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಇದನ್ನು ಟ್ಯಾಗ್‌ ಮಾಡಿದ್ದ ಅವರು, ‘ಒಳ್ಳೆಯ ದಿನಗಳೆಂದರೆ ಇದೇಯೇನು’ ಎಂದು ಕೇಳಿದ್ದರು.

ಮಹಾರಾಷ್ಟ್ರದ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವೇಂದ್ರ ಫಡಣವೀಸ್‌ ಅವರು ಕೂಡಲೇ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿ, ‘ಕಪಿಲ್‌ಜೀ ಪೂರ್ಣ ಮಾಹಿತಿ ಕೊಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದರು. ಆದರೆ ಆನಂತರ ಆದದ್ದೇ ಬೇರೆ. ಗೋರೆಗಾಂವ್‌ನಲ್ಲಿ ಕಪಿಲ್‌ ಅವರ ಮನೆ ಇರುವ ಕಟ್ಟಡವು ಅಕ್ರಮ ನಿರ್ಮಾಣ ಎಂದು ಬಿಎಂಸಿಯವರು ಅದನ್ನು ಕೆಡವಿದರು. ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ನಟ ಇರ್ಫಾನ್‌ ಖಾನ್‌ ಹಾಗೂ ಇತರರೂ ಮನೆ ಕಳೆದುಕೊಂಡರು. ಅಲ್ಲಿಗೆ ಪ್ರಕರಣ ಅಂತ್ಯವಾಯಿತು.

2015ರ ಫೆಬ್ರುವರಿ ತಿಂಗಳಲ್ಲಿ ನಟ ಶಾರುಕ್‌‌ ಖಾನ್‌ ಅವರಿಗೂ ಇಂಥ ಸಮಸ್ಯೆ ಎದುರಾಗಿತ್ತು. ಶಾರುಕ್‌‌ ಅವರು ತಮ್ಮ ನಿವಾಸದ ಮುಂದೆ ವಾಹನ ಪಾರ್ಕಿಂಗ್‌ಗಾಗಿ ರ್‍ಯಾಂಪ್‌ ಒಂದನ್ನು ನಿರ್ಮಿಸಲು ಬಿಎಂಸಿ ಅಧಿಕಾರಿಗಳಿಗೆ ₹ 2 ಲಕ್ಷ ಲಂಚ ನೀಡಿದ್ದರು ಎಂಬ ವಿಚಾರ ಬಹಿರಂಗವಾಯಿತು.

ಸಾರ್ವಜನಿಕ ಸ್ಥಳವನ್ನು ಒತ್ತುವರಿ ಮಾಡಿಕೊಂಡು ರ್‍ಯಾಂಪ್‌ ನಿರ್ಮಾಣವಾಗಿದೆ ಎಂಬ ಆರೋಪವೂ ಇತ್ತು. ತನ್ನ ವಿರುದ್ಧ ಆರೋಪ ಬರುತ್ತಿದ್ದಂತೆ ಬಿಎಂಸಿಯು ಶಾರುಕ್‌‌ಗೆ ನೋಟಿಸ್‌ ಜಾರಿ ಮಾಡಿತು. ನೋಟಿಸ್‌ ಅವಧಿ ಮುಗಿಯುತ್ತಿದ್ದಂತೆಯೇ ಆ ನಿರ್ಮಾಣವನ್ನು ಕೆಡವುವ ಕೆಲಸವನ್ನು ಬಿಎಂಸಿ ಆರಂಭಿಸಿತು. ಅಷ್ಟಕ್ಕೇ ಸುಮ್ಮನಾಗದೆ, ಶಾರುಖ್‌ಗೆ ₹1.93 ಲಕ್ಷ ದಂಡವನ್ನೂ ವಿಧಿಸಲಾಯಿತು. ದಂಡವನ್ನು ಪಾವತಿಸುವ ಮೂಲಕ ಪ್ರಕರಣವನ್ನು ಶಾರುಕ್‌ ಅಂತ್ಯಗೊಳಿಸಿದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.