ವಿಶ್ಲೇಷಣೆ
ಕನ್ನಡ ರಂಗಭೂಮಿಯದು ನೂರೈವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ. ಆ ಒಂದೂವರೆ ಶತಮಾನ ದುದ್ದಕ್ಕೂ ವೃತ್ತಿರಂಗಭೂಮಿಯ ಸುದೀರ್ಘ ಪಯಣದ ಚರಿತ್ರೆಯೂ ಇದೆ. ‘ಪ್ರೊಸಿನಿಯಂ’ ಮಾದರಿಯ ವೃತ್ತಿರಂಗಭೂಮಿ, ಪಾರ್ಸಿ ಮತ್ತಿತರೆ ಪ್ರಭಾವಗಳಿಂದ ಬೃಹದಾಕಾರವಾಗಿ ಬೆಳೆಯಿತು. ಪುರಾಣೇತಿಹಾಸ, ಸ್ವಾತಂತ್ರ್ಯ ಚಳವಳಿ, ಖಾದಿ ಚಳವಳಿ, ದೇಶಭಕ್ತಿ, ಸಮಾಜೋಧಾರ್ಮಿಕ ನೀತಿ, ಅವಿಭಜಿತ ಕುಟುಂಬ ಪ್ರೀತಿ, ಮುಂತಾದ ಗುಣಾತ್ಮಕ ದೇಸಿ ಸಂವೇದನೆಗಳ ‘ರಂಗಸಂಸ್ಕೃತಿ’ಯನ್ನು ನಿರೂಪಿಸಿದ್ದು ವೃತ್ತಿರಂಗಭೂಮಿಯ ಹೆಗ್ಗಳಿಕೆ.
ಮಹಾತ್ಮ ಗಾಂಧೀಜಿಯವರು ‘ಸತ್ಯಹರಿಶ್ಚಂದ್ರ’ ಎಂಬ ವೃತ್ತಿರಂಗನಾಟಕ ನೋಡಿ ಪ್ರಭಾವಿತರಾದುದುಅವರ ಬಾಲ್ಯದ ಬದುಕಿನ ಮಹತ್ತರ ಘಟ್ಟಗಳಲ್ಲೊಂದು. ವರನಟ ರಾಜ್‌ಕುಮಾರ್ ಮತ್ತು ಅವರ ಸಮಕಾಲೀನ ಅನೇಕರು, ವೃತ್ತಿರಂಗಭೂಮಿ ನಾಟಕಗಳ ದಿವಿನಾದ ಪರಂಪರೆ ಪೊರೆದ ಪ್ರಾತಃಸ್ಮರಣೀಯರು. ಹಾಗೆಯೇ ಅಂದು ನಾಟಕ ಕಂಪನಿಗಳು ಅವರನ್ನು ಸಾಕಿ ಸಲಹಿದ್ದೂ ಐತಿಹಾಸಿಕ ಸಂಗತಿಯೇ ಆಗಿದೆ. ಹಲವು ಮಹತ್ತರ ಕಾರಣಗಳಿಂದಾಗಿ ವೃತ್ತಿರಂಗಭೂಮಿಯ ಅಸ್ಮಿತೆಯು ಲೋಕಪ್ರೀತಿ ಮತ್ತು ಜನಪ್ರಿಯತೆಯ ಮಹತ್ವದ ಪಾರಮ್ಯ ಮೆರೆದಿದೆ.
ಅಂದಿನ ವಸಾಹತುಶಾಹಿ ಕಂಪನಿ ಸರ್ಕಾರಗಳ ಸನ್ನಿವೇಶದಲ್ಲಿ ಜನ್ಮತಾಳಿದ ನಾಟಕ ಕಂಪನಿಗಳು ಇವತ್ತಿಗೂ ವೃತ್ತಿರಂಗಭೂಮಿಯ ನಾಟಕ ಕಂಪನಿಗಳೆಂದೇ ಪ್ರತೀತಿ ಉಳಿಸಿಕೊಂಡಿವೆ. ವೃತ್ತಿ ರಂಗಭೂಮಿಯ ನಾಟಕ ಪಠ್ಯಗಳಿಗೆ ‘ಅರ್ಥಾತ್’ ಎಂಬ ಪರ್ಯಾಯದ ಸರಳ ಹೆಸರುಗಳಿರುವುದು ವಾಡಿಕೆ. ಅದೇ ರಿವಾಜಿನಲ್ಲಿ ‘ಕಂಪನಿ ನಾಟಕ’ ಅರ್ಥಾತ್ ‘ವೃತ್ತಿರಂಗಭೂಮಿ’ ಎಂತಲೂ ಕೆಲವರು ಅರ್ಥೈಸಿದ್ದಾರೆ. ಸರಿಯಾಗಿ ಒಂದು ಶತಮಾನದಷ್ಟು ಹಿಂದೆ ವೃತ್ತಿರಂಗಭೂಮಿಯ ನೂರಾ ಮೂವತ್ತಾರು ನಾಟಕ ಕಂಪನಿಗಳು ಕನ್ನಡ ನಾಡಿನ ತುಂಬಾ ಅಗಾಧ ವಾದ ರಂಗಬೆರಗು ಬಿತ್ತಿ ಬೆಳೆದಿವೆ. ಅದೊಂದು ಸುದೀಪ್ತ ರಂಗವೈಭವದ ಸುವರ್ಣ ಕಾಲ.
ಇಂದು ನಾಟಕ ಕಂಪನಿಗಳ ಸಂಖ್ಯೆ ಮತ್ತು ಗುಣಮಟ್ಟ ಎರಡೂ ಗಣನೀಯವಾಗಿ ಇಳಿಮುಖಗೊಂಡಿದೆ. ಕಂಪನಿಗಳ ಸಂಖ್ಯೆ ಕೇವಲ ಇಪ್ಪತ್ತಾರಕ್ಕೆ ಇಳಿದಿದೆ. ಈ ಇಪ್ಪತ್ತಾರು ನಾಟಕ ಕಂಪನಿಗಳು ಈಗ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಲ್ಲಿ ಮಾತ್ರ ಇವೆ. ಅವುಗಳಲ್ಲಿ ಕೆಲವು ಅರೆಕಾಲಿಕ, ಮತ್ತೆ ಕೆಲವು ಮುಚ್ಚಿಹೋಗುವ ಸ್ಥಿತಿಯಲ್ಲಿವೆ. ಈ ಅಂಕಿಅಂಶಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಅನುದಾನದ ಕಾಯಕಲ್ಪ ಯೋಜನೆಯ ಮಾಹಿತಿ.
ಸರ್ಕಾರದ ಅನುದಾನ ಬಹುಪಾಲು ನಾಟಕ ಕಂಪನಿಗಳ ಉಸಿರಾಟಕ್ಕೆ ಪ್ರಾಣವಾಯು ಒದಗಿಸಿದೆ. ಆದರೆ, ದಕ್ಷಿಣ ಕರ್ನಾಟಕದ ಕಡೆ ಅನುದಾನ ಪಡೆಯುವ ಒಂದೇ ಒಂದು ನಾಟಕ ಕಂಪನಿ ಈಗ ಇಲ್ಲ. ಅದಕ್ಕೆ ಬದಲು ದಕ್ಷಿಣದ ಬಹುತೇಕ ಜಿಲ್ಲೆಗಳಲ್ಲಿ ಸಾವಿರಾರು ಮಂದಿ ಕಲಾವಿದರು, ನೂರಾರು ಹವ್ಯಾಸಿ ತಂಡಗಳು ವರ್ಷಕ್ಕೆ ಸಹಸ್ರಾರು ವೃತ್ತಿರಂಗಭೂಮಿ ನಾಟಕಗಳ ಉತ್ಕೃಷ್ಟ ಪ್ರದರ್ಶನ ನೀಡುತ್ತವೆ. ತನ್ಮೂಲಕ ಲೋಕಮನ್ನಣೆ ಗಳಿಸುತ್ತಿರುವ ಹೆಗ್ಗಳಿಕೆಯ ಪರಂಪರೆಯಾಗಿ ಬೆಳೆದಿದೆ. ಈ ರಂಗ ಸಂಭ್ರಮವನ್ನು ಇಲ್ಲಿನ ಕೆಲವರು ಹರಕೆಯಂತೆ ಆಚರಿಸುತ್ತಾರೆ. ಮಾಹಿತಿಯೊಂದರ ಪ್ರಕಾರ ಒಂದು ವರ್ಷಕ್ಕೆ ಕರ್ನಾಟಕದಾದ್ಯಂತ ಹವ್ಯಾಸಿ ಕಲಾವಿದರಿಂದ ಹದಿನೈದರಿಂದ ಹದಿನೆಂಟು ಸಾವಿರ ವೃತ್ತಿರಂಗಭೂಮಿ ನಾಟಕಗಳು ಪ್ರದರ್ಶನ ಕಾಣುತ್ತವೆ. ಈ ಪ್ರದರ್ಶನಗಳಿಗಾಗಿ ಸರ್ಕಾರದ ಅನುದಾನಕ್ಕೆ ಅರ್ಜಿ ಹಾಕಿ ಕಾಯದೇ, ರಂಗ ತಂಡಗಳೇ ಸುಮಾರು ₹100 ಕೋಟಿಯಷ್ಟು ಹಣವನ್ನು ವರ್ಷವೊಂದಕ್ಕೆ ಖರ್ಚು ಮಾಡುತ್ತಾರೆ. ಇದು ಅಕ್ಷರಶಃ ಜನಸಂಸ್ಕೃತಿ ಬೆಳವಣಿಗೆಗೆ ನೆರವಾಗುತ್ತಿರುವ ‘ಜನಸಾಮಾನ್ಯರ ರಂಗಭೂಮಿ‘ ಎಂಬುದನ್ನು ಈ ಮೂಲಕ ಸಾಕ್ಷೀಕರಿಸುತ್ತದೆ. ವೃತ್ತಿ ರಂಗಭೂಮಿಯು ಜವಾರಿ ಕನ್ನಡದ ಲೋಕಶಕ್ತಿಯಾಗಿದೆ. ಬಹುತ್ವ ಭಾರತದ ಪ್ರಾದೇಶಿಕ ಭಾಷೆ ಹಾಗೂ ಪರಿಸರದ ರಂಗವಾಂಛೆ ವೃತ್ತಿರಂಗಭೂಮಿ ಯಲ್ಲಿ ಸಮೃದ್ಧಿಯಾಗಿ ಹೊರಹೊಮ್ಮಿರುವುದನ್ನು ಗುರುತಿಸಬಹುದಾಗಿದೆ.
ಹಳೆಯ ಮೈಸೂರು ಪ್ರಾಂತ್ಯದ ಹದಿಮೂರು ಜಿಲ್ಲೆಗಳಲ್ಲಿ ವರ್ಷಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ವೃತ್ತಿ ರಂಗಭೂಮಿಯ ಪೌರಾಣಿಕ ನಾಟಕಗಳು ಪ್ರಯೋಗ ಗೊಳ್ಳುತ್ತವೆ. ವರ್ತಮಾನದ ಯಾವುದೇ ವೃತ್ತಿಪರ ನಾಟಕ ಕಂಪನಿಗಳಲ್ಲಿ ಕಾಣಸಿಗದ ಕಂದ, ವೃತ್ತ ಮತ್ತು ಸೀಸ ಪದ್ಯಗಳೆಂಬ ರಂಗಗೀತೆಗಳ ಸಿರಿಘಮಲು ಇವರ ಈ ರಂಗ ಪ್ರಯೋಗಗಳಲ್ಲಿ ಪರಿಮಳಿಸುತ್ತವೆ. ಹೀಗೆ ಹವ್ಯಾಸಕ್ಕಾಗಿ ಗ್ರಾಮೀಣ ಮತ್ತು ಶಹರವಾಸಿ ಕಲಾವಿದರು ಆಡುವ ವೃತ್ತಿರಂಗಭೂಮಿಯ ಈ ನಾಟಕಗಳು ಕಂಪನಿ ನಾಟಕಗಳ ಪ್ರಭಾವ ಪ್ರೇರಿತ ಪ್ರದರ್ಶನಗಳೇ ಆಗಿರುತ್ತವೆ. ಅಲ್ಲಲ್ಲಿ ಕೆಲವು ಅಪದ್ಧಗಳು ಇಲ್ಲದಿಲ್ಲ. ತಮ್ಮೂರಿನ ದೈವದ ಪರಿಷೆಗೋ, ಗ್ರಾಮದೇವತೆಗಳ ಜಾತ್ರೆಗೋ ಆಡುವ ಇವುಗಳಿಗೂ ನಾಟಕ ಕಂಪನಿಗಳ ಮಾದರಿಯ ನಾಟ್ಯಸಂಘದ ಪರಂಪರಾಗತ ಹೆಸರುಗಳೇ ಆಪ್ಯಾಯಮಾನ. ಇವು ನಾಟಕ ಕಂಪನಿಗಳ ವಿಸ್ತೃತ ರೂಪಗಳಾಗಿವೆ.
ಹಾಗೆ ನೋಡಿದರೆ ನಾಟಕ ಕಂಪನಿಗಳ ಹೆಸರಿನಲ್ಲೇ ನಾಟ್ಯ ಮತ್ತು ಸಾಹಿತ್ಯ, ಸಂಗೀತದ ಜೀವಸತ್ವವಿದೆ. ಉದಾಹರಣೆಗೆ, ಹಲಗೇರಿಯ ಕುಡುಗೋಲು ಜೆಟ್ಟೆಪ್ಪನವರ ಕಂಪನಿ ಹೆಸರು ‘ಶ್ರೀ ಹಾಲಸಿದ್ದೇಶ್ವರ ಸಂಗೀತ ನಾಟ್ಯ ಮಂಡಳಿ’. ಇತ್ತ ಹಳೆಯ ಮೈಸೂರು ಪ್ರಾಂತ್ಯದ ಸುಬ್ಬಯ್ಯ ನಾಯ್ಡು ಅವರ ಕಂಪನಿ ಹೆಸರು ‘ಕರ್ನಾಟಕ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ’ ಎಂದಿತ್ತು. ಹೀಗೆ ಎಲ್ಲಾ ನಾಟಕ ಸಂಘಗಳ ಹೆಸರು ತಮ್ಮ ಇಷ್ಟದ ದೈವದ ಅನುಸಂಧಾನದೊಂದಿಗೆ ನಾಟ್ಯ ಮತ್ತು ಸಂಗೀತದ ಸಾಹಚರ್ಯ ಹೊಂದಿರುತ್ತದೆ. ಅದೊಂದು ಅನುಷಂಗಿಕ ಫಲಶ್ರುತಿ. ಗ್ರಾಮೀಣ ಹವ್ಯಾಸಿಗಳು ಆಡುವ ವೃತ್ತಿರಂಗಭೂಮಿ ನಾಟಕಗಳಿಗೆ ವೃತ್ತಿ ಕಂಪನಿ ನಾಟಕಗಳೇ ರೋಲ್ ಮಾಡೆಲ್. ಕಂಪನಿಯ ನಟ, ನಟಿಯರ ಅಭಿನಯ ಮಾದರಿ ಅನುಕರಣೀಯ. ಅಲ್ಲೊಂದು ಆ್ಯಕ್ಟರ್ ಓರಿಯೆಂಟೇಷನ್ ಇರುತ್ತದೆ. ವೃತ್ತಿರಂಗಭೂಮಿಯಲ್ಲಿ ಮೂರು ಮುಖ್ಯ ಪರಂಪರೆಗಳು. ಮೊದಲನೆಯದು, ನಟ ನಟಿಯರ ಅಭಿನಯ ಪರಂಪರೆ. ಮಾನವಿ ಅದೃಶ್ಯಪ್ಪನವರ ಭೀಮನ ಪಾತ್ರ, ಗಂಗಾಧರರಾಯರ ದುರ್ಯೋಧನನ ಪಾತ್ರ, ನಮ್ಮ ಕಾಲದ ಮನಸೂರ ಸುಭದ್ರಮ್ಮನ ಮಲ್ಲಮ್ಮ ಇಲ್ಲವೇ ದ್ರೌಪದಿ ಪಾತ್ರ ನೋಡಲೆಂದೇ ಬರುವ ಪ್ರೇಕ್ಷಕ ಗಣವೇ ಇತ್ತು. ಹಾಗೆಯೇ ರಂಗ ಸಂಗೀತ ಪರಂಪರೆ ಎನ್ನುವುದಿದೆ. ಜುಬೇದಾಬಾನು ಸವಣೂರು ಅವರ ರಂಗಗೀತೆ ಗಳನ್ನು ಕೇಳಲೆಂದೇ ಬರುವ ಜನಸ್ತೋಮ ಇರುತ್ತಿತ್ತು. ಈಗಲೂ ಹಳೇ ಮೈಸೂರು ಪ್ರಾಂತ್ಯದ ಕಿರಗಸೂರು ರಾಜಪ್ಪ ಸೇರಿದಂತೆ ಅನೇಕರ ರಂಗಗೀತೆಗಳಿಗೆ ಅಪಾರ ಬೇಡಿಕೆ ಇದೆ.
ರಂಗಸಜ್ಜಿಕೆ ಪರಂಪರೆ ಮೂರನೆಯದು. ಗುಬ್ಬಿ ವೀರಣ್ಣನವರ ನಾಟಕ ಕಂಪನಿ ದಾವಣಗೆರೆಗೆ ಬರುತ್ತದೆಂದರೆ, ಒಂದೆರಡು ರೈಲ್ವೆ ವ್ಯಾಗನ್‌ಗಳ ತುಂಬಾ ಅವರ ಕಂಪನಿಯ ರಂಗಸಂಪತ್ತು ಬರುತ್ತಿತ್ತು. ಮೊಲ, ಜಿಂಕೆ, ಕುದುರೆ, ಪಾರಿವಾಳ ಸೇರಿದಂತೆ ಪ್ರಾಣಿ–ಪಕ್ಷಿಗಳ ಪುಟ್ಟ ಪ್ರಾಣಿ ಸಂಗ್ರಹಾಲಯ ಬರುತ್ತಿತ್ತು. ಉತ್ತರ ಕರ್ನಾಟಕದ ದೇಸಾಯಿಯವರ ಕಂಪನಿ ರಂಗಸಜ್ಜಿಕೆಗೆ ಫೇಮಸ್. ಈಗಲೂ ಖಾಸಗಿಯಾಗಿ ಹೆಸರಾಂತ ರಂಗಸಜ್ಜಿಕೆಗಳ ಖ್ಯಾತಿ ಮತ್ತು ಝಗಮಗಿಸುವಿಕೆಗೆ ಬರವಿಲ್ಲ. ಹೀಗೆ ಎಲ್ಲಾ ನಾಟಕ ಕಂಪನಿಗಳು ಈ ಮೂರು ಪರಂಪರೆಗಳ ಆಡುಂಬೊಲವೇ ಆಗಿದ್ದವು. ಗೋಕಾಕ ಬಸವಣ್ಣೆಪ್ಪನವರ ‘ಶಾರದಾ ಸಂಗೀತ ನಾಟಕ ಮಂಡಳಿ’ ಈಗಿನ ರೆಪರ್ಟರಿಗಳಿಗಿಂತ ಮಿಗಿಲಾಗಿ ವೃತ್ತಿರಂಗಭೂಮಿಯ ವಿಶ್ವವಿದ್ಯಾಲಯ ಎಂದೇ ಪ್ರಸಿದ್ದವಾಗಿತ್ತು.
ಚರಿತ್ರೆಕಾರರು ಜನಸಾಮಾನ್ಯರ ವೃತ್ತಿ ರಂಗಭೂಮಿಯನ್ನು ಪ್ರಧಾನ ಸಂಸ್ಕೃತಿಧಾರೆ ನೆಲೆ ಯಲ್ಲಿ ಪರಿಗಣಿಸಿ ಚರಿತ್ರೆ ಬರೆಯಲಿಲ್ಲ. ಕೆಲವರಂತೂ ಅದನ್ನು ಅಧೀನ ಸಂಸ್ಕೃತಿ ಆಗಿಯೂ ನೋಡದೇ ‘ವೃತ್ತಿರಂಗದ ಪಡದೆ ಅದಿನ್ನೂ ಸುಡದೇ’ ಎಂದಿರುವುದುಂಟು. ಆಧುನಿಕ ರಂಗಭೂಮಿಯ ಶ್ರೀರಂಗರ ಕುರಿತು ‘ಶ್ರೀರಂಗ ಸಾರಸ್ವತ’ ಎಂಬ ಹೆಬ್ಬೊತ್ತಿಗೆಗಳ ಮೀಮಾಂಸಾ ಸಂಪುಟಗಳನ್ನೇ ಸಂಸ್ಕೃತಿ ಇಲಾಖೆ ಪ್ರಕಟಿಸಿದೆ. ಅದೇ ವೃತ್ತಿ ರಂಗಭೂಮಿಯ ದಿಗ್ಗಜ ಮತ್ತು ಕನ್ನಡದ ಷೇಕ್ಸ್‌ಪಿಯರ್ ಎಂದೇ ಕನ್ನಡಿಗರ ಮನೆಮಾತಾದ ಕಂದಗಲ್ ಹಣಮಂತರಾಯರ ಬಗೆಗಿನ ಒಂದೂ ಗ್ರಂಥ ಪ್ರಕಟಿಸಿಲ್ಲ. ಮೊನ್ನೆ ಮೊನ್ನೆಯಷ್ಟೇ ಸರ್ಕಾರ ಕಂದಗಲ್ ಹಣಮಂತರಾಯರ ಹೆಸರಿನ ಪ್ರತಿಷ್ಠಾನ ಸ್ಥಾಪಿಸಿರುವುದು ಸ್ವಾಗತಾರ್ಹ.
ವೃತ್ತಿರಂಗಭೂಮಿಯನ್ನು ವಿದ್ವತ್ ಜಗತ್ತು ಕಡೆಗಣಿಸಿರಬಹುದು. ಆದರೆ, ಜನಮಾನಸದ ಲೋಕ ಮೀಮಾಂಸೆಯಲ್ಲಿ ವೃತ್ತಿರಂಗಭೂಮಿಗೆ ಅಪೂರ್ವ ಜಾಗವಿದೆ. ಕಾಲಾನುಕ್ರಮದಲ್ಲಿ ಸ್ಥಿತ್ಯಂತರ ಕಂಡರೂ, ಅದರ ಮೂಲ ಮನೋಧರ್ಮದ ರೀತಿ ರಿವಾಜುಗಳು ಬದಲಾಗಿಲ್ಲ; ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿ ಮಾಡಿಲ್ಲ. ವೃತ್ತಿರಂಗಭೂಮಿಗೆ ಒಳ್ಳೆಯದನ್ನು ಮಾಡಬೇಕೆಂಬ ಸದಿಚ್ಛೆಯೇನೋ ಸರ್ಕಾರಕ್ಕಿದೆ. ಆದರೆ, ಏನು ಮಾಡಬೇಕೆಂಬ ಸ್ಪಷ್ಟತೆ ಇರಬೇಕಿದೆ. ಅದಕ್ಕಾಗಿ ಸಮಗ್ರ ಅಧ್ಯಯನದ ಮತ್ತು ವಿಸ್ತೃತವಾದ ಕಾರ್ಯಯೋಜನೆ ರೂಪಿಸಬೇಕಿದೆ.
ವೃತ್ತಿರಂಗಭೂಮಿ ಕನ್ನಡ ಸಂಸ್ಕೃತಿಗೆ ಹಾಗೂ ಕನ್ನಡ ವಿವೇಕಕ್ಕೆ ನೀಡಿದ ಕೊಡುಗೆ ಅಪೂರ್ವ ವಾದುದು. ಆ ಕಾರಣದಿಂದಲೇ, ವೃತ್ತಿ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳು ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳೂ ಹೌದು. ವೃತ್ತಿರಂಗಭೂಮಿಯ ಸಂಗೋಪನೆ ಕನ್ನಡದ ರಂಗಭೂಮಿಯ ಬೇರುಗಳನ್ನು ಬಲಪಡಿಸುವ ಕೆಲಸವೂ ಹೌದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.