ADVERTISEMENT

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

ಚಂದ್ರಕಾಂತ ವಡ್ಡು
Published 14 ಜನವರಿ 2026, 0:14 IST
Last Updated 14 ಜನವರಿ 2026, 0:14 IST
<div class="paragraphs"><p>ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!</p></div>

ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ: ‘ಹಣಗಾರಿಕೆ’ನಿರತ ರಾಜಕಾರಣ!

   

ಸಿದ್ದರಾಮಯ್ಯ ಅವರು ದಾಖಲೆ ಅವಧಿಯ ಮುಖ್ಯಮಂತ್ರಿಯಾಗಿ ದೇವರಾಜ ಅರಸು ಅವರನ್ನು ಮೀರಿಸಿದ ಈ ಸಂದರ್ಭದಲ್ಲಿ ಇಬ್ಬರೂ ಸಾಮಾಜಿಕ ನ್ಯಾಯ ಪ್ರತಿಪಾದಕರ ಆಡಳಿತ ಮಾದರಿಗಳ ತುಲನೆಯು ಅಗತ್ಯವಾಗಿ, ಸಹಜವಾಗಿ ಆಗಬೇಕಾದ ಕಾರ್ಯ. ಅದು ಭರದಿಂದ ಸಾಗಿದೆ. ಈ ರಾಜಕೀಯ ನಾಯಕದ್ವಯರು ಸರ್ಕಾರದ ನೇತೃತ್ವವಹಿಸಿಕೊಂಡು ನಡೆಸಿದ ಆಡಳಿತ, ಜಾರಿಗೆ
ತಂದ ಕಾನೂನುಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅವಲೋಕನದ ಜೊತೆಗೇ ಇಬ್ಬರ ಅಧಿಕಾರಾವಧಿಯ ಕಾಲಘಟ್ಟಗಳ ವ್ಯತ್ಯಾಸಗಳನ್ನು ತಕ್ಕಡಿಯಲ್ಲಿ ಇರಿಸುವ ಜರೂರು ಕೂಡ ಇದೆ. ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿರುವ ಬಳ್ಳಾರಿಯ ಭಯಾನಕ ಘಟನೆಗಳ ಹಿನ್ನೆಲೆಯಲ್ಲಿ ಬದಲಾದ ರಾಜಕೀಯ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಇಂಥ ಹೋಲಿಕೆ ನೆರವಾಗಬಹುದು. 

ಅರಸು ಅವರ ಆಡಳಿತ ಕಾಲದಲ್ಲಿ ಕಠಿಣ ಸವಾಲುಗಳ ನಡುವೆಯೂ ಸ್ವಾತಂತ್ರ್ಯೋತ್ತರ ಭಾರತದ ಆದರ್ಶಮಯ ವಾತಾವರಣವು ರಾಜಕಾರಣ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ, ವ್ಯಕ್ತಿಗಳಲ್ಲೂ ತುಸುಮಟ್ಟಿಗೆ ಪಸೆ ಉಳಿಸಿಕೊಂಡಿತ್ತು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಆಗಷ್ಟೇ ಮೌಲ್ಯಗಳ ಪತನದ ಪ್ರಕ್ರಿಯೆ ಪಿಳಿಪಿಳಿ ಕಣ್ಣುಬಿಡುತ್ತಿದ್ದ ಕಾಲಘಟ್ಟವದು. ಸಿದ್ದರಾಮಯ್ಯ ಅವರ ಕಾಲದ ಹೊತ್ತಿಗೆ ರಾಜಕಾರಣ, ರಾಜಕಾರಣಿ, ಮತದಾರ ಅಷ್ಟೇ ಅಲ್ಲ, ಒಟ್ಟು ಪ್ರಜಾಪ್ರಭುತ್ವ ವ್ಯವಸ್ಥೆಯ ಸ್ವರೂಪವೇ ವಿರೂಪಗೊಂಡಿರುವ ಸನ್ನಿವೇಶಕ್ಕೆ ನಾಡು ಸಾಕ್ಷಿಯಾಗುತ್ತಿದೆ. ಅರಸು ಕಾಲದಲ್ಲಿ ಪ್ರಚಲಿತದಲ್ಲಿದ್ದ ಅಬಕಾರಿ, ಕ್ಯಾಪಿಟೇಷನ್ ವಲಯದ ಪ್ರಭಾವಗಳು ಸಿದ್ದರಾಮಯ್ಯ ಕಾಲದ ಗಣಿ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳ ಹಾವಳಿಯ ಎದುರು ಗೌಣವಾಗಿ ಕಂಡರೆ ಅಚ್ಚರಿಯೆನ್ನಿಸುವುದಿಲ್ಲ.

ADVERTISEMENT

ಅರಸು ಅವರ ಅಧಿಕಾರಾವಧಿಯ ದಾಖಲೆಯನ್ನು ಮೀರಿದ ಸಂದರ್ಭದಲ್ಲಿ ಸಿದ್ದರಾಮಯ್ಯ
ನವರು ಆಡಿದ ಮಾತುಗಳಲ್ಲಿ ಬದಲಾದ ಕಾಲಧರ್ಮ ಹಾಗೂ ತಮ್ಮಂತಹವರಿಗೂ ಅನಿವಾರ್ಯವಾದ ರಾಜಿ ರಾಜಕಾರಣ ಸೂಚ್ಯವಾಗಿ ಪ್ರಸ್ತಾಪವಾಗಿರುವುದನ್ನು ಗುರುತಿಸಬಹುದು.

ಕರ್ನಾಟಕ ಏಕೀಕರಣ ಪೂರ್ವದಲ್ಲಿ ಆಂಧ್ರಪ್ರದೇಶದ ಕುಖ್ಯಾತ ರಾಯಲಸೀಮಾ ವಲಯಕ್ಕೆ ಸೇರಿದ್ದ ಬಳ್ಳಾರಿಯ ಕೆಲವು ಭಾಗಗಳು ಮತ್ತು ಕೆಲವು ಜನರು ಜಮೀನ್ದಾರಿ ಅಹಂಕಾರ, ದರ್ಪ ಮತ್ತು ದೌರ್ಜನ್ಯದಿಂದ ಹೊರಬರಲು ಇನ್ನೂ ಸಾಧ್ಯವಾಗಿಲ್ಲ. ಈ ಫ್ಯೂಡಲ್ ಮನಃಸ್ಥಿತಿಯು ಸಾಮಾಜಿಕ ನಡತೆಯ ಜೊತೆಗೆ ಉದ್ಯಮ ಮತ್ತು ರಾಜಕಾರಣವನ್ನೂ ವ್ಯಾಪಕವಾಗಿ ಆವರಿಸಿಕೊಂಡಿರುವುದು ಎದ್ದುಕಾಣುತ್ತದೆ. ರಾಯಲಸೀಮಾ ಶೈಲಿಯ ಹಿಂಸಾತ್ಮಕ ರಾಜಕಾರಣದಲ್ಲಿ ಕೌಟುಂಬಿಕ ಕಲಹ, ಸ್ಥಳೀಯ ಯಜಮಾನಿಕೆ, ಜಾತಿ ಅಹಂಕಾರಗಳು ಚಾರಿತ್ರಿಕವಾಗಿ ಮೇಲುಗೈ ಪಡೆದಿರುವುದನ್ನು ಗಮನಿಸಬಹುದು.

ವಿವಿಧ ಸಂಪನ್ಮೂಲಗಳು, ಗುತ್ತಿಗೆ ವ್ಯವಹಾರಮತ್ತು ಸ್ಥಳೀಯ ಆಡಳಿತದ ಮೇಲಿನ ನಿಯಂತ್ರಣ
ಕ್ಕಾಗಿ ಈ ಶಕ್ತಿಗಳು ಸದಾ ತಿಕ್ಕಾಟದಲ್ಲಿ ತೊಡಗಿರುತ್ತವೆ. ಹೀಗೆ ಖಾಸಗಿ ಅಧಿಕಾರ ಕೇಂದ್ರಗಳ ಹೊರಹೊಮ್ಮುವಿಕೆಯು ಸರ್ಕಾರದ ಅಧಿಕಾರ ಮತ್ತು ಅಸ್ತಿತ್ವಕ್ಕೆ ಧಕ್ಕೆ ತರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಸಾಂವಿಧಾನಿಕ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡಿ ಭಯಭೀತಿಯನ್ನೇ ಸಾಧನವಾಗಿಸಿಕೊಂಡ ಖಾಸಗಿ ಆಳ್ವಿಕೆ ಏರ್ಪಡುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ರಾಜಕಾರಣ, ವ್ಯಾಪಾರ ಮತ್ತು ಅಪರಾಧಗಳ ಸಮ್ಮಿಶ್ರಣದಂತೆ ತೋರುವ ನಾಯಕರ ಸಂಘರ್ಷಗಳಲ್ಲಿ ಭಾಗಿಯಾಗುವುದು, ಗುರಿಯಾಗುವುದು ಅನುಯಾಯಿಗಳ ಪಾಲಿಗೆ ಅನಿವಾರ್ಯ ಕರ್ಮ. ಅಲ್ಲಿನ ಯಜಮಾನ ಸಂಸ್ಕೃತಿಯ ಕ್ರೌರ್ಯಗಳಿಗೆ ಬಳಕೆಯಾಗುವ ಖಾಸಗಿ ಸೈನ್ಯವನ್ನು ಬಳ್ಳಾರಿಯ ‘ರೆಡ್ಡಿಗಾರು’ ಹೊಂದಿಲ್ಲ ಎನ್ನುವುದು ಅಷ್ಟರಮಟ್ಟಿಗೆ ನಿರಾಳತೆಯ ವಿಷಯ.

‘ರಿಪಬ್ಲಿಕ್ ಆಫ್ ಬಳ್ಳಾರಿ’ ಅನ್ನೋ ಮಾತಿಗೆ ದಶಕಗಳ ಇತಿಹಾಸವಿದೆ. ಎಪ್ಪತ್ತು–ಎಂಬತ್ತರ ದಶಕದಲ್ಲಿ ಆಂಧ್ರ ಒಲವಿನ ಕಮ್ಮಾ ಸಮುದಾಯದ ಮುಂಡ್ಲೂರು ಮನೆತನ ಬಳ್ಳಾರಿಯನ್ನು ಆಳುತ್ತಿತ್ತು. ಎಂಬತ್ತರ ದಶಕದಲ್ಲಿ ಗ್ರಾನೈಟ್ ಕುಳ ನಾರಾ ಸೂರ್ಯನಾರಾಯಣರೆಡ್ಡಿ ಕುರುಗೋಡು ಕ್ಷೇತ್ರದ ಶಾಸಕರಾಗುವ ಮೂಲಕ ಅಧಿಕಾರ ಮತ್ತು ಹಣದಿಂದ ಮುನ್ನೆಲೆಗೆ ಬಂದಾಗ ಜನಾರ್ದನರೆಡ್ಡಿ ಸಹೋದರರು ಸಾರ್ವಜನಿಕ ದೃಶ್ಯದಲ್ಲಿಯೇ ಇರಲಿಲ್ಲ. ಹಳೆಯ ತಲೆಮಾರಿನ ನಾರಾಯಣರೆಡ್ಡಿಯ ಮಗನೇ ಉತ್ಸಾಹದಿಂದ ಕುದಿಯುತ್ತಿರುವ ಬಳ್ಳಾರಿಯ ಹಾಲಿ ಯುವಶಾಸಕ ಭರತ್ ರೆಡ್ಡಿ.

ತೊಂಬತ್ತರ ದಶಕದ ಉತ್ತರಾರ್ಧದಲ್ಲಿ ಉಕ್ಕು ತಯಾರಿಕಾ ಕ್ಷೇತ್ರದಲ್ಲಿ ಕೊರೆಕ್ಸ್ ತಂತ್ರಜ್ಞಾನದ ಅಳವಡಿಕೆ ಮತ್ತು ಚೀನಾದ ಬೇಡಿಕೆ ಕಾರಣದಿಂದ ಕಡಿಮೆ ಗುಣಮಟ್ಟದ, ತ್ಯಾಜ್ಯವೆಂದು ಎಸೆದ ಕಬ್ಬಿಣದಅದಿರಿಗೆ ಬಂಗಾರದ ಬೆಲೆ ಬಂದು ಗಣಿಗಾರಿಕೆಯ ಆರ್ಭಟ ಆರಂಭವಾಯಿತು. ಆ ಮೂಲಕ ನವ ಬಂಡವಾಳಶಾಹಿಗಳು, ನವ ರಾಜಕಾರಣಿಗಳು, ನವೀನ ಜೀವನಶೈಲಿಗಳ ಜೊತೆಗೆ ಹಳೆಯ ರಾಯಲಸೀಮಾ ಕ್ರೌರ್ಯ ಜೀವ ತಳೆದಿದ್ದು ಇತಿಹಾಸ. ಆಗಲೇ ಕಾಲಿರಿಸಿದ್ದು– ಖಾಸಗಿ ಗನ್‌ಮ್ಯಾನ್‌ಗಳ ನೇಮಕ, ಹೆಲಿಕಾಪ್ಟರ್‌ಗಳ ಹಾರಾಟ, ಕಣ್ಣಿಗೆ ಕಂಡ ಆಸ್ತಿಯನ್ನೆಲ್ಲ ದಕ್ಕಿಸಿಕೊಳ್ಳುವ ದಾಹ, ತಮ್ಮದೇ ನಡೆಯಬೇಕು ಎನ್ನುವ ಅಹಂಕಾರ, ಚುನಾವಣೆಗಳನ್ನು ನಿಯಂತ್ರಿಸುವ ತಾಕತ್ತು. ಇದರ ಮುಂದುವರಿದ ಅವತಾರವಾಗಿಯೇ ಬಳ್ಳಾರಿಯ ಘಟನೆಯನ್ನು, ರೆಡ್ಡಿಗಳ ಆರ್ಭಟವನ್ನು ಗ್ರಹಿಸಬೇಕಾಗುತ್ತದೆ.

ಬಳ್ಳಾರಿಯ ಹಿಂಸಾಚಾರವನ್ನು ಆಕಸ್ಮಿಕವಾಗಿ ನಡೆದ ಬಿಡಿ ಪ್ರಸಂಗವೆಂದು ಭಾವಿಸಬೇಕಿಲ್ಲ; ಇದು ಒಟ್ಟಾರೆ ಕರ್ನಾಟಕದಲ್ಲಿ ಬದಲಾಗುತ್ತಿರುವ ರಾಜಕೀಯ ಸಂಸ್ಕೃತಿಯ ಪ್ರತೀಕ. ರಾಜಕಾರಣವು ನ್ಯಾಯಪ್ರಜ್ಞೆ ಮತ್ತು ಸಾಂವಿಧಾನಿಕ ಆಡಳಿತ ವ್ಯವಸ್ಥೆಯಿಂದ ದೂರ ಸರಿದು ಸಂಘರ್ಷ ಮತ್ತು ಬಲಾಢ್ಯತೆಯ ಮೇಲುಗೈಗೆ ಆಸ್ಪದ ಮಾಡುತ್ತಿರುವುದು ಆತಂಕಕಾರಿ ವಿದ್ಯಮಾನ. ದುಷ್ಟ ಹಿತಾಸಕ್ತಿಗಳ ಕಾದಾಟಕ್ಕೆ ಸಾರ್ವಜನಿಕ ಸ್ಥಳಗಳು ಬಳಕೆಯಾಗುತ್ತಿರುವುದು ಹಾಗೂ ನಾಗರಿಕರು ಮೂಕಪ್ರೇಕ್ಷಕರಾಗುತ್ತಿರುವುದು ಕಳವಳವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಬಳ್ಳಾರಿಯ ಹಿಂಸಾತ್ಮಕ ಘರ್ಷಣೆಗೆ ಕಾರಣರಾದ ಇಬ್ಬರೂ ರಾಜಕೀಯ ನಾಯಕರು ಚುನಾಯಿತ ಜನಪ್ರತಿನಿಧಿಗಳು; ಜನಾರ್ದನರೆಡ್ಡಿ ಗಂಗಾವತಿಯ ಶಾಸಕರಾದರೆ, ನಾರಾ ಭರತ್ ರೆಡ್ಡಿ ಬಳ್ಳಾರಿ ನಗರ ಶಾಸಕರು. ಇವರಿಬ್ಬರ ತಾಕಲಾಟ, ಪೀಕಲಾಟದ ರಾಜಕಾರಣದ ಆದಿ ಮತ್ತು ಅಂತ್ಯ ಏನಾದರೂ ಆಗಿರಲಿ, ಇವರನ್ನು ತಮ್ಮ ಪ್ರತಿನಿಧಿಗಳಾಗಿ ಆರಿಸಿದ ಲಕ್ಷಾಂತರ ಮತದಾರರ ಪಾಡೇನು? ಇವರು ತೋರುವ ದಬ್ಬಾಳಿಕೆ ಮತ್ತು ದುಷ್ಟ ವರ್ತನೆಯ ನೈತಿಕ ಹೊಣೆಯನ್ನು ಮತದಾರರು ಹೊರಬೇಕೆ?

ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಮಹಾ
ಸಂಗ್ರಾಮಿ ಎಸ್.ಆರ್. ಹಿರೇಮಠ ಅವರ ಪರಿಶ್ರಮದ ಫಲವಾಗಿ ಗಣಿಗಾರಿಕೆಯ ಅಟಾಟೋಪ ತಹಬಂದಿಗೆ ಬಂದಿರುವುದು ಆಶಾದಾಯಕ ಬೆಳವಣಿಗೆ. ಆದರೆ ‘ಗಣಿಗಾರಿಕೆ’, ‘ಕೈಗಾರಿಕೆ’ ಇತ್ಯಾದಿಗಳ ಜಾಗವನ್ನು ‘ಹಣಗಾರಿಕೆ ರಾಜಕಾರಣ’ ಎಂಬ ನವೋದ್ಯಮ ಆಕ್ರಮಿಸಿಕೊಂಡಿರುವುದು, ಇದು ಇಡೀ ರಾಜ್ಯವನ್ನೇ ಆವರಿಸಿಕೊಂಡಿರುವುದು ಹಲವು ರಿಪಬ್ಲಿಕ್‌ಗಳ ಉಗಮಕ್ಕೆ, ಬೆಳಗುವಿಕೆಗೆ ಎಡೆ ಮಾಡಿರುವುದು ದುರಂತದಾಯಕ ಸ್ಥಿತಿಗೆ ದ್ಯೋತಕ.

ಚುನಾವಣಾ ರಾಜಕಾರಣದ ಮೂಲಕ ಅಧಿಕಾರದ ಗುತ್ತಿಗೆ ಪಡೆಯುವುದು, ಅಧಿಕಾರದ ಗಣಿಯಲ್ಲಿ ‘ಹಣಗಾರಿಕೆ’ ನಡೆಸುವುದು, ಗಳಿಸಿದ ಹಣವನ್ನು ದಬ್ಬಾಳಿಕೆಗೆ ಬಳಸುವುದು ಒಂದು ಸರಣಿಯಾಗಿ ಮುಂದುವರಿಯುತ್ತಿದೆ. ಗಣಿಗಾರಿಕೆಗೆ ನಿರ್ದಿಷ್ಟ ಪ್ರದೇಶದ ಮಿತಿಯಾದರೂ ಇರುತ್ತದೆ. ಆದರೆ, ಹಣಗಾರಿಕೆ ಉದ್ಯಮವು ರಾಜ್ಯದುದ್ದಕ್ಕೂ ಕಾರ್ಯವ್ಯಾಪ್ತಿ ಹೊಂದಿರುವಂತಹದು; ಶಿಕ್ಷಣ, ಆರೋಗ್ಯ, ಸಹಕಾರ, ರಿಯಲ್ ಎಸ್ಟೇಟ್ ಮುಂತಾದ ಹತ್ತಾರು ರೂಪದಲ್ಲಿ ಇದು ಚಾಲ್ತಿಯಲ್ಲಿದೆ. ವಿವಿಧ ಬಾಬತ್ತುಗಳಲ್ಲಿ ಬಿಡುಗಡೆಯಾಗುವ ಅನುದಾನ, ಅಭಿವೃದ್ಧಿ ಹೆಸರಿನ ಕಾಮಗಾರಿಗಳು, ಇಲಾಖೆಗಳ ದೈನಿಕ–ಮಾಸಿಕ–ವಾರ್ಷಿಕ ವಸೂಲಾತಿಯ ಹಂಚಿಕೆ, ಋಣ ತೀರಿಸಲು ಉದ್ಯಮಿಗಳು ಸಲ್ಲಿಸುವ ಸೂಟ್‌ಕೇಸುಗಳು... ಹೀಗೆ ಹಣಗಾರಿಕೆಯ ಸಂಪನ್ಮೂಲಗಳಿಗೆ ಕೊರತೆಯೇ ಇಲ್ಲ. ಇತ್ತೀಚೆಗೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆಯು ಸಹ ಹಣಗಾರಿಕೆಯ ಬೃಹತ್ ಉದ್ಯಮವಾಗಿ ಬೆಳೆದು ನಿಂತಿರುವುದು ಸಮಕಾಲೀನ ವಾಸ್ತವ.

ಹಾಗಾಗಿಯೇ ಬೆಳಗಾವಿ, ಮಂಗಳೂರು, ಕಲಬುರಗಿ, ದಾವಣಗೆರೆ, ವಿಜಯಪುರ, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಸ್ಥಳೀಯ ಮಾದರಿಯ ರಿಪಬ್ಲಿಕ್‌ಗಳನ್ನು ಗುರುತಿಸಲು ಸಾಧ್ಯ. ಬೆಂಗಳೂರು ಅಂತೂ ಹಲವು ರಿಪಬ್ಲಿಕ್‌ಗಳ ಒಕ್ಕೂಟ. ಬೆಳಗಾವಿಯಲ್ಲಿ ಕತ್ತಿ, ಜೊಲ್ಲೆ, ಜಾರಕಿಹೊಳಿ ಕುಟುಂಬಗಳು ಪ್ರಕಟಿಸುತ್ತಿರುವ ‘ಚುನಾವಣಾ ಪಾಳೇಗಾರಿಕೆ’, ದಾವಣಗೆರೆಯಲ್ಲಿ ಶಾಮನೂರು ಕುಟುಂಬ ರಾಜಕಾರಣಕ್ಕೆ ಪರ್ಯಾಯವೇ ಇಲ್ಲವೆಂಬ ವಾತಾವರಣ, ಶಿವಮೊಗ್ಗದಲ್ಲಿ ಯಡಿಯೂರಪ್ಪ ಕುಟುಂಬದ ಪಾರುಪತ್ಯ, ಮೊಮ್ಮಗನ ತನಕ ಚಾಚಿರುವ ಸಿದ್ದರಾಮಯ್ಯನವರ ಕುಟುಂಬಪ್ರೇಮ, ಕಲಬುರಗಿಯಲ್ಲಿ ಖರ್ಗೆ ಪ್ರಾಬಲ್ಯ– ಇವೆಲ್ಲಾ ಪ್ರತಿಬಿಂಬಿ
ಸುವುದು ಇಂಥ ರಿಪಬ್ಲಿಕ್‌ಗಳನ್ನೇ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ‘ಬಡವರ ಮಕ್ಕಳು ಬೆಳಿಬೇಕು ಕಣ್ರಯ್ಯ’ ಎಂಬ ನಟ ‘ಡಾಲಿ’ ಧನಂಜಯ್ ಅವರ ಪ್ರಸಿದ್ಧ
ಮಾತಿಗೆ ವಿಶೇಷ ಅರ್ಥ ಮತ್ತು ಒತ್ತು ಸಿಗುತ್ತದೆ.

ಇತರ ಭಾಗಗಳ ಆಧುನಿಕ ಪಾಳೇಗಾರರು ಹಲವು ರೀತಿಯ ಒಳ–ಹೊರ ಸಂಘರ್ಷಗಳಲ್ಲಿ ನಿರತರಾಗಿದ್ದರೂ ಬಳ್ಳಾರಿ ರೀತಿಯಲ್ಲಿ ಬಹಿರಂಗವಾಗಿ ಗುಂಡು ಹಾರಿಸಿಕೊಳ್ಳುವ ಮಟ್ಟ ತಲಪಿಲ್ಲ ಎನ್ನುವುದಷ್ಟೇ ಸಮಾಧಾನಕರ ಸಂಗತಿ.

ಇವೆಲ್ಲಾ ಅನಾಚಾರಗಳ ನಡುವೆ ಪ್ರಜಾಸತ್ತಾತ್ಮಕ ಮೌಲ್ಯಗಳ ಹುಡುಕುವಿಕೆ, ಸ್ಥಾಪಿಸುವಿಕೆ ಸಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.