
ಮಾರುಕಟ್ಟೆಯ ಜಗತ್ತಿಗೆ ತಕ್ಕಂತೆ ಶಿಕ್ಷಣವೂ ಬದಲಾವಣೆ ಹೊಂದಿರುವುದರ ಪರಿಣಾಮ ಭಾಷೆ ಮತ್ತು ತತ್ತ್ವಶಾಸ್ತ್ರದ ಮೇಲಾಗಿದೆ. ಶಿಕ್ಷಣವು ಪ್ರಾದೇಶಿಕ ಅನನ್ಯತೆಗೆ ಬೆನ್ನುಹಾಕಿದೆ ಹಾಗೂ ಸ್ಥಳೀಯ ಭಾಷೆಗಳ ಜಾಗವನ್ನು ಇಂಗ್ಲಿಷ್ ಆವರಿಸಿಕೊಂಡಿದೆ. ಇದೆಲ್ಲದರ ಪರಿಣಾಮ, ಭಾಷೆ–ತತ್ತ್ವಶಾಸ್ತ್ರ ಅಪಾಯ ಎದುರಿಸುತ್ತಿವೆ.
ಪ್ರತಿಯೊಂದು ಭಾಷೆಗೂ ಅದರದೇ ಲೋಕ ದೃಷ್ಟಿಯಿರುತ್ತದೆ. ಅದುವೇ ಅದರ ತತ್ತ್ವವೂ ಹೌದು. ಭಾಷೆ ಬರೀ ಸಂವಹನ ಸಾಧನವಲ್ಲ, ಅದು ನಮ್ಮ ಚಿಂತನೆಯನ್ನು ವಿವರಿಸುವ ಮತ್ತು ರೂಪಿಸುವ
ಶಕ್ತಿಯನ್ನೂ ಹೊಂದಿರುತ್ತದೆ. ಕಣ್ಣಿಗೆ ಕಾಣುವ ಮರ, ಮನೆ ಇತ್ಯಾದಿಗಳನ್ನು ಅನುಭವಕ್ಕೆ ತರುವ ಹಾಗೆ, ಕಣ್ಣಿಗೆ ಕಾಣದ ದೇವರು, ಸ್ವರ್ಗ ಇತ್ಯಾದಿಗಳನ್ನೂ ನಂಬುವಂತೆ ಮಾಡುವ ಶಕ್ತಿ ಭಾಷೆಗಿದೆ. ವೇದ
ಆಗಮಗಳೂ ಭಾಷಿಕ ರಚನೆಗಳೇ ಹೌದು. ಮೀಮಾಂಸಶಾಸ್ತ್ರಕ್ಕೂ ಶಬ್ದ ಪ್ರಮಾಣವೇ ಆಧಾರ. ಹೀಗಾಗಿ ಭಾರತೀಯ ದರ್ಶನಗಳು ಭಾಷೆಯನ್ನು ತತ್ತ್ವಶಾಸ್ತ್ರದ ಅಂಗವೆಂದೇ ಪರಿಗಣಿಸಿದವು. ಭರ್ತೃಹರಿಯು ವ್ಯಾಕರಣವನ್ನು ದರ್ಶನಗಳ ವರ್ಗಕ್ಕೆ ಸೇರಿಸಿದ. ಭಾಷೆ ಮತ್ತು ಅದರೊಳಗೆ ಅಂತರ್ಗತವಾಗಿರುವ ತತ್ತ್ವಶಾಸ್ತ್ರದ ಪದಗಳು ವ್ಯಕ್ತಿ ಮತ್ತು ಆತ ಬದುಕುತ್ತಿರುವ ಪ್ರಪಂಚದ ನಡುವಣ ಆಳವಾದ ಸಂಬಂಧಗಳನ್ನು ಮುನ್ನೆಲೆಗೆ ತರುತ್ತದೆ. ಜಗತ್ತಿನ ಪ್ರತಿಯೊಂದು ಭಾಷೆಯೂ ಆಲೋಚನೆಗಳನ್ನು ಸಾಕಾರಗೊಳಿಸುವ ವಿಶಿಷ್ಟ ಮಾರ್ಗಗಳನ್ನು ತಾನೇ ತಾನಾಗಿ ಕಂಡುಕೊಂಡಿರುತ್ತದೆ.
ಇವತ್ತು ಮಾರುಕಟ್ಟೆ ಕೇಂದ್ರಿತವಾದ ಜಾಗತೀಕರಣವು ತನಗೆ ಬೇಕಾದ ಜಾಹೀರಾತು ಮಾದರಿಯ ಭಾಷೆಯೊಂದನ್ನು ಸೃಷ್ಟಿಸಿಕೊಂಡಿದೆ. ಧರ್ಮವೂ ಸೇರಿದಂತೆ, ತನ್ನಲ್ಲಿರುವ ಏನನ್ನಾದರೂ ವ್ಯಾವಹಾರಿಕವಾಗಿಸುವುದು ಅದರ ಪ್ರಧಾನ ಕೆಲಸ. ಇಂಥ ಗುಣಗುಳುಳ್ಳ ಭಾಷೆಯು ಜಗತ್ತಿನ ಎಲ್ಲೆಡೆಯೂ ಒಂದೇ ರೀತಿಯಲ್ಲಿ ವ್ಯವಹರಿಸುತ್ತಾ, ರಾಷ್ಟ್ರಗಳು, ವ್ಯವಹಾರಗಳು ಮತ್ತು ವ್ಯಕ್ತಿಗಳು ಸಂಪರ್ಕ ಸಾಧಿಸುವ
ವಿಧಾನವನ್ನು ತನಗೆ ಬೇಕಾದಂತೆ ಬದಲಾಯಿಸಿಕೊಂಡಿದೆ. ತಾಂತ್ರಿಕ ಏಕೀಕರಣದ ಮಾದರಿಯನ್ನು ಭಾಷೆಯೂ ಅನುಸರಿಸಿದಾಗ ಅದರ ಸೃಜನಶೀಲತೆ ಏಕಮುಖವಾಗಿ ಬೆಳೆಯುತ್ತಾ ಬತ್ತಿ ಹೋಗುತ್ತದೆ.
ವಿದ್ಯಾಪ್ರೇಮ ಮತ್ತು ಜ್ಞಾನಾನುರಾಗದ ದಾರ್ಶನಿಕ ಚಿಂತನೆಗಳು ಜಾಹೀರಾತಿನ ಭಾಷೆ ಆಧರಿಸಿದ್ದರಿಂದ ಪತನಮುಖಿಯಾಗುತ್ತಿವೆ. ‘ವಾಕ್ಕು’ ಒಂದು ಅದ್ಭುತ ಎಂದು ಕಂಡುಕೊಂಡವರೂ ಈ ದಿನಗಳಲ್ಲಿ ಭಾಷೆಯನ್ನು ವರ್ತಮಾನದ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಾರುಕಟ್ಟೆ ವಿಸ್ತರಣೆಯತ್ತ ನಡೆಯುತ್ತಿರುವ ಒಂದು ಚಳವಳಿಯಂತೆ ಕಾಣುತ್ತಿರುವ ಜಾಗತೀಕರಣವು, ಭಾಷೆ ಮತ್ತು
ತತ್ತ್ವಶಾಸ್ತ್ರಗಳನ್ನು ತನಗೆ ಬೇಕಾದಂತೆ ಮರುರೂಪಿಸಿಕೊಂಡಿದೆ. ಇದನ್ನು ಅರ್ಥಮಾಡಿಕೊಳ್ಳಲು ನಾವು ಬಹುಮಟ್ಟಿಗೆ ವಿಫಲರಾಗಿರುವುದರಿಂದಾಗಿ, ಅವುಗಳ ಕುರಿತಾದ ಅಧ್ಯಯನಗಳೂ ಕುಂಠಿತವಾಗಿದೆ. ಭಾಷೆ ಮತ್ತು ತತ್ತ್ವಶಾಸ್ತ್ರಗಳ ಅಧ್ಯಯನಗಳನ್ನು ‘ಅನುತ್ಪಾದಕ’ ಎಂದು ಸರ್ಕಾರಗಳೂ, ಜನರೂ ಭಾವಿಸುತ್ತಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಹಿಂದೆ ಬಿದ್ದಿರುವ ಜನರಿಗೆ ಭಾಷೆ–ತತ್ತ್ವಶಾಸ್ತ್ರ ಬೇಡವಾಗಿವೆ. ಇಂಥಲ್ಲಿ ಸಹಜವಾಗಿಯೇ ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸ
ಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಭಾಷೆ ಮತ್ತು ತತ್ತ್ವಶಾಸ್ತ್ರಗಳ ಮಹತ್ವ ಕಡಿಮೆಯಾಗುತ್ತಿದೆ. ಭಾಷೆಗಳ ಕುರಿತು ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರ್ಕಾರಗಳ ಜವಾಬ್ದಾರಿ ಎಂಬುದನ್ನು ಪ್ರಭುತ್ವಗಳು ಮರೆತಿವೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಕೂಡಾ ಇಂಥ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಒಂದು ಅಧ್ಯಯನದ ಪ್ರಕಾರ, ಮುಂದಿನ ನೂರು ವರ್ಷಗಳಲ್ಲಿ ವಿಶ್ವದ ಶೇ 92 ಜನರು, ಶೇ 8 ಜನರ ಭಾಷೆಗಳನ್ನು ಮಾತಾಡುತ್ತಿರುತ್ತಾರೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಿಶ್ವದ ಶೇ 8 ಜನರ ಕೈಯಲ್ಲಿ ಶೇ 92 ಜನರ ಸಂಪತ್ತು ಇರುತ್ತದೆ.
ಇಂಥ ಬೆಳವಣಿಗೆಗಳ ಪರಿಣಾಮವೆಂಬಂತೆ, ವಿಶ್ವದ ಕುರಿತಾದ ತಾತ್ತ್ವಿಕ ಚಿಂತನೆಗಳು ಇವತ್ತು ತೀವ್ರ ಬಿಕ್ಕಟ್ಟುಗಳನ್ನು ಇದಿರಿಸುತ್ತಿವೆ. ಭಾರತವೂ ಸೇರಿದಂತೆ 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಪೂರ್ವಾರ್ಧದಲ್ಲಿ ಕಾಣಿಸಿಕೊಂಡ ಚಿಂತಕರು ಇವತ್ತು ನಮ್ಮ ನಡುವೆ ಇಲ್ಲ. ವಸಾಹತು ಕಾಲಘಟ್ಟದಲ್ಲಿ ಭಾರತೀಯ ಪರಂಪರೆಯನ್ನು ಪರಿಷ್ಕರಿಸಿ ಒಪ್ಪಿಕೊಳ್ಳಲು ಹೇಳಿದ, ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ವಿವೇಕಾನಂದ, ಅರವಿಂದ, ರವೀಂದ್ರನಾಥ ಟ್ಯಾಗೋರ್, ಆನಂದ ಕುಮಾರಸ್ವಾಮಿ, ನಾರಾಯಣಗುರು, ಮಹಾತ್ಮಾ ಗಾಂಧಿ, ಅಂಬೇಡ್ಕರ್, ಕುವೆಂಪು ಮೊದಲಾದವರು ಭಾರತದ ನವೋದಯವನ್ನು ಬಲಿಷ್ಠವಾಗಿ ಕಟ್ಟಿದರು. ಇವರೆಲ್ಲರೂ ಸಮಾಜ ಸುಧಾರಣೆ, ಧರ್ಮ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ನಿರ್ಣಾಯಕ ಪ್ರಭಾವ ಬೀರಿದ್ದರು. ಸತಿಪದ್ಧತಿ, ಜಾತಿಪದ್ಧತಿ, ಅಸ್ಪೃಶ್ಯತೆಯಂಥ ಘೋರ ವಿಷಯಗಳ ವಿರುದ್ಧ ಧ್ವನಿ ಎತ್ತಿದ್ದಲ್ಲದೆ, ಅವುಗಳ ನಾಶಕ್ಕೂ ಹೋರಾಡಿದರು. ಹೀಗೆ ಮಾಡುವುದರ ಮೂಲಕ ಭಾಷೆಯನ್ನು ಹೊಸದುಗೊಳಿಸಿ, ಆಧುನಿಕ ಭಾರತದ ತತ್ತ್ವಶಾಸ್ತ್ರ ಮತ್ತು ಚಿಂತನೆಗೆ ಕೊಡುಗೆ ನೀಡಿದರು. ಯುರೋಪಿನಲ್ಲೂ ಇಂಥದ್ದೇ ಬೆಳವಣಿಗೆಗಳು ನಡೆದುವು. ‘ನಾನು ಯೋಚಿಸುತ್ತೇನೆ, ಆದ್ದರಿಂದ ನಾನು ಇದ್ದೇನೆ’ ಎಂದು ಹೇಳಿದ ಡೆಕಾರ್ಟೆ, ರಾಜಕೀಯ ತತ್ತ್ವಶಾಸ್ತ್ರದಲ್ಲಿ ಇರಲೇಬೇಕಾದ ಸಹಜ ಹಕ್ಕುಗಳ ಬಗ್ಗೆ ಬರೆದ ಜಾನ್ ಲಾಕ್, ತಾರ್ಕಿಕತೆ ಮತ್ತು ಅನುಭವದ ವಿಶ್ಲೇಷಣೆ ನಡೆಸಿದ ಕಾಂಟ್, ಧಾರ್ಮಿಕ ಸಹಿಷ್ಣುತೆಯನ್ನು ಪ್ರತಿಪಾದಿಸಿದ ವೋಲ್ಟೇರ್, ದ್ವಂದ್ವಮಾನ ಭೌತಿಕವಾದವನ್ನು ಪ್ರತಿಪಾದಿಸಿದ ಹೆಗೆಲ್ ಮತ್ತು ಮಾರ್ಕ್ಸ್ ಮೊದಲಾದವರು 20ನೇ ಶತಮಾನಕ್ಕೆ ಬೇಕಾದ ಪರಿಭಾಷೆ ಮತ್ತು ತತ್ತ್ವಶಾಸ್ತ್ರಗಳನ್ನು ರೂಪಿಸಿದರು. ಫ್ರೆಂಚ್ ತತ್ವಶಾಸ್ತ್ರಜ್ಞನಾದ ಡೆರಿಡಾ ತನಗಿಂತ ಪೂರ್ವದಲ್ಲಿ ಜನಪ್ರಿಯವಾಗಿದ್ದ ಅಸ್ತಿತ್ವವಾದ, ರಾಚನಿಕವಾದವೇ ಮೊದಲಾದ ತಾತ್ವಿಕ ಚಿಂತನೆಗಳನ್ನು ಸಂಶಯದಿಂದ ನೋಡಿದ. ಅವನ ವಾದಗಳು ಜಡವಾಗಿದ್ದ ಚಿಂತನಾಕ್ರಮಗಳನ್ನು ಪುನಶ್ಚೇತನಗೊಳಿಸಿದವು. 2004ರಲ್ಲಿ ಡೆರಿಡಾ ಸತ್ತುಹೋದ ಆನಂತರ ತತ್ತ್ವಶಾಸ್ತ್ರ ಕ್ಷೇತ್ರದಲ್ಲಿ ಹೊಸತೇನೂ ಹುಟ್ಟಲಿಲ್ಲ. ನಾವೀಗ ಜಗತ್ತಿನ ಬಗ್ಗೆ ಮಾತಾಡುವಾಗ, ಸತ್ತವರನ್ನೇ ನೆನಪಿಸಿಕೊಳ್ಳುತ್ತಿರುವುದು ನಾವು ಎದುರಿಸುತ್ತಿರುವ ಸಮಸ್ಯೆಯ ಗಾಂಭಿರ್ಯವನ್ನು ವಿವರಿಸುತ್ತದೆ.
ಇಪ್ಪತ್ತನೇ ಶತಮಾನದ ಉದ್ದಕ್ಕೂ ನಾವು ‘ಪಶ್ಚಿಮದ ಚಿಂತನೆಗಳು’, ‘ಮೂರನೇ ಜಗತ್ತಿನ ರಾಷ್ಟ್ರಗಳು’, ‘ಶೀತಲ ಯುದ್ಧ’ ಎಂದೆಲ್ಲ ಮಾತಾಡುತ್ತಿದ್ದೆವು. 1990ರ ದಶಕದ ನಂತರ ನಮಗೆ ಈ ಪದಗಳನ್ನು ಉಪಯೋಗಿಸಲು ಅಸಾಧ್ಯವಾಯಿತು. ಏಕೆಂದರೆ, ಇವತ್ತು ಜಗತ್ತಿನ ಭಾಷೆಗಳ ವ್ಯಾಕರಣವನ್ನು ಏಕರೂಪಿಯಾಗಿ ಮಾರ್ಪಡಿಸಲಾಗಿದೆ. 1980ರ ದಶಕದಲ್ಲಿ ರಷ್ಯಾದಲ್ಲಿ ನಡೆದ ಪೆರೆಸ್ಟ್ರೋಯಿಕಾದ ನಂತರ ‘ಮೂರನೇ ರಾಷ್ಟ್ರಗಳು’ ಎಂಬ ಪದ ಬಿದ್ದೇಹೋಯಿತು. ಶಿಕ್ಷಣದ ಅಂತರರಾಷ್ಟ್ರೀಕರಣವು ಜಗತ್ತಿನ ಗಡಿರೇಖೆಗಳನ್ನು ದುರ್ಬಲವಾಗಿಸಿದೆ. 2005ರಲ್ಲಿ ಜ್ಯಾರಿಗೆ ಬಂದ ‘ಗ್ಯಾಟ್’ ಮತ್ತು ‘ಡಬ್ಲ್ಯುಟಿಒ’ ಒಪ್ಪಂದಗಳು ಶಿಕ್ಷಣವನ್ನು ಕೈಗಾರಿಕೆಗಳ ಭಾಗವಾಗಿ ಪರಿಗಣಿಸುವಂತೆ ಮಾಡಿದವು. ಪರಿಣಾಮವಾಗಿ ಶಿಕ್ಷಣವು
ಲಾಭ–ನಷ್ಟದ ವಿಷಯವಾಯಿತು; ಮಾನವ ಅಭ್ಯುದಯದ ವಿಷಯವಾಗಲೇ ಇಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ, ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಜಾರಿಗೆ ಬಂದುವು. ಇದರಿಂದಾಗಿ, ಪೂರ್ವ–ಪಶ್ಚಿಮ
ಗಳ ನಡುವಣ ವ್ಯತ್ಯಾಸಗಳೂ ಗೌಣವಾದುವು. ಈಗ ಖಾಸಗಿ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳು ವಿದೇಶಿ ಶಾಲಾ ಕಾಲೇಜುಗಳೊಂದಿಗೆ ಸಂಬಂಧ ಸ್ಥಾಪಿಸಿಕೊಂಡಿವೆ. ದೆಹಲಿಯ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಈಗಾಗಲೇ ವಿದೇಶೀ ಅಧ್ಯಾಪಕರು ಪಾಠ ಮಾಡುತ್ತಿದ್ದಾರೆ. ಇಂದಿನ ಶಿಕ್ಷಣವು ಸ್ಥಳೀಯ ಭಾಷೆಗಳ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವಿಶಿಷ್ಟತೆಗಳನ್ನು ಅಳಿಸಿಹಾಕುತ್ತಿದೆ. ಸ್ಥಳೀಯ ಭಾಷೆಗಳ ಜಾಗವನ್ನು ಇಂಗ್ಲಿಷ್ ಆಕ್ರಮಿಸಿಕೊಂಡಿದೆ.
ಬದಲಾಗುತ್ತಿರುವ ಮಾರುಕಟ್ಟೆ ಕೇಂದ್ರಿತ ಜಗತ್ತಿನ ಪರಿಕಲ್ಪನೆಗೆ ಸರಿಯಾಗಿ ವಿದ್ಯಾರ್ಥಿಗಳನ್ನು ರೂಪಿಸುವ ಕೆಲಸಗಳನ್ನು ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ನಿಜ. ಅದೇ ಹೊತ್ತಲ್ಲಿ ಅವು ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಆಲೋಚನೆಗಳು ಬೆಳೆಯದಂತೆ ಮಾಡಿವೆ. ಇವತ್ತಿನ ರಾಷ್ಟ್ರೀಯ ಅರ್ಹತಾ ಪರೀಕ್ಷೆಗಳಲ್ಲಿ ವಿಮರ್ಶೆಗೆ ಅವಕಾಶಗಳೇ ಇಲ್ಲ. ಲೋಕಸೇವಾ ಆಯೋಗದ ಪರೀಕ್ಷೆಗಳು ಸರಿ–ತಪ್ಪುಗಳನ್ನು ಗುರುತಿಸುವುದಕ್ಕೆ ಸೀಮಿತವಾಗಿವೆ. ಇಂಥ ಪರೀಕ್ಷೆಗಳು ಪುಸ್ತಕವೊಂದರ ಓದುವ ಖುಷಿಯನ್ನೇ ಕಸಿದುಕೊಂಡಿವೆ. ಇವತ್ತು ತಾಂತ್ರಿಕತೆಯೇ ಅಂತಿಮವಾದ್ದರಿಂದ, ಅದನ್ನು ಆಧರಿಸಿ ಆನ್‌ಲೈನ್ ಪರೀಕ್ಷೆಗಳು ನಡೆಯುತ್ತವೆ. ಮೌಲ್ಯಮಾಪಕರು ಗಣಿತದ ನಿಖರತೆಯನ್ನು ಭಾಷೆ ಮತ್ತು ತತ್ತ್ವಶಾಸ್ತ್ರದಲ್ಲೂ ಬಯಸುತ್ತಿದ್ದಾರೆ. ಇದು ತತ್ತ್ವಶಾಸ್ತ್ರದ ಸಾವು, ಭಾಷೆಯ ಸಾವು.
ಶಿಕ್ಷಣ ಕ್ಷೇತ್ರದಲ್ಲಿ ಭಾಷೆಗಳ ಅಧ್ಯಯನ ಈಗಾಗಲೇ ಪ್ರಸ್ತುತತೆ ಕಳೆದುಕೊಂಡಿದೆ. ತತ್ತ್ವಶಾಸ್ತ್ರದ ವಿಭಾಗಗಳತ್ತ ವಿದ್ಯಾರ್ಥಿಗಳು ಬರುತ್ತಿಲ್ಲ. ಹಣದ ಕೊರತೆಯಿಂದ ಮಾನವಿಕಗಳು ಮುಚ್ಚಿಹೋಗುತ್ತಿವೆ. ವಿಶ್ವವಿದ್ಯಾಲಯಗಳಿಂದ ಹೊರಗಡೆ ಇರುವವರು ಮಾರ್ಟಿನ್ ಹೈಡೆಗ್ಗರ್ ಹೇಳಿದಂತೆ, ‘ಮರು ಓದುವಿಕೆ’ಯನ್ನು ಹುಟ್ಟುಹಾಕುತ್ತಿಲ್ಲ. ಇದರಿಂದಾಗಿ ಭಾಷೆ ಮತ್ತು ತತ್ತ್ವಶಾಸ್ತ್ರಗಳ ಕುರಿತಾದ ನಮ್ಮ ಚಿಂತನೆಗಳು ರೂಪಾಂತರಗೊಂಡಾದರೂ ಉಳಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೆಚ್ಚಿನವರು ತಮ್ಮ ತಕ್ಷಣದ ಲಾಭಕ್ಕಾಗಿ, ಪ್ರಭುತ್ವ ಹೇಳಿದುದನ್ನು ಅಧಿಕೃತಗೊಳಿಸಿ ದೃಢೀಕರಿಸುತ್ತಿದ್ದಾರೆ. ಹೊಸತನ್ನು ಹುಡುಕುವುದಕ್ಕಿಂತ ಪ್ರಭುತ್ವದ ಪರವಾಗಿದ್ದೇನೆ ಎಂದು ಘೋಷಿಸಿಕೊಳ್ಳುವುದು ಇವತ್ತು ಸುಲಭದ ಕೆಲಸವಾಗಿದೆ. ಈ ಬೆಳವಣಿಗೆಗಳು ನಾವು ಕೇಳಬಹುದಾದ ಪ್ರಶ್ನೆಗಳಿಗೆ ಮೊದಲೇ ಸಿದ್ಧಮಾಡಿಟ್ಟುಕೊಂಡ ಉತ್ತರಗಳನ್ನು ನೀಡುವಂತೆ ಮಾಡಿದೆ. ಇದನ್ನು ತತ್ತ್ವಶಾಸ್ತ್ರದ ಪೊಳ್ಳು ಮಾದರಿಗಳೆಂದು ಕರೆಯಬಹುದು. ಈ ನಕಲಿ ಮಾದರಿಗಳು ರಾಜಕಾರಣದ ಅಸಲಿ ಜಾಹೀರಾತುಗಳಂತೆ ಕೆಲಸ ಮಾಡುತ್ತಿವೆ. ಇಂಥ ದುರ್ಭರ ಸನ್ನಿವೇಶದಲ್ಲಿ ಹೀಗೇ ಎಲ್ಲವನ್ನೂ ಕೊನೆಗೊಳ್ಳಲು ಬಿಡಬೇಕೋ ಅಥವಾ ಹೋರಾಟಗಳ ಮೂಲಕ ಭಾಷೆ, ತತ್ತ್ವಶಾಸ್ತ್ರಗಳನ್ನು ಉಳಿಸಿಕೊಳ್ಳಬೇಕೋ?