ADVERTISEMENT

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ಸಲ್ಲಿಸಿದ್ದ ವರದಿಯಲ್ಲಿ ಏನಿತ್ತು?

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 5:25 IST
Last Updated 8 ಜನವರಿ 2026, 5:25 IST
<div class="paragraphs"><p>ಪಶ್ಚಿಮ ಘಟ್ಟ ಹಾಗೂ ಮಾಧವ ಗಾಡ್ಗೀಳ್</p></div>

ಪಶ್ಚಿಮ ಘಟ್ಟ ಹಾಗೂ ಮಾಧವ ಗಾಡ್ಗೀಳ್

   

– ಪ್ರಜಾವಾಣಿ ಚಿತ್ರಗಳು

ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಬುಧವಾರ ರಾತ್ರಿ ನಿಧನರಾಗಿದ್ದಾರೆ. ಪರಿಸರ ಹಾಗೂ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಅವರು ಮಾಡಿದ ಕೆಲಸಗಳು ಚಿರಸ್ಥಾಯಿ.

ADVERTISEMENT

ವಿಶ್ವದಲ್ಲೇ ಅಪರೂಪದ ಜೀವವೈವಿಧ್ಯ ಇರುವ ಪಶ್ಚಿಮಘಟ್ಟ ನಾಶವಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಾಗ ಕೇಂದ್ರ ಸರ್ಕಾರವು 2009ರಲ್ಲಿ ಗಾಡ್ಗೀಳ್ ನೇತೃತ್ವದಲ್ಲಿ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯನ್ನು ರಚಿಸಿತು.

ಗಾಡ್ಗೀಳ್ ವರದಿ ಸಾರವೇನು?

ಮಾಧವ್‌ ಗಾಡ್ಗೀಳ್‌ ವರದಿ ಪರಿಸರ ಮತ್ತು ಪರಿಸರವಾದಿಗಳಿಗೆ ಪೂರಕವಾಗಿದ್ದು, ಅಭಿವೃದ್ಧಿ ಪರವಾಗಿಲ್ಲ ಎಂಬುದು ವರದಿಯನ್ನು ವಿರೋಧಿಸುವವರ ಆರೋಪ. ಈ ವರದಿಯಲ್ಲಿ ಪಶ್ಚಿಮಘಟ್ಟದ ಶೇ 64ರಷ್ಟು ಪ್ರದೇಶವನ್ನು ವಿಸ್ತೃತವಾಗಿ ವರ್ಗೀಕರಿಸಿದ್ದಾರೆ. ಆರು ರಾಜ್ಯಗಳ 44 ಜಿಲ್ಲೆಗಳ 142 ತಾಲ್ಲೂಕುಗಳು ಇದರಡಿ ಬರುತ್ತವೆ. ಪರಿಸರ ಸೂಕ್ಷ್ಮ ವಲಯಗಳನ್ನು ಇಎಸ್‌ಝಡ್‌1, ಇಎಸ್‌ಝಡ್‌ 2 ಮತ್ತು ಇಎಸ್‌ಝಡ್‌ 3 ಎಂದು ಹೆಸರಿಸಿದ್ದರು.

ವಿಶ್ವ ಜೈವಿಕ ವೈವಿಧ್ಯಗಳ ಪ್ರಮುಖ ಎಂಟು ತಾಣಗಳಲ್ಲಿ ಪಶ್ಚಿಮಘಟ್ಟವೂ ಒಂದು ಎಂದು ಯುನೆಸ್ಕೋ ಗುರುತಿಸಿದೆ. ಸರಿಸೃಪ, ಉಭಯಚರ, ಮೀನುಗಳು, ಪಕ್ಷಿಗಳು ಮತ್ತು ಸಸ್ತನಿಗಳ ಪ್ರಭೇದಗಳ ಪೈಕಿ ದೇಶದ ಶೇ 30ರಷ್ಟು ಪಶ್ಚಿಮಘಟ್ಟದಲ್ಲಿವೆ. ಹೀಗಾಗಿ ಅಪರೂಪದ ಜೀವವೈವಿಧ್ಯಗಳ ಕಣಜ ಎಂದೇ ಕರೆಯಲಾಗುತ್ತದೆ. ಇಎಸ್‌ಝಡ್‌ 1 ಅಡಿ ಅಭಿವೃದ್ಧಿ ಚಟುವಟಿಕೆಗಳಾದ ಗಣಿಗಾರಿಕೆ, ಉಷ್ಣ ವಿದ್ಯುತ್‌ ಸ್ಥಾವರಗಳು, ಅಣೆಕಟ್ಟುಗಳು ಸ್ಥಾಪನೆಗೆ ನಿಷೇಧ ಮತ್ತು ಚಾಲ್ತಿಯಲ್ಲಿರುವ ಯೋಜನೆಗಳನ್ನು ನಿಲ್ಲಿಸಬೇಕು ಮತ್ತು ಅವಧಿ ಮುಗಿದ ಯೋಜನೆಗಳನ್ನು ಮುಂದುವರಿಸಬಾರದು. ಹೊಸ ಗಿರಿಧಾಮಗಳನ್ನು ಸೃಷ್ಟಿಸಬಾರದು.

ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಬಾರದು ಹಾಗೂ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಇದ್ದ ಹಾಗೆಯೇ ಸಂರಕ್ಷಿಸಲು ನದಿ ತಿರುವು ಯೋಜನೆಗಳನ್ನು ಕೈಗೊಳ್ಳಬಾರದು. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಆಡಳಿತವನ್ನು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳಬೇಕು ಹಾಗೂ ಹೆಚ್ಚು ಅಧಿಕಾರವನ್ನು ನೀಡಬೇಕು. ಮೇಲ್ತಸರದಿಂದ ಅಧಿಕಾರ ಚಲಾಯಿಸುವ ಬದಲು ಕೆಳ ಹಂತದಲ್ಲಿ ಅಧಿಕಾರ ನೀಡಬೇಕು. ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ಅಧಿಕಾರ ವಿಕೇಂದ್ರೀಕರಣಗೊಳಿಸಬೇಕು. ಪರಿಸರ (ಸಂರಕ್ಷಣೆ) ಕಾಯ್ದೆ 1986 ಕಾಯ್ದೆಯಲ್ಲಿ ದತ್ತವಾಗಿರುವ ಅಧಿಕಾರವನ್ನು ಬಳಸಿ ಪಶ್ಚಿಮಘಟ್ಟ ಪರಿಸರ ಪ್ರಾಧಿಕಾರ ಸ್ಥಾಪಿಸುವಂತೆಯೂ ವರದಿಯಲ್ಲಿ ಸಲಹೆ ನೀಡಲಾಗಿತ್ತು.

ಮುಖ್ಯಾಂಶಗಳು

  • ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು (ಡಬ್ಯು.ಜಿ.ಇ.ಇ.ಪಿ) ಇಡೀ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇ.ಎಸ್.ಎ) ಎಂದು ಶಿಫಾರಸು ಮಾಡಿದೆ.

  • ಈ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ 142 ತಾಲ್ಲೂಕುಗಳನ್ನು ಒಂದು, ಎರಡು ಮತ್ತು ಮೂರನೇ ಹಂತಗಳ ಪರಿಸರ ಸೂಕ್ಷ್ಮ ವಲಯ (ಎ.ಎಸ್.ಝೆಡ್) ಎಂದು ಗುರುತಿಸಿದೆ.

  • ಮೊದಲ ಹಂತದಲ್ಲಿರುವ ತಾಲ್ಲೂಕುಗಳಲ್ಲಿ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಬಂಧಿಸಬೇಕು.

  • ಎ.ಎಸ್.ಝೆಡ್–1ರ ವ್ಯಾಪ್ತಿಯಲ್ಲಿ ಹೊಸ ಜಲಾಶಯಗಳನ್ನು ನಿರ್ಮಿಸಬಾರದು.

  • ಪರಿಸರ ವಿಚಾರಗಳಲ್ಲಿ ಆಡಳಿತವು ಗ್ರಾಮ ಪಂಚಾಯಿತಿಯಿಂದ ಮೇಲಿನ ಹಂತಕ್ಕೆ ಹೋಗಬೇಕು. ಅಧಿಕಾರ ವಿಕೇಂದ್ರೀಕರಣ ಮಾಡಿ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಬಲ ತುಂಬಬೇಕು.

ವರದಿ ಬಗ್ಗೆ ಟೀಕೆಗಳೇನು?

ಗಾಡ್ಗೀಳ್ ವರದಿಯು ಹೆಚ್ಚು ಪರಿಸರ ಪೂರಕವಾಗಿದ್ದು, ವಾಸ್ತವಾಂಶಗಳಿಂದ ಕೂಡಿಲ್ಲ. ಅಲ್ಲದೇ ಮಾಡಿರುವ ಶಿಫಾರಸುಗಳನ್ನು ಜಾರಿ ಮಾಡುವುದು ಕಷ್ಟಸಾಧ್ಯ ಎಂಬ ಟೀಕೆ ಎದುರಾಗಿತ್ತು. ವಿದ್ಯುತ್ ಉತ್ಪಾದನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಬೇಕು. ಆದರೆ, ಈ ಶಿಫಾರಸುಗಳನ್ನು ಜಾರಿ ಮಾಡಿದಾಗ ಆಗುವ ಆದಾಯ ನಷ್ಟದ ಭರ್ತಿಯ ಬಗ್ಗೆ ವರದಿಯಲ್ಲಿ ತಿಳಿಸಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿತ್ತು.

ಆರು ರಾಜ್ಯಗಳ ಮುಖ್ಯಮಂತ್ರಿಗಳು, ಎಲ್ಲ ರಾಜಕೀಯ ಪಕ್ಷಗಳು, ಕೇರಳದಲ್ಲಿ ವಿಶೇಷವಾಗಿ ಚರ್ಚ್‌ಗಳು ಗಾಡ್ಗೀಳ್‌ ವರದಿಯನ್ನು ವಿರೋಧಿಸಿದವು. ಗಾಡ್ಗೀಳ್ ಅವರನ್ನು ರಹಸ್ಯ ಕಾರ್ಯಸೂಚಿ ಹೊಂದಿರುವ ಪರಿಸರ ಭಯೋತ್ಪಾದಕ ಎಂದೆಲ್ಲ ಹಣೆಪಟ್ಟಿ ಕಟ್ಟಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.