
ಮತ್ತೆ ಬಂತು ರಾಷ್ಟ್ರೀಯ ಸಹಕಾರ ಸಪ್ತಾಹ (National Cooperative Week). ಪ್ರತಿ ವರ್ಷವೂ ನವೆಂಬರ್ 14ರಿಂದ ಪ್ರಾರಂಭವಾಗಿ 20 ರವರೆಗೆ ರಾಷ್ಟ್ರದಾದ್ಯಂತ ‘ರಾಷ್ಟ್ರೀಯ ಸಹಕಾರ ಸಪ್ತಾಹ’ವನ್ನು ಆಚರಿಸಲಾಗುತ್ತದೆ.
ಸ್ವತಂತ್ರ ಭಾರತದ ಅಭ್ಯುದಯಲ್ಲಿ ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ಭಾರತದ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಸಹಕಾರ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡಿದರು. ಆ ಕಾರಣಕ್ಕಾಗಿ ಅವರ ಜನ್ಮ ದಿನದಂದು ಪ್ರಾರಂಭಿಸಿ ಒಂದು ವಾರಗಳ ಕಾಲ ರಾಷ್ಟ್ರೀಯ ಸಹಕಾರ ಸಪ್ತಾಹ (ನವೆಂಬರ್ 14–20) ಆಚರಿಸಲಾಗುತ್ತದೆ. ಈ ಆಚರಣೆ ಕೇವಲ ಔಪಚಾರಿಕತೆಗೆ ಸೀಮಿತವಾಗದೇ ಅರ್ಥಪೂರ್ಣ ದಾರಿದೀಪವಾಗಲಿ ಎಂಬುದೊಂದು ಆಶಯ.
ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಸಹಕಾರ ರಂಗ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ‘ಸಹಕಾರ ಸಾಧ್ಯವಿಲ್ಲ, ಸಹಕಾರ ಕ್ಷೇತ್ರಕ್ಕೆ ಉಳಿಗಾಲವಿಲ್ಲ. ಅದರಿಂದ ಏನನ್ನೂ ಸಾಧಿಸಲಾಗುವುದಿಲ್ಲ, ಸಹಕಾರ ಕ್ಷೇತ್ರ ಮುಂಚೆ ಚೆನ್ನಾಗಿತ್ತ್ತು, ಇಂದು ಸಹಕಾರದಿಂದ ಏನನ್ನೂ ಸಾಧಿಸಲಾಗುವುದಿಲ್ಲ, ಸಹಕಾರಕ್ಕೆ ಭವಿಷ್ಯವಿಲ್ಲ’ ಎಂಬೆಲ್ಲ ಬೇಜವಾಬ್ದಾರಿ ಸಂಕಥನಗಳು ಕಳವಳಕಾರಿಯಾಗಿವೆ.
ಜಗತ್ತು ಅದೇ ರೀತಿ ಭಾರತದಲ್ಲಿ ಪಾರಂಪರಿಕವಾಗಿ ಸಹಕಾರ ಚಟುವಟಿಕೆಗಳು ಅನೌಪಚಾರಿಕವಾಗಿ ಹಾಸು ಹೊಕ್ಕಾಗಿದ್ದವು. 19ನೇ ಶತಮಾನದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಉಂಟಾದ ಆರ್ಥಿಕ ದುಸ್ಥಿತಿಯಿಂದ ಹೊರಬರಲು ಇಂಗ್ಲೆಂಡ್ ಮೊದಲಾಗಿ ಯೂರೋಪಿನ ಅನೇಕ ರಾಷ್ಟ್ರಗಳಲ್ಲಿ ಸಹಕಾರ ಚಳುವಳಿಯ ಪ್ರಾಥಮಿಕ ಬೆಳವಣಿಗೆಯನ್ನು ಕಾಣಬಹುದು. 1844ರಲ್ಲಿ ರಾಕ್‌ಡೇಲ್ ಪೈಯೋನಿರ್ಸ್ ಮೂಲಕ ಇಂಗ್ಲೆಂಡ್‌ನ ಲ್ಯಾಂಕ್‌ಶೇರ್‌ನಲ್ಲಿ ಔಪಚಾರಿಕವಾಗಿ ಆಧುನಿಕ ಸಹಕಾರ ಚಳುವಳಿಯನ್ನು ಹುಟ್ಟು ಹಾಕಲಾಯಿತು. ಇಂಗ್ಲೆಂಡ್‌ನಿಂದ ಪ್ರಾರಂಭವಾದ ಚಳವಳಿ ಸ್ಕಾಟ್‌ಲ್ಯಾಂಡ್, ಡೆನ್‌ಮಾರ್ಕ್ ಮತ್ತು ಜರ್ಮನಿಯಂಥ ರಾಷ್ಟ್ರಗಳಿಗೂ ವಿಸ್ತರಿಸಿ ಬಡವರ ಹೊಟ್ಟೆ ಮತ್ತು ಬಟ್ಟೆಗಳಿಗೆ ಪರಿಹಾರ ಒದಗಿಸಿದ ಅಂದಿನ ಸಣ್ಣ ಪ್ರಮಾಣ ಚಳುವಳಿ ಇಂದು ಅನೇಕ ಕ್ಷೇತ್ರಗಳಲ್ಲಿ ಜಗತ್ತಿನ ಬಹುಭಾಗವನ್ನು ಆವರಿಸಿಕೊಂಡಿದೆ.
ಭಾರತದಲ್ಲೂ ಪಾರಂಪರಿಕವಾಗಿ ನಮ್ಮ ಜೀವನ ಶೈಲಿಯು ಸಹಕಾರ ತತ್ವಾಧಾರಿತವಾಗಿದ್ದರೂ ಅದೊಂದು ಔಪಚಾರಿಕ ಸಾಂಸ್ಥಿಕ ಸ್ವರೂಪ ಪಡೆದುಕೊಂಡಿರಲಿಲ್ಲ. 19ನೇ ಶತಮಾನದ ಕೊನೆ ಭಾಗದಲ್ಲಿ ಬ್ರಿಟಿಷ್ ಆಡಳಿತ ಅವಧಿಯಲ್ಲಿ ಉದ್ಭವವಾದ ಗ್ರಾಮೀಣ ಕೃಷಿ ದುಸ್ಥಿತಿ ಮತ್ತು ಲೇವಾದೇವಿಗಾರರ ಶೋಷಣೆಯಿಂದ ಜನರನ್ನು ರಕ್ಷಿಸಲು ಅಂದಿನ ಬ್ರಿಟೀಷ್ ಸರ್ಕಾರ ಭಾರತದಲ್ಲಿ 1904ರಲ್ಲಿ ಸಹಕಾರ ಸಂಘಗಳ ಕಾಯ್ದೆ ಜಾರಿಗೊಳಿಸಿತು.
ಐತಿಹಾಸಿಕವಾಗಿ ಭಾರತದ ಪ್ರಪ್ರಥಮ ಸಹಕಾರ ಸಂಘವು ಕರ್ನಾಟಕದಲ್ಲಿಯೇ ಸ್ಥಾಪನೆಯಾಗಿದ್ದು, ಸಿದ್ಧನಗೌಡ ಪಾಟೀಲ ಅವರು ಸ್ಥಾಪಿಸಿದ ಗದಗ ಜಿಲ್ಲೆಯ ಕಣಗಿನಹಾಳ ಸಹಕಾರಿ ಸಂಘ ಕನ್ನಡಿಗರ ಹೆಮ್ಮೆಯಾಗಿದೆ. 1904ರಿಂದ ಸ್ವಾತಂತ್ರ್ಯದವರೆಗೆ ಸಹಕಾರ ಕ್ಷೇತ್ರವು ಅನೇಕ ಏಳು ಬೀಳುಗಳನ್ನು ಕಂಡಿದೆ. 1904ರ ಕಾಯ್ದೆಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು 1912, 1915 (ಎಡ್ವರ್ಡ್ ಮ್ಯಾಕ್‌ಲೈನ್ ಸಮಿತಿ), 1919 (ಮಾಂಟೆಗೋ ಚೇಮ್‌ಫರ್ಡ್ ಸುಧಾರಣೆಗಳು) ಮತ್ತು ಅಖಿತ ಭಾರತ ಸಹಕಾರಿ ಯೋಜನಾ ಸಮಿತಿ 1954ರ ವರದಿಗಳ ಆಧಾರದ ಮೇಲೆ ಅನೇಕ ಸುಧಾರಣೆಗಳನ್ನು ತರಲಾಯಿತು.
ಸ್ವಾತಂತ್ರ್ಯಾ ನಂತರ ಯೋಜಿತ ಆರ್ಥಿಕ ಅಭಿವೃದ್ಧಿಯ ಭಾಗವಾಗಿ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿ ಸಹಕಾರ ರಂಗವು ಅಭಿವೃದ್ಧಿಯ ಮೂರನೇ ರಂಗವೆಂದು ಮನ್ನಣೆ ನೀಡಿತು. 1958ರಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು ರಾಷ್ಟ್ರೀಯ ಸಹಕಾರಿ ನೀತಿಯನ್ನು ಅನುಮೋದಿಸಿತು. 1962ರಲ್ಲಿ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ಮಂಡಳಿ (ಎನ್.ಸಿ.ಡಿ.ಸಿ)ಯನ್ನು ಸ್ಥಾಪಿಸಲಾಯಿತು. 2002ರಲ್ಲಿ ರಾಷ್ಟ್ರೀಯ ಸಹಕಾರಿ ನೀತಿಯನ್ನು ಘೋಷಿಸಲಾಯಿತು. ಈ ಮಧ್ಯೆ ಸಹಕಾರಿ ಕಾಯ್ದೆಗೆ ಅನೇಕ ತಿದ್ದುಪಡಿಗಳನ್ನು ತರಲಾಯಿತು. ಇದೀಗ 2021ರಲ್ಲಿ ಕೇಂದ್ರ ಸರ್ಕಾರದಲ್ಲಿ ಸಹಕಾರಿ ಮಂತ್ರಾಲಯವನ್ನು ಪ್ರಾರಂಭಿಸಿದ್ದು ಸಹಕಾರಿ ಚಳುವಳಿಯಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.
ಸಹಕಾರಿ ಕ್ಷೇತ್ರವು ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಅದು ಪತ್ತು, ಕೃಷಿ ಮತ್ತು ತೋಟಗಾರಿಕೆ, ಕೈಗಾರಿಕಾ ಉತ್ಪಾದನೆ, ಹಾಲು, ಹಣ್ಣು, ತರಕಾರಿ, ರಸಗೊಬ್ಬರ, ರೇಷ್ಮೆ, ಗೃಹ ನಿರ್ಮಾಣ, ನೇಕಾರಿಕೆ, ಮೀನುಗಾರಿಕೆ, ಜಲ ನೆಲ ನಿರ್ವಹಣೆ, ಮುಂತಾದ ಕ್ಷೇತ್ರಗಳಲ್ಲಿ ಹಾಸುಹೊಕ್ಕಾಗಿದೆ. ಉತ್ಪಾದನೆ, ಸಂಸ್ಕರಣೆ, ಆದಾಯ ಹೆಚ್ಚಳ ಮತ್ತು ಉದ್ಯೋಗ ಸೃಷ್ಟಿಗೆ ನಾಂದಿಯಾಗಿದೆ. ಅಂಕಿ ಅಂಶಗಳನ್ನು ಗಮನಿಸುವುದಾದರೆ, ಜಾಗತಿಕ ಮಟ್ಟದಲ್ಲಿ ವಿವಿಧ ರೀತಿಯ ಸುಮಾರು 30 ಲಕ್ಷ ಸಹಕಾರಿ ಸಂಘಗಳು ಕಾರ್ಯನಿರತವಾಗಿವೆ. ಜಗತ್ತಿನ ಸುಮಾರು ಶೇ 12 ರಷ್ಟು ಜನಸಂಖ್ಯೆ ಸಹಕಾರ ಕ್ಷೇತ್ರದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಜಾಗತಿಕ ಉದ್ಯೋಗ ಸೃಷ್ಟಿಯಲ್ಲಿ ಸಹಕಾರ ರಂಗದ ಪಾಲು ಸುಮಾರು 10 ಪ್ರತಿಶತವಾಗಿದೆ. ಭಾರತದಲ್ಲಿ, ಸುಮಾರು 8.5 ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳು, 17 ರಾಷ್ಟ್ರೀಯ ಸಹಕಾರಿ ಮಹಾಮಂಡಳಗಳು, 390 ರಾಜ್ಯ ಮಟ್ಟದ ಮತ್ತು 2,705 ಜಿಲ್ಲಾ ಮಟ್ಟದ ಸಹಕಾರಿ ಒಕ್ಕೂಟಗಳ ಸ್ಥಾಪನೆಯಾಗಿದೆ. ಭಾರತದ ಹಳ್ಳಿಗಳಲ್ಲಿ ಸುಮಾರು ಒಂದು ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. 2024ರಲ್ಲಿ ಭಾರತದ ಎರಡು ಪ್ರತಿಷ್ಠಿತ ಸಂಸ್ಥೆಗಳು- ಹಾಲಿನ ಅಮೂಲ್ ಮತ್ತು ಗೊಬ್ಬರಗಳ ಇಫ್ಕೊ ಸಹಕಾರಿ ಸಂಘಟನೆಗಳು ಜಗತ್ತಿನ ಶ್ರೇಷ್ಠ ಸಹಕಾರಿ ಸಂಘಟನೆಗಳೆಂದು ಮನ್ನಣೆ ಪಡೆದಿರುವುದು ಭಾರತದ ಹೆಮ್ಮೆ.
ಸಹಕಾರಿ ಸಂಘಗಳು ಸಾರ್ವತ್ರಿಕ ಅಭಿವೃದ್ಧಿಯನ್ನು ಸಾಧಿಸುವ ನಿಟ್ಟಿನಲ್ಲಿ ಅನೇಕ ಅಡೆತಡೆಗಳನ್ನು ಎದುರಿಸುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಜಾಗತಿಕ ಆರ್ಥಿಕ ನವಉದಾರೀಕರಣದ ನೀತಿಗಳ ಹೊಡೆತ, ರಾಜಕೀಯ ಹಸ್ತಕ್ಷೇಪ, ಪಟ್ಟಭದ್ರರ ಕಪಿಮುಷ್ಠಿ, ಸಾರ್ವತ್ರಿಕ ತಾತ್ಸಾರ, ಆಂತರಿಕ ಹಣಕಾಸಿನ ಬಿಕ್ಕಟ್ಟು, ನುರಿತ / ಅನುಭವಿ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯಗಳ ಕೊರತೆಗಳಾಗಿವೆ. 21ನೇ ಶತಮಾನದಲ್ಲಿ ಬಂಡವಾಳದ ಅನಾಹುತ ಬೆಳೆವಣಿಗೆಯಿಂದಾಗಿ ಕಾರ್ಪೊರೇಟ್ ಕಂಪನಿಗಳ ಅವ್ಯಾಹತ ಬೆಳವಣಿಗೆಯಿಂದಾಗಿ ಸಹಕಾರ ಕ್ಷೇತ್ರಕ್ಕೆ ಸಾರ್ವತ್ರಿಕ ಹಿನ್ನೆಡೆಯಾಗುತ್ತಿದೆ. ಪ್ರಬಲ ಬಂಡವಾಳಶಾಹಿ ದೇಶಗಳೆಂದೇ ತಮ್ಮನ್ನು ತಾವು ಬಿಂಬಿಸಿಕೊಳ್ಳುವ ಬಹುತೇಕ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯ ಭದ್ರ ಬುನಾದಿ ಸಹಕಾರ ರಂಗವೇ ಆಗಿರುವುದು ಒಂದು ಆಶ್ಚರ್ಯ! ಜಾಗತಿಕ ಆರ್ಥಿಕ ನವಉದಾರೀಕರಣದ ಸಿದ್ಧಾಂತದ ಶಿಶುಗಳಾದ ಕಾರ್ಪೋರೇಟ್ ಕಂಪನಿಗಳು ಸಹಕಾರ ಸಂಘಟನೆಗಳ ಬಲವರ್ಧನೆಗೆ ಅಡ್ಡಿಯಾಗುತ್ತಿವೆ.
ಕ್ಷಮತೆ, ಸಾಮರ್ಥ್ಯ, ವೇಗದ ಪ್ರಗತಿ ಎಂಬ ಕೂಗುಗಳ ಮೂಲಕ ಕೆಲವೇ ಕೆಲವು ಉದ್ದಿಮೆದಾರರು ಇಲ್ಲವೇ ಕುಟುಂಬಗಳ ಸ್ವತ್ತಾಗಿರುವ ಕಾರ್ಪೋರೇಟ್ ಕಂಪನಿಗಳೇ ಎಲ್ಲ ಸಮಸ್ಯೆಗಳಿಗೂ ರಾಮಬಾಣ ಎಂಬಂತೆ ಬಿಂಬಿಸಲಾಗುತ್ತಿದೆ. ಬಂಡವಾಳ ಮತ್ತು ಮುಕ್ತ ಮಾರುಕಟ್ಟೆ ವ್ಯವಸ್ಥೆಗಳು ಖಾಸಗಿ ಲಾಭವನ್ನು ವೃದ್ಧಿಸುವ ಉದ್ದೇಶವನ್ನು ಹೊಂದಿದ್ದರೆ, ಸಹಕಾರವು ಸಮಾನತೆಯನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಲಾಭ ಮತ್ತು ಪೈಪೋಟಿಗಳ ಆಧಾರಿತ ಉತ್ಪಾದನಾ ಮತ್ತು ವಿತರಣಾ ವ್ಯವಸ್ಥೆಗಳು ಸಮಾಜದಲ್ಲಿರುವ ಅಸಮಾನತೆಯನ್ನು ತೀವ್ರಗೊಳಿಸುವ ಸಾಧ್ಯತೆಗಳಿವೆ. ಈ ತೆರನಾದ ಅಭಿವೃದ್ಧಿ ಮಾದರಿಗಳು ಇದೀಗ ಎದ್ದು ಕಾಣುತ್ತಿವೆ ಮತ್ತು ಪ್ರಸ್ತುತ ಸಂದರ್ಭಕ್ಕೆ ಇವೇ ಕಾಯಕಲ್ಪ ಎಂಬ ಭ್ರಮೆ ಉಂಟಾಗುತ್ತಿದೆ. ಇದು ಭ್ರಮೆ ದೀರ್ಘ ಕಾಲದಲ್ಲಿ ಸಮಾಜದಲ್ಲಿ ಪ್ರಕ್ಷುಬ್ಧತೆಯನ್ನು ನಿರ್ಮಿಸುವ ಎಲ್ಲ ಲಕ್ಷಣಗಳಿವೆ.
ಕಾರಣ, ದೀರ್ಘಕಾಲೀನ ಸಮಾಜ ಮುಖಿ ಅಭಿವೃದ್ಧಿಗಾಗಿ ಸಹಕಾರ ರಂಗಕ್ಕೆ ಹೆಚ್ಚಿನ ಒತ್ತು ಕೊಟ್ಟು ಬೆಳೆಸುವ ಅವಶ್ಯಕತೆ ಇದೆ. 1954ರ ಅಖಿಲ ಭಾರತ ಗ್ರಾಮೀಣ ಪತ್ತಿನ ಸರ್ವೇಕ್ಷಣಾ ಸಮಿತಿಯ ಅಧ್ಯಕ್ಷರಾದ ವೆಂಕಟಪ್ಪಯ್ಯ ಅವರ ‘ಭಾರತದಲ್ಲಿ ಸಹಕಾರ ವಿಫಲವಾಗಿದೆ, ಆದರೆ ಸಹಕಾರ ಗೆಲ್ಲಲೇಬೇಕು’ ಎಂದು ಎಚ್ಚರಿಕೆ ನೀಡಿದ್ದರು. ಅದು ನಮಗಿಂದು ಮತ್ತೆ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದ ಒಟ್ಟಾರೆ ಸಮಾಜಮುಖಿ ಮೌಲ್ಯಗಳ ದೃಷ್ಟಿಯಿಂದ ಕ್ಷೇತ್ರದ ಅಳಿವು ಮತ್ತು ಉಳಿವು ಗಂಭೀರ ಪ್ರಶ್ನೆಯಾಗಿದೆ. ಒಂದೆಡೆ ಸರ್ಕಾರಗಳ ಪ್ರಯತ್ನಗಳು ನಡೆಯುತ್ತಿದ್ದರೂ, ಇನ್ನೊಂದೆಡೆ ಸಾರ್ವತ್ರಿಕ ಹಿನ್ನೆಡೆಯಾಗುತ್ತಿರುವುದೂ ಕೂಡಾ ಕಂಡು ಬರುತ್ತಿದೆ. ಅನೇಕ ಸಲ ಪಟ್ಟಭದ್ರ ಹಿತಾಸಕ್ತಿಗಳು ಸಹಕಾರಿ ಕ್ಷೇತ್ರದ ಕತ್ತು ಹಿಸುಕುವ ಪ್ರಯತ್ನ ಮಾಡುತ್ತಿರುತ್ತವೆ. ಸಹಕಾರ ಸಂಘಟನೆಗಳು ಬಲಹೀನವಾಗಿ ಕಾರ್ಯಕ್ಷೇತ್ರದಿಂದ ಹಿಂದೆ ಸರಿಯುತ್ತಿದ್ದಂತೆ ಅವುಗಳ ಕುರಿತು ಅವಹೇಳನಕಾರಿ ಅಪಪ್ರಚಾರ ಪ್ರಾರಂಭಿಸಲಾಗುತ್ತದೆ. ಪ್ರಸ್ತುತ ಜಾಗತಿಕ ಆರ್ಥಿಕ ಅಭಿವೃದ್ಧಿಯ ಸವಾಲುಗಳನ್ನು ಎದುರಿಸಲು ಸಹಕಾರ ಸಂಘಟನೆಗಳು ಸೂಕ್ತ ಅಥವಾ ಶಕ್ತ ಸಂಸ್ಥೆಗಳಲ್ಲವೆಂದು ಬಿಂಬಿಸಲಾಗುತ್ತಿದೆ. ಇದನ್ನು ಬುದ್ಧಿಜೀವಿಗಳು, ಆರ್ಥಿಕ ತಜ್ಞರು ಹಾಗೂ ಜನ ಸಾಮಾನ್ಯರು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಸಹಕಾರಿ ಕ್ಷೇತ್ರವನ್ನು ಬೆಳೆಸಬೇಕಾಗಿದೆ.
ಸಹಕಾರಿ ಸಂಘಟನೆಗಳು ತಮ್ಮ ಮೂಲ ಸಿದ್ಧಾಂತದನ್ವಯ ಸ್ವಾವಲಂಬನೆಯನ್ನು ಸಾಧಿಸಲು ಪ್ರಯತ್ನಿಸಬೇಕು. ಸಂಘಟನೆಗಳ ಮೂಲಾಧಾರವಾದ ಆರ್ಥಿಕ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಬಲವರ್ಧನೆ ಕೂಡಾ ಅಷ್ಟೇ ಮಹತ್ವದ್ದಾಗಿವೆ. ಅದೇ ರೀತಿ ವಿವಿಧ ಸಹಕಾರಿ ಸಂಘಟನೆಗಳ ನಡುವೆ ಪರಸ್ಪರ ಸಹಕಾರ ಮತ್ತು ಸಂಯೋಜನೆ ಕೂಡಾ ನಿರ್ಣಾಯಕವಾಗಿದೆ. ಅವ್ಯಾಹತವಾಗಿ ಬೆಳೆಯುತ್ತಿರುವ ಮುಕ್ತ ಮಾರುಕಟ್ಟೆ ವಾತಾವರಣದಲ್ಲಿ ಸರಕುಗಳ ಮಾರಾಟ ಮತ್ತು ಅವುಗಳ ಪ್ರಚಾರಕ್ಕಾಗಿ ಮಾಡುವ ವೆಚ್ಚದ ಅಲ್ಪಭಾಗವನ್ನು ಕೂಡಾ ನಾವು ಸಹಕಾರ ರಂಗದ ಪ್ರಚಾರಕ್ಕಾಗಿ ಮಾಡದಿರುವುದು ಖೇದಕರವಾದ ಸಂಗತಿಯಾಗಿದೆ.
ಈ ಗುರಿಗಳನ್ನು ಸಾಧಿಸಲು ಸಹಕಾರ ಶಿಕ್ಷಣ ಅತ್ಯಂತ ಮಹತ್ವದ್ದಾಗಿದೆ. ಸಹಕಾರ ಶಿಕ್ಷಣಕ್ಕೆ ಅವಶ್ಯ ವಾತಾವರಣ ನಿರ್ಮಾಣ, ಪ್ರಚಾರ, ಔಪಚಾರಿಕ ಶಿಕ್ಷಣ, ತರಬೇತಿ ಹಾಗೂ ಜಾಗೃತಿ ಅವಶ್ಯವಾಗಿದೆ. ಪ್ರತಿ ವರ್ಷವೂ ದೇಶದಾದ್ಯಂತ ಹಮ್ಮಿಕೊಳ್ಳಲಾಗುವ ರಾಷ್ಟ್ರೀಯ ಸಹಕಾರ ಸಪ್ತಾಹವು ಒಂದು ಉತ್ತಮ ಪ್ರಯತ್ನವಾಗಿದೆ. ಒಂದು ವಾರ ನಡೆಯುವ ಸಹಕಾರ ಸಪ್ತಾಹದ ಪ್ರತಿ ದಿನ ಒಂದೊಂದು ಘೋಷವಾಕ್ಯದೊಂದಿಗೆ ಸಪ್ತಾಹವನ್ನು ಆಚರಿಸಲಾಗುತ್ತದೆ. ನಾಡಿನ ಎಲ್ಲ ಜನರೂ ಸಹಕಾರಿ ಸಪ್ತಾಹವನ್ನು ಆಚರಿಸಲು ಮುಂದಾಗಬೇಕು.
ಈ ಕುರಿತು ಸರ್ಕಾರ ಮತ್ತು ಸಾರ್ವಜನಿಕ ಸಂಘಟನೆಗಳ ಸಹಕಾರಿ ತತ್ವಗಳು, ವಿಧಾನಗಳು, ಆಡಳಿತ, ಹಣಕಾಸು ನಿರ್ವಹಣೆ ಮುಂತಾದ ವಿಷಯಗಳ ಕುರಿತು ಹೆಚ್ಚಿನ ಪ್ರಯತ್ನಗಳ ಮೂಲಕ ಜನಾಂದೋಲನ ಮೂಡಿಸಬೇಕಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕವಾದ ಸಹಕಾರ ಮಂತ್ರಾಲಯವನ್ನು ಪ್ರಾರಂಭಿಸಲಾಗಿದ್ದು, ಸಹಕಾರದ ಬೆಳವಣಿಗೆಗೆ ಉತ್ತಮ ಅವಕಾಶವಾಗಿದೆ. ಅದನ್ನು ಸಮಾಜಮುಖಿಯಾಗಿ ಅನುಷ್ಠಾನಗೊಳಿಸುವುದು ನಮ್ಮ ನೀತಿ ನಿರೂಪಕರಿಗೊಂದು ಸವಾಲಾಗಿದೆ. ಸಹಕಾರ ಕ್ಷೇತ್ರದ ಮಹತ್ವ ಕುರಿತು 1927ರಲ್ಲಿ ರಾಷ್ಟ್ರೀಯ ಕೃಷಿ ಆಯೋಗವು ಮಾಡಿದ ಘೋಷಣೆ ಐತಿಹಾಸಿಕವಾಗಿದೆ. ‘ಸಹಕಾರ ಭಾರತದ ನರನಾಡಿಗಳಲ್ಲಿದೆ. ಒಂದು ವೇಳೆ ಭಾರತದಲ್ಲಿ ಸಹಕಾರ ವಿಫಲವಾದರೆ, ದೇಶದ ಗ್ರಾಮೀಣ ಕನಸುಗಳು ಕಮರಿಹೋಗುತ್ತವೆ’ ಎಂಬುದು ಒಂದು ರೀತಿಯ ಸರ್ವಕಾಲಿಕ ಮಾರ್ಗಸೂಚಿಯಾಗಿದೆ.
ಬನ್ನಿ, ರಾಷ್ಟ್ರೀಯ ಸಹಕಾರ ಸಪ್ತಾಹದ ಸಂದರ್ಭದಲ್ಲಿ ಸರ್ ಫ್ರೆಡ್ರಿಕ್ ನಿಕೋಲ್ಸನ್, ಡಾ. ವರ್ಗೀಸ್ ಕುರಿಯನ್, ಸಿದ್ಧನಗೌಡ ಪಾಟೀಲ ಆದಿಯಾಗಿ ನಾಡಿನ ಎಲ್ಲ ಧೀಮಂತ ಸಹಕಾರಿ ಧುರೀಣರನನ್ನು ನೆನೆಸಿಕೊಳ್ಳುತ್ತಾ ‘ಸರ್ವರಿಗೂ ಸಮಪಾಲು - ಸರ್ವರಿಗೂ ಸಮಬಾಳು’ ನೀಡುವ ಸಹಕಾರ ರಂಗದ ಪುನಃಶ್ಚೇತನಕ್ಕೆ ಪಣತೊಡೋಣ.
(ಲೇಖಕ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.