ಸ್ವಾಮಿ ವಿವೇಕಾನಂದ
ಚಿತ್ರಕೃಪೆ : ಎಕ್ಸ್
ನಮ್ಮ ದೇಶದ ಯುವ ಸಮುದಾಯಕ್ಕೆ ‘ನಿತ್ಯ ಸ್ಫೂರ್ತಿ’ ಎನಿಸಿಕೊಂಡ ಮಹಾಸಂತ ಸ್ವಾಮಿ ವಿವೇಕಾನಂದರ 163ನೇ ಜಯಂತಿಗೆ ಎಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ದೇಶದ ಘನತೆ ಗೌರವವನ್ನು ಪ್ರಪಂಚಮುಖದಲ್ಲಿ ಎತ್ತಿಹಿಡಿದ ವೀರಸನ್ಯಾಸಿಯ ಬದುಕಿನ ಆದರ್ಶಗಳು ನಮ್ಮ ದೇಶದ ಪಠ್ಯಪುಸ್ತಕಗಳಿಂದ ತೊಡಗಿ ನಾನಾ ಬಗೆಯ ಗ್ರಂಥಗಳವರೆಗೆ ಅಡಿಗಡಿಗೆ ನೆನಪಿಸಲ್ಪಡುತ್ತಲೇ ಇವೆ. ಹಿರಿಯರ - ನೇತಾರರ ಮಾತುಗಳಲ್ಲಿ ಸ್ವಾಮಿ ವಿವೇಕಾನಂದರು ನಿತ್ಯ ನೂತನರೆಂಬಂತೆ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಈ ದೇಶದ ಒಬ್ಬ ‘ಪ್ರತಿನಿಧಿ’ಯಾಗಿ, ವಾಸ್ತವ ಪ್ರಜ್ಞೆಯುಳ್ಳ ಆಧ್ಯಾತ್ಮಸಾಧಕನಾಗಿ ಮೂಡಿಬಂದ ಸ್ವಾಮಿ ವಿವೇಕಾನಂದರ ಮಾರ್ಗದರ್ಶೀ ನುಡಿಗಳು ನಮ್ಮ ಸಮಾಜಕ್ಕೊಂದು ದಾರಿದೀಪವಾಗಿ ಬೆಳಗುತ್ತಲೇ ಇವೆ. ಅಸ್ತಂಗತರಾಗಿ ಬರೋಬ್ಬರಿ ನೂರ ಇಪ್ಪತ್ತನಾಲ್ಕು ವರ್ಷಗಳು ಸಂದಿದ್ದರೂ ಇಂದಿಗೂ ತನ್ನ ಪ್ರಭಾವವನ್ನು ಗಾಢವಾಗಿ ಬೀರಬಲ್ಲ ವ್ಯಕ್ತಿಯಾಗಿ ಸ್ವಾಮಿ ವಿವೇಕಾನಂದರು ಕಾಣಿಸಿಕೊಳ್ಳುತ್ತಿರುವುದು ಅವರೊಳಗೆ ಹುದುಗಿದ್ದ ಶಕ್ತಿ ಸಾಮರ್ಥ್ಯಗಳ ಅನಾವರಣದಂತೆ ಭಾಸವಾಗುತ್ತದೆ.
ಯಾರೇ ಆದರೂ ಸ್ವಾಮಿ ವಿವೇಕಾನಂದರ ಬಗೆಗೆ ಮಾತನಾಡುವಾಗ ಅವರ ಚಿಕಾಗೋ ಭಾಷಣದ ಉಲ್ಲೇಖಗಳಿದ್ದೇ ಇರುತ್ತವೆ. ಪ್ರಪಂಚ ಮುಖದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿ ಮತ್ತು ಭಾರತದ ಸಂಸ್ಕೃತಿ-ಸಂಸ್ಕಾರ-ಉತ್ಕೃಷ್ಟ ವಿಚಾರಗಳನ್ನು ವಿವೇಕಾನಂದರು ಜಗತ್ತಿಗೆ ಪರಿಚಯಿಸಿದ ಸಂದರ್ಭವಾಗಿ ಆ ಚಿಕಾಗೋ ವಿಶ್ವಧರ್ಮ ಸಮ್ಮೇಳನದ ಭಾಷಣ ಕಂಡುಬರುತ್ತದೆ. ‘ಅಮೇರಿಕದ ಸಹೋದರ ಸಹೋದರಿಯರೇ’ ಎಂಬ ಅವರ ಭಾಷಣದ ಆರಂಭ ಇಂದಿಗೂ ರೋಮಾಂಚನಕಾರಿ ಅನುಭವವಾಗಿ ಅಂತರಂಗದಲ್ಲಿ ಸಂಚಲನ ಮೂಡಿಸುತ್ತದೆ. ಮೋಜು ಮಸ್ತಿಯ ಗೌಜು ಗದ್ದಲದಲ್ಲಿ ಕಳೆದುಹೋಗುವ ಜನಸಮುದಾಯಕ್ಕೆ ಮೊದಲ ಬಾರಿಗೆ ಭ್ರಾತೃತ್ವದ ಅನುಭವವನ್ನು ಕಟ್ಟಿಕೊಟ್ಟ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂಬುದು ಭಾರತೀಯರಿಗೆ ಹೆಮ್ಮೆ ತರುವ ವಿಚಾರ.
ಸ್ವಾಮಿ ವಿವೇಕಾನಂದರು ಆಧ್ಯಾತ್ಮ ಹಾಗೂ ವಾಸ್ತವ ಬದುಕು ಎರಡನ್ನೂ ಸಮದೂಗಿಸಿಕೊಂಡು ಮುನ್ನಡೆದವರು. ಹಾಗಾಗಿಯೇ ‘ನಿಮ್ಮನ್ನು ನೀವು ನಂಬದ ಹೊರತು ದೇವರನ್ನು ನಂಬಲು ಸಾಧ್ಯವಿಲ್ಲ’, ನಿಮ್ಮ ಮನಸ್ಸನ್ನು ಉನ್ನತ ಆಲೋಚನೆಗಳಿಂದ ಮತ್ತು ಆದರ್ಶಗಳಿಂದ ತುಂಬಿಕೊಳ್ಳಿ, ಇದರ ನಂತರ ನೀವು ಮಾಡುವ ಕೆಲಸವು ಉತ್ತಮವಾಗಿರುತ್ತದೆ’ ಎಂಬಂತಹ ಮಾತುಗಳು ಅವರಿಂದ ಹೊರಹೊಮ್ಮಿವೆ. ‘ದೈಹಿಕವಾಗಿ, ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ನಿಮ್ಮನ್ನು ದುರ್ಬಲಗೊಳಿಸುವ ಯಾವುದನ್ನಾದರೂ, ಅದನ್ನು ವಿಷದಂತೆ ತಿರಸ್ಕರಿಸಿ’ ಎನ್ನುವ ಅವರ ದೃಢವಾದ ನಿಲುವು ಮಾನಸಿಕ, ದೈಹಿಕ ಹಾಗೂ ಧಾರ್ಮಿಕ ವಿಚಾರಗಳಲ್ಲಿ ವ್ಯಕ್ತಿಯೋರ್ವ ಉನ್ನತಿ ಸಾಧಿಸಬೇಕಾದ ಅಗತ್ಯಗಳನ್ನು ಬಿಂಬಿಸುತ್ತದೆ.
ಸ್ವಾಮಿ ವಿವೇಕಾನಂದರು ಕ್ರಾಂತಿಕಾರಿ ಎನಿಸಿಕೊಂಡಿರುವುದೇ ಅವರ ಇಂತಹ ನಡೆನುಡಿಗಳಿಂದ. ‘ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಹುದು’ ಎನ್ನುವ ವಿವೇಕಾನಂದರು ಯುವಸಮುದಾಯ ಹೇಗಿರಬೇಕು ಮತ್ತು ಸಾಧ್ಯತೆಗಳೇನು ಎಂಬುದನ್ನು ತೆರೆದಿಡುತ್ತಾರೆ.
ಸ್ವಾಮಿ ವಿವೇಕಾನಂದರು ನೂರಾರು ವರ್ಷಗಳ ಹಿಂದೆಯೇ ಆದರ್ಶಗಳನ್ನು ಬಿತ್ತಿ, ನಮ್ಮೊಳಗಿನ ಉತ್ಸಾಹವನ್ನು ಹೊರಹೊಮ್ಮಿಸುವ ಕಾಯಕವನ್ನು ನಡೆಸಿಕೊಟ್ಟಿದ್ದಾರೆ. ಅವರ ಪ್ರೇರಣೆ ನಮ್ಮೆಲ್ಲರಲ್ಲೂ ಸದಾ ಜಾಗೃತಿ ಹಾಗೂ ‘ದೇಶ ಮೊದಲು’ ಭಾವನೆಯನ್ನು ಮೂಡಿಸುವಂತಾಗಬೇಕಿದೆ. ದೇಶವನ್ನು, ದೇಶದ ವಿವಿಧತೆಯನ್ನು, ಇಲ್ಲಿನ ಆಚಾರ ವಿಚಾರ ಸಂಸ್ಕೃತಿಗಳನ್ನು ಗಾಢವಾಗಿ ಪ್ರೀತಿಸುವುದೇ ಸ್ವಾಮಿ ವಿವೇಕಾನಂದರಿಗೆ ನಾವು ಕೋರುವ ಶುಭಾಶಯ!
ಲೇಖಕರು: ಪ್ರಾಂಶುಪಾಲರು, ಅಂಬಿಕಾ ಪದವಿ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.