ADVERTISEMENT

ವಿಶ್ಲೇಷಣೆ | ಪ್ಲಾಸ್ಟಿಕ್: ಭಾರತದ್ದೇನು ಹೊಣೆ?

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
ವಿಶ್ಲೇಷಣೆ
ವಿಶ್ಲೇಷಣೆ   
ವಿಶ್ವದ ಬಹುದೊಡ್ಡ ಪ್ಲಾಸ್ಟಿಕ್‌ ತ್ಯಾಜ್ಯ ಉತ್ಪಾದಕ ದೇಶಗಳಲ್ಲಿ ಭಾರತವೂ ಒಂದಾಗಿದೆ. ಹಾಗಾಗಿಯೇ, ‘ಜಾಗತಿಕ ಪ್ಲಾಸ್ಟಿಕ್‌ ಒಪ್ಪಂದ’ದಲ್ಲಿ ಸಕ್ರಿಯ ಪಾತ್ರ ವಹಿಸುವುದು ಭಾರತದ ಹೊಣೆಗಾರಿಕೆಯಾಗಿದೆ. ಈ ಭಾಗವಹಿಸುವಿಕೆ, ವಿಶ್ವ ಮಟ್ಟದಲ್ಲಿ ಮಾತ್ರವಲ್ಲದೆ, ದೇಶದಲ್ಲಿ ಆಂತರಿಕ ಪರಿಸರ ನೀತಿಗಳನ್ನು ರೂಪಿಸುವ ಕಾರಣದಿಂದಲೂ ಅಗತ್ಯವಾದುದು.

ಲಿಯೋ ಬೇಕೆಲ್ಯಾಂಡ್ ಅವರು 1907ರಲ್ಲಿ ‘ಬೇಕೆಲೈಟ್’ ಎಂಬ ಕೃತಕ ಪ್ಲಾಸ್ಟಿಕ್ ಕಂಡುಹಿಡಿದಾಗ, ಅದು ಹೊಸ ಯುಗಕ್ಕೆ ದಾರಿ ತೆರೆಯಿತು. ಕಬ್ಬಿಣಕ್ಕಿಂತ ಹಗುರ, ಮರಕ್ಕಿಂತ ಬಾಳಿಕೆ, ಗಾಜಿಗಿಂತ ಸುರಕ್ಷಿತವೆನಿಸಿದ್ದ ಪ್ಲಾಸ್ಟಿಕ್ ಮಾನವಕುಲದ ವೈಜ್ಞಾನಿಕ ಕ್ರಾಂತಿಯ ಸಂಕೇತವಾಗಿತ್ತು. ಮನೆಗಳಲ್ಲಿನ ಪಾತ್ರೆಗಳಿಂದ ಹಿಡಿದು ಮಕ್ಕಳ ಆಟಿಕೆಗಳು, ವೈದ್ಯಕೀಯ ಉಪಕರಣಗಳು, ಅಂತರಿಕ್ಷ ತಂತ್ರಜ್ಞಾನದವರೆಗೆ ಪ್ಲಾಸ್ಟಿಕ್ ಎಲ್ಲೆಡೆ ಒಂದು ‘ಮಿರಾಕಲ್ ಪ್ರಾಡಕ್ಟ್’ ಎನಿಸಿತ್ತು. 20ನೇ ಶತಮಾನದ ಮಧ್ಯಭಾಗದಲ್ಲಿ ಪ್ಲಾಸ್ಟಿಕ್ ಅನ್ನು ಮನೆ ಮನೆಯಲ್ಲಿ ‘ವಿಕಾಸದ ಸಂಕೇತ’ ಎಂದು ಬಣ್ಣಿಸಲಾಗಿತ್ತು. ಇಂದಿನ ನಮ್ಮ ಜೀವನದಲ್ಲಿ ಒಂದು ವಾರ ಪ್ಲಾಸ್ಟಿಕ್‌ರಹಿತ ಜೀವನ ನಡೆಸುವುದು ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ಅದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ.

1950ರ ಸುಮಾರಿಗೆ ಜಗತ್ತಿನಾದ್ಯಂತ ವರ್ಷಕ್ಕೆ 2 ದಶಲಕ್ಷ ಟನ್‌ನಷ್ಟು ಉತ್ಪಾದನೆ ಆಗುತ್ತಿದ್ದ ಪ್ಲಾಸ್ಟಿಕ್, ಇಂದು 600 ದಶಲಕ್ಷ ಟನ್‌ಗೆ ಏರಿದೆ. ಅಂದರೆ ಪ್ರತಿದಿನಕ್ಕೆ ಸುಮಾರು 1.6 ದಶಲಕ್ಷ ಟನ್ ಪ್ಲಾಸ್ಟಿಕ್ ಮಾರುಕಟ್ಟೆಗೆ ಬರುತ್ತಿದೆ. ಈ ಉತ್ಪಾದನೆಯಲ್ಲೂ ಸುಮಾರು ಶೇ 40ಕ್ಕಿಂತ ಹೆಚ್ಚು ಒಮ್ಮೆಯಷ್ಟೇ ಬಳಸಲಾಗುವ, ಅಂದರೆ ಪ್ಯಾಕೇಜಿಂಗ್ ವಸ್ತುಗಳು, ಪ್ಲಾಸ್ಟಿಕ್ ಚೀಲಗಳು ಮತ್ತು ಬಾಟಲಿಗಳಂತಹ ಬಳಸಿ ತ್ಯಜಿಸುವ ವಸ್ತುಗಳಾಗಿವೆ. ವಿಶ್ವಬ್ಯಾಂಕ್‌ನ 2021ರ ವರದಿ ಪ್ರಕಾರ, ಜಾಗತಿಕ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ. ಅದರ ನಂತರ ಅಮೆರಿಕ ಮತ್ತು ಭಾರತ ಪ್ರಮುಖ ಸ್ಥಾನವನ್ನು ಹೊಂದಿವೆ. ತ್ಯಾಜ್ಯದ ದೃಷ್ಟಿಯಿಂದ ನೋಡಿದರೆ, ‘ನೇಚರ್‌’ ವರದಿ (2023) ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಕ ರಾಷ್ಟ್ರವಾಗಿದೆ. ಪ್ರತಿವರ್ಷ ಸುಮಾರು 9.3 ದಶಲಕ್ಷ ಮೆಟ್ರಿಕ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತಿದೆ. ಈ ಪಟ್ಟಿಯಲ್ಲಿ ಅಮೆರಿಕವು 34 ದಶಲಕ್ಷ ಟನ್ ಮತ್ತು ಚೀನಾ 29 ದಶಲಕ್ಷ ಟನ್ ತ್ಯಾಜ್ಯ ಉತ್ಪಾದನೆಯೊಂದಿಗೆ ನಂತರದ ಸ್ಥಾನದಲ್ಲಿವೆ.

ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಶೇ 40ಕ್ಕಿಂತ ಹೆಚ್ಚು ಭಾಗವು ಸರಿಯಾದ ನಿರ್ವಹಣೆಗೆ ಒಳಪಡದೆ ನೇರವಾಗಿ ನಮ್ಮದೇ ಸುತ್ತಮುತ್ತಲಿನ ನದಿಗಳು, ಮಣ್ಣು ಮತ್ತು ತೆರೆದ ಹೊಲಗಳಲ್ಲಿ ಸೇರುತ್ತಿದೆ. ಬೆಂಗಳೂರಿನಂತಹ ಮಹಾನಗರವು ಪ್ರತಿದಿನ 4,000 ಟನ್ ಘನತ್ಯಾಜ್ಯ ಹೊರಚೆಲ್ಲುತ್ತದೆ ಎಂದು ವರದಿಗಳು ಹೇಳುತ್ತವೆ. ಈ ತ್ಯಾಜ್ಯದಲ್ಲಿ ಬಹುದೊಡ್ಡ ಅಂಶ ಪ್ಲಾಸ್ಟಿಕ್ ಆಗಿದೆ. ಇದೇ ಪ್ರಮಾಣದಲ್ಲಿ ಉತ್ಪಾದನೆ ಮತ್ತು ಬಳಕೆಯ ಧೋರಣೆ ಮುಂದುವರಿದರೆ, 2050ರೊಳಗೆ ಪ್ಲಾಸ್ಟಿಕ್ ಉತ್ಪಾದನೆ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ’ (ಒಇಸಿಡಿ) ಎಚ್ಚರಿಸಿದೆ. ಅಂದರೆ, ಪ್ರತಿವರ್ಷದ ಉತ್ಪಾದನೆ, ಮುಂದಿನ ಮೂರು ದಶಕಗಳಲ್ಲಿ 1.8 ಬಿಲಿಯನ್ ಟನ್‌ಗೆ ಏರಲಿದೆ. ವಿಜ್ಞಾನಿಗಳ ಅಂದಾಜಿನ ಪ್ರಕಾರ, ಇದರಿಂದ ಸಮುದ್ರಗಳಲ್ಲಿ ತೇಲಾಡುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವು ಇವತ್ತು ಸಮುದ್ರದಲ್ಲಿರುವ ಮೀನುಗಳ ತೂಕಕ್ಕಿಂತಲೂ ಹೆಚ್ಚು ಆಗಬಹುದು. ಇಷ್ಟೊಂದು ಪ್ರಮಾಣದ ತ್ಯಾಜ್ಯ ನಿರ್ವಹಣೆ ಅಸಾಧ್ಯವಾಗುವುದರಿಂದ, ಭೂಮಿಯ ಮಣ್ಣು, ಜಲಮೂಲಗಳು ಮತ್ತು ವಾಯುಮಂಡಲಕ್ಕೆ ಪ್ಲಾಸ್ಟಿಕ್‌ನ ಸೂಕ್ಷ್ಮ ಕಣಗಳು (ಮೈಕ್ರೊ ಮತ್ತು ನ್ಯಾನೊ ಪ್ಲಾಸ್ಟಿಕ್‌) ವ್ಯಾಪಕವಾಗಿ ಸೇರುತ್ತವೆ.

ADVERTISEMENT

ಇತ್ತೀಚಿನ ವೈಜ್ಞಾನಿಕ ಅಧ್ಯಯನಗಳು ಮೈಕ್ರೊ ಪ್ಲಾಸ್ಟಿಕ್‌ಗಳು ಮಾನವ ದೇಹದ ಅತ್ಯಂತ ಸೂಕ್ಷ್ಮ ಅಂಗಾಂಗಗಳವರೆಗೂ ತಲಪುತ್ತಿರುವುದನ್ನು ಸ್ಪಷ್ಟಪಡಿಸಿವೆ. ಒಂದು ಅಧ್ಯಯನದ ಪ್ರಕಾರ, ಗರ್ಭಿಣಿಯರ ಪ್ಲಾಸೆಂಟಾದಲ್ಲಿಯೂ ಮೈಕ್ರೊ ಪ್ಲಾಸ್ಟಿಕ್ ಪತ್ತೆಯಾಗಿದೆ. ರಕ್ತದ ಮಾದರಿ ಮತ್ತು ಶ್ವಾಸಕೋಶಗಳಲ್ಲಿ ಸಹ ಪ್ಲಾಸ್ಟಿಕ್ ಕಣಗಳು ಪತ್ತೆಯಾಗಿವೆ. ವಿಯೆನ್ನಾ ವಿಶ್ವವಿದ್ಯಾಲಯದ ಒಂದು ಅಧ್ಯಯನವು (2023), ಮಾನವನ ಮೆದುಳಿಗೂ ಮೈಕ್ರೊ ಪ್ಲಾಸ್ಟಿಕ್ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಸೂಚಿಸಿದೆ. ನಾವು ಕುಡಿಯುವ ನೀರು, ತಿನ್ನುವ ಪದಾರ್ಥಗಳು, ಉಸಿರಾಡುವ ಗಾಳಿಯ ಮೂಲಕ ಪ್ಲಾಸ್ಟಿಕ್ ಕಣಗಳು ಮನುಷ್ಯನ ದೇಹವನ್ನು ಸೇರುತ್ತಿವೆ. ಹೃದಯಾಘಾತ, ಶ್ವಾಸಕೋಶದ ಕಾಯಿಲೆಗಳು, ಸಂತಾನೋತ್ಪತ್ತಿ ಸಮಸ್ಯೆಗಳು ಮತ್ತು ನರ ಸಂಬಂಧಿ ತೊಂದರೆಗಳು ಹೆಚ್ಚುತ್ತಿರುವುದಕ್ಕೆ ಪ್ಲಾಸ್ಟಿಕ್ ಪ್ರಮುಖ ಕಾರಣವಾಗಿರುವ ಶಂಕೆಯನ್ನು ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.

ಭಾರತದಲ್ಲೂ, ಮುಂಬೈ ಹಾಗೂ ಚೆನ್ನೈ ಕರಾವಳಿಯಿಂದ ಸಂಗ್ರಹಿಸಿದ ಮೀನುಗಳಲ್ಲಿ ಮೈಕ್ರೊ ಪ್ಲಾಸ್ಟಿಕ್ ಪತ್ತೆಯಾದ ಬಗ್ಗೆ ‘ಸೆಂಟ್ರಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫಿಷರೀಸ್‌ ಎಜುಕೇಷನ್‌’ ವರದಿ (2021) ಮಾಡಿದೆ. ಉಪ್ಪು ಮತ್ತು ಅಕ್ಕಿಯ ಮಾದರಿಗಳಲ್ಲಿಯೂ ಮೈಕ್ರೊ ಪ್ಲಾಸ್ಟಿಕ್ ಕಣಗಳು ಕಂಡುಬಂದಿವೆ. ಅಂದರೆ, ನಾವು ತಿನ್ನುವ ಆಹಾರ, ಕುಡಿಯುವ ನೀರು, ಉಸಿರಾಡುವ ಗಾಳಿ– ಎಲ್ಲವೂ ಪ್ಲಾಸ್ಟಿಕ್‌ನಿಂದ ಮಲಿನಗೊಂಡಿವೆ.

ಈ ಗಂಭೀರ ಪರಿಸ್ಥಿತಿಯಲ್ಲಿ, ಪ್ಲಾಸ್ಟಿಕ್ ಮಾಲಿನ್ಯವನ್ನು ತಡೆಯಲು ಮತ್ತು ಅದರೊಳಗೆ ಅಡಗಿರುವ ಅಪಾಯಕಾರಿ ರಾಸಾಯನಿಕಗಳನ್ನು ನಿಯಂತ್ರಿಸಲು, ತನ್ಮೂಲಕ ಪ್ಲಾಸ್ಟಿಕ್‌ನಿಂದಾಗಿ ಮಾನವ ಪರಿಸರ, ಮಾನವ ಆರೋಗ್ಯದ ಮೇಲಾಗುತ್ತಿರುವ ಕೆಟ್ಟ ಪರಿಣಾಮಗಳನ್ನು ನಿಯಂತ್ರಿಸಲು, ವಿಶ್ವಸಂಸ್ಥೆ ಪ್ರತಿಪಾದಿಸುತ್ತಿರುವ, ‘ಜಾಗತಿಕ ಪ್ಲಾಸ್ಟಿಕ್ ಒಪ್ಪಂದ’ ಅತ್ಯಂತ ಮಹತ್ವದ ಅಂತರರಾಷ್ಟ್ರೀಯ ಪ್ರಕ್ರಿಯೆಯಾಗಿದೆ. ಈ ಒಪ್ಪಂದದ ಉದ್ದೇಶ ಪ್ಲಾಸ್ಟಿಕ್‌ನ ಸಂಪೂರ್ಣ ಜೀವನಚಕ್ರವನ್ನು, ಅಂದರೆ– ಉತ್ಪಾದನೆ, ಬಳಕೆ, ತ್ಯಾಜ್ಯ ನಿರ್ವಹಣೆ ಮತ್ತು ರಾಸಾಯನಿಕ ನಿಯಂತ್ರಣ, ಎಲ್ಲವನ್ನು ನಿಯಮಿತಗೊಳಿಸುವುದು. ಎಂಬತ್ತಕ್ಕೂ ಹೆಚ್ಚು ರಾಷ್ಟ್ರಗಳು (ಯುರೋಪಿನ ಎಲ್ಲ ರಾಷ್ಟ್ರಗಳು ಸೇರಿದಂತೆ) ಈ ಒಪ್ಪಂದವನ್ನು ಬೆಂಬಲಿಸುತ್ತಿರುವಾಗ, ಭಾರತ ಇನ್ನೂ ಸ್ಪಷ್ಟವಾದ ನಿಲುವು ತಾಳಿಲ್ಲ.

‘ಜಾಗತಿಕ ಪ್ಲಾಸ್ಟಿಕ್ ಒಪ್ಪಂದ’ವು ಭಾರತಕ್ಕೆ ಎರಡು ಪ್ರಮುಖ ಕಾರಣಗಳಿಂದ ಬಹಳ ಮಹತ್ವದ್ದಾಗಿದೆ: 1. ಆರೋಗ್ಯದ ದೃಷ್ಟಿಯಿಂದ. ಭಾರತೀಯ ಜನಸಂಖ್ಯೆ ಜಗತ್ತಿನ ಅತಿದೊಡ್ಡ ಪ್ಲಾಸ್ಟಿಕ್ ತ್ಯಾಜ್ಯದ ಹೊರೆ ಹೊರುತ್ತಿದ್ದು, ಅದರಲ್ಲೂ ಅಪಾಯಕಾರಿ ರಾಸಾಯನಿಕಗಳು ಮಾನವ ದೇಹಕ್ಕೆ ನೇರ ಹಾನಿ ಮಾಡುತ್ತಿರುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. 2. ಪರಿಸರ ಮತ್ತು ಆರ್ಥಿಕ ದೃಷ್ಟಿಯಿಂದ. ಪ್ಲಾಸ್ಟಿಕ್ ತ್ಯಾಜ್ಯದಿಂದ ನದಿಗಳು, ಸಾಗರಗಳು ಹಾಗೂ ಕೃಷಿ ಮಣ್ಣು ಹಾನಿಗೊಳಗಾಗುತ್ತಿವೆ. ಇದರಿಂದ ಮೀನುಗಾರಿಕೆ, ಕೃಷಿ ಮತ್ತು ಪ್ರವಾಸೋದ್ಯಮದಂತಹ ಆರ್ಥಿಕ ಚಟುವಟಿಕೆಗಳಿಗೂ ಹಾನಿ ಉಂಟಾಗಿದೆ.

ಜಾಗತಿಕ ಪ್ಲಾಸ್ಟಿಕ್ ಒಪ್ಪಂದದಲ್ಲಿ ಭಾರತ ಸಕ್ರಿಯ ಪಾತ್ರವಹಿಸಿದರೆ, ದೇಶೀಯ ಕಾನೂನು ರೂಪಿಸುವಲ್ಲಿ ಅಂತರರಾಷ್ಟ್ರೀಯ ಮಾರ್ಗಸೂಚಿಗಳು ಮತ್ತು ವಿಜ್ಞಾನಾಧಾರಿತ ಮಾನದಂಡಗಳು ಸಿಗುತ್ತವೆ. ಇದು ಭಾರತಕ್ಕೆ ಕೇವಲ ಪರಿಸರ ನೀತಿಗಳಿಗೆ ಮಾತ್ರವಲ್ಲ, ಸಾರ್ವಜನಿಕ ಆರೋಗ್ಯ ಮತ್ತು ಭವಿಷ್ಯದ ಪೀಳಿಗೆಯ ಸುರಕ್ಷತೆಗಾಗಿ ಅತ್ಯಂತ ಅವಶ್ಯಕವಾಗಿದೆ.

ಜಾಗತಿಕ ಪ್ಲಾಸ್ಟಿಕ್ ಒಪ್ಪಂದ ಪ್ಲಾಸ್ಟಿಕ್‌ನ ಸಂಪೂರ್ಣ ಜೀವನಚಕ್ರವನ್ನು ನಿಯಂತ್ರಿಸಲು ಬೇಕಾಗಿರುವ, ಅತ್ಯಂತ ಪ್ರಸ್ತುತ ಮತ್ತು ಮಹತ್ವದ ಅಂತರರಾಷ್ಟ್ರೀಯ ಚೌಕಟ್ಟಾಗಿದೆ. ಇದರ ಗುರಿ, ಬರೀ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಮಾತ್ರವಲ್ಲ; ಪ್ಲಾಸ್ಟಿಕ್ ಉತ್ಪಾದನೆ ಕಡಿತಗೊಳಿಸುವುದು, ಪ್ಲಾಸ್ಟಿಕ್ ತಯಾರಿಯಲ್ಲಿ ಬಳಸಲಾಗುವ ಅಪಾಯಕಾರಿ ರಾಸಾಯನಿಕಗಳ ನಿಯಂತ್ರಣ, ಏಕಬಾರಿ ಬಳಕೆಯಾಗುವ ಪ್ಲಾಸ್ಟಿಕ್‌ಗಳ ನಿಷೇಧ ಮತ್ತು ಜಾಗತಿಕ ಮಟ್ಟದಲ್ಲಿ ಕಾನೂನು ರೂಪಿಸುವುದಾಗಿದೆ. ಪರಿಸರ ದೃಷ್ಟಿಯಿಂದ ಇದು ಸಾಗರ ಮಾಲಿನ್ಯ ತಡೆಗಟ್ಟಲು ಹಾಗೂ ಜೀವವೈವಿಧ್ಯ ಕಾಪಾಡಲು ಅವಶ್ಯಕ. ಕಾನೂನು ಮತ್ತು ನೀತಿಯ ದೃಷ್ಟಿಯಿಂದ ನೋಡಿದರೆ, ಈ ಒಪ್ಪಂದವು ಪ್ರತಿ ದೇಶಕ್ಕೂ ಸಮಗ್ರ ರಾಷ್ಟ್ರೀಯ ನಿಯಮಗಳನ್ನು ರೂಪಿಸಲು ಅಂತರರಾಷ್ಟ್ರೀಯ ಚೌಕಟ್ಟನ್ನು ಒದಗಿಸುತ್ತದೆ.

ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಭಾರತವು ಜಾಗತಿಕ ಪ್ಲಾಸ್ಟಿಕ್ ಒಪ್ಪಂದವನ್ನು ಬೆಂಬಲಿಸಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ವಿನಂತಿಸಿದೆ. ಈಗಾಗಲೇ ಏಕಬಾರಿ ಬಳಸಲಾಗುವ ಪ್ಲಾಸ್ಟಿಕ್‌ಗಳ ನಿಷೇಧದಲ್ಲಿ ತಮಿಳುನಾಡು ಮುಂಚೂಣಿಯಲ್ಲಿದೆ; ತನ್ನ ಪರಿಸರಸ್ನೇಹಿ ನೀತಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಜೋಡಿಸುವ ಅಗತ್ಯವನ್ನು ಬಲವಾಗಿ ಪ್ರತಿಪಾದಿಸಿದೆ. ಭಾರತದಂತಹ ದೊಡ್ಡ ತ್ಯಾಜ್ಯ ಉತ್ಪಾದಕ ರಾಷ್ಟ್ರವು ಈ ಒಪ್ಪಂದದಲ್ಲಿ ಭಾಗವಹಿಸುವುದು ಜಾಗತಿಕ ಹೊಣೆಗಾರಿಕೆ ದೃಷ್ಟಿಯಿಂದ ಮಾತ್ರವಲ್ಲ, ದೇಶದ ಆಂತರಿಕ ಪರಿಸರ ನೀತಿಗಳಿಗೆ ಬಲ ತುಂಬುವ ಕಾರಣದಿಂದಲೂ ಮಹತ್ವದ ಹೆಜ್ಜೆಯಾಗಿದೆ. ತಮಿಳುನಾಡಿನ ಕಾಳಜಿಯ ಕ್ರಮ ಇತರ ರಾಜ್ಯಗಳಿಗೆ ಮಾದರಿ ಆಗಬಹುದಾದಂತೆ, ಪರಿಸರ ನೀತಿಗಳನ್ನು ವಿಶ್ವಮಟ್ಟದ ಚಳವಳಿಗೆ ಕೊಂಡೊಯ್ಯುವ ಶಕ್ತಿಯನ್ನು ಭಾರತ ಹೊಂದಿದೆ.

ಗರ್ಭಿಣಿಯರ ಪ್ಲಾಸೆಂಟಾದಿಂದ ಹಿಡಿದು ಮಾನವನ ಮೆದುಳಿನವರೆಗೆ ಮೈಕ್ರೊ ಪ್ಲಾಸ್ಟಿಕ್ ಪ್ರವೇಶಿಸಿರುವುದನ್ನು ವೈಜ್ಞಾನಿಕ ಅಧ್ಯಯನಗಳು ದೃಢಪಡಿಸಿರುವಾಗ, ಇದನ್ನು ‘ಬರೀ ತ್ಯಾಜ್ಯದ ಸಮಸ್ಯೆ’ ಎಂದು ಕಾಣಲು ಸಾಧ್ಯವಿಲ್ಲ. ಜಾಗತಿಕ ಪ್ಲಾಸ್ಟಿಕ್ ಒಪ್ಪಂದದ ಅಗತ್ಯ ಅಂತರರಾಷ್ಟ್ರೀಯ ರಾಜತಾಂತ್ರಿಕತೆಯ ವಿಷಯವಷ್ಟೇ ಅಲ್ಲ; ಅದು, ಭಾರತದ ಭವಿಷ್ಯವನ್ನು ಸುರಕ್ಷಿತಗೊಳಿಸುವ ಹಾದಿಯಾಗಿದೆ.

ಲೇಖಕಿ: ಸಂಶೋಧಕರು, ಮ್ಯೂನಿಕ್ ತಾಂತ್ರಿಕ ವಿಶ್ವವಿದ್ಯಾಲಯ, ಜರ್ಮನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.