ಸಂಸದೆ ಪ್ರಿಯಾಂಕಾ ಗಾಂಧಿ ಅವರು ಪ್ಯಾಲೆಸ್ಟೀನ್ ಪರವಾಗಿ ದಿಟ್ಟ ನಿಲುವು ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲೇ, ಕರ್ನಾಟಕವೂ ಸೇರಿದಂತೆ ಕಾಂಗ್ರೆಸ್ ಸರ್ಕಾರ ಇರುವ ರಾಜ್ಯಗಳಲ್ಲಿ ಪಕ್ಷದ ನಡೆ–ನುಡಿ ವಿರೋಧಾಭಾಸಗಳಿಂದ ಕೂಡಿದೆ. ಆ ವಿರೋಧಾಭಾಸ ಸರಿಪಡಿಸುವುದು ಕಾಂಗ್ರೆಸ್ ನಾಯಕಿಯಾಗಿ ಪ್ರಿಯಾಂಕಾ ಅವರ ಹೊಣೆಗಾರಿಕೆ ಅಲ್ಲವೆ?
-------
ಹಲವು ತಿಂಗಳ ಹಿಂದೆ, ಪ್ರಿಯಾಂಕಾ ಗಾಂಧಿಯವರು ಪ್ಯಾಲೆಸ್ಟೀನಿನ ಹೆಸರಿದ್ದ ಬೂಟೀಕ್ ಬಗಲಚೀಲ ಹೊತ್ತು ತೆಗೆಸಿಕೊಂಡ ಫೋಟೊ ಎಲ್ಲ ಕಡೆಯೂ ಬಿತ್ತರಗೊಂಡಿತು. ಅವರು ಸಂಸತ್ತಿಗೆ ಹಾಜರಾಗುವಾಗ ತೆಗೆಸಿಕೊಂಡ ಫೋಟೊ ಅದು.
ಅವರು ಇದೀಗ ಇಸ್ರೇಲ್ ದೇಶವು ಗಾಜಾ ಪ್ರದೇಶದಲ್ಲಿ ಮಾಡುತ್ತಿರುವುದು ‘ನರಮೇಧ’ ಅನ್ನುವುದನ್ನು ಈ ಹಿಂದೆ ಗುರುತಿಸಿದ್ದಕ್ಕಿಂತ ಹೆಚ್ಚು ಗಟ್ಟಿಯಾಗಿ ಗುರುತಿಸಿ, ಹೆಚ್ಚು ಗಟ್ಟಿಯಾಗಿ ಮಾತನಾಡುತ್ತಿದ್ದಾರೆ; ಮೋದಿ ಸರ್ಕಾರವು ಪ್ಯಾಲೆಸ್ಟೀನಿಯರನ್ನು ಕೇವಲ ಬಾಯುಪಚಾರದ ಮಾತಿನಲ್ಲಿ ಬೆಂಬಲಿಸುತ್ತ, ಇಸ್ರೇಲ್ ಜೊತೆ ದೃಢವಾಗಿ ನಿಂತಿರುವುದನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಟೀಕಿಸುತ್ತಿದ್ದಾರೆ.
ಆದರೆ, ಈಗ ಕರ್ನಾಟಕದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವು ಪ್ರಿಯಾಂಕಾ ಗಾಂಧಿಯವರು ತಾಳಿರುವ ನಿಲುವಿಗೆ ತದ್ವಿರುದ್ಧವಾದ್ದನ್ನು ಮಾಡುತ್ತಿದೆ. ರಾಜ್ಯದ ಎಲ್ಲಿಯೂ– ನಾಲ್ಕು ಗೋಡೆಗಳ ನಡುವೆಯೇ ಆಗಲಿ, ಬಯಲಿನಲ್ಲಿಯೇ ಆಗಲಿ– ಪ್ಯಾಲೆಸ್ಟೀನ್ ಪರವಹಿಸಿ ಸಭೆಗಳನ್ನು ಭಿಡೆಯಿಲ್ಲದೆ ನಡೆಸುವಂತಿಲ್ಲ. ಬೆಂಗಳೂರಿನಲ್ಲಿ ಯಾರ ಕಣ್ಣಿಗೂ ಬೀಳದ ಜಾಗವಾದ ಫ್ರೀಡಂ ಪಾರ್ಕಿನ ಹೊರಗಿರುವ ಮೂಲೆಯೊಂದನ್ನು ಬಿಟ್ಟರೆ ಊರಿನ ಬೇರೆಲ್ಲಿಯೂ ಪ್ಯಾಲೆಸ್ಟೀನ್ ಕುರಿತಾದದ್ದೂ ಸೇರಿದಂತೆ ಯಾವ ವಿಷಯದ ಬಗ್ಗೆಯೂ ಬಹಿರಂಗ ಸಭೆ ನಡೆಸುವಂತಿಲ್ಲ; ಪ್ಯಾಲೆಸ್ಟೀನಿನ ಬಾವುಟವನ್ನು ಪ್ರದರ್ಶಿಸುವಂತಿಲ್ಲ. ನಾಲ್ಕು ಗೋಡೆಗಳ ನಡುವೆ ಸಭೆ ನಡೆಸಲು ಹೊರಟು, ಅದಕ್ಕಾಗಿ ಪೊಲೀಸರಿಂದ ಅಧಿಕೃತ ಅನುಮತಿ ಪಡೆದ ಮೇಲೂ, ಸಭೆಗಾಗಿ ಜಾಗ ಕೊಟ್ಟವರನ್ನು ಅನಧಿಕೃತವಾಗಿ ಕಂಡು ಬೆದರಿಸಿ, ಕಿರುಕುಳ ಕೊಟ್ಟು ಅಲ್ಲಿ ಸಭೆ ನಡೆಯದಂತೆ ನೋಡಿಕೊಂಡಿದ್ದಾರೆ ಅವರು; ಬಹಿರಂಗ ಸಭೆ ನಡೆಸಿದ ಕೆಲವರ ಮೇಲೆ ಕೇಸು ಹಾಕಿದ್ದಾರೆ. ಪ್ಯಾಲೆಸ್ಟೀನನ್ನು ಬೆಂಬಲಿಸಿ ಇಸ್ರೇಲನ್ನು ಟೀಕಿಸಲು ಹೊರಟವರಿಗೆ ತಿರುತಿರುಗಿ ಆಗುತ್ತಿರುವ ಅನುಭವ ಇದು.
ಭಾರತವು ಸ್ವಾತಂತ್ರ್ಯಪೂರ್ವದಿಂದಲೂ ಪ್ಯಾಲೆಸ್ಟೀನಿಯರ ಹಕ್ಕುಗಳ ಪರವಾಗಿ ನಿಂತಿರುವ ದೇಶವಾಗಿದೆ. ಪ್ಯಾಲೆಸ್ಟೀನ್ ಲಿಬರೇಷನ್ ಆರ್ಗನೈಜೇಷನ್‌ನ ನಾಯಕ ಯಾಸರ್ ಆರಾಫತ್ ಅವರು ನಮ್ಮ ದೇಶದ ದೊಡ್ಡ ಸ್ನೇಹಿತರಾಗಿದ್ದರು. 1974ರಲ್ಲಿ, ಪ್ಯಾಲೆಸ್ಟೀನಿಯರ ಅಧಿಕೃತ, ಏಕೈಕ ಪ್ರತಿನಿಧಿ ಎಂದರೆ ಆ ಸಂಘಟನೆಯೇ ಎಂದು ನಮ್ಮ ದೇಶವು ಅದಕ್ಕೆ ಮನ್ನಣೆ ನೀಡಿತು. 1988ರಲ್ಲಿ, ತಮ್ಮದೊಂದು ಸ್ವತಂತ್ರ, ಸ್ವಾಯತ್ತ ದೇಶ ಎಂದು ಪ್ಯಾಲೆಸ್ಟೀನಿಯರು ಘೋಷಿಸಿಕೊಂಡರು. ಆಗ ಅದಕ್ಕೆ ಮನ್ನಣೆ ನೀಡಿದ ಮೊತ್ತಮೊದಲ, ಅರಬ್ ಅಲ್ಲದ, ದೇಶ ಭಾರತ. ಆಮೇಲಿನ ದಶಕಗಳಲ್ಲಿ, ಇಸ್ರೇಲ್ ಜೊತೆಗಿನ ನಮ್ಮ ಸಂಧಾನ ನಿಧಾನ ಹೆಚ್ಚುತ್ತ, ಪ್ಯಾಲೆಸ್ಟೀನ್ ಪರವಾದ ದನಿ ತಗ್ಗುತ್ತ ಬಂದಿದ್ದು, ಬಿಜೆಪಿ–ಮೋದಿ ಸರ್ಕಾರವು ಅಧಿಕಾರ ವಹಿಸಿಕೊಂಡ ಮೇಲೆಯಂತೂ ಕೇವಲ ಕಾಟಾಚಾರದ ದನಿಯಾಗಿದೆ. ಆದರೆ, ಈಗಲೂ ಅಧಿಕೃತ, ಘೋಷಿತ ನೆಲೆಯಲ್ಲಿ ಪ್ಯಾಲೆಸ್ಟೀನ್ ಕುರಿತ ನಮ್ಮ ನಿಲುವು ಬದಲಾಗಿಲ್ಲ, ಮತ್ತು ಬದಲಾಗಬಾರದು ಕೂಡ.
ಆ ನಿಲುವನ್ನು ರುಜುಗೊಳಿಸುವ ದಾರಿ ಈಗ ಇದೊಂದೇ: ಬಾಯ್‍ಕಾಟ್, ಡಿಸಿನ್ವೆಸ್ಟ್, ಸ್ಯಾಂಕ್ಷನ್ (ಬಿಡಿಎಸ್). ಅಂದರೆ, ಕ್ರಮವಾಗಿ, ಇಸ್ರೇಲ್‍ಗೆ ಸಂಪೂರ್ಣ ಬಹಿಷ್ಕಾರ ಹಾಕಿ ಆಮದು–ರಫ್ತು ಮತ್ತು ಸಾಂಸ್ಕೃತಿಕ, ವೈಜ್ಞಾನಿಕ, ಶೈಕ್ಷಣಿಕ ಕೊಡು–ಕೊಳೆ ಸೇರಿದಂತೆ ಅದರ ಜೊತೆಗಿನ ಎಲ್ಲ ಸಂಬಂಧವನ್ನೂ ಬಿಟ್ಟುಕೊಡುವುದು; ಅಲ್ಲಿ ಭಾರತದ ಕಂಪನಿಗಳು ಹೂಡಿರಬಹುದಾದ ಹಣವನ್ನು ವಾಪಸು ಪಡೆಯುವುದು; ಇಸ್ರೇಲ್‍ನೊಂದಿಗೆ ಸಂಬಂಧವಿರಿಸಿಕೊಂಡಿರುವ ವ್ಯಕ್ತಿ, ಸಂಸ್ಥೆ,
ದೇಶಗಳ ಜೊತೆಗಿನ ನಮ್ಮ ವಹಿವಾಟನ್ನು ಸಂಪೂರ್ಣವಾಗಿ, ಇಲ್ಲವೆ ಸರಿಕಂಡ ಬೇರೆ ಬೇರೆ ಪ್ರಮಾಣದಲ್ಲಿ, ತಗ್ಗಿಸಿ, ಕಡಿದುಕೊಳ್ಳುವುದು.
ಬಹಳ ಕಡಿಮೆ ಜನರಿಗೆ ಗೊತ್ತಿರುವ ವಿಷಯ ಇದು: ಬೆಂಗಳೂರಿನಲ್ಲಿ, ಇಸ್ರೇಲ್‍ಗಾಗಿ ಶಸ್ತ್ರಾಸ್ತ್ರಗಳನ್ನೂ ಅವುಗಳ ಕೆಲವು ಭಾಗಗಳನ್ನೂ ತಯಾರು ಮಾಡಿ ಕೊಡುತ್ತಿರುವ ಒಂಬತ್ತು ಕಂಪನಿಗಳಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಲ್ಲಿ ಕಳೆದ ವರ್ಷ ನಡೆದ ಇಂಡಿಯಾ–ಇಸ್ರೇಲ್ ವಾಣಿಜ್ಯ ಶೃಂಗ ಸಮಾವೇಶದಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡರು. ಬೆಂಗಳೂರಿನಲ್ಲಿರುವ ಇಸ್ರೇಲ್‍ನ ಕಾನ್ಸುಲೇಟ್ ಜನರಲ್ ಕಚೇರಿಯ ಮುಖ್ಯಸ್ಥೆ ಹಾಗೂ ಉಪಮುಖ್ಯಸ್ಥೆಯರು ಡಿ.ಕೆ. ಶಿವಕುಮಾರ್ ಅವರನ್ನು ಕಾಣಲು ಹೋದಾಗ, ಅವರು ಅವರಿಬ್ಬರನ್ನೂ ಅಧಿಕೃತ ಅಗತ್ಯದ ಹದ್ದನ್ನು ಮೀರಿದ ಆದರದಿಂದ ಬರಮಾಡಿಕೊಂಡು, ತೀರ ಹೆಚ್ಚೆನಿಸುವ ಸನ್ಮಾನ ಮಾಡಿ, ಅದೆಲ್ಲವುದರ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದರು. ರಾಜ್ಯ ಸರ್ಕಾರದ ಈ ನೀತಿ, ನಡವಳಿಕೆಯನ್ನು ಬದಲಿಸುವುದು ಪ್ರಿಯಾಂಕಾ ಗಾಂಧಿ ಹಾಗೂ ಅವರ ಪಕ್ಷದ ನಾಯಕರ ಅತಿ ತುರ್ತಿನ ಗುರಿ ಆಗಬೇಕು.
ಪ್ಯಾಲೆಸ್ಟೀನ್ ಕುರಿತು ಪ್ರಿಯಾಂಕಾ ಗಾಂಧಿಯವರು ತಾಳಿರುವ ನಿಲುವಿನಲ್ಲಿ ಪ್ರಾಮಾಣಿಕತೆ ಇದೆ ಎಂದಾದರೆ ಅವರು ಮಾಡಬೇಕಾದ ಕೆಲವು ಕೆಲಸಗಳಿವೆ.
ಒಂದು, ತಮ್ಮ ಪಕ್ಷವು ಅಧಿಕಾರದಲ್ಲಿರುವ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಪ್ಯಾಲೆಸ್ಟೀನನ್ನು ಬೆಂಬಲಿಸುವ ಸಾರ್ವಜನಿಕ ಸಭೆಗಳಿಗೆ ಯಾವ ಅಡೆತಡೆಯೂ ಇಲ್ಲದಂತೆ ಮಾಡಬೇಕು ಮತ್ತು ಆ ಸಭೆಗಳಿಗೆ ನೆರವು ನೀಡಬೇಕು ಎಂದು ಆಯಾ ರಾಜ್ಯದ ಸರ್ಕಾರಕ್ಕೆ ಬಹಿರಂಗವಾಗಿ ತಾಕೀತು ಮಾಡಬೇಕು. ಎರಡು, ಆ ರಾಜ್ಯಗಳಲ್ಲಿಯೂ ದೇಶದ ಉಳಿದೆಡೆಯೂ ಪ್ಯಾಲೆಸ್ಟೀನನ್ನು ಬೆಂಬಲಿಸಿ, ಮುಕ್ತವಾದ ಸಭೆಗಳನ್ನು ನಡೆಸಲು ತಮ್ಮ ಪಕ್ಷದವರಿಗೆ ಕರೆ ನೀಡಬೇಕು; ಕೆಲವು ಸಭೆಗಳಲ್ಲಿ ತಾವೂ ತಮ್ಮ ಪಕ್ಷದ ಬೇರೆ ಧುರೀಣರೊಡನೆ ಪಾಲ್ಗೊಳ್ಳಬೇಕು. ಮೂರು, ಮೇಲೆ ಹೇಳಿದ ಬಿಡಿಎಸ್ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಮೋದಿ ಸರ್ಕಾರದ ಮೇಲೆ ಒತ್ತಡ ತರಬೇಕು; ಅಗತ್ಯಬಿದ್ದರೆ, ಅದಕ್ಕಾಗಿ ದೇಶದಾದ್ಯಂತ ಬೀದಿ ಚಳವಳಿ ನಡೆಸುತ್ತ, ಅದರ ಮುಂದಾಳ್ತನವನ್ನು ತಾವೇ ವಹಿಸಿ, ಬೀದಿಗಿಳಿಯಲು ಸಿದ್ಧರಿರಬೇಕು. ನಾಲಕ್ಕು, ಅತ್ಯಂತ ತುರ್ತಾಗಿ ಮತ್ತು ಕಾರ್ಯಸಾಧ್ಯವಾದುದಾಗಿ, ಇಸ್ರೇಲ್‍ಗೆ ಶಸ್ತ್ರಾಸ್ತ್ರಗಳನ್ನು ಕಳಿಸುತ್ತಿರುವ ಕಂಪನಿಗಳಿಗೆ ಕರ್ನಾಟಕ ಮತ್ತು ತೆಲಂಗಾಣ ಸರ್ಕಾರಗಳು ತಾವು ನೀಡಿರುವ ಸವಲತ್ತುಗಳನ್ನು ವಾಪಸು ಪಡೆದುಕೊಳ್ಳುವಂತೆ ಮಾಡಿ, ಈ ಎರಡು ರಾಜ್ಯಗಳಿಂದ ಆ ಕಂಪನಿಗಳ ಎತ್ತಂಗಡಿ ಆಗುವಂತೆ ಮಾಡಬೇಕು. ಐದು, ಈ ಎಲ್ಲವನ್ನೂ, ಈ ವಿಷಯದಲ್ಲಿ ಸರಿಯಾದ ನಿಲುವು ಮತ್ತು ನಡೆಯನ್ನು ಹೇಗೂ ತೋರುತ್ತಲೆ ಬಂದಿರುವ ಎಡಪಕ್ಷಗಳೊಂದಿಗೆ ಸೇರಿ ಮಾಡುತ್ತ, ತಮ್ಮಿಬ್ಬರ ಜೊತೆ ಸೇರಲು ‘ಇಂಡಿಯಾ’ ಮೈತ್ರಿಕೂಟದ ಬೇರೆ ಪಕ್ಷಗಳನ್ನೂ ಒಪ್ಪಿಸುವ ಪ್ರಯತ್ನ ಮಾಡಬೇಕು; ಹಾಗೂ ಲೋಕಹಿತಕ್ಕಾಗಿ ಕೆಲಸ ಮಾಡುತ್ತಿರುವ ಬೇರೆಲ್ಲ ಸಂಘಟನೆ, ಚಳವಳಿ, ಸಂಸ್ಥೆಗಳನ್ನು ತಮ್ಮೊಡನೆ ಕರೆದೊಯ್ಯಬೇಕು.
ಇಲ್ಲದಿದ್ದಲ್ಲಿ, ಈ ವಿಷಯದಲ್ಲಿನ ಅವರ ನಡೆ ನುಡಿಗಳೆರಡೂ ಯುರೋಪಿನ ದೇಶಗಳ ಅಧ್ಯಕ್ಷರು, ಪ್ರಧಾನಿಗಳು ಹಾಗೂ ಅರಬ್ ದೇಶಗಳ ಮಾಲೀಕರು ಹಾಗೂ ಅಮೀರರ ನಡೆ ನುಡಿಗಳಿಗೆ ಸಮನಾದುವಾಗುತ್ತವೆ. ಇಸ್ರೇಲ್ ಕಳೆದ ಎಪ್ಪತ್ತೇಳು ವರ್ಷಗಳಿಂದ ಪ್ಯಾಲೆಸ್ಟೀನಿಯರ ನೆಲವನ್ನು ಕಿತ್ತುಕೊಳ್ಳುತ್ತ, ಅವರ ಮೇಲೆ ನಡೆಸುತ್ತ ಬಂದಿರುವ ಹಿಂಸಾಚಾರವನ್ನು ವಿರೋಧಿಸದಿದ್ದ ಆ ದೇಶಗಳು, ಆ ದೇಶವು ಕಳೆದ ಎರಡು ವರ್ಷಗಳುದ್ದಕ್ಕೂ ನಿರಂತರ ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿ, ಆಸ್ಪತ್ರೆ, ಶಾಲೆ, ನೀರು ಸರಬರಾಜಿನ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ ಮುಂತಾಗಿ ಅಲ್ಲಿನ ಜನರ ಸರ್ವಸ್ವವನ್ನೂ ನೆಲಸಮ ಮಾಡಿ, ಕಡೆಗೆ ಅವರಿಗೆ ಅನ್ನ, ನೀರು ಕೂಡ ಸಿಗದಂತೆ ನೋಡಿಕೊಂಡು, ಹಸಿವಿನಿಂದ ಕಂಗೆಟ್ಟು ಮೂಳೆಚಕ್ಕಳವಾದ ಆ ಜನರಿಗೆ ‘ಅನ್ನ ನೀರಿನ ದಾನ ಮಾಡುತ್ತೇವೆ ಬನ್ನಿ’ ಎಂದು ಕರೆದು, ಅದಕ್ಕಾಗಿ ಬಂದವರನ್ನು, ಹೆಂಗಸರು, ಮಕ್ಕಳು, ಮುದುಕರು ಎನ್ನದೆ ಗುಂಡಿಟ್ಟು ಕೊಲ್ಲುತ್ತಿರುವ ಈ ಹೊತ್ತು, ಹಸು ಮಕ್ಕಳನ್ನು ಹಸಿವು, ನೀರಡಿಕೆಗಳಿಗೆ ಈಡು ಮಾಡಿ ಕೊಲ್ಲುತ್ತಿರುವ ಈ ಹೊತ್ತು, ಈಜಿಪ್ಟಿನ ಗಡಿಯಲ್ಲಿ ಗಾಜಾದೊಳಕ್ಕೆ ಪ್ರವೇಶ ಮಾಡಲು ಆರು ಸಾವಿರ ಟ್ರಕ್‌ಗಳು ಒಂದು ಲಕ್ಷದ ಎಪ್ಪತ್ತು ಸಾವಿರ ಮೆಟ್ರಿಕ್ ಟನ್ ಆಹಾರ ಹೊತ್ತು ಇಸ್ರೇಲ್‍ನ ಪರವಾನಗಿಗಾಗಿ ವಾರಗಟ್ಟಲೆ ಕಾದು ನಿಂತಿರುವ ಈ ಹೊತ್ತು, ಮತ್ತು, ಒಂದು ವೇಳೆ ಈಗ ಗಾಜಾದ ಜನರಿಗೆ ಅನ್ನಾಹಾರ ಸಿಕ್ಕರೂ, ಅವರು ಈಗ ಏನನ್ನು ತಿಂದರೂ, ಇಷ್ಟು ದಿನಗಳ ಉಪವಾಸದಿಂದಾಗಿ ಒಡಲು ಬತ್ತಿಹೋಗಿ, ಮತ್ತೆ ಚೇತರಿಸಿಕೊಳ್ಳಲು ಸಾಧ್ಯವಾಗದಷ್ಟು ಮುರುಟಿಹೋದ ಒಳ–ಅಂಗಾಂಗಗಳ ಜೀವಚ್ಛವಗಳಾಗಿ ಬಿಟ್ಟಿರುವ ಈ ಹೊತ್ತು, ಇದೀಗ, ಎಲ್ಲ ಆಗಿಹೋದ ಮೇಲೆ, ಪ್ಯಾಲೆಸ್ಟೀನಿಯರಿಗೆ ಕೊಂಚ ಸಹಾನುಭೂತಿ ತೋರುತ್ತ, ಇಸ್ರೇಲ್‍ಗೆ ಕೆಲವು ರೀತಿಯ ಚಿಕ್ಕ ಕಡಿವಾಣ ಮತ್ತು ದಿಗ್ಬಂಧನ ಹಾಕುವ ಮಾತನ್ನು ಮೆತ್ತಗೆ, ಮೆಲ್ಲಗೆ, ಹಿಂಜರಿಯುತ್ತ ಆಡುತ್ತಿವೆ. ತಾತ್ಪರ್ಯ, ಇಷ್ಟೆ: ಅದೆಲ್ಲ ಆ ದೇಶಗಳ ಬರಿಯ ಬಾಯುಪಚಾರದ ನುಡಿ, ಮತ್ತು ಬೂಟಾಟಿಕೆಯ ನಡೆ.
ಆ ಅವರ ನಡೆ ನುಡಿಗೂ ಪ್ರಿಯಾಂಕಾ ಗಾಂಧಿಯವರು ಬೂಟೀಕ್ ಚೀಲಹೊತ್ತು ನುಡಿದದ್ದಕ್ಕೂ ನಡುವಿನ ಗೆರೆ ಬಲು ತೆಳುವು ಅನ್ನಿಸಬಾರದು, ಆಗಬಾರದು; ಮತ್ತು, ಆಕೆಯ ಆ ನುಡಿಗೂ ನಡೆಗೂ ನಡುವಿನ ಗೆರೆ ಬಲುತೋರ ಎಂದು ಕೂಡ ಅನ್ನಿಸಬಾರದು, ಆಗಬಾರದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.