
ವರ್ತಮಾನದಲ್ಲಿ ಪ್ರಭುತ್ವವೊಂದು ನಡೆಸಬಹುದಾದ ಅತಿದೊಡ್ಡ ಹಿಂಸೆ ಯಾವುದಾದರೂ ಇದ್ದರೆ, ಅದು ಶಾಲೆಗಳೇ ಇಲ್ಲದ ಗ್ರಾಮಗಳನ್ನು ಸೃಜಿಸುವುದು! ದುರದೃಷ್ಟವಶಾತ್, ಇಂಥ ಹಿಂಸೆಯನ್ನು ಸೃಷ್ಟಿಸುವುದರಲ್ಲಿ ಸರ್ಕಾರಗಳು ಸ್ಪರ್ಧೆ ನಡೆಸುತ್ತಿರುವಂತಿದೆ.
ಅದೊಂದು ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣ. ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಯೊಬ್ಬಳು ತನ್ನ ಜೊತೆ ಎರಡು ವರ್ಷ ವಯಸ್ಸಿನ ತಮ್ಮನನ್ನು ಕರೆದುಕೊಂಡು ಶಾಲೆಗೆ ಬಂದಿದ್ದಳು. ಶಾಲೆಯಲ್ಲಿ ಪಾಠ ನಡೆಯುತ್ತಿದ್ದರೆ, ಈ ಪುಟ್ಟ ಬಾಲಕಿ ತನ್ನ ತಮ್ಮನ ಕಿರಿಕಿರಿ, ಅಳು, ಇತ್ಯಾದಿ ನಿಭಾಯಿಸುವುದರಲ್ಲಿ ವ್ಯಸ್ತವಾಗಿದ್ದಳು. ಈ ಜಂಜಡಗಳ ನಡುವೆಯೇ ಆಕೆ ಕಲಿಯಬೇಕಾಗಿತ್ತು. ಹತ್ತರ ವಯಸ್ಸಿಗೇ ಆ ಬಾಲಕಿಗೆ ದಕ್ಕಿದ ತಾಯ್ತನದ ಜವಾಬ್ದಾರಿ ಕಂಡು ಮನಸ್ಸು ವ್ಯಾಕುಲಗೊಂಡಿತ್ತು.
2018 ಮತ್ತು 2019ರ ನಡುವಿನ ಅವಧಿಯಲ್ಲಿ, ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾದ ಯಾದಗಿರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸರ್ಕಾರಿ ಶಾಲಾ ಶಿಕ್ಷಕರ ಕೌಶಲಾಭಿವೃದ್ಧಿಗೆ ನೆರವಾಗುವ ಉದ್ಯೋಗ ನನ್ನದಾಗಿತ್ತು. ಆ ಸಮಯದಲ್ಲಿಯೇ, ಪರಿಸ್ಥಿತಿ ಸೃಷ್ಟಿಸಿದ ‘ಪುಟಾಣಿ ತಾಯಿ’ಯನ್ನು ನಾನು ಕಂಡಿದ್ದು. ಆ ಬಾಲಕಿ, ನನ್ನಲ್ಲಿ ಗಾಢ ವಿಷಾದವನ್ನೂ ಅಚ್ಚರಿಯನ್ನೂ ಹುಟ್ಟಿಸಿದ್ದಳು. ದಿನಕಳೆದಂತೆ, ಇದು ಆ ಭಾಗದ ಶಾಲೆಗಳಲ್ಲಿ ಇರುವ ‘ಸಾಮಾನ್ಯ ಸಂಗತಿ’ ಎಂದು ತಿಳಿದು ಮನಸ್ಸು ಭಾರವಾಗಿತ್ತು.
ವಾಸ್ತವದಲ್ಲಿ ಈ ಮಾದರಿಯ ಮಕ್ಕಳ ತಂದೆ–ತಾಯಂದಿರು ಕೂಲಿ ಕಾರ್ಮಿಕರು. ಅವರಿಗೆ, ಬೆಳಗ್ಗೆ ಏಳೆಂಟು ಗಂಟೆಯ ಹೊತ್ತಿಗೆಲ್ಲ ಹೊಲಕ್ಕೋ, ಕೂಲಿಗಾಗಿ ಸಮೀಪದ ನಗರಕ್ಕೋ ಹೋಗುವ ಅನಿವಾರ್ಯತೆ ಇರುತ್ತದೆ. ಆ ಕಾರಣಕ್ಕೆ ಚಿಕ್ಕಮಗುವಿನ ಜವಾಬ್ದಾರಿ ಅದೇ ಕುಟುಂಬದ ದೊಡ್ಡ ಮಗುವಿನ ಮೇಲೆ ಬೀಳುತ್ತದೆ. ಹಾಗಾಗಿಯೇ ಈ ಭಾಗದಲ್ಲಿ ಶಾಲೆಗೆ ಹೋಗುವ ಮಕ್ಕಳು ತಮ್ಮ ಕಿರಿಯ ಸೋದರ, ಸೋದರಿಯನ್ನು ನೋಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ ಹಾಗೂ ಅದು ಸಹಜ ಎನ್ನುವಂತಾಗಿದೆ. ಇದನ್ನು ಶಿಕ್ಷಣ ಇಲಾಖೆ ‘ಸಿಬ್ಲಿಂಗ್ ಸಮಸ್ಯೆ’ ಎಂದು ಗುರುತಿಸುತ್ತದೆ.
ಕರ್ನಾಟಕ ಸರ್ಕಾರ ಇತ್ತೀಚೆಗೆ ಸುಮಾರು 700 ಶಾಲೆಗಳನ್ನು ಉನ್ನತೀಕರಿಸಿ, ಅಲ್ಲಿಗೆ ಐದಾರು ಕಿಲೋಮೀಟರ್ ದೂರದಲ್ಲಿನ ಸರ್ಕಾರಿ ಶಾಲೆಯನ್ನು ವಿಲೀನಗೊಳಿಸುವ ಕೆಪಿಎಸ್– ಮ್ಯಾಗ್ನೆಟ್ ಶಾಲಾ ಯೋಜನೆಯನ್ನು ರೂಪಿಸಿದೆ. ಇದರ ಅರ್ಥ, ನಮ್ಮ ಹಳ್ಳಿಗಳಲ್ಲಿ ಇರುವ ಬಹುತೇಕ ಪ್ರಾಥಮಿಕ ಶಾಲೆಗಳು ಮುಚ್ಚಿಹೋಗಲಿವೆ. ಶಾಲೆ ಮುಚ್ಚಿಹೋದರೆ ಮೇಲೆ ನೆನಪಿಸಿಕೊಂಡ ಪ್ರಕರಣದಂತಹ ನೂರಾರು ಅಕ್ಕ, ತಮ್ಮಂದಿರು ಆರೇಳು ಕಿಲೋಮೀಟರ್ ದೂರದಲ್ಲಿನ ಶಾಲೆಗೆ ಹೋಗುವುದನ್ನು ನಾವು ಕಲ್ಪಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ.
ಸರ್ಕಾರಿ ಸುತ್ತೋಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುರಿತು ಸುಂದರ ಪದಪುಂಜಗಳನ್ನು ಬಳಸಿರುವ ಕಾರಣಕ್ಕೆ, ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (ಮ್ಯಾಗ್ನೆಟ್ ಶಾಲಾ ಯೋಜನೆ) ಕೇಳುವುದಕ್ಕೆ ಸುಂದರವಾಗಿಯೇ ಇದೆ. ವಾಸ್ತವದಲ್ಲಿ ಇದು ಗ್ರಾಮೀಣ ಭಾಗದ ಪ್ರಾಥಮಿಕ ಶಿಕ್ಷಣ ಮತ್ತು ಗ್ರಾಮದ ಸಾಂಸ್ಕೃತಿಕ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ನಮ್ಮ ದೇಶಕ್ಕೆ, ಅದರಲ್ಲೂ ಗ್ರಾಮೀಣ ಭಾರತಕ್ಕೆ ಆಧುನಿಕತೆ, ವೈಜ್ಞಾನಿಕ ಆಲೋಚನೆ, ಸಾಮಾಜಿಕ ನ್ಯಾಯದ ಕುರಿತ ಅರಿವು ಹಾಗೂ ಹೊಸ ವಿಚಾರಗಳ ಪ್ರವೇಶವಾದುದು ಸರ್ಕಾರಿ ಶಾಲೆಗಳ ಮೂಲಕ. ಆ ಕಾರಣದಿಂದಾಗಿಯೇ, ನಮ್ಮ ಗ್ರಾಮೀಣ ಸಮಾಜದಲ್ಲಿ ಸರ್ಕಾರಿ ಶಾಲೆ ಎಂಬುದು ಮಕ್ಕಳಿಗೆ ಶಿಕ್ಷಣ ನೀಡುವ ಸ್ಥಳವಷ್ಟೇ ಆಗಿಲ್ಲ. ಅದು, ಇಡೀ ಗ್ರಾಮದ ಆಲೋಚನೆಯನ್ನು ಪ್ರಭಾವಿಸಬಹುದಾದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಶಾಲೆಗಳ ಮುಚ್ಚುವಿಕೆ ಈಗಿನ ಗತಿಯಲ್ಲಿಯೇ ಮುಂದುವರಿದರೆ, ಸುಮಾರು 6,000 ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಲಿವೆ ಎಂದು ವರದಿಯೊಂದು ಹೇಳುತ್ತದೆ. ಅಂದರೆ, 6,000 ಗ್ರಾಮಗಳನ್ನು ಶಾಲೆಯ ಅಸ್ತಿತ್ವವೇ ಇಲ್ಲದ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಬೇಕಿದೆ. ಶಾಲೆಯೇ ಇಲ್ಲದ ಗ್ರಾಮವನ್ನು ಕಲ್ಪಿಸಿಕೊಳ್ಳುವುದು ಕೆಟ್ಟ ಕನಸಿನಂತೆ ಭಾಸವಾಗುತ್ತಿದೆ. ಇದರ ಪರಿಣಾಮ ಕೇವಲ ಶಿಕ್ಷಣದ ಮೇಲೆ ಆಗುವುದಿಲ್ಲ; ಗ್ರಾಮೀಣ ಭಾಗದ ಸಾಂಸ್ಕೃತಿಕ ಪರಿಸರವೇ ನಾಶವಾಗಿ ಹೋಗುತ್ತದೆ.
ಶಾಲೆ ಇಲ್ಲದ ಊರಿನಲ್ಲಿ ಸ್ವಾತಂತ್ರ್ಯ ದಿನದ ಆಚರಣೆ ಇರುವುದಿಲ್ಲ, ಗಾಂಧಿ ಜಯಂತಿಯೂ ಇಲ್ಲ. ಮಕ್ಕಳ ದಿನಾಚರಣೆಯೂ ಅಲ್ಲಿ ನಡೆಯುವುದಿಲ್ಲ ಎನ್ನುವುದನ್ನು ಕಲ್ಪಿಸಿಕೊಳ್ಳಲಾರದಷ್ಟು ನಮ್ಮ ಪ್ರಜ್ಞೆ ಬಡ ಹಾಗೂ ಜಡವಾಗಿದೆ ಎಂದರೆ ಏನು ಹೇಳುವುದು? ಗ್ರಾಮವೊಂದರಲ್ಲಿನ ಶಾಲೆಯ ಅನುಪಸ್ಥಿತಿಯನ್ನು ನಮ್ಮ ಸಮಾಜದ ಯಾವೆಲ್ಲಾ ಪಟ್ಟಭದ್ರ ಶಕ್ತಿಗಳು ತುಂಬುತ್ತವೆ ಎನ್ನುವುದನ್ನು ಊಹಿಸಿಕೊಳ್ಳಲಾರದ ಜಡತ್ವಕ್ಕೆ ನಮ್ಮ ಪ್ರಜಾಪ್ರತಿನಿಧಿಗಳು ಒಳಗಾಗಿದ್ದಾರೆಯೇ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಿದೆ.
ಆರೇಳು ಕಿಲೋಮೀಟರ್ ದೂರದ ಶಾಲೆಗೆ ಮಗುವೊಂದು ಹೇಗೆ ತಲಪುತ್ತದೆ ಎನ್ನುವ ಪ್ರಶ್ನೆಗೆ, ‘ವಾಹನ ವ್ಯವಸ್ಥೆ ಮಾಡುತ್ತೇವೆ’ ಎನ್ನುವ ಉತ್ತರವನ್ನು ‘ಕೆಪಿಎಸ್’ ಶಾಲೆಗಳ ಯೋಜನೆಯ ಪ್ರತಿಪಾದಕರು ನೀಡುತ್ತಿದ್ದಾರೆ. ಇದು ಎಷ್ಟೊಂದು ಹಾಸ್ಯಾಸ್ಪದ ಸಂಗತಿ ಎಂದರೆ, ಈ ಶಿಕ್ಷಣ ತಜ್ಞರು ಗ್ರಾಮೀಣ ಭಾಗದ ಪೋಷಕರನ್ನು ಮೇಲ್ಮಧ್ಯಮ ವರ್ಗದ ಪೋಷಕರಂತೆ ಕಲ್ಪಿಸಿಕೊಂಡಿರುವಂತಿದೆ. ಬೆಳಗ್ಗೆ ಎದ್ದು, ನೌಕರಿಗೆ ಹೋಗುವ ಗಂಡನಿಗೆ ಉಪಾಹಾರ ಕೊಟ್ಟು ಕೆಲಸಕ್ಕೆ ಕಳಿಸುವ ಗೃಹಿಣಿ, ಮಕ್ಕಳನ್ನು ಸಿದ್ಧಮಾಡಿ ಶಾಲಾ ಬಸ್ಸಿಗೆ ಹತ್ತಿಸಿ ಟಾಟಾ ಮಾಡುತ್ತಾಳೆ; ಸಂಜೆ ಶಾಲಾ ವಾಹನಕ್ಕೆ ಕಾದಿದ್ದು ಮಕ್ಕಳನ್ನು ಇಳಿಸಿಕೊಳ್ಳುತ್ತಾಳೆ. ಇಂಥ ಪೋಷಕರ ಚಿತ್ರಣವನ್ನು ಅವರು ಕಲ್ಪಿಸಿಕೊಂಡಂತಿದೆ. ಇಂದಿಗೂ ಭಾರತದ ಗ್ರಾಮೀಣ ಪ್ರದೇಶದಲ್ಲಿನ ಸುಮಾರು ಶೇ 75ರಷ್ಟು ಕುಟುಂಬಗಳ ಸದಸ್ಯರು ಕೃಷಿ ಕೂಲಿ ಕಾರ್ಮಿಕರಾಗಿದ್ದಾರೆ. ದುಡಿದು ತಿನ್ನಬೇಕಾದ ಒತ್ತಡದ ಬದುಕನ್ನು ನಿತ್ಯವೂ ಎದುರಿಸುತ್ತಿರುವವರು ಮತ್ತು ಬೆಳಗ್ಗೆ ಎಂಟಕ್ಕೆ ಕೂಲಿಗೆ ಹೋಗಬೇಕಾದ ಅನಿವಾರ್ಯತೆ ಇರುವವರು, ತಮ್ಮ ಮಕ್ಕಳನ್ನು ವಾಹನಗಳಲ್ಲಿ ಶಾಲೆಗೆ ಕಳಿಸುತ್ತಾರೆ ಎಂದು ಕಲ್ಪಿಸಿಕೊಳ್ಳುವುದೂ ಕ್ರೌರ್ಯ ಎನ್ನಿಸುತ್ತದೆ. ಅದರಲ್ಲೂ, ಕಲ್ಯಾಣ ಕರ್ನಾಟಕದ ಬಿಸಿಲಿನ ಕಾರಣಕ್ಕೆ, ಬೆಳಗ್ಗೆ ಆರಕ್ಕೇ ದುಡಿಮೆಗೆ ಹೋಗುವ ಮಂದಿಯೇ ಹಳ್ಳಿಗಳಲ್ಲಿ ಹೆಚ್ಚಾಗಿ ಇರುವುದು.
ಸಾಮಾಜಿಕ ಹಾಗೂ ಆರ್ಥಿಕ ದುಸ್ಥಿತಿಯನ್ನು ಎದುರಿಸುತ್ತಿರುವ ಪೋಷಕರು, ತಮ್ಮ ಮಕ್ಕಳನ್ನು ಎಲ್ಲಾ ಕೆಲಸ ಬಿಟ್ಟು ಶಾಲಾ ವಾಹನಕ್ಕೆ ಕಾದು ಹತ್ತಿಸಿ ಕಳುಹಿಸುತ್ತಾರೆ ಮತ್ತು ಅವರು ಹಿಂದಿರುಗುವುದನ್ನು ಕಾದಿದ್ದು ಇಳಿಸಿಕೊಳ್ಳುತ್ತಾರೆ ಎನ್ನುವುದು ಆದರ್ಶಮಯ ಯೋಚನೆಯಷ್ಟೇ. ಬಹುತೇಕ ಸಂದರ್ಭಗಳಲ್ಲಿ ಶಿಕ್ಷಕರ ಮಧ್ಯಪ್ರವೇಶದ ಕಾರಣಕ್ಕೆ– ಆ ಊರಿನಲ್ಲಿ ಶಾಲೆ ಇದೆ, ಅಲ್ಲಿ ಬಿಸಿಯೂಟ ಸಿಗುತ್ತದೆ, ಏನೋ ಕಲಿಸುತ್ತಿದ್ದಾರೆ ಅನ್ನುವ ಕಾರಣಕ್ಕೆ– ಮಗು ಶಾಲೆಗೆ ಹೋಗುತ್ತಿದೆಯೇ ಹೊರತು, ಪೋಷಕರ ಕಾಳಜಿಯಿಂದ ಅಲ್ಲ. ದೈನಂದಿನ ದುಡಿಮೆ ನೆಚ್ಚಿಕೊಂಡು ಬದುಕುವ ಜನರಿಗೆ ಅನ್ನವನ್ನೂ ಮೀರಿ ಶಿಕ್ಷಣ ಮೊದಲ ಆಯ್ಕೆ ಆಗಿರಲು ಸಾಧ್ಯವಿಲ್ಲ ಅನ್ನುವ ಸತ್ಯ ನಮಗೆ ಕಾಣದಾಗಿದೆ.
ಗ್ರಾಮೀಣ ಭಾಗದ ಜನರ ತವಕತಲ್ಲಣಗಳನ್ನು ಆಳುವ ವರ್ಗ, ಮುಖ್ಯವಾಗಿ ಗ್ರಾಮೀಣ ಭಾಗ
ದಿಂದಲೇ ಬಂದ ಮುಖ್ಯಮಂತ್ರಿಯವರು ಯೋಚಿಸಬೇಕಿದೆ. ಈ ದೇಶದ ಪ್ರಜಾಪ್ರಭುತ್ವ ಮತ್ತು ಸರ್ಕಾರಿ ಶಿಕ್ಷಣ ವ್ಯವಸ್ಥೆಯ ನಡುವೆ ಒಂದು ಸಾವಯವ ಸಂಬಂಧವಿದೆ. ಸರ್ಕಾರಿ ಶಾಲೆಗಳ ನಾಶ ಈ ನೆಲದಲ್ಲಿ
ಶಾಲೆಯನ್ನೇ ಕೇಂದ್ರವಾಗಿ ಇರಿಸಿಕೊಂಡು ಬೆಳೆಯುತ್ತಿರುವ ಪ್ರಜಾತಾಂತ್ರಿಕ ಮೌಲ್ಯಗಳ ನಾಶಕ್ಕೆ ಕಾರಣ
ಆಗುತ್ತದೆ. ನಮ್ಮ ದೇಶದ ಪ್ರಜಾಪ್ರಭುತ್ವದ ಸಾಮಾಜೀಕರಣ ಪ್ರಕ್ರಿಯೆ ಆರಂಭವಾಗುವುದೇ ಶಾಲೆಗಳ ಆವರಣಗಳಿಂದ ಅನ್ನುವ ಸತ್ಯವನ್ನು ನಾವು ಮನಗಾಣಬೇಕಿದೆ.
ನಮ್ಮ ಊರಿನಲ್ಲಿ ಒಂದು ಏಕೋಪಾಧ್ಯಾಯ ಪ್ರಾಥಮಿಕ ಶಾಲೆ ಇದ್ದ ಕಾರಣಕ್ಕಷ್ಟೇ ನಾನು ಶಾಲೆ ಕಲಿತು, ಇಂದು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದೇನೆ. ಸಣ್ಣ ಹೋಟೆಲ್ ನಡೆಸುತ್ತಿದ್ದ
ತಂದೆಯ ಮಗನಾದ ನಾನು ಪ್ರಸ್ತುತ ಏನಾಗಿರುವೆನೋ ಅದೆಲ್ಲಕ್ಕೂ ಈ ದೇಶದ ಸರ್ಕಾರಿ ಶಿಕ್ಷಣ ವ್ಯವಸ್ಥೆಯೇ ಕಾರಣ. ನನ್ನ ಬಾಲ್ಯದ ಹಿನ್ನೆಲೆಯೇ ಈ ದೇಶದ ಬಹುಸಂಖ್ಯಾತರದೂ ಆಗಿರುವುದರಿಂದ, ಸರ್ಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸುವ ಸಂಕಥನಕ್ಕೆ ಧ್ವನಿಯಾಗುವುದು ನಮ್ಮೆಲ್ಲರ ಕರ್ತವ್ಯ.
ಸರ್ಕಾರಿ ಶಾಲೆ ವರ್ಸಸ್ ಖಾಸಗಿ ಶಾಲೆ ಎಂಬ ಬೈನರಿ ಚರ್ಚೆಗಳಿಂದ ಸರ್ಕಾರ ಮೊದಲು ಹೊರಬರಬೇಕಾಗಿದೆ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದೃಷ್ಟಿಯಿಂದ ನಾವು ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳಬೇಕಿದೆ. ಅದಕ್ಕೆ ಪೂರಕವಾಗಿ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬೇಕಿದೆ. ಆದರೆ, ಸರ್ಕಾರಿ ಶಾಲೆಗಳಿಗೆ ಸ್ಪರ್ಧೆ ನೀಡುವಂತೆ ಖಾಸಗಿ ಶಾಲೆಗಳಿಗೆ ನಾವು ಅನುಮತಿ ನೀಡುತ್ತಿದ್ದೇವೆ. ಈ ಖಾಸಗಿ ವ್ಯವಸ್ಥೆಯು ಮಕ್ಕಳನ್ನು ಗ್ರಾಹಕರಂತೆ, ಶಿಕ್ಷಣವನ್ನು ಸರಕಿನಂತೆ ನೋಡುತ್ತಿದೆ. ಗ್ರಾಮಗಳಲ್ಲಿ ಶಾಲೆ ಉಳಿಸಿಕೊಳ್ಳುವುದರ ಅರ್ಥ, ಈ ದೇಶದ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವುದೇ ಆಗಿದೆ ಎನ್ನುವ ಹಕ್ಕೊತ್ತಾಯವನ್ನು ಪ್ರಭುತ್ವದ ಮುಂದೆ ನಾವು ಮಂಡಿಸಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.