ಅಘಪಾತ
ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷ ಜನ ಮೃತಪಡುತ್ತಾರೆ ಮತ್ತು ಐದು ಲಕ್ಷ ಜನ ಗಾಯಗೊಳ್ಳುತ್ತಾರೆ. ಜಾಗತಿಕ ಮಟ್ಟದಲ್ಲಿ ರಸ್ತೆ ಅಪಘಾತದಲ್ಲಾಗುವ ಸಾವುಗಳಲ್ಲಿ ಶೇಕಡ 12ರಷ್ಟು ಭಾರತದಲ್ಲಿಯೇ ಸಂಭವಿಸುತ್ತವೆ.
ನಿರ್ಲಕ್ಷ್ಯದಿಂದ ಕೂಡಿದ ವಾಹನ ಚಲಾವಣೆ, ವಾಹನಗಳಲ್ಲಿನ ತಾಂತ್ರಿಕ ದೋಷ ಮತ್ತು ಕೆಟ್ಟ ಸ್ಥಿತಿಯಲ್ಲಿರುವ ಹೆದ್ದಾರಿಗಳು– ಇವು ರಸ್ತೆ ಅಪಘಾತ ಸಂಭವಿಸಲು ಇರುವ ಪ್ರಮುಖ ಕಾರಣಗಳು. ಅಪಘಾತ ಸಂಭವಿಸಿದ ತಕ್ಷಣವೇ ಸೂಕ್ತ ಚಿಕಿತ್ಸೆ ದೊರಕದೇ ಗಾಯಾಳುಗಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಘಟನಾ ಸ್ಥಳದಲ್ಲಿ ಇರುವ ಸಾರ್ವಜನಿಕರು ಗಾಯಾಳುಗಳ ಸಹಾಯಕ್ಕೆ ಮುಂದಾಗದೆ ಇರುವುದೇ ಸಾವಿನ ಸಂಖ್ಯೆ ಏರಿಕೆಯಾಗಲು ಇರುವ ಮುಖ್ಯ ಕಾರಣ.
‘ನಮಗೆ ಯಾಕೆ ಬೇಕು, ಸುಮ್ಮನೆ ಹಿಂಸೆ’, ‘ಕೋರ್ಟ್ ಓಡಾಟ ನಮಗೆ ಬೇಡ’ ಎನ್ನುವ ಭಯದ ಕಾರಣದಿಂದ ಜನರು ಗಾಯಾಳುಗಳಿಗೆ ಸಹಾಯವನ್ನೇ ಮಾಡುವುದಿಲ್ಲ. ಗಾಯಾಳುಗಳಿಗೆ ‘ಗೋಲ್ಡನ್ ಅವರ್’ನಲ್ಲಿ (ಅಪಘಾತ ಸಂಭವಿಸಿದ ಮೊದಲ ಒಂದು ತಾಸು) ಅಗತ್ಯವಾಗಿ ಆಗಬೇಕಾದ ಪ್ರಥಮ ಚಿಕಿತ್ಸೆ, ಸಹಕಾರ ಸಿಗುವುದೇ ಇಲ್ಲ. ಇದರಿಂದ ಗಾಯಾಳುಗಳು ಒಂದೋ ಮೃತಪಡುತ್ತಾರೆ ಇಲ್ಲವೇ ಶಾಶ್ವತವಾಗಿ ಅಂಗವಿಕಲರಾಗುತ್ತಾರೆ.
ಗಾಯಾಳುಗಳಿಗೆ ಸಾರ್ವಜನಿಕರು ಯಾಕಾಗಿ ಸಹಾಯ ಮಾಡುವುದಿಲ್ಲ ಎನ್ನುವ ಕುರಿತು ‘ಸೇವ್‌ಲೈಫ್ ಫೌಂಡೇಷನ್ ಮತ್ತು ‘ಟಿಎನ್‌ಎಸ್ ಇಂಡಿಯಾ ಪ್ರೈವೇಟ್ ಲಿ.’ ಸಂಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ಅಧ್ಯಯನವೊಂದನ್ನು ನಡೆಸಿವೆ. ‘ಭಾರತದಲ್ಲಿ ಅಪಘಾತ ಸಂಭವಿಸಿದಾಗ ಸಮೀಪ ಇರುವ ಜನ ಆರೈಕೆ ನೀಡುವುದಕ್ಕೆ ಇರುವ ಅಡೆತಡೆಗಳು’ ಎಂಬ ಹೆಸರಿನಲ್ಲಿ ವರದಿಯೊಂದನ್ನು ಬಿಡುಗಡೆ ಮಾಡಿವೆ.
ಈ ವರದಿಯ ಪ್ರಕಾರ, ಶೇ 74ರಷ್ಟು ಜನ ಗಾಯಾಳುಗಳಿಗೆ ಸಹಾಯ ಮಾಡುವುದಕ್ಕೆ ಇಚ್ಛಿಸುವುದಿಲ್ಲ. ಕೋರ್ಟು–ಕೇಸು ಎಂದು ಅಲೆಯಬೇಕು, ಪೊಲೀಸರು ಪದೇ ಪದೇ ತನಿಖೆಗೆ ಕರೆಯುತ್ತಾರೆ, ನ್ಯಾಯಾಲಯಕ್ಕೆ ಪದೇ ಪದೇ ಹಾಜರಾಗಬೇಕು ಎನ್ನುವ ಕಾರಣಕ್ಕೆ ಶೇ 88ರಷ್ಟು ಜನ ಗಾಯಾಳುಗಳಿಗೆ ಸಹಾಯ ಮಾಡುವುದಿಲ್ಲ. ಆಸ್ಪತ್ರೆಗೆ ದಾಖಲಿಸಿದ ನಂತರ ಬಹಳ ಹೊತ್ತು ಅಲ್ಲೇ ಇರಬೇಕಾಗುತ್ತದೆ, ಆಸ್ಪತ್ರೆ ದಾಖಲಾತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಶೇ 77ರಷ್ಟು ಮಂದಿ ಗಾಯಾಳುಗಳಿಗೆ ಸಹಾಯ ಮಾಡುವುದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ರಸ್ತೆ ಅಪಘಾತದ ಹಲವು ವಿಡಿಯೊಗಳು ಹರಿದಾಡುತ್ತವೆ. ಅಪಘಾತದಲ್ಲಿ ಗಾಯಗೊಂಡವರು ಸಹಾಯಕ್ಕಾಗಿ ಬೇಡುತ್ತಿರುವ ದೃಶ್ಯಗಳೂ ವಿಡಿಯೊಗಳಲ್ಲಿ ಇರುತ್ತವೆ. ಆದರೆ, ಹೆಚ್ಚಿನ ಸಂದರ್ಭಗಳಲ್ಲಿ ಯಾರೂ ಸಹಾಯ ಮಾಡುವುದಿಲ್ಲ. ಕೆಲವರು ವಿಡಿಯೊ ಮಾಡಿಕೊಂಡು ನಿಂತಿರುತ್ತಾರೆ. ಪೊಲೀಸರಿಗೆ ಅಥವಾ ಆಂಬುಲೆನ್ಸ್‌ಗಾದರೂ ಕರೆ ಮಾಡಬೇಕು ಎಂದು ಯಾವ ದಾರಿಹೋಕರಿಗೂ ಅನ್ನಿಸುವುದಿಲ್ಲ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಯಾರೂ ಮುಂದಾಗುವುದಿಲ್ಲ.
ಸಮಾಜದಲ್ಲಿ ‘ಗುಡ್ ಸಮರಿಟನ್’ (ಪರೋಪಕಾರಿ) ಸಂಸ್ಕೃತಿಯನ್ನು ಬೆಳೆಸುವುದೇ ಇದಕ್ಕಿರುವ ಪರಿಹಾರ. ಬೈಬಲ್‌ನಲ್ಲಿ ಹೇಳಿರುವ ನೀತಿಕತೆಗಳಲ್ಲಿ ‘ಗುಡ್ ಸಮರಿಟನ್’ ಎನ್ನುವ ಪರಿಕಲ್ಪನೆಯು ತನ್ನ ಮೂಲವನ್ನು ಹೊಂದಿದೆ.
ಕತೆ ಹೀಗಿದೆ: ‘ವ್ಯಕ್ತಿಯೊಬ್ಬರು ಜೆರುಸಲೇಂನಿಂದ ಜೆರಿಕೊ ನಗರಕ್ಕೆ ಹೊರಟಿದ್ದರು. ಮಾರ್ಗಮಧ್ಯೆ ದರೋಡೆಕೋರರು ವ್ಯಕ್ತಿಯನ್ನು ತೀವ್ರವಾಗಿ ಥಳಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯ ಪಕ್ಕದಲ್ಲಿಯೇ ಇಬ್ಬರು ನಡೆದುಹೋದರು. ಆದರೆ, ಅವರು ಸಹಾಯ ಮಾಡಲಿಲ್ಲ. ಒಬ್ಬ ಸಮರಿಟನ್ (ಸಮರಿಯಾ ನಗರದವನು) ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದನು. ಗಾಯಗಳಿಗೆ ಔಷಧ ಹಚ್ಚಿ ಉಪಚರಿಸಿದನು. ಆಶ್ರಯವನ್ನೂ ನೀಡಿದನು.
ರಸ್ತೆ ಅಪಘಾತಗಳಲ್ಲಿ ಗಾಯಗೊಂಡವರನ್ನು ತಕ್ಷಣವೇ ಉಪಚರಿಸುವ ಸಂಸ್ಕೃತಿಯನ್ನು ಜನರಲ್ಲಿ ಬೆಳೆಸಬೇಕಿದೆ. ಇದಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ‘ಗುಡ್ ಸಮರಿಟನ್’ ಆಗುವಂತೆ ಜನರನ್ನು ಪ್ರೊತ್ಸಾಹಿಸಬೇಕಿದೆ. ಜಾಗೃತಿ ಮೂಡಿಸಿದರೆ ಸಾಲದು, ಗಾಯಾಳುಗಳಿಗೆ ಸಹಾಯ ನೀಡಲು ಉತ್ತೇಜಿಸುವಂಥ ವಾತಾವರಣವನ್ನೂ ನಿರ್ಮಿಸಬೇಕು.
‘ಗುಡ್ ಸಮರಿಟನ್’ ಆಗಿ ಗಾಯಾಳುಗಳಿಗೆ ಸಹಾಯ ಮಾಡುವ ವ್ಯಕ್ತಿಯನ್ನು ಕಾನೂನು ಕ್ರಮಗಳಿಂದ ರಕ್ಷಿಸುವಂಥ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ರೂಪಿಸಿದೆ. ಮಾರ್ಗಸೂಚಿಯಲ್ಲಿ ಹೇಳಿರುವ ಅಂಶಗಳು ಇಂತಿವೆ:
ರಸ್ತೆ ಅಪಘಾತ ನಡೆದಾಗ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ ವ್ಯಕ್ತಿಯನ್ನು ಹೆಚ್ಚು ಹೊತ್ತು ಆಸ್ಪತ್ರೆಯಲ್ಲಿ ಇರುವಂತೆ ಮಾಡಬಾರದು. ವ್ಯಕ್ತಿಯಿಂದ ಆತನ ವಿಳಾಸ ಪಡೆದುಕೊಂಡು ತಕ್ಷಣವೇ ಕಳುಹಿಸಿಕೊಡಬೇಕು ಮತ್ತು ಪೊಲೀಸರು ಅಲ್ಲಿ ಆತನ ತನಿಖೆ ನಡೆಸುವಂತಿಲ್ಲ. ಗಾಯಾಳುಗಳನ್ನು ಉಪಚರಿಸಿದ ವ್ಯಕ್ತಿಗೆ ಸೂಕ್ತ ಬಹುಮಾನ ನೀಡಬೇಕು. ಈ ವ್ಯಕ್ತಿಯನ್ನು ಯಾವ ಸಿವಿಲ್ ಅಥವಾ ಕ್ರಿಮಿನಲ್ ಅಪರಾಧ ಪ್ರಕರಣಗಳಲ್ಲೂ ಹೆಸರಿಸಬಾರದು.
ಅಪಘಾತ ನಡೆದ ಕುರಿತು ಪೊಲೀಸರಿಗೆ ಯಾರಾದರೂ ಕರೆ ಮಾಡಿ ಮಾಹಿತಿ ನೀಡುತ್ತಾರೆ ಎಂದಾದರೆ, ಅಂಥವರು ತಮ್ಮ ಹೆಸರು ಸೇರಿದಂತೆ ಖಾಸಗಿ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕಾಗಿಲ್ಲ. ಮಾಹಿತಿ ನೀಡುವುದು ಸಂಪೂರ್ಣ ಐಚ್ಛಿಕವಾಗಿರಲಿದೆ. ಜೊತೆಗೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಾಗ ತುಂಬಬೇಕಾದ ಅರ್ಜಿಯಲ್ಲಿಯೂ (ಮೆಡಿಕೊ ಲೀಗಲ್ ಕೇಸ್) ವ್ಯಕ್ತಿಯು ತನ್ನ ವೈಯಕ್ತಿಕ ಮಾಹಿತಿಯನ್ನು ನಮೂದಿಸಬೇಕಾಗಿಲ್ಲ.
ಒಂದು ವೇಳೆ, ಗಾಯಾಳುಗಳಿಗೆ ಸಹಾಯ ಮಾಡಿದ ವ್ಯಕ್ತಿಯು ‘ಅಪಘಾತ ನಡೆದ ವೇಳೆ ಸ್ಥಳದಲ್ಲಿ ನಾನೂ ಇದ್ದೆ, ಅಪಘಾತಕ್ಕೆ ನಾನೇ ಸಾಕ್ಷಿ’ ಎಂದು ಹೇಳಿಕೊಂಡರೆ ಆತನನ್ನು ಪೊಲೀಸರು ಒಂದೇ ಬಾರಿ ತನಿಖೆಗೆ ಒಳಪಡಿಸಬೇಕೇ ವಿನಾ ಪದೇ ಪದೇ ತನಿಖೆಗೆ ಕರೆಯುವಂತಿಲ್ಲ. ‘ಗುಡ್ ಸಮರಿಟನ್’ ಅನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ರಾಜ್ಯ ಸರ್ಕಾರಗಳು ನಿಯಮ ರೂಪಿಸಿಕೊಳ್ಳಬೇಕು.
‘ಗುಡ್ ಸಮರಿಟನ್’ ಪ್ರವೃತ್ತಿಯನ್ನು ಪ್ರೋತ್ಸಾಹಿಸುವ ಮತ್ತು ರಸ್ತೆ ಅಪಘಾತದ ಗಾಯಾಳುಗಳಿಗೆ ತಕ್ಷಣವೇ ಚಿಕಿತ್ಸೆ ಒದಗಿಸುವ ನಿಮಿತ್ತ ಕರ್ನಾಟಕ ಸರ್ಕಾರವು ‘ಮುಖ್ಯಮಂತ್ರಿ ಸಾಂತ್ವನ–ಹರೀಶ್ ಯೋಜನೆ’ಯನ್ನು ಜಾರಿ ಮಾಡಿದೆ. ‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್’ ಎಂಬ ಸ್ವಾಯತ್ತ ಸಂಸ್ಥೆ ಈ ಯೋಜನೆಯನ್ನು ನಿರ್ವಹಿಸುತ್ತದೆ. ಈ ಸಂಸ್ಥೆಯು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುತ್ತದೆ.
ನೆಲಮಂಗಲದ ಸಮೀಪ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಹರೀಶ್ ಎಂಬುವರ ನೆನಪಿನಲ್ಲಿ ಈ ಯೋಜನೆಗೆ ಹೆಸರಿಡಲಾಗಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ಅಪಘಾತ ಸಂಭವಿಸಿದ 48 ಗಂಟೆಗಳ ಒಳಗಾಗಿ ಈ ಯೋಜನೆ ಅಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಮತ್ತು ₹25 ಸಾವಿರದವರೆಗಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಳ್ಳುವವರಿಗೆ ಸಹಾಯ ಮಾಡುವುದಕ್ಕೆ ಸಾರ್ವಜನಿಕರು ಮುಂದೆ ಬರುವಂತೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಆದರೂ ಈ ಕ್ರಮಗಳು ಸಾಲುತ್ತಿಲ್ಲ. ನಾವು ಇನ್ನಷ್ಟು ಮುಂದೆ ಸಾಗಬೇಕಾಗಿದೆ.
ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಾಗರಿಕ ವೇದಿಕೆಗಳು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸರ್ಕಾರಿ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ಈ ವಿಷಯದಲ್ಲಿ ಕೈಜೋಡಿಸಬೇಕಿದೆ. ಪ್ರತಿಯೊಬ್ಬರೂ ‘ಗುಡ್ ಸಮರಿಟನ್’ ಆಗುವಂಥ ವಾತಾವರಣವನ್ನು ಸೃಷ್ಟಿಸಬೇಕಿದೆ. ಅತ್ಯಮೂಲ್ಯ ಜೀವಗಳನ್ನು ರಕ್ಷಿಸಲು ಇದು ಜರೂರಾಗಿ ಆಗಬೇಕಿರುವ ಕೆಲಸವಾಗಿದೆ.
ಲೇಖಕ: ಪೊಲೀಸ್ ಮಹಾನಿರ್ದೇಶಕ, ಸಿ.ಐ.ಡಿ. ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.