ADVERTISEMENT

ವಿಶ್ಲೇಷಣೆ: ಪಶ್ಚಿಮಘಟ್ಟಕ್ಕೆ ಇನ್ನೊಂದು ಪೆಟ್ಟು?

ಅಖಿಲೇಶ್ ಚಿಪ್ಪಳಿ
Published 11 ಸೆಪ್ಟೆಂಬರ್ 2025, 23:54 IST
Last Updated 11 ಸೆಪ್ಟೆಂಬರ್ 2025, 23:54 IST
   

ಶಿವರಾಮ ಕಾರಂತ, ಕುಸುಮಾ ಸೊರಬ ಮುಂತಾದ ದಿಗ್ಗಜರು 1980ರ ದಶಕದಲ್ಲಿ ‘ಪಶ್ಚಿಮಘಟ್ಟ ಉಳಿಸಿ’ ಹೋರಾಟದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ತದಡಿ ಶಾಖೋತ್ಪನ್ನ ವಿದ್ಯುತ್ ಘಟಕವನ್ನು ನಿರ್ಮಿಸಲು ಹೊರಟ ಆಗಿನ ಸರ್ಕಾರವನ್ನು ಹೋರಾಟ ಮಣಿಸಿತ್ತು.

ಅಪೂರ್ವವಾದ ಪಶ್ಚಿಮಘಟ್ಟಕ್ಕೆ ಹಲವು ಅನವಶ್ಯಕ ಅಭಿವೃದ್ಧಿ ಯೋಜನೆಗಳು ದಾಂಗುಡಿ ಇಡುತ್ತಿವೆ. ಹಿಮಾಲಯಕ್ಕಿಂತ ಪುರಾತನವಾದ ಪಶ್ಚಿಮಘಟ್ಟವನ್ನು ಅಭಿವೃದ್ಧಿ ಮಾಫಿಯಾ ನಾಶ ಮಾಡಿಯೇ ತೀರಲು ಟೊಂಕ ಕಟ್ಟಿ ನಿಂತಿದೆ. ಒಮ್ಮೆ ನಾಶ ಮಾಡಿದರೆ, ಮರುಸೃಷ್ಟಿ ಮಾಡಲಾಗದ ಪಾರಂಪರಿಕ ಅರಣ್ಯ ಪ್ರದೇಶಗಳನ್ನು ಉಳಿಸಿಕೊಂಡು ಅಭಿವೃದ್ಧಿ ಹೊಂದುವ ಮಾದರಿಗಳು ಇವೆ. ಅದರತ್ತ ಗಮನ ಹರಿಸುವಷ್ಟು ವ್ಯವಧಾನ ನಮ್ಮ ಅಧಿಕಾರಿಗಳಿಗೂ ರಾಜಕಾರಣಿಗಳಿಗೂ ಇಲ್ಲ.

‘ಶರಾವತಿ ಸಿಂಗಳೀಕ ಅಭಯಾರಣ್ಯ’ದ ಕೇಂದ್ರ ಭಾಗದಲ್ಲಿ ಕರ್ನಾಟಕ ವಿದ್ಯುತ್ ನಿಗಮವು ‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯನ್ನು ಜಾರಿಗೊಳಿಸಲು ಮುಂದಾಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರು ಯೋಜನೆಗೆ ಪ್ರತಿರೋಧ ತೋರುತ್ತಿರುವುದು ಇತ್ತೀಚಿನ ವಿದ್ಯಮಾನ. ಶಿವಮೊಗ್ಗ, ಸಾಗರ, ಹೊನ್ನಾವರ, ಗೇರುಸೊಪ್ಪೆ ಭಾಗದಲ್ಲಿ ಮಠಾಧೀಶ‍್ವರರ ನೇತೃತ್ವದಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಕಳೆದ ತಿಂಗಳ ಆದಿಯಲ್ಲಿ ಹೊನ್ನಾವರದಲ್ಲಿ ಈ ಯೋಜನೆಯ ವಿರುದ್ಧವಾಗಿ ಜನ ಪಕ್ಷಾತೀತವಾಗಿ ಸಂಘಟಿತರಾಗಿ ಹೋರಾಟ ಮಾಡಿದ್ದರು. ಗೇರುಸೊಪ್ಪೆಯ ಬಂಗಾರಮಕ್ಕಿಯ ಮಾರುತಿ ಗುರೂಜಿ, ‘ಯೋಜನೆ ಮಾಡುವುದಿದ್ದರೆ, ನನ್ನ ಎದೆಯ ಮೇಲೆ ಮೊದಲು ಜೆಸಿಬಿ ಹತ್ತಿಸಿ, ನಂತರದಲ್ಲಿ ಯೋಜನೆ ಮಾಡಿ’ ಎಂದು ಗುಡುಗಿದ್ದು ವರದಿಯಾಗಿದೆ. ಹೊಸನಗರದ ಮೂಲೆಗದ್ದೆ ಮಠ, ಬೆಕ್ಕಿನ ಕಲ್ಮಠ, ಜಡೆ ಸ್ವಾಮಿಗಳು ಈ ಯೋಜನೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವುದು ಹೋರಾಟಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ.  

ADVERTISEMENT

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರಿಸರ ಪರಿಣಾಮ ಮೌಲ್ಯಮಾಪನವು ಹಲವು ಲೋಪ–ದೋಷಗಳಿಂದ ಕೂಡಿದೆ. ಪರಿಸರದ ಮೇಲಾಗುವ ದುಷ್ಪರಿಣಾಮಗಳ ಹಲವು ಅಂಶ ಗಳನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ. ಶರಾವತಿ ಸಿಂಗಳೀಕ ಅಭಯಾರಣ್ಯದ ಮತ್ತು ಮಳೆಕಾಡುಗಳ ಕೇಂದ್ರ ಭಾಗದಲ್ಲಿ ರೂಪಿಸಲು ಹೊರಟಿರುವ ಯೋಜನಾ ಪ್ರದೇಶವು ಅಳಿವಿನ ಅಂಚಿನಲ್ಲಿರುವ ಅನೇಕ ವನ್ಯಜೀವಿಗಳ ಆವಾಸಸ್ಥಾನ ವಾಗಿದೆ. ಕ್ಷೇತ್ರ ಪರ್ಯಟನೆ ಮತ್ತು ವೈಜ್ಞಾನಿಕ ರೀತಿಯಲ್ಲಿ ಪರಿಸರ ಪರಿಣಾಮ ಮೌಲ್ಯಮಾಪನದ ಬದಲು, ನಾಮಕಾವಾಸ್ತೆಯ ರೂಪದಲ್ಲಿ ಯೋಜನೆಗೆ ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. ಯೋಜನಾ ಪ್ರದೇಶವು ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಮತ್ತು ಪರಿಸರ ಸೂಕ್ಷ್ಮ ಪ್ರದೇಶದಲ್ಲಿದೆ ಎಂದು ನಿಖರವಾಗಿ ಹೇಳಿಲ್ಲ.

ಯೋಜನೆಗಾಗಿ ನಿರ್ಮಿಸುವ ರಸ್ತೆಗಳು, ಕಾರ್ಮಿಕ ವಸತಿಗೃಹಗಳು, ಗುತ್ತಿಗೆದಾರರ ಕಚೇರಿ, ಅಣೆಕಟ್ಟು, ಸುರಂಗ ಮಾರ್ಗ, ವಿದ್ಯುದಾಗಾರ, ವಿದ್ಯುತ್ ಪರಿವರ್ತಕ ಸ್ಥಾಪಿಸುವ ಪ್ರದೇಶ, ತ್ಯಾಜ್ಯ ವಿಲೇವಾರಿ ಪ್ರದೇಶ ಹಾಗೂ ಮರಳು–ಜಲ್ಲಿ ಗಣಿಗಾರಿಕೆ ಪ್ರದೇಶಗಳ ಜೊತೆಗೆ ಮನುಷ್ಯರ ಆವಾಸಸ್ಥಾನ, ಹಳ್ಳಿಗಳು, ದೇವಸ್ಥಾನಗಳು, ಪವಿತ್ರ ವನಗಳು ಮತ್ತು ಪುರಾತತ್ವ ಇಲಾಖೆಯ ಸಂರಕ್ಷಿತ ಬಸದಿಯಂತಹ ಪ್ರದೇಶಗಳನ್ನು ತೋರಿಸಲಾಗಿಲ್ಲ. ಸಂಭಾವ್ಯ ಭೂಕುಸಿತ ಪ್ರದೇಶಗಳು, ದೊಡ್ಡ ಮಂಗಟ್ಟೆ ಹಕ್ಕಿಗಳ ಆವಾಸಸ್ಥಾನ, ಚಿಪ್ಪು ಹಂದಿಯ ಗುಹೆ ಇರುವಿಕೆಯಂತಹ ಪ್ರಮುಖ ವೈಜ್ಞಾನಿಕ ಸತ್ಯಗಳನ್ನು ಮತ್ತು ವಿವರಗಳನ್ನು ವರದಿಯಲ್ಲಿ ಉದ್ದೇಶಪೂರ್ವಕ ವಾಗಿ ಮುಚ್ಚಿಡಲಾಗಿದೆ.

ಯೋಜನೆಗೆ 14 ಕಿ.ಮೀ. ಉದ್ದದ ಹಾಗೂ 30 ಅಡಿ ವ್ಯಾಸದ ಸುರಂಗ ಕೊರೆಯಲಾಗುತ್ತದೆ. ಇದಕ್ಕೆ 18,000 ಟನ್ ಅಪಾಯಕಾರಿ ಕೈಗಾರಿಕಾ ಸ್ಫೋಟಕಗಳನ್ನು ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಇಷ್ಟು ಪ್ರಮಾಣದ ಸ್ಫೋಟಕಗಳನ್ನು ಬಳಸುವುದರಿಂದ ಆಗುವ ಹಾನಿಯನ್ನು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಚರ್ಚಿಸಿರುವುದಿಲ್ಲ. ಇದು ನೇರವಾಗಿ ‘ಅಪಾಯಕಾರಿ ಮತ್ತು ಇತರೆ ತ್ಯಾಜ್ಯ’ಗಳ ನಿಯಮ 2016ರ ಸ್ಪಷ್ಟ ಉಲ್ಲಂಘನೆಯಾಗಿದೆ. ಸುರಂಗ ನಿರ್ಮಿಸಲು ಸ್ಫೋಟಕಗಳನ್ನು ಬಳಸಲಾಗುತ್ತದೆ. ಸ್ಫೋಟಕ ಬೆರೆತ ವಿಷಭರಿತ 12 ದಶಲಕ್ಷ  ಟನ್‍ಗಳಷ್ಟು ತ್ಯಾಜ್ಯ ಸೃಷ್ಟಿಯಾಗಲಿದೆ. ತ್ಯಾಜ್ಯವನ್ನು ನಿರ್ವಹಣೆ ಮಾಡುವ ವಿಧಾನ, ವಿಲೇವಾರಿ ವಿಧಾನವನ್ನು ಮುಚ್ಚಿಡಲಾಗಿದೆ. ವಿಷ ತ್ಯಾಜ್ಯ ಶರಾವತಿ ನದಿ, ಅಂತರ್ಜಲ ಮತ್ತು ತೊರೆಗಳಿಗೆ ಸೇರಿ ಜಲಚರಗಳಿಗೆ, ಕೃಷಿ ಕ್ಷೇತ್ರಕ್ಕೆ, ಕುಡಿಯುವ ನೀರಿನ ಮೂಲಕ್ಕೆ ಮತ್ತು ಒಟ್ಟಾರೆಯಾಗಿ ಸಾರ್ವಜನಿಕ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ಗುಟ್ಟಾಗಿಡಲಾಗಿದೆ.

ಯೋಜನೆಗೆ ಅಗತ್ಯವಾದ ಮರಳನ್ನು ಶರಾವತಿ ನದಿಯಿಂದ ಎತ್ತಲಾಗುತ್ತದೆ. ಉದ್ದೇಶಿತ ಮರಳು ತೆಗೆಯುವ ಪ್ರದೇಶವು ಶರಾವತಿ ಸಿಂಗಳೀಕ ಅಭಯಾರಣ್ಯದ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆ. ಈ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಪರಿಸರ ಸೂಕ್ಷ್ಮ ಪ್ರದೇಶದ ನಿಯಮ 2023ರಲ್ಲಿ  ಸ್ಪಷ್ಟಪಡಿಸಲಾಗಿದೆ. 2016ರಲ್ಲಿ ಹೊರಡಿಸಿದ್ದ ಸುಸ್ಥಿರ ಮರಳು ಗಣಿಗಾರಿಕೆ ನಿರ್ವಹಣಾ ಅಧಿಸೂಚನೆಯನ್ನೂ ಕಡೆಗಣಿಸಲಾಗಿದೆ. 

ಈ ಪ್ರದೇಶದಲ್ಲಿ ಮರಳು ತೆಗೆಯುವುದರಿಂದ ಜಲಚರಗಳು ಹಾಗೂ ಶರಾವತಿ ನದಿಯನ್ನು ನಂಬಿ ಕೊಂಡವರ ಬದುಕು ಅಪಾಯಕ್ಕೆ ಸಿಲುಕಲಿದೆ. ನದಿ ಹರಿವಿನ ಪಥ ಬದಲಾಗಲಿದೆ. ಕೈಗಾರಿಕಾ ಸ್ಫೋಟಕ ಗಳನ್ನು ಬಳಸುವುದರಿಂದಾಗಿ ಇಡೀ ನದಿ ವಿಷದ ಮಡುವಾಗಲಿದೆ. ಒಟ್ಟಾರೆ ಈ ಚಟುವಟಿಕೆಗಳು ನದಿಯೊಂದರ ಸಾವಿನ ಸಂಕೇತಗಳು.

ಯೋಜನಾ ಪ್ರದೇಶವು ಸಾಮಾನ್ಯದಿಂದ ಅತಿಹೆಚ್ಚು ಭೂಕುಸಿತದ ಅಪಾಯವನ್ನೆದುರಿಸುವ ಪ್ರದೇಶವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರವು ಹೇಳಿದೆ. ಈ ಕುರಿತು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಕನಿಷ್ಠ ಉಲ್ಲೇಖವಿಲ್ಲ. ಗುಡ್ಡಗಾಡುಗಳಿಂದ ಆವರಿಸಿರುವ ಯೋಜನಾ ಪ್ರದೇಶದಲ್ಲಿ ದೊಡ್ಡಮಟ್ಟದ ಕೊರೆತ, ಸುರಂಗ ನಿರ್ಮಾಣ ಮಾಡುವುದು, ಅಲ್ಲಿನ ಭೌಗೋಳಿಕ ಭದ್ರತೆಗೆ ಅಪಾಯ ಉಂಟು ಮಾಡಲಿದೆ.

ಯೋಜನಾ ಪ್ರದೇಶದಲ್ಲಿ ಯಾವುದೇ ಪುರಾತತ್ವ ಸ್ಮಾರಕಗಳು ಇರುವುದಿಲ್ಲವೆಂದು ಹೇಳಲಾಗಿದೆ. ಆದರೆ, ಜೈನಧರ್ಮಕ್ಕೆ ಸೇರಿದ ಚತುರ್ಮುಖ ಬಸದಿ ಆ ಪ್ರದೇಶದಲ್ಲಿದೆ. ಪುರಾತತ್ವ ಇಲಾಖೆಯ ಪ್ರಕಾರ ಅದು ಪುರಾತನ ಸ್ಮಾರಕವಾಗಿದ್ದು, ನಿಯಮಗಳ ಪ್ರಕಾರ ಬಸದಿಯಿಂದ 100 ಮೀಟರ್ ಪ್ರದೇಶ ನಿಷೇಧಿತ ಮತ್ತು 300 ಮೀಟರ್ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತದೆ. ಯೋಜನೆಗಾಗಿ ನಿರ್ಮಿಸಲಿರುವ ರಸ್ತೆಯು ಬಸದಿಯ ನಿಯಂತ್ರಿತ ಪ್ರದೇಶದಲ್ಲಿ ಹಾದುಹೋಗುತ್ತದೆ. ಇದು, ಪುರಾತತ್ವ ಇಲಾಖೆಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ.

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಉನ್ನತ ಸಮಿತಿಯು ಕಳೆದ ಜೂನ್‌ 24ರಂದು ನಡೆದ 84ನೇ ಸಭೆಯಲ್ಲಿ ನಗರಬಸ್ತಿಕೇರಿಯಿಂದ ಬೆಗೋಡಿಯವರೆಗೆ ಮತ್ತು ವಿದ್ಯುದಾಗಾರದವರೆಗೆ ನಿರ್ಮಿಸಲಿರುವ ರಸ್ತೆಯನ್ನು ಸುರಂಗ ಮಾರ್ಗದಲ್ಲಿ ನಿರ್ಮಿಸಲು ಸಲಹೆ ನೀಡಿತ್ತು. ಈ ಸಲಹೆಯನ್ನು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಪರಿಗಣಿಸ ಲಾಗಿಲ್ಲ.

ಜನರನ್ನು ಒಕ್ಕಲೆಬ್ಬಿಸುವ, ಹೊನ್ನಾವರದ ಜನರ ಮತ್ತು ಮೀನುಗಾರರ ಬದುಕನ್ನು ನಾಶ ಮಾಡುವ, ಮಳೆಕಾಡುಗಳನ್ನು ಮತ್ತು ಜೀವಿವೈವಿಧ್ಯ ನೆಲೆಯನ್ನು ಹಾಳು ಮಾಡುವ ಈ ಯೋಜನೆಗೆ ‘ಕೆಪಿಸಿಎಲ್’ ಮುಂದಾಗಿರುವುದು ದುರದೃಷ್ಟಕರ. ಈ ಯೋಜನೆ ಅನಿವಾರ್ಯವೇ? ಇದಕ್ಕೆ ಪರ್ಯಾಯ ಮಾರ್ಗಗಳಿಲ್ಲವೇ? 

ಕೆಪಿಸಿಎಲ್ ವಿದ್ಯುತ್ ಉತ್ಪಾದನೆಯ ಹೊಣೆ ನಿರ್ವಹಿಸಿದರೆ, ಕೆಪಿಟಿಸಿಎಲ್ ವಿದ್ಯುತ್ ಪ್ರಸರಣದ ಜವಾಬ್ದಾರಿ ಹೊರುತ್ತದೆ. ಎಸ್ಕಾಂಗಳದ್ದು ವಿದ್ಯುತ್ ಪೂರೈಕೆಯ ಜವಾಬ್ದಾರಿ. ಇದರಲ್ಲಿ ಪ್ರಸರಣದಲ್ಲಿ ಆಗುವ ಸೋರಿಕೆ ಶೇ10ರಿಂದ ಶೇ15ರಷ್ಟಿದೆ.

ವಿದ್ಯುತ್ ಬೇಡಿಕೆ ಹೆಚ್ಚು ಇರುವ ಸಮಯದಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಲು ಪಂಪ್ಡ್ ಸ್ಟೋರೇಜ್ ಅಥವಾ ಜಲ ಬ್ಯಾಟರಿಗೆ ಉತ್ತೇಜನ ನೀಡಲಾಗುತ್ತದೆ ಎಂಬುದು ‘ಕೆಪಿಸಿಎಲ್’ ವಾದ. ಇದರ ಬದಲಿಗೆ ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯು (ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ) ವ್ಯಾಪಕವಾಗಿ ಬಳಕೆಯಾಗುತ್ತಿದೆ. ಪಂಪ್ಡ್ ಸ್ಟೋರೇಜ್‍ಗಿಂತಲೂ ಕಡಿಮೆ ಸಮಯದಲ್ಲಿ ಹಾಗೂ ದರದಲ್ಲಿ ಈ ವಿಧಾನವನ್ನು ಅನುಸರಿಸಬಹುದು. ಈಗಾಗಲೇ, ಗುಜರಾತ್, ಮಹಾರಾಷ್ಟ್ರ, ಮುಂತಾದ ರಾಜ್ಯಗಳಲ್ಲಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂಗೆ ವ್ಯಾಪಕ ಒತ್ತು ನೀಡಲಾಗುತ್ತಿದೆ. ಕೆಪಿಸಿಎಲ್ ಇದನ್ನು ಬೇರೆ ಕಡೆಗಳಲ್ಲಿ ಅಳವಡಿಸಲು ಮುಂದಾಗಿದೆ.

ಕಾಯ್ದೆ, ನಿಯಮಗಳನ್ನು ಮೀರಿ ಯೋಜನೆ ಜಾರಿಯಾಯಿತು ಎಂದಿಟ್ಟುಕೊಳ್ಳಿ. ವಿದ್ಯುತ್ ಪ್ರಸರಣ ಮಾರ್ಗಕ್ಕೆ ಮತ್ತಷ್ಟು ಅಭಯಾರಣ್ಯ ನಾಶವಾಗಲಿದೆ. ಇದಕ್ಕೆ 145 ಹೆಕ್ಟೇರ್ ಅಭಯಾರಣ್ಯ ಮತ್ತು ಅರಣ್ಯ ಪ್ರದೇಶ ನಾಶವಾಗಲಿದೆ ಎಂದು ಹೇಳಲಾಗಿದೆ. ಇದನ್ನು ಪರಿಸರ ಪರಿಣಾಮ ಮೌಲ್ಯಮಾಪನದಲ್ಲಿ ಮುಚ್ಚಿಡಲಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಜಾರಿಯಾಗಲು ಕನಿಷ್ಠ ಆರು ವರ್ಷ ಬೇಕಾಗುತ್ತದೆ. ಅಷ್ಟರಲ್ಲಿ, ಸೌರ ವಿದ್ಯುತ್ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಬಹುದು. ಸೌರ–ಜಲಜನಕ ತಂತ್ರಜ್ಞಾನ ಕುರಿತು ಸಂಶೋಧನೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.