
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಪರ–ವಿರೋಧದ ಚರ್ಚೆಗಳು ನಡೆಯುತ್ತಿವೆ. ಈ ಯೋಜನೆ ಪರಿಸರದ ಮೇಲೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳೂ ನಡೆದಿವೆ. ಈ ಚರ್ಚೆಗಳ ಜೊತೆಗೆ, ‘ಪಂಪ್ಡ್ ಹೈಡ್ರೋ ಸ್ಟೋರೇಜ್’ ಎನ್ನುವ ಪರಿಕಲ್ಪನೆಯೇ ಈಗ ಅಪ್ರಸ್ತುತವಾಗಿದೆ ಹಾಗೂ ಬಿಳಿ ಆನೆಯಾಗಿದೆ ಎನ್ನುವುದನ್ನು ಗಮನಿಸಬೇಕು.
ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಹೆಚ್ಚಿನ ಕುಟುಂಬಗಳು ನಿದ್ರಾಸ್ಥಿತಿಯಲ್ಲಿ ಇರುವುದರಿಂದ ಹಾಗೂ ಕೈಗಾರಿಕಾ ಚಟುವಟಿಕೆಗಳು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ವಿದ್ಯುತ್ ಬೇಡಿಕೆಯೂ ಇಳಿಯುತ್ತದೆ. ಆದರೆ, ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ ಎಂಬ ಕಾರಣಕ್ಕೆ ವಿದ್ಯುತ್ ಸ್ಥಾವರಗಳನ್ನು ರಾತ್ರಿ ಸಮಯದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲೇ ಕೆಲವು ಪಾಶ್ಚಾತ್ಯ ರಾಷ್ಟ್ರಗಳು ರೂಪಿಸಿಕೊಂಡ ಪರಿಕಲ್ಪನೆಯೇ ‘ಪಂಪ್ಡ್ ಹೈಡ್ರೋ ಸ್ಟೋರೇಜ್ ಯೋಜನೆ’.
ವಿದ್ಯುತ್ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ಲಭ್ಯವಾಗುವ ಹೆಚ್ಚುವರಿ ವಿದ್ಯುತ್ ಬಳಸಿ, ಕೆಳಭಾಗಕ್ಕೆ ಹರಿದ ನೀರನ್ನು ಮರುಪಂಪ್ ಮಾಡಿ ಜಲಾಶಯಕ್ಕೆ ಪೂರೈಸಲಾಗುತ್ತದೆ. ನಂತರ ಬೇಡಿಕೆ ಹೆಚ್ಚಾದ ಸಮಯದಲ್ಲಿ ಆ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಇಲ್ಲಿ ಒಂದು ಮೂಲಭೂತ ಸಂಗತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು: ಪಂಪ್ಡ್ ಸ್ಟೋರೇಜ್ ಯೋಜನೆ ಹೊಸದಾಗಿ ವಿದ್ಯುತ್ ಉತ್ಪಾದಿಸುವ ಯೋಜನೆಯಲ್ಲ; ಬದಲಾಗಿ ಈಗಾಗಲೇ ಉತ್ಪಾದಿಸಿದ ವಿದ್ಯುತ್‌ಗೆ ಬಳಸಿದ ನೀರನ್ನು ಮೇಲಕ್ಕೆತ್ತುವ ವ್ಯವಸ್ಥೆ ಮಾತ್ರ.
ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರಾತ್ರಿ ಸಮಯದಲ್ಲಿ ವಿದ್ಯುತ್ ಅಗ್ಗವಾಗಿದ್ದು, ಹಗಲು ಸಮಯದಲ್ಲಿ ಅದು ಹೆಚ್ಚು ದುಬಾರಿ ಆಗಿರುವುದರಿಂದ ಉಂಟಾಗುತ್ತಿದ್ದ ಬೆಲೆಯ ವ್ಯತ್ಯಾಸವೇ ಈ ಯೋಜನೆಗೆ ಮೂಲ ಆಧಾರವಾಗಿತ್ತು. ಈ ತರ್ಕ ಹಲವು ದಶಕಗಳವರೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿತು; ಆದರೆ, ಇಂದಿನ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ.
ಪ್ರಸ್ತುತ ಚೀನಾ ದೇಶದಂತೆ ವಿಶ್ವದಲ್ಲೇ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್ ಉತ್ಪಾದಿಸುವ ದೇಶಗಳಲ್ಲಿ ಭಾರತವೂ ಸೇರಿದೆ. ಪ್ರತಿ ಯೂನಿಟ್‌ಗೆ ಸರಾಸರಿ ₹2ರಿಂದ ₹2.5 ದರದಲ್ಲಿ ಸೌರ ವಿದ್ಯುತ್ ಲಭ್ಯವಾಗುತ್ತಿದೆ. ಇದು ಕಲ್ಲಿದ್ದಲು ಆಧಾರಿತ ವಿದ್ಯುತ್ ಗಿಂತಲೂ ಅಗ್ಗವಾಗಿದೆ ಎಂಬುದನ್ನು ಗಮನಿಸಬೇಕು.
ಒಂದು ಸಾವಿರ ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಕೇಂದ್ರ ಸ್ಥಾಪಿಸಲು ಅಂದಾಜು ₹3,500 ಕೋಟಿ ವೆಚ್ಚವಾಗುತ್ತದೆ. ಆದರೆ, ಪಂಪ್ಡ್ ಸ್ಟೋರೇಜ್ ಯೋಜನೆಗಳಿಗೆ ₹10 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತ ಬೇಕಾಗುತ್ತದೆ; ವಾಸ್ತವದಲ್ಲಿ ಇದು ₹13 ಸಾವಿರದಿಂದ ₹15 ಸಾವಿರ ಕೋಟಿಗೆ ತಲಪುವ ಸಾಧ್ಯತೆಯೂ ಇದೆ. ಅಷ್ಟೇ ಹಣದಲ್ಲಿ, ಹೆಚ್ಚು ಬಿಸಿಲು ಬೀಳುವ ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ 3ರಿಂದ 4 ಸಾವಿರ ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಬಹುದು. ಈ ಸೌರ ವಿದ್ಯುತ್ ಕೇಂದ್ರಗಳು ಸಮಗ್ರ ಉತ್ಪಾದನಾ ದಕ್ಷತೆಯ ಆಧಾರದಲ್ಲಿಯೇ ಕಾರ್ಯನಿರ್ವಹಿಸಿದರೂ, 2 ಸಾವಿರ ಮೆಗಾವಾಟ್‌ಗಿಂತ ಹೆಚ್ಚಿನ ನೈಜ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ. ಇಲ್ಲಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಮುಖ್ಯ ಅಂಶವೆಂದರೆ, ಪಂಪ್ಡ್ ಸ್ಟೋರೇಜ್ ಯೋಜನೆ ಹೊಸದಾಗಿ ಯಾವುದೇ ವಿದ್ಯುತ್ ಉತ್ಪಾದಿಸುವುದಿಲ್ಲ. ಜೊತೆಗೆ, ಪಂಪ್ಡ್ ಸ್ಟೋರೇಜ್ ಯೋಜನೆಗಳ ವಾರ್ಷಿಕ ನಿರ್ವಹಣಾ ವೆಚ್ಚ ಹೆಚ್ಚು ಹಾಗೂ ಅನುಷ್ಠಾನಕ್ಕೆ ಕನಿಷ್ಠ 8ರಿಂದ 10 ವರ್ಷ ಬೇಕಾಗುತ್ತದೆ. ಜಲಾಶಯಗಳು ಈಗಾಗಲೇ ಸಂಪೂರ್ಣ ಮಟ್ಟದಲ್ಲಿ ತುಂಬಿರುವ ಸಂದರ್ಭಗಳಲ್ಲಿ, ಪಂಪ್ಡ್ ಸ್ಟೋರೇಜ್‌ನಿಂದ ಪಡೆಯಬಹುದಾದ ಹೆಚ್ಚುವರಿ ಪ್ರಯೋಜನವೂ ತೀರಾ ಸೀಮಿತವಾಗಿರುತ್ತದೆ.
ಇಲ್ಲಿ ಇನ್ನೊಂದು ಅತ್ಯಂತ ಮಹತ್ವದ ಪ್ರಶ್ನೆಯನ್ನು ನಾವು ಗಮನಿಸಲೇಬೇಕು; ಅದು ಅವಕಾಶ ವೆಚ್ಚ. ಪಂಪ್ಡ್ ಸ್ಟೋರೇಜ್‌ಗೆ ಖರ್ಚಾಗುವ ₹10 ಸಾವಿರದಿಂದ ₹15 ಸಾವಿರ ಕೋಟಿಯನ್ನು ರಾಜ್ಯದ ವಿದ್ಯುತ್ ವ್ಯವಸ್ಥೆಯ ಇತರೆ ತುರ್ತು ಅಗತ್ಯಗಳಿಗೆ ಬಳಸಿದರೆ, ಹೆಚ್ಚು ವ್ಯಾಪಕ ಮತ್ತು ದೀರ್ಘಕಾಲಿಕ ಲಾಭ ಸಾಧ್ಯ. ಇದೇ ಮೊತ್ತವನ್ನು ವಿದ್ಯುತ್ ಜಾಲದ ಆಧುನೀಕರಣ, ಮನೆಯ ತಾರಸಿ ಮೇಲೆ ಸೌರ ಫಲಕ ಅಳವಡಿಕೆ ಮತ್ತು ಸಂಗ್ರಹಣಾ ವ್ಯವಸ್ಥೆಗಳು, ವಿದ್ಯುತ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಹಾಗೂ ಗ್ರಾಮೀಣ ಫೀಡರ್‌ಗಳ ಬಲವರ್ಧನೆಗೆ ಬಳಸಿದರೆ, ವಿದ್ಯುತ್ ನಷ್ಟ ಕಡಿಮೆಯಾಗುವುದರ ಜೊತೆಗೆ ವ್ಯವಸ್ಥೆಯ ವಿಶ್ವಾಸಾರ್ಹತೆ ಮತ್ತು ಶಕ್ತಿ ಭದ್ರತೆ ಎರಡೂ ಗಣನೀಯವಾಗಿ ಹೆಚ್ಚಾಗುತ್ತವೆ.
ಇಂಧನ ತಂತ್ರಜ್ಞಾನದಲ್ಲಿನ ಹೊಸ ಕ್ರಾಂತಿಯನ್ನು ಬಳಸಿಕೊಂಡು, ವಿದ್ಯುತ್ ಜಾಲವನ್ನು ಆಧುನೀಕರಿಸುವುದು ಸದ್ಯದ ತುರ್ತು. ಇಂದು ಇಂಧನ ಸಂಗ್ರಹಣಾ ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಅಭಿವೃದ್ಧಿಯಾಗುತ್ತಿವೆ. ದೊಡ್ಡ ಬ್ಯಾಟರಿಗಳು, ಹೈಡ್ರೋಜನ್ ಆಧಾರಿತ ಸಂಗ್ರಹಣೆ ಹಾಗೂ ‘ಲಿಥಿಯಂ ಅಲ್ಲದ’ ಹೊಸ ತಲೆಮಾರಿನ ತಂತ್ರಜ್ಞಾನಗಳು ಹೆಚ್ಚು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿವೆ. ಇವುಗಳ ಬೆಲೆ ನಿರಂತರವಾಗಿ ಇಳಿಯುತ್ತಿದ್ದು, ವಾಣಿಜ್ಯ ಬಳಕೆಗೆ ವೇಗವಾಗಿ ಲಭ್ಯವಾಗುತ್ತಿವೆ.
ಇಂಧನ ತಂತ್ರಜ್ಞಾನದಲ್ಲಿ ನಡೆಯುತ್ತಿರುವ ಮುಂದಿನ ಹಂತದ ಸಂಶೋಧನೆಗಳು ನಮ್ಮ ಮುಂದೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿವೆ. ಚಿಕ್ಕದಾಗಿ ವಿನ್ಯಾಸಗೊಳಿಸಲಾದ, ಸುಮಾರು ಲ್ಯಾಪ್‌ಟಾಪ್ ಗಾತ್ರದ ಅತ್ಯಂತ ಸುರಕ್ಷಿತ ನ್ಯೂಕ್ಲಿಯರ್ ರಿಯಾಕ್ಟರ್‌ಗಳು ಯಾವುದೇ ವಾಯುಮಾಲಿನ್ಯವಿಲ್ಲದೆ ನಗರಗಳಿಗೆ ನಿರಂತರವಾಗಿ, ಹಲವಾರು ದಿನಗಳಿಂದ ವರ್ಷಗಟ್ಟಲೆ ವಿದ್ಯುತ್ ಪೂರೈಸುವ ಸಾಮರ್ಥ್ಯ ಹೊಂದಿವೆ. ಇಂತಹ ತಂತ್ರಜ್ಞಾನಗಳ ಪರೀಕ್ಷೆಗಳು ಈಗಾಗಲೇ ಹಲವು ದೇಶಗಳಲ್ಲಿ ಅಂತಿಮ ಹಂತದಲ್ಲಿದ್ದು, ಈ ವಿದ್ಯಮಾನ ಭವಿಷ್ಯದ ಇಂಧನ ವ್ಯವಸ್ಥೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುವಂತಿದೆ.
ರಾಜ್ಯದ ವಿದ್ಯುತ್ ಜಾಲವು ಹಳೆಯದಾಗಿದ್ದು, ನಷ್ಟವು ಶೇ 10ರಿಂದ ಶೇ 14ರವರೆಗೆ ಇರಬಹುದೆಂದು ಅಂದಾಜು ಮಾಡಲಾಗಿದೆ. ಸ್ಮಾರ್ಟ್ ಸ್ವಯಂಚಾಲಿತ ವ್ಯವಸ್ಥೆಗಳು, ವಿಕೇಂದ್ರೀಕೃತ ಸಂಗ್ರಹ, ಕೃತಕ ಬುದ್ಧಿಮತ್ತೆ ಆಧಾರಿತ ಲೋಡ್ ನಿರ್ವಹಣೆ ಮತ್ತು ಬಲಿಷ್ಠ ಪ್ರಸರಣ ಜಾಲಗಳು ವಿದ್ಯುತ್ ವ್ಯರ್ಥವಾಗುವುದನ್ನು ತಡೆಯುವಲ್ಲಿ ಪಂಪ್ಡ್ ಸ್ಟೋರೇಜ್‌ಗಿಂತಲೂ ಹೆಚ್ಚು ಪರಿಣಾಮಕಾರಿ
ಆಗಿವೆ.
ರಾತ್ರಿ ವಿದ್ಯುತ್ ಈಗ ಅಗ್ಗವಾಗಿ ಉಳಿದಿಲ್ಲ, ಉಳಿಕೆಯೂ ಅಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಪಂಪ್ಡ್ ಸ್ಟೋರೇಜ್ ಹಿಂದಿರುವ ಮತ್ತೊಂದು ಪ್ರಮುಖ ಕಲ್ಪನೆಯೂ ಭಾರತದಲ್ಲಿ ನಿಧಾನವಾಗಿ ಕುಸಿಯುತ್ತಿದೆ. ರಾತ್ರಿ ವೇಳೆಯ ವಿದ್ಯುತ್ ಬೇಡಿಕೆ ಈಗಲೂ ಕಡಿಮೆ ಇರಬಹುದು; ಆದರೆ, ವಿದ್ಯುತ್ ಚಾಲಿತ ಬಸ್‌ಗಳು, ಕಾರುಗಳು, ಚಾರ್ಜಿಂಗ್ ಕೇಂದ್ರಗಳು ಹಾಗೂ 24 ಗಂಟೆ ಕಾರ್ಯ ನಿರ್ವಹಿಸುವ ಸ್ವಯಂಚಾಲಿತ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಕೈಗಾರಿಕೆಗಳು ರಾತ್ರಿ ವಿದ್ಯುತ್ ಬಳಕೆಯನ್ನು ವೇಗವಾಗಿ ಹೆಚ್ಚಿಸುತ್ತಿವೆ. ಅಮೆರಿಕದಲ್ಲಿ ಈ ಬದಲಾವಣೆ ಈಗಾಗಲೇ ಸಂಭವಿಸಿದ್ದು, ಹಗಲು ಮತ್ತು ರಾತ್ರಿ ವಿದ್ಯುತ್ ಬೆಲೆಗಳ ನಡುವಿನ ವ್ಯತ್ಯಾಸ ಗಣನೀಯವಾಗಿ ಕಡಿಮೆಯಾಗಿದೆ. ಭಾರತವೂ ಇದೇ ದಿಕ್ಕಿನಲ್ಲಿ ಸಾಗುತ್ತಿದೆ. ಹಾಗಾಗಿ, ಇನ್ನು ಕೆಲವೇ ವರ್ಷಗಳಲ್ಲಿ ಪಂಪ್ಡ್ ಸ್ಟೋರೇಜ್‌ನ ಮೂಲ ಆರ್ಥಿಕ ತರ್ಕವೇ ಪ್ರಶ್ನಾರ್ಥಕವಾಗಲಿದೆ.
ಆರ್ಥಿಕ ಲೆಕ್ಕಾಚಾರಕ್ಕಿಂತಲೂ ಪಂಪ್ಡ್ ಸ್ಟೋರೇಜ್ ಯೋಜನೆಗಳ ಪರಿಸರ ಪರಿಣಾಮ ಅತ್ಯಂತ ಗಂಭೀರವಾಗಿದೆ. ಅದು ಅಲಕ್ಷಿಸಲು ಸಾಧ್ಯವಿಲ್ಲದ ಮಟ್ಟಿಗಿನ ಪರಿಸರ ಹಾನಿಯಾಗಿದೆ. ಪ್ರಸ್ತಾವಿತ ಯೋಜನಾ ಪ್ರದೇಶಗಳು ಪಶ್ಚಿಮಘಟ್ಟದಂತಹ ಅತಿ ಸೂಕ್ಷ್ಮ ಪರಿಸರ ವಲಯಗಳಲ್ಲಿ ಇದ್ದು, ವೈವಿಧ್ಯಮಯ ಅರಣ್ಯ, ಜೀವವೈವಿಧ್ಯ ಮತ್ತು ನಾಜೂಕಾದ ಭೌಗೋಳಿಕ ರಚನೆಯನ್ನು ಹೊಂದಿವೆ. ಮೃದು ಮಣ್ಣಿನ ಗುಡ್ಡ–ಪರ್ವತ ಪ್ರದೇಶಗಳಲ್ಲಿ ಸುರಂಗ ತೋಡುವುದು ಮತ್ತು ಸ್ಫೋಟ ಕಾರ್ಯಗಳನ್ನು ನಡೆಸುವುದು ಭೂಕುಸಿತದ ಅಪಾಯವನ್ನು ಹೆಚ್ಚಿಸುತ್ತದೆ. ಶರಾವತಿ ಹಿನ್ನೀರಿನಂತಹ ಪ್ರದೇಶಗಳು ಈಗಾಗಲೇ ಹಲವು ಯೋಜನೆಗಳಿಂದ ಒತ್ತಡದಲ್ಲಿದ್ದು, ಇಂತಹ ಹೆಚ್ಚುವರಿ ಹಸ್ತಕ್ಷೇಪವು ಮಳೆ, ಜಲಾನಯನ ಮತ್ತು ಪರಿಸರ ಸ್ಥಿರತೆಯ ಮೇಲೆ ದೂರಗಾಮಿ ಪರಿಣಾಮ ಬೀರುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
ಪಂಪ್ಡ್ ಸ್ಟೋರೇಜ್‌ಗೆ ಪರ್ಯಾಯಗಳು ಈಗಾಗಲೇ ನಮ್ಮ ಮುಂದೆ ಸ್ಪಷ್ಟವಾಗಿ ಲಭ್ಯವಿವೆ. ದೀರ್ಘಕಾಲಿಕ ಮತ್ತು ಭಾರೀ ವಿದ್ಯುತ್ ಯೋಜನೆಗಳನ್ನು ಇಂದಿನ ವೆಚ್ಚ ಮತ್ತು ಇಂದಿನ ತಂತ್ರಜ್ಞಾನಗಳ ಸೀಮಿತ ಚೌಕಟ್ಟಿನಲ್ಲಿ ಮಾತ್ರ ಅಳೆಯುವುದರಿಂದ ಭವಿಷ್ಯದ ಅಗತ್ಯಗಳನ್ನು ನಾವು ಕಾಣದೆ ಬಿಡುವ ಅಪಾಯವಿದೆ. ಇಂತಹ ಯೋಜನೆಗಳ ಮೌಲ್ಯಮಾಪನವನ್ನು ನಾಳೆಯ ಪ್ರಾಸಂಗಿಕತೆ, ತಾಂತ್ರಿಕ ಪ್ರಗತಿ ಮತ್ತು ಬದಲಾಗುತ್ತಿರುವ ಇಂಧನ ಬಳಕೆಯ ಮಾದರಿಗಳ ಆಧಾರದ ಮೇಲೆ ಮಾಡಬೇಕು. ಈ ಮೌಲ್ಯಮಾಪನದಲ್ಲಿ ಆರ್ಥಿಕತೆ, ಪರಿಸರ ಸಂರಕ್ಷಣೆ, ಮುಂದಿನ ತಲೆಮಾರಿನ ತಂತ್ರಜ್ಞಾನಗಳು ಹಾಗೂ ಜಾಗತಿಕ ಅನುಭವಗಳನ್ನು ಸಮಗ್ರವಾಗಿ ಪರಿಗಣಿಸುವುದು ಅಗತ್ಯ. ಇವೆಲ್ಲವೂ ಒಂದೇ ದಿಕ್ಕನ್ನು ಸ್ಪಷ್ಟವಾಗಿ ಸೂಚಿಸುತ್ತಿರುವಾಗ, ಆ ದಿಕ್ಕನ್ನು ನಿರ್ಲಕ್ಷಿಸುವುದು ಪ್ರಗತಿಯ ಸಂಕೇತವಲ್ಲ; ಅದು ಭವಿಷ್ಯದ ಹೊಣೆಗಾರಿಕೆಯನ್ನು ಕಡೆಗಣಿಸುವ ವಿವೇಕಹೀನ ನಿರ್ಧಾರವಾಗುತ್ತದೆ. ನಾಳೆಯ ಅಗತ್ಯಗಳನ್ನು ಅರಿತು, ಇಂದಿನ ತೀರ್ಮಾನಗಳನ್ನು ಕೈಗೊಳ್ಳುವ ಧೈರ್ಯವೇ ಪ್ರಗತಿಯ ನಿಜವಾದ ಮಾನದಂಡ ಆಗಬೇಕು. ಈ ಅರಿವು ‘ಶರಾವತಿ ಪಂಪ್ಡ್ ವಾಟರ್ ಸ್ಟೋರೇಜ್’ ಯೋಜನೆಯ ವಕ್ತಾರರದೂ ಆಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.