ADVERTISEMENT

ಮಹಿಳಾ ಸಬಲೀಕರಣಕ್ಕೆ ಸಿಕ್ಕಿದ್ದು ಅತ್ಯಲ್ಪ

ವಿಶೇಷ ಯೋಜನೆಗಳನ್ನು ಘೋಷಿಸದ ಹಣಕಾಸು ಸಚಿವ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 6:45 IST
Last Updated 2 ಜುಲೈ 2019, 6:45 IST
ರಾಜೇಶ್ವರಿ
ರಾಜೇಶ್ವರಿ   

ಚುನಾವಣಾ ವರ್ಷದಲ್ಲಿ ಹಣಕಾಸು ಸಚಿವ ಪೀಯೂಷ್‌ ಗೋಯಲ್‌ ಮಂಡಿಸಿರುವ ಮಧ್ಯಂತರ ಬಜೆಟ್‌ ಹಲವು ಭರವಸೆಗಳನ್ನು ನೀಡಿದೆ. ಅದರಲ್ಲೂ ಜಾರಿಯಲ್ಲಿರುವ ಹಲವು ಯೋಜನೆಗಳನ್ನು ವಿಸ್ತರಿಸಲಾಗಿದೆ ಮತ್ತು ತೆರಿಗೆ ಲಾಭಗಳನ್ನು ನೀಡಲಾಗಿದೆ. ಆದರೆ, ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲು ವಿಫಲವಾಗಿದೆ. ಸೂಕ್ಷ್ಮವಾಗಿ ಬಜೆಟ್‌ ಭಾಷಣ ಅವಲೋಕನ ಮಾಡಿದಾಗ ಮಹಿಳೆಯರಿಗೆ ದೊರೆತಿರುವುದು ಅತ್ಯಲ್ಪ ಎನ್ನುವುದು ಎದ್ದು ಕಾಣುತ್ತದೆ.

ಮಹಿಳೆಯರಿಗಾಗಿ ಘೋಷಿಸಿರುವ ಯೋಜನೆಗಳ ಪರಿಣಾಮಗಳು ಮತ್ತು ಅನುಷ್ಠಾನದ ವಿಶ್ಲೇಷಣೆಯ ಪ್ರಯತ್ನ ಇಲ್ಲಿ ಮಾಡಲಾಗಿದೆ.

ಬಡತನ ರೇಖೆಗಿಂತ ಕೆಳಗಿನ ಕುಟುಂಬದ ಎಂಟು ಕೋಟಿ ಮಹಿಳೆಯರಿಗೆ ಅಡುಗೆ ಅನಿಲ ಸಂಪರ್ಕವನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಕೇಂದ್ರ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿತ್ತು. ಸರ್ಕಾರ ಈಗಾಗಲೇ ‘ಉಜ್ವಲ’ ಯೋಜನೆ ಅಡಿಯಲ್ಲಿ ಆರು ಕೋಟಿ ಸಂಪರ್ಕ ಕಲ್ಪಿಸಿದೆ. ಮುಂದಿನ ವರ್ಷ ಉಳಿದವರಿಗೆ ಈ ಯೋಜನೆಯ ಲಾಭ ದೊರೆಯುವ ನಿರೀಕ್ಷೆ ಇದೆ. ಈ ಯೋಜನೆ ಬಹುತೇಕ ಯಶಸ್ವಿಯಾಗಿರುವುದು ಉತ್ತಮ ಬೆಳವಣಿಗೆ.

ADVERTISEMENT

ಮಹಿಳೆಯರ ರಕ್ಷಣೆ ಮತ್ತು ಸಬಲೀಕರಣಕ್ಕೆ ಮಧ್ಯಂತರ ಬಜೆಟ್‌ನಲ್ಲಿ ₹1,330 ಕೋಟಿ ಅನುದಾನ ಮೀಸಲಿಡಲಾಗಿದೆ. ಗರ್ಭಿಣಿಯರಿಗೆ 26 ವಾರಗಳ ಹೆರಿಗೆ ರಜೆ ಮತ್ತು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಮುಂದುವರಿಸುವ ಮೂಲಕ ಹಣಕಾಸಿನ ಬೆಂಬಲ ನೀಡಲಾಗಿದೆ. ಇದರಿಂದ, ಮಹಿಳೆಯರು ಉದ್ಯೋಗದಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಷ್ಟನ್ನು ಬಿಟ್ಟರೆ ಆದಾಯ ಹೊಂದಿರುವ ಮಹಿಳೆಯರಿಗೆ ಸ್ಪಷ್ಟವಾದ ಪ್ರತ್ಯೇಕ ಯೋಜನೆಗಳಿಲ್ಲ. ಭಾಗಶಃ ಪ್ರಯೋಜನವಾಗುವ ಯೋಜನೆಗಳು ನಿರ್ದಿಷ್ಟ ಹಣಕಾಸು ನೆರವು ನೀಡುವುದಿಲ್ಲ.

ಸ್ವಂತ ಉದ್ಯಮ ಆರಂಭಿಸಲು ರೂಪಿಸಲಾದ ಪ್ರಧಾನ ಮಂತ್ರಿ ‘ಮುದ್ರಾ’ ಯೋಜನೆಯ ಶೇಕಡ 70ರಷ್ಟು ಫಲಾನುಭವಿಗಳು ಮಹಿಳೆಯರಿದ್ದಾರೆ. ಆದರೂ, ಈ ಯೋಜನೆಯನ್ನು ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ರೂಪಿಸಿಲ್ಲ. ಅಥವಾ ಅವರಿಗೆ ನಿರ್ದಿಷ್ಟವಾದ ಬೇರೆ ಯೋಜನೆಯೂ ಇಲ್ಲ. ಹೊಸ ಉದ್ಯಮ ಆರಂಭಿಸುವ ಆಸಕ್ತಿ ಹೊಂದಿರುವ ಉತ್ಸಾಹಿ ಮಹಿಳೆಯರಿಗೆ ಉತ್ಸಾಹ ತುಂಬುವ ಕೆಲಸ ಆಗಬೇಕಿತ್ತು.

ಕೊರತೆ ಏನು?

* ಮಧ್ಯಂತರ ಬಜೆಟ್‌ನಲ್ಲಿ ಮಹಿಳೆಯರಿಗಾಗಿಯೇ ಯಾವುದೇ ವಿಶೇಷ ಯೋಜನೆಗಳನ್ನು ಪ್ರಕಟಿಸಿಲ್ಲ.

*ಸ್ವಸಹಾಯ ಸಂಘಗಳಿಗೆ, ‘ಬೇಟಿ ಬಚಾವೋ ಬೇಟಿ ಪಡಾವೋ’, ಮಹಿಳೆಯರಿಗೆ ತರಬೇತಿ ಮತ್ತು ಉದ್ಯೋಗ ಯೋಜನೆಗಳಿಗೆ, ಸಾಮಾಜಿಕ ಭದ್ರತೆ ಮತ್ತು ರಕ್ಷಣೆ ಸೇರಿದಂತೆ ವಿವಿಧ ಯೋಜನೆಗಳಿಗೆ ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಮಾಡಿರುವ ಬಗ್ಗೆ ಪ್ರಸ್ತಾಪವಿಲ್ಲ.

* ಮಹಿಳೆಯರ ಕೌಶಲ ಅಭಿವೃದ್ಧಿ ಯೋಜನೆಗಳ ಬಗ್ಗೆಯೂ ಪ್ರಸ್ತಾಪವೇ ಇಲ್ಲ. ಸಮಾನ ವೇತನ ನೀತಿಯ ಬಗ್ಗೆ ಚಕಾರ
ವೆತ್ತಿಲ್ಲ. ಮಹಿಳೆಯರ ಸಬಲೀಕರಣ ದೃಷ್ಟಿಯಿಂದ ವೇತನ ತಾರತಮ್ಯ ನಿವಾರಿಸುವುದು ಮುಖ್ಯವಾಗಿದೆ.

* ಉದ್ಯೋಗಸ್ಥ ಮಹಿಳೆಯರಿಗೆ ಯಾವುದೇ ಯೋಜನೆಯನ್ನು ಪ್ರಕಟಿಸಿಲ್ಲ.

ಭಾರತದಲ್ಲಿ ಮಹಿಳಾ ಸಬಲೀಕರಣ ವಿವಿಧ ಆಯಾಮಗಳನ್ನು ಹೊಂದಿದೆ. ಮಹಿಳಾ ಸಬಲೀಕರಣದ ಯೋಜನೆಗಳು, ನೀತಿಗಳನ್ನು ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಮತ್ತು ಸ್ಥಳೀಯ (ಪಂಚಾಯಿತಿ) ಮಟ್ಟದಲ್ಲೂ ರೂಪಿಸಲಾಗಿದೆ. ಸಮುದಾಯ ಮಟ್ಟದಲ್ಲಿ ನೋಡಿದಾಗ ನೀತಿಗಳ ರಚನೆ ಮತ್ತು ವಾಸ್ತವ ಸ್ಥಿತಿಗತಿಯಲ್ಲಿ ವ್ಯತ್ಯಾಸ ಇರುವುದು ಎದ್ದು ಕಾಣುತ್ತದೆ. ತಾರತಮ್ಯ ನಿವಾರಣೆ, ಹಣಕಾಸಿನ ಕೊರತೆ ನೀಗಿಸಲು ಮತ್ತು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ನಿಯಂತ್ರಿಸಲು ಕಾನೂನು ಮತ್ತು ನೀತಿಗಳಲ್ಲೇ ಪರಿಹಾರ ಕಂಡುಕೊಳ್ಳಬೇಕಿದೆ. ಅಂತಹ ತಲಸ್ಪರ್ಶಿ ಕೆಲಸ ಬಜೆಟ್‌ನಲ್ಲಿ ಕಾಣುತ್ತಿಲ್ಲ.

(ಲೇಖಕಿ: ಸಹಾಯಕ ಪ್ರಾಧ್ಯಾಪಕಿ ಕ್ರೈಸ್ಟ್‌ ವಿಶ್ವವಿದ್ಯಾಲಯ)

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.